
ಬಾಲಿವುಡ್ ಸ್ಟಾರ್ ನಟಿ, ಕನ್ನಡತಿ ನಟಿ ದೀಪಿಕಾ ಪಡುಕೋಣೆ ಅವರಿಗೆ ಹೆಣ್ಣು ಮಗು ಜನಿಸಿದೆ. ಇದು ಅವರ ಎರಡನೇ ಮಗುವಾಗಿದ್ದು, ಮೊದಲನೇಯ ಮಗುವೂ ಸಹ ಹೆಣ್ಣು ಮಗುವೇ ಆಗಿತ್ತು. ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿಯ ಎರಡನೇ ಮಗು ಇದಾಗಿದ್ದು, ಇಂದು (ಸೆಪ್ಟೆಂಬರ್ 19) ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರುಗಳು ಇತ್ತೀಚೆಗಷ್ಟೆ ಮುಂಬೈನ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಇದೀಗ ದೀಪಿಕಾ ಪಡುಕೋಣೆ ಮತ್ತೊಮ್ಮೆ ತಾಯಿ ಆಗಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರಿಗೆ 2024ರಲ್ಲಿ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ‘ದುವಾ’ ಎಂದು ಅವರು ಹೆಸರಿಟ್ಟಿದ್ದರು. ಇದೀಗ ಮತ್ತೊಮ್ಮೆ ದೀಪಿಕಾ ಅವರಿಗೆ ಹೆಣ್ಣು ಮಗು ಜನಿಸಿದೆ. ತಮಗೆ ಮಗು ಜನಿಸಿರುವ ಬಗ್ಗೆ ದೀಪಿಕಾ ಮತ್ತು ರಣ್ವೀರ್ ಸಿಂಗ್ ಪಡುಕೋಣೆ ಕೆಲವೇ ಸಮಯದ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಹೆಣ್ಣು ಮಗುವನ್ನು ಸ್ವಾಗತಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರುಗಳು 2018 ರಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದರು. ವಿವಾಹವಾದ ಆರು ವರ್ಷಗಳ ಬಳಿಕ ಅಂದರೆ 2024ರಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ದೀಪಿಕಾ ಪಡುಕೋಣೆ ಮತ್ತೆ ಗರ್ಭಿಣಿ ಆಗಿರುವ ವಿಷಯ ಘೋಷಿಸಿದ್ದರು. ಇದೀಗ ದೀಪಿಕಾ ಮತ್ತೆ ತಾಯಿ ಆಗಿದ್ದಾರೆ.
ದೀಪಿಕಾ ಹಾಗೂ ರಣ್ವೀರ್ ಅವರ ಇನ್ಸ್ಟಾಗ್ರಾಂ ಪೋಸ್ಟ್ಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದು, ದಂಪತಿಗಳಿಗೆ ಶುಭ ಕೋರಿದ್ದಾರೆ. ‘ಧುರಂಧರ್’ ನಟಿ ಸಾರಾ ಅರ್ಜುನ್, ಕೃತಿ ಕರಬಂಧ, ಕೃತಿ ಸನೋನ್, ಸೋನಂ ಕಪೂರ್, ನೇಹಾ ಧೂಪಿಯಾ, ಶ್ವೇತಾ ಚೆಂಗಪ್ಪ, ಅದಿತಿ ಪ್ರಭುದೇವ ಇನ್ನೂ ಹಲವಾರು ಮಂದಿ ದಂಪತಿಗಳ ಪೋಸ್ಟ್ಗೆ ಕಮೆಂಟ್ ಹಾಕಿದ್ದು, ಶುಭ ಹಾರೈಸಿದ್ದಾರೆ.
ದೀಪಿಕಾ ಪಡುಕೋಣೆ ಅವರು 2024ರಲ್ಲಿ ತಾಯಿ ಆದ ಬಳಿಕವೂ ನಟನೆ ಮುಂದುವರೆಸಿದ್ದಾರೆ. ಆದರೆ ತಾಯಿ ಆದ ಬಳಿಕ ಸಾಕಷ್ಟು ನಿಯಮಗಳನ್ನು ಹೇರಿಕೊಂಡಿದ್ದಾರೆ. ಶೂಟಿಂಗ್ ಸಮಯ, ಶೂಟಿಂಗ್ ಸೆಟ್ನಲ್ಲಿ ಸೌಲಭ್ಯಗಳು ಇನ್ನಿತರೆ ವಿಚಾರಗಳಲ್ಲಿ ನಿಷ್ಠುರರಾಗಿದ್ದಾರೆ. ಇದೇ ಕಾರಣಕ್ಕೆ ಕೆಲವು ಸಿನಿಮಾಗಳನ್ನು ಸಹ ಅವರು ಕೈಬಿಟ್ಟಿದ್ದರು. ಇದೀಗ ಮತ್ತೊಂದು ಮಗು ಆಗಿದ್ದು, ದೀಪಿಕಾ ಹಾಗೂ ರಣ್ವೀರ್ ಮೇಲೆ ಜವಾಬ್ದಾರಿ ಇನ್ನೂ ಹೆಚ್ಚಾದಂತಾಗಿದೆ.
Published On - 7:36 pm, Sat, 19 September 26