TV9 Kannada CVoter survey: ಅತಂತ್ರ ವಿಧಾನಸಭೆಯತ್ತ ರಾಜ್ಯ; ಟಿವಿ9, ಸಿವೋಟರ್ ಸಮೀಕ್ಷೆ
Karnataka Pre poll Survey 2023; ರಾಜ್ಯ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯುವ ಹಿನ್ನೆಲೆಯಲ್ಲಿ ‘ಟಿವಿ9 ಕನ್ನಡ’ ಮತ್ತು ‘ಸಿವೋಟರ್’ ಸಹಭಾಗಿತ್ವದಲ್ಲಿ ಚುನಾವಣಾಪೂರ್ವ ಸಮೀಕ್ಷೆ ನಡೆಸಲಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳ ಸಾಧನೆ ಏನಿರಲಿದೆ ಎಂಬುದನ್ನು ತಿಳಿಯಲು ಪ್ರಯತ್ನಿಸಲಾಗಿದೆ. ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಮೇ 10ರಂದು ನಡೆಯುವ ಹಿನ್ನೆಲೆಯಲ್ಲಿ ‘ಟಿವಿ9 ಕನ್ನಡ’ ಮತ್ತು ‘ಸಿವೋಟರ್’ ಸಹಭಾಗಿತ್ವದಲ್ಲಿ ಚುನಾವಣಾಪೂರ್ವ ಸಮೀಕ್ಷೆ ನಡೆಸಲಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳ ಸಾಧನೆ ಏನಿರಲಿದೆ ಎಂಬುದನ್ನು ತಿಳಿಯಲು ಪ್ರಯತ್ನಿಸಲಾಗಿದೆ. ಸಮೀಕ್ಷಾ ವರದಿಯ ಪ್ರಕಾರ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಹೆಚ್ಚಾಗಿದೆ. ಮತಹಂಚಿಕೆ ಪ್ರಮಾಣದ ವಿಚಾರಕ್ಕೆ ಬಂದರೆ ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಳೆದ ಬಾರಿಗಿಂತ ತುಸು ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ. ಬಿಜೆಪಿಯ ಮತ ಹಂಚಿಕೆ ಕಳೆದ ಬಾರಿಗಿಂತ ತುಸು ಕಡಿಮೆ ಇರುವ ಸಾಧ್ಯತೆ ಇದೆ.
ಯಾವ ಪಕ್ಷಕ್ಕೆ ಎಷ್ಟಿದೆ ಮತ ಹಂಚಿಕೆ?
ಪ್ರತಿಪಕ್ಷ ಕಾಂಗ್ರೆಸ್ ಶೇ 40 ರಷ್ಟು ಮತಹಂಚಿಕೆ ಪಡೆಯುವ ನಿರೀಕ್ಷೆಯಿದೆ. ಆಡಳಿತಾರೂಢ ಬಿಜೆಪಿ ಶೇ 33.9 ಮತ್ತು ಜೆಡಿಎಸ್ ಶೇ 18.8 ರಷ್ಟು ಮತ ಹಂಚಿಕೆ ಪಡೆಯಲಿದೆ ಎಂದು ‘ಟಿವಿ9 ಕನ್ನಡ’ ಮತ್ತು ‘ಸಿವೋಟರ್’ ಸಮೀಕ್ಷಾ ವರದಿ ತಿಳಿಸಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾ 38ರ ಮತ ಹಂಚಿಕೆ ಹೊಂದಿತ್ತು. ಈ ಬಾರಿ ಅದು ಶೇಕಡಾ 40 ಕ್ಕೆ, ಅಂದರೆ ಶೇ 2 ರಷ್ಟು ಹೆಚ್ಚಳ ದಾಖಲಿಸಲಿದೆ. ಬಿಜೆಪಿಯ ಮತಹಂಚಿಕೆ ಪ್ರಮಾಣವು ಶೇಕಡಾ 36 ರಿಂದ ಶೇಕಡಾ 33.9 ಕ್ಕೆ, ಅಂದರೆ ಶೇ -2.2 ರಷ್ಟು ಇಳಿಕೆಯಾಗಬಹುದು ಎಂದು ಸಿವೋಟರ್ ಹೇಳಿದೆ. ಏತನ್ಮಧ್ಯೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತನ್ನ ಮತಗಳನ್ನು ಶೇಕಡಾ 0.8 ರಷ್ಟು, ಅಂದರೆ ಶೇ 18 ರಿಂದ 18.8 ಕ್ಕೆ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ. ಪಕ್ಷೇತರರ ಮತ ಹಂಚಿಕೆ ಪ್ರಮಾಣ 2018ರ ಚುನಾವಣೆಯಲ್ಲಿ ಶೇಕಡಾ 8 ಇದ್ದರೆ ಈ ಬಾರಿ ಶೇ 7.3 ಇರುವ ನಿರೀಕ್ಷೆ ಇದೆ.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
‘ಟಿವಿ9 ಕನ್ನಡ ಸಿವೋಟರ್’ ಸಮೀಕ್ಷಾ ವರದಿ ಪ್ರಕಾರ, ಕಾಂಗ್ರೆಸ್ ಪಕ್ಷವು 106 ರಿಂದ 116 ಸ್ಥಾನ ಗಳಿಸುವ ಸಾಧ್ಯತೆ ಇದೆ. ಆಡಳಿತಾರೂಢ ಬಿಜೆಪಿ 79 ರಿಂದ 89 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಜೆಡಿಎಸ್ಗೆ 24 ರಿಮದ 34 ಸ್ಥಾನ ದೊರೆತರೆ ಇತರರು 0 ಯಿಂದ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಇದೆ.
ಪಕ್ಷಗಳ ಪ್ರದೇಶವಾರು ಬಲಾಬಲ
ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಮತ ಹಂಚಿಕೆ ಪ್ರಮಾಣ ಶೇ 36ರಿಂದ 40.5ಕ್ಕೆ ಹೆಚ್ಚಳವಾಗಲಿದೆ. ಬಿಜೆಪಿ ಮತ ಹಂಚಿಕೆ ಪ್ರಮಾಣ ಶೇ 43 ಇದ್ದುದು ಶೇ 36.6ಕ್ಕೆ ಇಳಿಕೆಯಾಗಿದೆ. ಜೆಡಿಎಸ್ ಮತ ಹಂಚಿಕೆ ಪ್ರಮಾಣ ಶೇ 14 ಇದ್ದುದು ಶೇ 14.5 ಆಗಲಿದೆ. ಇತರರ ಮತ ಹಂಚಿಕೆ ಪ್ರಮಾಣ ಶೇ 7 ಇದ್ದುದು ಶೇ 8.4ಕ್ಕೆ ಹೆಚ್ಚಳವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 18 ರಿಂದ 22 ಸ್ಥಾನ ಪಡೆಯುವ ಸಾಧ್ಯತೆ ಇದೆ. ಬಿಜೆಪಿ 13ರಿಂದ 17, ಜೆಡಿಎಸ್ ಹಾಗೂ ಇತರರು ತಲಾ 1 ಸ್ಥಾನ ಪಡೆಯುವ ನಿರೀಕ್ಷೆ ಇದೆ.
ಕರಾವಳಿ ಕರ್ನಾಟಕದಲ್ಲಿ ಬಿಜೆಪಿಯೇ ಮೇಲುಗೈ
ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ ಹಂಚಿಕೆ ಪ್ರಮಾಣ ಶೇ 39ರಿಂದ 35.4ಕ್ಕೆ ಇಳಿಕೆಯಾಗಲಿದೆ. ಬಿಜೆಪಿ ಮತ ಹಂಚಿಕೆ ಪ್ರಮಾಣ ಶೇ 51 ಇದ್ದುದು ಶೇ 50.3ಕ್ಕೆ ಇಳಿಕೆಯಾಗಿದೆ. ಜೆಡಿಎಸ್ ಮತ ಹಂಚಿಕೆ ಪ್ರಮಾಣ ಶೇ 6 ಇದ್ದುದು ಶೇ 8.3 ಆಗಲಿದೆ. ಇತರರ ಮತ ಹಂಚಿಕೆ ಪ್ರಮಾಣ ಶೇ 4 ಇದ್ದುದು ಶೇ 6ಕ್ಕೆ ಹೆಚ್ಚಳವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಕಾಂಗ್ರೆಸ್ 1 ರಿಂದ 5 ಸ್ಥಾನ ಗಳಿಸುವ ನಿರೀಕ್ಷೆ ಇದ್ದರೆ, ಬಿಜೆಪಿ 16 ರಿಂದ 20 ಸ್ಥಾನ ಗಳಿಸುವ ಸಾಧ್ಯತೆ ಇದೆ. ಜೆಡಿಎಸ್ ಈ ಬಾರಿಯೂ ಖಾತೆ ತೆರೆಯುವುದಿಲ್ಲ. ಒಬ್ಬ ಪಕ್ಷೇತರನ ಗೆಲುವಿನ ಸಾಧ್ಯತೆಯನ್ನು ಸಮೀಕ್ಷಾ ವರದಿ ಬಹಿರಂಗಪಡಿಸಿದೆ.
ಗ್ರೇಟರ್ ಬೆಂಗಳೂರಿನಲ್ಲಿ ಕಾಂಗ್ರೆಸ್ಗೆ ಬಲ
ಗ್ರೇಟರ್ ಬೆಂಗಳೂರು ಭಾಗದಲ್ಲಿ ಕಾಂಗ್ರೆಸ್ 18 ರಿಂದ 22 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ 7 ರಿಂದ 11, ಜೆಡಿಎಸ್ 1 ರಿಂದ 5 ಹಾಗೂ ಇತರರು 1 ಸ್ಥಾನ ಪಡೆಯುವ ಸಾಧ್ಯತೆ ಇದೆ.
ಹೈದರಾಬಾದ್ ಕರ್ನಾಟಕದಲ್ಲಿಯೂ ಬಲಗೊಳ್ಳಲಿದೆ ‘ಕೈ’
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 16 ರಿಂದ 20 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ 11 ರಿಂದ 15, ಜೆಡಿಎಸ್ 1 ಹಾಗೂ ಇತರರು 1 ಸ್ಥಾನ ಪಡೆಯುವ ಸಾಧ್ಯತೆ ಇದೆ.
ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಪೈಪೋಟಿ
ಮುಂಬೈ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ 25 ರಿಂದ 29 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ 21 ರಿಂದ 25, ಜೆಡಿಎಸ್ 1 ಹಾಗೂ ಇತರರು 1 ಸ್ಥಾನ ಪಡೆಯುವ ಸಾಧ್ಯತೆ ಇದೆ.
ಹಳೆ ಮೈಸೂರಿನಲ್ಲಿ ಜೆಡಿಎಸ್ ಕಿಂಗ್
ಹಳೆ ಮೈಸೂರು ಭಾಗದಲ್ಲಿ ತನ್ನ ಪಾರುಪತ್ಯವನ್ನು ಜೆಡಿಎಸ್ ಮುಂದುವರಿಸಿದೆ. ಈ ಬಾರಿ ದಳಕ್ಕೆ 24 ರಿಂದ 28 ಸ್ಥಾನ ದೊರೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ 21 ರಿಂದ 25 ಸ್ಥಾನ ಪಡೆದರೆ ಆಡಳಿತಾರೂಢ ಬಿಜೆಪಿ 4 ರಿಂದ 8 ಸ್ಥಾನ ಪಡೆಯುವ ಸಾಧ್ಯತೆ ಇದೆ. ಇತರರು 1 ಸ್ಥಾನ ಪಡೆಯಲಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ