ಪರ್ವತಗೌಡ ಚಂದನಗೌಡ ಗದ್ದಿಗೌಡರ್ ಬಾಗಲಕೋಟೆ ಕರ್ನಾಟಕ ಲೋಕಸಭಾ ಅಭ್ಯರ್ಥಿ 2024
ರಾಜಕಾರಣದಲ್ಲಿ ಯಾವುದೇ ವಿಶೇಷ ಸದ್ದು ಮಾಡದೇ ತಮ್ಮಷ್ಟಕ್ಕೆ ತಾವಿರುವ ವಿಶೇಷ ರಾಜಕಾರಣಿ ಪರ್ವತಗೌಡ ಚಂದನಗೌಡ ಗದ್ದಿಗೌಡರ್. ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರೆನಿಸಿಕೊಂಡಿದ್ದ ಗದ್ದಿಗೌಡರ್, ಬಾಗಲಕೋಟೆ ಪ್ರತ್ಯೇಕ ಜಿಲ್ಲೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೆಗಡೆ ಸರ್ಕಾರದ ಜಿಲ್ಲಾ ಮರು ರಚನೆಯ ಸಮಿತಿಯ ಅಧ್ಯಕ್ಷರಾಗಿ ಗದ್ದಿಗೌಡರ್ ಅವರು 1987ರಲ್ಲಿ ನೇಮಕವಾಗಿದ್ದರು. ಮೂಲಕ ಅವರ ಸಾರ್ವಜನಿಕ ಜೀವನಕ್ಕೆ ಅಧಿಕೃತ ಚಾಲನೆ ದೊರೆಯಿತು. ಬಳಿಕ 1988ರಲ್ಲಿ ಅವರನ್ನು ರಾಜ್ಯ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಲಾಯಿತು. ಆದರೆ ಬಳಿಕ ನಡೆದ ವಿಧಾನಸಭೆ ಚುನಾವಣೆಗೆ ಅವರಿಗೆ ಟಿಕೆಟ್ ನೀಡಲು ಜನತಾದಳ ನಿರಾಕರಿಸಿತು. ಹೆಗಡೆ ಅವರ ನಿಧನದ ಬಳಿಕ ರಾಜ್ಯದ ಸಾಕಷ್ಟು ಉತ್ತರ ಕರ್ನಾಟಕದ ನಾಯಕರಂತೆ ಗದ್ದಿಗೌಡರ್ ಕೂಡ ಬಿಜೆಪಿ ಸೇರಿದರು. 2004ರಲ್ಲಿ ಮೊದಲ ಬಾರಿಗೆ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಬಿಜೆಪಿಯಿಂದ ಆಯ್ಕೆಯಾದರು. ಅಂದಿನಿಂದ ಇವತ್ತಿನವರೆಗೆ ಸತತವಾಗಿ ನಾಲ್ಕು ಬಾರಿ ಅವರು ಲೋಕಸಭಾ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ. ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಗದ್ದಿಗೌಡರ್ ಹಾಗೂ ಬಿಜೆಪಿ ಮುಂದಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಯಾವುದೇ ಅಪಸ್ವರವಿರದ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಗೊಂದಲವೇ ಇಲ್ಲದ ಏಕೈಕ ಕ್ಷೇತ್ರ ಇದಾಗಿರಬಹುದು.
"