Karnataka Polls 2023: ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಕಟ್ಟುವವರೇ ಹುಷಾರ್

ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಶುರುವಾಗಿದೆ. ದೊಡ್ಡ ಫೈಟ್ ಇರುವ ಕ್ಷೇತ್ರಗಳಲ್ಲಿ ಕೆಲವು ಆ್ಯಪ್​ ಮೂಲಕ ಚುನಾವಣೆ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿದ್ದು, ನಿಗಾವಹಿಸಲಾಗಿದೆ.

Karnataka Polls 2023: ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಕಟ್ಟುವವರೇ ಹುಷಾರ್
ಪ್ರಾತಿನಿಧಿಕ ಚಿತ್ರ

Updated on: May 09, 2023 | 10:38 AM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ(Karnataka Assembly Election) ಕಣ ರಂಗೇರಿದೆ. ನಾಳೆ(ಮೇ.10) ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಹಿನ್ನಲೆ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಶುರುವಾಗಿದೆ. ಹೌದು ಚುನಾವಣೆ ವೇಳೆ ಬೆಟ್ಟಿಂಗ್ ಭೂತ ಬಾಯ್ತೆರೆದಿದೆ. ಈ ಕಾರಣಕ್ಕೆ ಇದೀಗ ಜೂಜು, ಬೆಟ್ಟಿಂಗ್ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ಕಣ್ಗಾವಲು ಇಟ್ಟಿದ್ದು, ಬೆಟ್ಟಿಂಗ್​ ಅಡ್ಡೆಗಳ ಮೇಲೆ ನಿಗಾವಹಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸೋಲುಗಳ ಬಗ್ಗೆ ಬೆಟ್ಟಿಂಗ್​

ಮತದಾನಕ್ಕೆ ಇನ್ನು ಒಂದೇ ದಿನ ಬಾಕಿ ಇದ್ದು, ಈ ನಡುವೆ ಅಲ್ಲಲ್ಲಿ ಬೆಟ್ಟಿಂಗ್ ದಂಧೆ ಭರಾಟೆ ಜೋರಾಗಿದೆ. ಕೆಲವು ಪ್ರಮುಖ ಅಭ್ಯರ್ಥಿಗಳು, ದೊಡ್ಡ ಫೈಟ್ ಇರುವ ಕ್ಷೇತ್ರಗಳಲ್ಲಿ ಕೆಲವು ಆ್ಯಪ್​ ಮೂಲಕ ಚುನಾವಣೆ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿದೆ. ಈ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಆ್ಯಪ್​ಗಳ ಮೇಲೆ ಒಂದು ವಾರದಿಂದಲೇ ನಿಗಾ ಇರಿಸಿದ್ದಾರೆ. ಜೊತೆಗೆ ಕೆಲವು ವ್ಯಕ್ತಿಗಳ ಮೇಲೆಯೂ ನಿಗಾ ಇಡಲಾಗಿದೆ. ಚುನಾವಣೆಯಲ್ಲಿ ಬೆಟ್ಟಿಂಗ್ ಕಂಡು ಬಂದಲ್ಲಿ ಕಠಿಣ ಕ್ರಮಕ್ಕೆ ಪೊಲೀಸರು ನಿರ್ಧರಿಸಿದ್ದಾರೆ.

ಇದನ್ನೂ ಓದಿ:Karnataka Polls 2023: ನಾಳೆ ಮತದಾನ, ರಾಜ್ಯಾದ್ಯಂತ ಎಷ್ಟು ಮತಗಟ್ಟೆಗಳಿವೆ? ಭದ್ರತೆಗೆ ಎಷ್ಟು ಪೊಲೀಸರ ನಿಯೋಜನೆ? ಇಲ್ಲಿದೆ ವಿವರ

ಚುನಾವಣಾ ಬೆಟ್ಟಿಂಗ್​ನಲ್ಲಿ ನಗದು, ಕೃಷಿ ಭೂಮಿ, ಕುರಿ, ಮೇಕೆ, ಟ್ರ್ಯಾಕ್ಟರ್‌, ಬೈಕ್‌ಗಳು

ಹೌದು ರಾಜಕೀಯ ಬೆಟ್ಟಿಂಗ್ ದಂಧೆ ಈ ಬಾರಿ ಚುರುಕುಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಹೇಳಲು ಗ್ರಾಮಸ್ಥರು ವ್ಯಾಪಕ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಚುನಾವಣೆಯ ಫಲಿತಾಂಶದ ಮೇಲೆ ಜನರು ನಗದು, ಅಮೂಲ್ಯ ಕೃಷಿ ಭೂಮಿ, ಕುರಿ, ಮೇಕೆ, ಹಸು, ಎತ್ತು ಸೇರಿದಂತೆ ಜಾನುವಾರುಗಳು, ಟ್ರ್ಯಾಕ್ಟರ್‌ಗಳು ಮತ್ತು ಬೈಕ್‌ಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ. ಬೆಟ್ಟಿಂಗ್ ದಂಧೆಯಲ್ಲಿ ಶ್ರೀರಂಗಪಟ್ಟಣದ ಅರಕೆರೆ ಹೋಬಳಿ ಪ್ರಮುಖವಾಗಿದೆ. ಕಳೆದ 30 ರಿಂದ 40 ವರ್ಷಗಳಿಂದ, ಅರಕೆರೆ ಗ್ರಾಮವು ಚುನಾವಣಾ ಬೆಟ್ಟಿಂಗ್‌ನಲ್ಲಿ ಮುಂಚೂಣಿಯಲ್ಲಿದೆ ಮತಎಣಿಕೆಗೆ ಮುಂಚಿತವಾಗಿಯೇ ಗೆಲ್ಲುವ ಕುದುರೆಗಳನ್ನು ಗ್ರಾಮಸ್ಥರು ಊಹಿಸುತ್ತಾರೆ. ಇನ್ನು ಈ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು,. ಅರಕೆರೆಯಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ. ಈ ಹಿಂದಿನ ಚುನಾವಣೆಯಲ್ಲಿ ನಗದು, ಬೈಕ್, ಬಂಗಾರದ ಬೆಟ್ಟಿಂಗ್ ಸಾಮಾನ್ಯವಾಗಿದ್ದರೆ, ಈ ಬಾರಿ ಗ್ರಾಮಸ್ಥರು ಆಡು, ಕುರಿಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ