
‘ಬಾಹುಬಲಿ’ (Bahubali) ಸಿನಿಮಾನಲ್ಲಿ ಬಾಹುಬಲಿ, ಬಲ್ಲಾಳ ದೇವನಷ್ಟೆ ಕಟ್ಟಪ್ಪನ ಪಾತ್ರವೂ ಜನಪ್ರಿಯ. ಆ ಪಾತ್ರದಲ್ಲಿ ನಟಿಸಿದ್ದು ತಮಿಳಿನ ಹಿರಿಯ ನಟ ಸತ್ಯರಾಜ್. ಕನ್ನಡಿಗರ ಪಾಲಿಗೆ ಸತ್ಯರಾಜ್ ಅಪ್ಪಟ ವಿಲನ್. ನಟನಾಗಿರುವ ಜೊತೆಗೆ ಮಾಜಿ ರಾಜಕಾರಣಿಯೂ ಆಗಿರುವ ಸತ್ಯರಾಜ್, ಕನ್ನಡಿಗರ ವಿರುದ್ಧ ಕಟು ಪದಗಳಲ್ಲಿ ಈ ಹಿಂದೆಲ್ಲ ಮಾತನಾಡಿದ್ದಿದೆ. ಆದರೆ ‘ಬಾಹುಬಲಿ’ ಬಿಡುಗಡೆ ಸಂದರ್ಭದಲ್ಲಿ ಇದಕ್ಕೆ ವಿಷಾಧವನ್ನೂ ಸಹ ಅವರು ವ್ಯಕ್ತಪಡಿಸಿದ್ದರು. ಸಿನಿಮಾಗಳಲ್ಲಿ ಕಠಿಣ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಸತ್ಯರಾಜ್, ನಿಜ ಜೀವನದಲ್ಲಿ ಪ್ರತಿ ದಿನ ನೋವುಣ್ಣುತ್ತಿದ್ದಾರೆ.
ಸತ್ಯರಾಜ್, ಮಹೇಶ್ವರಿ ಎಂಬುವರೊಟ್ಟಿಗೆ ಬಹಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಸತ್ಯರಾಜ್ ಅವರ ಪತ್ನಿ ಮಹೇಶ್ವರಿ ಕಳೆದ ಆರು ವರ್ಷಗಳಿಂದಲೂ ಕೋಮಾದಲ್ಲಿದ್ದು, ಜೀವಂತ ಶವವಾಗಿದ್ದಾರೆ. ಮಹೇಶ್ವರಿ ಅವರು 2020ರ ಸುಮಾರಿಗೆ ಬ್ರೇನ್ ಹೆಮರೇಜ್ಗೆ ತುತ್ತಾಗಿದ್ದು, ಆಗಿನಿಂದಲೂ ಕೋಮಾದಲ್ಲಿಯೇ ಇದ್ದಾರೆ. ವೈದ್ಯರು ಸಹ ಮಹೇಶ್ವರಿ ಅವರ ಬಗ್ಗೆ ಆಗಲೇ ಕೈಚೆಲ್ಲಿದ್ದರು. ಇನ್ನು ಮಹೇರ್ಶವರಿ ಅವರ ರಿಕವರಿ ಅಸಾಧ್ಯ ಎಂದು ಹೇಳಿಬಿಟ್ಟಿದ್ದರು. ಆದರೆ ಸತ್ಯರಾಜ್, ನಂಬಿಕೆ ಕಳೆದುಕೊಂಡಿಲ್ಲ. ಈಗಲೂ ಸಹ ಅವರನ್ನು ಲೈಫ್ ಸಪೋರ್ಟ್ನಲ್ಲಿ ಇರಿಸಲಾಗಿದೆ.
ಈ ಬಗ್ಗೆ ಹಿಂದೊಮ್ಮೆ ಪೋಸ್ಟ್ ಹಂಚಿಕೊಂಡಿದ್ದ ಸತ್ಯರಾಜ್ ಪುತ್ರಿ ದಿವ್ಯಾ, ‘ನನ್ನ ತಾಯಿ ಕಳೆದ ನಾಲ್ಕು (2024ರ ಪೋಸ್ಟ್) ವರ್ಷದಿಂದ ಕೋಮಾನಲ್ಲಿದ್ದಾರೆ. ಅವರನ್ನು ನಮ್ಮ ಮನೆಯಲ್ಲೇ ಇರಿಸಿಕೊಂಡಿದ್ದೇವೆ. ಅವರಿಗೆ ಪ್ರತಿದಿನ ನಾವು ಪಿಇಜಿ ಟ್ಯೂಬ್ ಮೂಲಕ ಆಹಾರ ನೀಡುತ್ತೇವೆ. ನನ್ನ ತಂದೆ ಕಳೆದ ಕೆಲ ವರ್ಷಗಳಿಂದಲೂ ಸಿಂಗಲ್ ಪೇರೆಂಟ್ ಆಗಿ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ನಮಗೆ ಗೊತ್ತಿದೆ ನಾವು ಅಮ್ಮನನ್ನು ಮರಳಿ ಪಡೆಯುತ್ತೇವೆ. ನಾವು ಆ ಒಂದು ವೈದ್ಯಕೀಯ ಅದ್ಭುತಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದರು.
ಇದನ್ನೂ ಓದಿ:ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ?
ವೈದ್ಯರ ನಿರಾಕರಣೆಯ ಹೊರತಾಗಿಯೂ ಸತ್ಯರಾಜ್ ಪತ್ನಿಯನ್ನು ಮನೆಯಲ್ಲಿಯೇ ವೈದ್ಯಕೀಯ ಉಪಕರಣಗಳ ಸಹಾಯದಿಂದ ಜೀವಂತ ಇರಿಸಿಕೊಂಡಿದ್ದಾರೆ. ಅವರ ಆರೈಕೆಯನ್ನು ಮಾಡುತ್ತಿದ್ದಾರೆ. ಆ ನೋವಿನ ನಡುವೆಯೂ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಲೇ ಇದ್ದಾರೆ. ಅಂದಹಾಗೆ ಮಹೇಶ್ವರಿ ಅವರು 2018 ರಲ್ಲಿ ಸಿನಿಮಾ ನಿರ್ಮಾಪಕಿ ಆಗಿ ಎಂಟ್ರಿ ಕೊಟ್ಟಿದ್ದರು, ಎರಡು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದರು. ಆದರೆ ಅನಾರೋಗ್ಯದಿಂದ ಎಲ್ಲವೂ ನಿಂತು ಹೋಯ್ತು.
ಮೊದಲೆಲ್ಲ ಸತ್ಯರಾಜ್ ಕಾರ್ಯಕ್ರಮಗಳಲ್ಲಿ, ರಾಜಕೀಯ ಸಭೆಗಳಲ್ಲಿ ಬಹಳ ಕಟು ಮಾತುಗಳನ್ನಾಡುತ್ತಿದ್ದರು. ವಾಟಾಳ್ ನಾಗರಾಜ್ ಬಗ್ಗೆ, ಕನ್ನಡಿಗರ ಬಗ್ಗೆ, ಕರ್ನಾಟಕದ ಸರ್ಕಾರಗಳ ಬಗ್ಗೆ ಕಟುವಾಗಿ ಟೀಕಿಸಿದ್ದರು. ನಟ ರಜನೀಕಾಂತ್ ಅವರ ಬಗ್ಗೆಯೂ ಕೀಳು ಹೇಳಿಕೆಗಳನ್ನು ನೀಡಿದ್ದರು. ರಜನೀಕಾಂತ್ ಜೊತೆಗೆ ದಶಕಗಳ ಕಾಲ ವೈರತ್ವ ಸಾಧಿಸಿದ್ದರು. ಆದರೆ ಕಳೆದ ವರ್ಷ ರಜನೀಕಾಂತ್ ಜೊತೆಗಿನ ದ್ವೇಷಕ್ಕೆ ಪೂರ್ಣ ವಿರಾಮವಿಟ್ಟ ಸತ್ಯರಾಜ್ ‘ಕೂಲಿ’ ಸಿನಿಮಾನಲ್ಲಿ ರಜನಿ ಗೆಳೆಯನಾಗಿ ನಟಿಸಿದ್ದು ಮಾತ್ರವಲ್ಲದೆ, ರಜನಿಯನ್ನು ನಿಜವಾದ ಸೂಪರ್ ಸ್ಟಾರ್ ಎಂದು ಒಪ್ಪಿಕೊಂಡರು. ವಯಸ್ಸಾದಂತೆ ಸತ್ಯರಾಜ್ ಸಹ ಮಾಗುತ್ತಿದ್ದಾರೆ ಅನಿಸುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ