
ದೇಶದ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎನ್‌ಟಿಪಿಸಿ (NTPC) ಲಿಮಿಟೆಡ್, ಒಟ್ಟು 250 ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಏಪ್ರಿಲ್ 23 ರಿಂದ ಆರಂಭವಾಗಿದ್ದು, ಆಸಕ್ತರು ಮೇ 7 ರೊಳಗೆ ಅಧಿಕೃತ ವೆಬ್‌ಸೈಟ್ careers.ntpc.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ಪ್ರತಿಷ್ಠಿತ ಸರ್ಕಾರಿ ಕಂಪನಿಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಎಂಜಿನಿಯರಿಂಗ್ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಅರ್ಹತಾ ಮಾನದಂಡಗಳ ಕುರಿತು ನೋಡುವುದಾದರೆ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ ಶೇ.40 ಅಂಕಗಳೊಂದಿಗೆ ಬಿ.ಇ ಅಥವಾ ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿರಬೇಕು. ಇದರೊಂದಿಗೆ 40 ಮೆಗಾವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಕಾರ್ಯಾಚರಣೆ ಅಥವಾ ನಿರ್ವಹಣಾ ವಿಭಾಗದಲ್ಲಿ ಕನಿಷ್ಠ ಒಂದು ವರ್ಷದ ಕೆಲಸದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷಗಳೆಂದು ನಿಗದಿಪಡಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 55,000ರೂ. ಸ್ಥಿರ ವೇತನದೊಂದಿಗೆ ಆಕರ್ಷಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಮನೆ ಬಾಡಿಗೆ ಭತ್ಯೆ (HRA) ಅಥವಾ ಕಂಪನಿ ಒದಗಿಸುವ ವಸತಿ ಸೌಕರ್ಯದ ಜೊತೆಗೆ, ರಾತ್ರಿ ಪಾಳಿ ಭತ್ಯೆ ಹಾಗೂ ಕುಟುಂಬದ ಸದಸ್ಯರಿಗೆ (ಸಂಗಾತಿ, ಇಬ್ಬರು ಮಕ್ಕಳು ಮತ್ತು ಪೋಷಕರು) ವೈದ್ಯಕೀಯ ವಿಮೆಯನ್ನು ಒದಗಿಸಲಾಗುತ್ತದೆ. ಆರಂಭದಲ್ಲಿ ಈ ನೇಮಕಾತಿಯು ಮೂರು ವರ್ಷಗಳ ಅವಧಿಗೆ ಇರಲಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಕಂಪನಿಯ ಅಗತ್ಯಕ್ಕೆ ಅನುಗುಣವಾಗಿ ಈ ಅವಧಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸುವ ಅವಕಾಶವೂ ಲಭ್ಯವಿದೆ.
ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!
ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಮಹಿಳೆಯರು, ಎಸ್‌ಸಿ, ಎಸ್‌ಟಿ, ಅಂಗವಿಕಲರು ಮತ್ತು ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು, ನಂತರ ತಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಪೂರ್ಣಗೊಳಿಸಬಹುದು. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Sat, 25 April 26