ರಮೇಶ್ ಜಿಗಜಿಣಗಿ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ
ನಾಲ್ಕು ದಶಕಗಳ ಸುದೀರ್ಘ ಚುನಾವಣೆ ರಾಜಕೀಯ ಅನುಭವವನ್ನು ಹೊಂದಿರುವ ಹಿರಿಯ ರಾಜಕಾರಣಿ ರಮೇಶ್ ಜಿಗಜಿಣಗಿ. ಈಗ ಬಿಜೆಪಿಯ ಸಂಸದರಾಗಿ ಮತ್ತೆ ವಿಜಯಪುರದಿಂದ ಮರು ಸ್ಪರ್ಧೆ ಮಾಡುತ್ತಿರುವ ಅವರು, ರಾಮಕೃಷ್ಣ ಹೆಗಡೆ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಹೆಗಡೆ ಅವರನ್ನು ರಾಜಕೀಯ ಗುರು ಎಂದು ಪರಿಗಣಿಸುವ ಜಿಗಜಿಣಗಿ, 1984ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಳಿಕ ಮೂರು ಬಾರಿ ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದರು. ಹೆಗಡೆ ಅವರು ರಾಷ್ಟ್ರೀಯ ನವನಿರ್ಮಾಣ ವೇದಿಕೆ ಹಾಗೂ ಲೋಕಶಕ್ತಿ ಪಕ್ಷ ಆರಂಭಿಸಿದಾಗ ಬಹಿರಂಗವಾಗಿ ಬೆಂಬಲ ನೀಡಿದವರಲ್ಲಿ ಜಿಗಜಿಣಗಿ ಮೊದಲಿಗರು. ಆದರೆ ಹೆಗಡೆಯವರ ನಿಧನದ ಬಳಿಕ ಬಿಜೆಪಿ ಸೇರಿದ ರಮೇಶ್ ಜಿಗಜಿಣಗಿ ಸತತವಾಗಿ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಇಲ್ಲಿಯವರೆಗೆ ಆರು ಬಾರಿ ಅವರು ಸಂಸದರಾಗಿದ್ದಾರೆ. ಅದರಲ್ಲಿ ಮೊದಲ ಮೂರು ಸಲ ಚಿಕ್ಕೋಡಿಯನ್ನು ಪ್ರತಿನಿಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯ ಆರಂಭಿಕ ಅವಧಿಯಲ್ಲಿ ಮೂರು ವರ್ಷಗಳ ಕಾಲ ಕೇಂದ್ರ ಸಚಿರಾಗಿಯೂ ಅವರು ಕೆಲಸ ಮಾಡಿದ್ದಾರೆ. ಬಿಜೆಪಿಯು ಇನ್ನೊಮ್ಮೆ ಜಿಗಜಿಣಗಿ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.