ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 (Karnataka Assembly Elections) ಮುಕ್ತಾಯಗೊಂಡಿದ್ದು, ರಾಜ್ಯದಾದ್ಯಂತ ಸಂಜೆ 5 ಗಂಟೆ ವರೆಗಿನ ಲೆಕ್ಕಾಚಾರ ಪ್ರಕಾರ ಶೇ 65.69 ರಷ್ಟು ಮತದಾನವಾಗಿದೆ. ಇದೀಗ ಚುನಾವಣೋತ್ತರ ಸಮೀಕ್ಷೆಗಳು (Exit Polls 2023) ಹೊರಬಿದ್ದಿದ್ದು, ಕೆಲವು ಸಮೀಕ್ಷೆಗಳು ಕಾಂಗ್ರೆಸ್ (Congress) ಅಧಿಕಾರಕ್ಕೆ ಬರಬಹುದು ಸಾಧ್ಯತೆ ಇದೆ ಎಂದು ತಿಳಿಸಿದರೆ, ಇನ್ನು ಕೆಲವು ಸಮೀಕ್ಷೆಗಳ ಪ್ರಕಾರ ಬಿಜೆಪಿ (BJP) ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ. ಕೆಲವೊಂದು ಸಮೀಕ್ಷೆಗಳು ಅತಂತ್ರ ತೋರಿಸಿವೆ. ಈ ಬಗ್ಗೆ ರಾಜಕೀಯ ನಾಯಕರು ಏನಂದರು ಎಂಬ ಮಾಹಿತಿ ಇಲ್ಲಿದೆ.
ಚುನಾವಣೋತ್ತರ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ನಾವೇ ಕಿಂಗ್ ಆಗುತ್ತೇವೆ, ಜೆಡಿಎಸ್ ಕಿಂಗ್ ಮೇಕರ್ ಆಗಲ್ಲ, ಬಿಜೆಪಿಗೆ ಬಹುಮತ ಸಿಗುತ್ತದೆ. ರೆಸಾರ್ಟ್ ರಾಜಕೀಯ ಅಗತ್ಯವಿಲ್ಲ. ಯಾವುದೇ ರೆಸಾರ್ಟ್ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಚುನಾವಣೋತ್ತರ ಸಮೀಕ್ಷೆಗಳು ಶೇ 100 ರಷ್ಟು ನಿರ್ದಿಷ್ಟವಾಗಿರುವುದಿಲ್ಲ. ನಿಜವಾದ ಫಲಿತಾಶ ಬರುವಾಗ ಪ್ಲಸ್ ಮೈನಸ್ ಆಗುತ್ತದೆ. ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಎಕ್ಸಿಟ್ ಪೊಲ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮೇ 13ರ ಫಲಿತಾಂಶ ಬರುವ ತನಕ ಕಾದು ನೋಡಿ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: Bangalore: ಒಂದೇ ಮತಗಟ್ಟೆಯಲ್ಲಿ ಸರದಿ ಸಾಲಲ್ಲಿದ್ದ 8000 ಜನರು ಮತದಾನ ಮಾಡದೆ ವಾಪಸ್! ಹೌದಾ?
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 130ರಿಂದ 150 ಸ್ಥಾನ ಗೆಲ್ಲುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲೂ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ವರುಣ ಕ್ಷೇತ್ರದಲ್ಲೂ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ತಪ್ಪಿದ ಹಿನ್ನೆಲೆ ಕೊನೇ ಕ್ಷಣದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿದೆ. ಬೇರೆ ಯಾವುದೇ ಪಕ್ಷದೊಂದಿಗೆ, ವಿಶೇಷವಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಸಲ ಬದಲಾವಣೆ ಗಾಳಿ ಬೀಸಿದೆ. ಗ್ರೌಂಡ್ ರಿಪೋರ್ಟ್ ಲಭ್ಯವಾಗಿದೆ, ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ. ಯಾವುದೇ ಅನುಮಾನ ಬೇಡ ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 pm, Wed, 10 May 23