ಬೆಂಗಳೂರು: ಬಿಜೆಪಿ ಸರ್ಕಾರ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಚುನಾವಣಾ ಆಯೋಗವು (Karnataka Election Commission) ನೋಟಿಸ್ ಜಾರಿ ಮಾಡಿದೆ. ಸರ್ಕಾರದ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ನೈಜ ಸಾಕ್ಷ್ಯಗಳನ್ನು ಮೇ 7ರ ಸಂಜೆ 7 ಗಂಟೆಯೊಳಗೆ ಒದಗಿಸುವಂತೆ ಡಿ.ಕೆ.ಶಿವಕುಮಾರ್‌ಗೆ ಆಯೋಗದಿಂದ ನೋಟಿಸ್ ಜಾರಿಯಾಗಿದೆ.
ಸರ್ಕಾರದ ನೀತಿಯ ಬಗ್ಗೆ ಟೀಕಿಸುವ ಹಕ್ಕಿದೆ. ಆದರೆ ಜಾಹೀರಾತಿನಲ್ಲಿರುವುದು ಸಾಧಾರಣ ಆರೋಪಗಳಲ್ಲ. ಸರ್ಕಾರದ ಆಡಳಿತ ಯಂತ್ರದ ಮೇಲೆ ನಿರ್ದಿಷ್ಟವಾಗಿ ಆರೋಪಿಸಲಾಗಿದೆ. ಇದು ಸರಾಗ ಚುನಾವಣೆ ಮೇಲೂ ಪರಿಣಾಮ ಬೀರುವಂತಹದ್ದಾಗಿದೆ. ಜಾಹೀರಾತು ಗಮನಿಸಿದರೆ ಕಾಂಗ್ರೆಸ್ ಪಕ್ಷದ ಬಳಿ ಪುರಾವೆಗಳಿರಬೇಕು. ಹೀಗಾಗಿ ನಾಳೆ ಸಂಜೆ 7 ಗಂಟೆಯೊಳಗೆ ಪುರಾವೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಚುನಾವಣಾ ಆಯೋಗವು ತಾಕೀತು ಮಾಡಿದೆ.
ಇದನ್ನೂ ಓದಿ: ಬಜರಂಗ ದಳಕ್ಕೆ ಆಂಜನೇಯಗೆ ಏನು ಸಂಬಂಧ? ಡಿಕೆ ಶಿವಕುಮಾರ್‌ಗೆ ಸಿಎಂ ಬೊಮ್ಮಾಯಿ ಕೊಟ್ಟ ಉತ್ತರ ಹೀಗಿದೆ
ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಕುರಿತು ಅವಹೇಳನಕಾರಿ ಜಾಹೀರಾತು ನೀಡಿದ್ದ ಆರೋಪ ಹಿನ್ನೆಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ಕ್ರಿಮಿನಲ್ ಡಿಫಾಮೇಷನ್ ಲೀಗಲ್ ನೋಟೀಸ್ ಜಾರಿ ಮಾಡಿದೆ. ಸೋಮವಾರದೊಳಗೆ ತಮ್ಮ ಜಾಹೀರಾತನ್ನು ಹಿಂಪಡೆದು ಕ್ಷಮೆ ಕೋರಬೇಕು, ಇಲ್ಲವಾದರೆ ಮಾನಹಾನಿ ಪ್ರಕರಣ ಹೂಡುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶವಪ್ರಸಾದ್ ವತಿಯಿಂದ ನೋಟೀಸ್ ಜಾರಿಯಾಗಿದೆ.
ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರ ವಿರುದ್ಧ ಜಾಹೀರಾತಿನಲ್ಲಿ ಮಾಡಿದ ಆರೋಪಗಳು ಆಧಾರ ರಹಿತವಾದದ್ದು. ಹೀಗಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ದೂರು ನೀಡಿತ್ತು. ಜಾಹೀರಾತಿನಲ್ಲಿ ಬಿಜೆಪಿ ಸರ್ಕಾರವನ್ನು ಟ್ರಬಲ್ ಎಂಜಿನ್ ಸರ್ಕಾರ, 40 ಪರ್ಸೆಂಟ್ ಸರ್ಕಾರ ಎಂದೆಲ್ಲಾ ಸಂಬೋಧಿಸಿದ್ದು, ನೇಮಕಾತಿ, ವರ್ಗಾವಣೆ, ಹುದ್ದೆಗಳಿಗೆ ಒಂದೊಂದು ದರ ಫಿಕ್ಸ್ ಮಾಡಿ ರೇಟ್ ಕಾರ್ಡ್ ಜಾಹೀರಾತು ಪ್ರಕಟಿಸಿದೆ. ಇದರ ವಿರುದ್ಧ ಸೂಕ್ತ ಕ್ರಮಕ್ಕೆ ದೂರಿನಲ್ಲಿ ಬಿಜೆಪಿ ಒತ್ತಾಯಿಸಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 pm, Sat, 6 May 23