ಸೋನಿಯಾ ಗಾಂಧಿಗೆ ಸಂಕಷ್ಟ ತಂದ ಕರ್ನಾಟಕದ ಸಾರ್ವಭೌಮತ್ವ ಹೇಳಿಕೆ; ಚುನಾವಣಾ ಆಯೋಗ ನೋಟಿಸ್

|

Updated on: May 08, 2023 | 9:36 PM

ಕರ್ನಾಟಕದ ‘ಸಾರ್ವಭೌಮತ್ವ’ಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸೋಮವಾರ ಕಾಂಗ್ರೆಸ್‌ನಿಂದ ಸ್ಪಷ್ಟನೆ ಕೇಳಿದೆ.

ಸೋನಿಯಾ ಗಾಂಧಿಗೆ ಸಂಕಷ್ಟ ತಂದ ಕರ್ನಾಟಕದ ಸಾರ್ವಭೌಮತ್ವ ಹೇಳಿಕೆ; ಚುನಾವಣಾ ಆಯೋಗ ನೋಟಿಸ್
ಸೋನಿಯಾ ಗಾಂಧಿ (ಚಿತ್ರ ಕೃಪೆ; ಐಎನ್​ಸಿ ಟ್ವೀಟ್)
Image Credit source: Twitter
Follow us on

ಬೆಂಗಳೂರು: ಕರ್ನಾಟಕದ ‘ಸಾರ್ವಭೌಮತ್ವ’ಕ್ಕೆ (Sovereignty) ಸಂಬಂಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸೋಮವಾರ ಕಾಂಗ್ರೆಸ್‌ನಿಂದ ಸ್ಪಷ್ಟನೆ ಕೇಳಿದೆ. ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿರುವ, ಸೋನಿಯಾ ಗಾಂಧಿ ನೀಡಿದ್ದು ಎನ್ನಲಾದ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಮತ್ತು ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವಂತೆ ಚುನಾವಣಾ ಆಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೋಟಿಸ್ ನೀಡಿದೆ.

ಕಾಂಗ್ರೆಸ್‌ನ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮೇ 6 ರಂದು ಕಾಣಿಸಿಕೊಂಡ ಟ್ವೀಟ್‌ಗೆ ಸಂಬಂಧಿಸಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ನಂತರ ಆಯೋಗ ಸ್ಪಷ್ಟನೆ ಕೋರಿದೆ.

ಭಾರತದ ಒಕ್ಕೂಟದಲ್ಲಿ ಕರ್ನಾಟಕವು ಅತ್ಯಂತ ಪ್ರಮುಖ ಸದಸ್ಯ ರಾಜ್ಯವಾಗಿದೆ ಮತ್ತು ರಾಜ್ಯಗಳ ಸಾರ್ವಭೌಮತ್ವವನ್ನು ರಕ್ಷಿಸುವುದಕ್ಕೆ ಸಂಬಂಧಿಸಿ ನೀಡಲಾಗುವ ಕರೆಯು ಪ್ರತ್ಯೇಕತೆಯ ಕರೆಗೆ ಸಮಾನವಾಗಿರುತ್ತದೆ. ಈ ರೀತಿಯ ಬೆಳವಣಿಗೆ ಅಪಾಯಕಾರಿಯಾಗಿದ್ದು ಹಾನಿಕಾರಕ ಪರಿಣಾಮಗಳನ್ನು ಹೊಂದಿವೆ ಎಂದು ಬಿಜೆಪಿಯು ದೂರಿನಲ್ಲಿ ಉಲ್ಲೇಖಿಸಿತ್ತು. ರಾಜಕೀಯ ಪಕ್ಷಗಳು ನೋಂದಣಿ ಸಮಯದಲ್ಲಿ ಮಾಡಿಕೊಂಡಿರುವ ಒಪ್ಪಂದವನ್ನೂ ಈ ಟ್ವೀಟ್ ಉಲ್ಲಂಘಿಸಿದೆ ಎಂದು ಬಿಜೆಪಿ ಆಕ್ಷೇಪಿಸಿತ್ತು.

ಇದನ್ನೂ ಓದಿ: ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಶೋಭಾ ಕರಂದ್ಲಾಜೆ

ಏನು ಹೇಳಿದ್ದರು ಸೋನಿಯಾ ಗಾಂಧಿ?

ಈ ಬಾರಿ ಚುನಾವಣಾ ಪ್ರಚಾರದಿಂದ ಬಹುತೇಕ ದೂರ ಉಳಿದಿದ್ದ ಸೋನಿಯಾ ಗಾಂಧಿ ಅವರು ಮೇ 6 ರಂದು ಹುಬ್ಬಳ್ಳಿಯಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಇದನ್ನೇ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಲ್ಲಿಯೂ ಹಂಚಿಕೊಳ್ಳಲಾಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ