ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಈಗಾಗಲೇ ಕಾಂಗ್ರೆಸ್‌ನ ಎರಡು ಪಟ್ಟಿಯಲ್ಲಿ 166 ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗಿದೆ. ಜೆಡಿಎಸ್ ತನ್ನ 93 ಅಭ್ಯರ್ಥಿಗಳ ಒಂದು ಪಟ್ಟಿಯನ್ನು ಸಹ ಪ್ರಕಟಿಸಿದೆ. ಆದ್ರೆ, ಆಡಳಿತರೂಢ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಇಂದು(ಏಪ್ರಿಲ್ 10) ಯಾವುದೇ ಕ್ಷಣದಲ್ಲಾದರೂ ಬಿಡುಗಡೆಯಾಗಹುದು. ಕಳೆದ ಹತ್ತರಿಂದ 15 ದಿನಗಳಿಂದ ಹೈವೋಲ್ಟೇಜ್ ಮೀಟಿಂಗ್ ಮಾಡಿರುವ ನಾಯಕರು, 175 ಅಭ್ಯರ್ಥಿಗಳ ಪಟ್ಟಿಯನ್ನ ರೆಡಿ ಮಾಡಿದ್ದಾರೆ. ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು.? ಬಂಡಾಯ ಶಮನ ಮಾಡುವುದು ಹೇಗೆ? ಸರ್ವೆ ರಿಪೋರ್ಟ್ ಏನ್ ಹೇಳುತ್ತೆ? ಹೀಗೆ ಎಲ್ಲವನ್ನೂ ಅಳೆದು ತೂಗಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು, ಟಿಕೆಟ್ ಘೋಷಣೆಗೂ ಮುನ್ನ ಬಿಜೆಪಿ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ದೆಹಲಿಯಲ್ಲಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಳಿಕ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಾಯಕರು ಸುದ್ದಿಗೋಷ್ಟಿ ನಡೆಸಲಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಸಿಗುತ್ತೋ ಇಲ್ವೋ ಎಂದು ಆಕಾಂಕ್ಷಿಗಳಿಗೆ ಎದೆ ಡವ ಡವ ಅಂತಿದ್ರೆ, ಇನ್ನು ಕೆಲ ಹಾಲಿ ಶಾಸಕರು ಎಲ್ಲಿ ಈ ಬಾರಿ ಟಿಕೆಟ್ ಕೈತಪ್ಪುತ್ತೋ ಎನ್ನುವ ಆತಂಕದಲ್ಲಿದ್ದಾರೆ.
ಇದನ್ನೂ ಓದಿ: ಮಾದರಿ ನೀತಿ ಸಂಹಿತೆ ಜಾರಿ: 10 ದಿನಗಳಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತು ಜಪ್ತಿ
ದೆಹಲಿಯಲ್ಲಿ ನಡೆದ ಬಿಜೆಪಿ ಟಿಕೆಟ್ ಚರ್ಚೆ ವಿಚಾರವಾಗಿ ಕಳೆದ 2 ದಿನ ನಡೆದ ಸಭೆ ಅಂತ್ಯಗೊಂಡಿದೆ. ಅಲ್ಲದೇ ನಿನ್ನೆ (ಏಪ್ರಿಲ್ 09) ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಸದೀಯ ಮಂಡಳಿ ಸಭೆ ನಡೆದಿದ್ದು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಂಬಂಧ ಸುದೀರ್ಘವಾಗಿ ಎರಡು ಗಂಟೆ ಕಾಲ ಚರ್ಚೆಗಳು ನಡೆದಿವೆ.
ಹೌದು..ಅತ್ತ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಸರಣಿ ಸಭೆಗಳು, ಸುದೀರ್ಘ ಚರ್ಚೆಗಳು ನಡೆಯುತ್ತಿದ್ದರೆ ಇತ್ತ ದಿಲ್ಲಿ ನಾಯಕರ ದಾಳಕ್ಕೆ ಬಿಜೆಪಿಯ ಹಾಲಿ ಶಾಸಕರಿಗೆ ಟಿಕೆಟ್ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಈ ಬಾರಿ 16 ಅಥವಾ ಅದಕ್ಕಿಂತ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗುತ್ತೆ ಎನ್ನುವ ಮಾಹಿತಿ ಬಿಜೆಪಿ ಪಾಳಯದಿಂದಲೇ ತಿಳಿದುಬಂದಿದೆ. ಹೀಗಾಗಿ ಕೇಸರಿ ಮನೆಯಲ್ಲಿ ಕಂಪನ ಎದ್ದಿದ್ದು, ಯಾರಿಗೆ ಟಿಕೆಟ್ ಮಿಸ್ಸಾಗುತ್ತೋ ಎನ್ನುವ ತಳಮಳ ಶುರುವಾಗಿದೆ.
ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:16 am, Mon, 10 April 23