ಬೆಳಗಾವಿಯಲ್ಲಿ ನಡೆದ ಅಸಮಾಧಾನಿತ ಬಿಜೆಪಿ ನಾಯಕರ ಸಂಧಾನ ಸಭೆ ವಿಫಲ, ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?

|

Updated on: Apr 15, 2023 | 8:33 PM

ಕರ್ನಾಟಕದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಎರಡನೇ ಜಿಲ್ಲೆ ಬೆಳಗಾವಿ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದ್ದು, ಅದನ್ನು ಶಮನ ಮಾಡಲು ನಾಯಕರು ಕಸರತ್ತು ನಡೆಸಿದ್ದಾರೆ. ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯ ಎದ್ದಿದ್ದ ಬೆಳಗಾವಿ ಜಿಲ್ಲಾ ನಾಯಕರ ಜೊತೆ ನಡೆಸಿದ್ದ ಸಭೆ ವಿಫಲವಾಗಿದೆ.

ಬೆಳಗಾವಿಯಲ್ಲಿ ನಡೆದ ಅಸಮಾಧಾನಿತ ಬಿಜೆಪಿ ನಾಯಕರ ಸಂಧಾನ ಸಭೆ ವಿಫಲ, ಧರ್ಮೇಂದ್ರ ಪ್ರಧಾನ್ ಹೇಳಿದ್ದೇನು?
ಧರ್ಮೇಂದ್ರ ಪ್ರಧಾನ್
Follow us on

ಬೆಂಗಳೂರು: ಕರ್ನಾಟಕ ‌ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಿಂದ ಕೇಸರಿ ಪಡೆಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ಟಿಕೆಟ್​​ ವಂಚಿತರು ಶಾಸಕ ಹಾಗೂ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹಾರಿದ್ದಾರೆ. ಇನ್ನೂ ಹಲವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅದರಲ್ಲೂ ಬೆಂಗಳೂರು ಬಿಟ್ಟು ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, ಅದರನ್ನು ಶಮನಗೊಳಿಸಲು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅಖಾಡಕ್ಕಿಳಿದಿದ್ದಾರೆ. ಆದ್ರೆ, ಅದ್ಯಾವುದು ಪ್ರಯೋಜನವಾಗಿಲ್ಲ. ಹೌದು..ಇಂದು(ಏಪ್ರಿಲ್ 15) ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಧರ್ಮೇಂದ್ರ ಪ್ರಧಾನ್, ಬಂಡಾಯ ಎದ್ದಿರುವ ನಾಯಕರ ಜೊತೆ ಸಂಧಾನ ಸಭೆ ನಡೆಸಿದರು. ಆದ್ರೆ, ಸಂಧಾನ ಸಭೆ ವಿಫಲವಾಗಿದೆ.

ಇದನ್ನೂ ಓದಿ: ಸ್ವಂತ ವಾಹನವಿಲ್ಲ, ಕೋಟಿಗಟ್ಟಲೇ ಸಾಲ: ಇಲ್ಲಿದೆ ‘ಕಾಮನ್‌ ಮ್ಯಾನ್‌’ ಸಿಎಂ ಬಸವರಾಜ ಬೊಮ್ಮಾಯಿ ಆಸ್ತಿ ವಿವರ

ಅಸಮಾಧಾನಿತರ ಜೊತೆ ಜೊತೆ ಧರ್ಮೇಂದ್ರ ಪ್ರಧಾನ್ ಒನ್ ಟು ಒನ್ ಸಭೆ ನಡೆಸಿದರು. ಆದ್ರೆ, ಎಂಟು ಕ್ಷೇತ್ರಗಳ ಪೈಕಿ ಒಂದೇ ಕ್ಷೇತ್ರದ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಭೆ ಬಳಿಕ ಪಕ್ಷದ ನಿರ್ಣಯಕ್ಕೆ ಬದ್ಧ ಎಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಜಯ್‌ ಪಾಟೀಲ್ ಅವರ ಮನವೊಲಿಸಿದ್ದಾರೆ. ಇನ್ನು ಸಭೆ ಬಳಿಕ ಪಕ್ಷದ ನಿರ್ಣಯಕ್ಕೆ ಬದ್ಧ ಎಂದು ಸಂಜಯ್‌ ಪಾಟೀಲ್ ಹೇಳಿದ್ದು, ಈ ಮೂಲಕ ತಣ್ಣಗಾಗಿದ್ದಾರೆ. ಇನ್ನು ಸವದತ್ತಿ, ಬೈಲಹೊಂಗಲ ಟಿಕೆಟ್ ಆಕಾಂಕ್ಷಿಗಳು ಸಭೆಯಲ್ಲಿ ಭಾಗಿಯಾಗಿಲ್ಲ. ಇದರಿಂದ ಬೆಳಗಾವಿ ಉತ್ತರ, ರಾಮದುರ್ಗ, ಬೈಲಹೊಂಗಲ, ಯಮಕನಮರಡಿ, ಖಾನಾಪುರ ಹಾಗೂ ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಖಚಿತ ಎನ್ನಲಾಗಿದೆ.

ಇನ್ನು ಸಂಧಾನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್ , ಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಪ್ರಧಾನಿ ಮೋದಿ ಪ್ರವಾಸ ಇದೇ ತಿಂಗಳು ಶುರುವಾಗಲಿದೆ ಯಡಿಯೂರಪ್ಪ, ಬೊಮ್ಮಾಯಿ ಸೇರಿ ಎಲ್ಲ ನಾಯಕರ ಪ್ರವಾಸ ಶುರುವಾಗುತ್ತೆ. ಬಹಳ ಉತ್ಸಾಹದಿಂದ ನಾಮಪತ್ರ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುತ್ತೆ. ಡಬಲ್ ಎಂಜಿನ್ ಸರ್ಕಾರದ ಮೇಲಿನ ಜನರ ಭರವಸೆ ಇದೆ. ಚುನಾವಣಾ ಫಲಿತಾಂಶ ಸ್ಪಷ್ಟವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ಭೇಟಿಯಾಗದಿದ್ದರೆ ರಾಜೀನಾಮೆಗೆ ಸಿದ್ಧ: ಅಂತಿಮ ನಿರ್ಧಾರ ಘೋಷಿಸಿದ ಜಗದೀಶ್ ಶೆಟ್ಟರ್

ಬಹಳ ಜನರ ಮನಸಿನಲ್ಲಿ ಆಸೆ ಇರುವುದು ಸಹಜ. ನಮ್ಮದು ಪ್ರಜಾಪ್ರಭುತ್ವ ಪಕ್ಷ. 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡಿದ್ದೇವೆ. ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಒಂದು ಪ್ರಕ್ರಿಯೆ ಇರುತ್ತೆ. ಆ ಪ್ರಕ್ರಿಯೆಯಂತೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ನಾನು ಮೊದಲು ಸಹ ಇಲ್ಲಿಗೆ ಬಂದು ಹೋಗಿದ್ದೆ. ಏನೇ ಇರಲಿ ಎಲ್ಲರೂ ಒಗ್ಗೂಡಿ ಬಿಜೆಪಿ ಗೆಲ್ಲಿಸುತ್ತಾರೆ ಎಂದರು.

ಇನ್ನು ಇದೇ ವೇಳೆ ಲಕ್ಷ್ಮಣ್ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಲಕ್ಷ್ಮಣ್ ಸವದಿ ಮೇಲೆ ನಮಗೆ ಈ ನಿರೀಕ್ಷೆ ಇರಲಿಲ್ಲ. ಲಕ್ಷ್ಮಣ್ ಸವದಿಗೆ ಎಲ್ಲಾ ಅವಕಾಶ, ಗೌರವ ನೀಡಿದ್ದೆವು. ಸೋತರೂ ಅವರ ಸೇವೆ ಪರಿಗಣಿಸಿ ಡಿಸಿಎಂ ಹುದ್ದೆ ನೀಡಿದ್ದೆವು. ಚುನಾವಣೆಗೆ ಕೆಲವು ಲೆಕ್ಕಾಚಾರ ಇರುತ್ತೆ. ಬಿಜೆಪಿ ಕಾರ್ಯಕರ್ತರ ಪಕ್ಷ, ಇದು ಹಲವು ಬಾರಿ ಸಾಬೀತಾಗಿದೆ. ಅಥಣಿಯಲ್ಲಿಯೂ ಬಿಜೆಪಿಗೆ ಗೆಲುವು ಆಗಲಿದೆ ಎಂದು ಹೇಳಿದರು.

ಸಭೆ ಬಳಿಕ ಟಿಕೆಟ್ ವಂಚಿತ ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬೆಂಗಳೂರು ಇಲ್ಲವೇ ದೆಹಲಿಗೆ ಹೋಗಿ ತಿಳಿಸೋದಾಗಿ ಹೇಳಿದ್ದಾರೆ. ಇನ್ನು ಒಂದೆರಡು ದಿನ ಕಾದು ನೋಡುತ್ತೇವೆ. ನಾನು ಸೋಮವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಟಿಕೆಟ್ ಬದಲಾವಣೆ ಮಾಡದಿದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಸಿದ್ಧ ಎಂದು ಘೋಷಿಸಿದರು.

ಬಿಜೆಪಿ ಪಾಳೆಯಕ್ಕಂತೂ ಸದ್ಯ ಜಗದೀಶ್​ ಶೆಟ್ಟರ್​​ ಭಿನ್ನಮತವೇ ಸವಾಲ್​ ಆಗಿದೆ. ಒಂದು ವೇಳೆ ಟಿಕೆಟ್​ ಕೈತಪ್ಪಿದರೆ ಪಕ್ಷೇತರವಾಗಿ ಸ್ಪರ್ಧಿಸಿವುದಾಗಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಶೆಟ್ಟರ್​ ಮನವೊಲಿಸಲು ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ. ಈಗಾಗಲೇ ಪ್ರಲ್ಹಾದ್ ಜೋಶಿ ಅವರು ಶೆಟ್ಟರ್​​ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದೀಗ ಧರ್ಮೆಂದ್ರ ಪ್ರಧಾನ್​ ಸಹ ಜಗದೀಶ್ ಶೆಟ್ಟರ್​ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗದಿದ್ದಲ್ಲಿ. ತಮ್ಮ ರಾಜೀನಾಮೆ ನೀಡಿವುದು ಖಚಿತ ಎಂದು ಶೆಟ್ಟರ್​ ಸ್ಪಷ್ಟಪಡಿಸಿದ್ದಾರೆ.

Published On - 8:23 pm, Sat, 15 April 23