500 ಕೋಟಿ ಆಸ್ತಿಯ ಸುಳ್ಳು ಸುದ್ದಿಗೆ ಅನುಪಮ್ ಖೇರ್ ಕಿಡಿ; ಬಾಡಿಗೆ ಮನೆಯಲ್ಲಿದ್ದೇನೆ ಎಂದ ನಟ

ಇಂಟರ್ನೆಟ್‌ನಲ್ಲಿ ತಮ್ಮ ಆಸ್ತಿ 500 ಕೋಟಿ ರೂಪಾಯಿ ಇದೆ ಎಂಬ ಸುಳ್ಳು ಸುದ್ದಿಗೆ ಹಿರಿಯ ನಟ ಅನುಪಮ್ ಖೇರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬಳಿ ಅದರ ಶೇ. 10ರಷ್ಟು ಕೂಡ ಹಣವಿಲ್ಲ ಎಂದಿರುವ ಅವರು, ಕಳೆದ ಹತ್ತು ವರ್ಷಗಳಿಂದ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ನೆಮ್ಮದಿಯಾಗಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.

500 ಕೋಟಿ ಆಸ್ತಿಯ ಸುಳ್ಳು ಸುದ್ದಿಗೆ ಅನುಪಮ್ ಖೇರ್ ಕಿಡಿ; ಬಾಡಿಗೆ ಮನೆಯಲ್ಲಿದ್ದೇನೆ ಎಂದ ನಟ
ಅನುಪಮ್ ಖೇರ್

Updated on: Nov 20, 2026 | 6:49 PM

ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಆಗಾಗ ವೈಯಕ್ತಿಕ ಕಾರಣಕ್ಕೆ ಸುದ್ದಿ ಆಗುತ್ತಾರೆ. ಈಗ ಅವರು ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇಂಟರ್ನೆಟ್‌ನಲ್ಲಿ ತಮ್ಮ ಆಸ್ತಿ 400 ರಿಂದ 500 ಕೋಟಿ ರೂಪಾಯಿ ಇದೆ ಎಂಬ ಸುಳ್ಳು ವದಂತಿ ಹಬ್ಬಿರುವುದಕ್ಕೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಬಳಿ ಆ ಹಣದ ಶೇ. 10ರಷ್ಟು ಕೂಡ ಇಲ್ಲ ಎಂದಿರುವ ಅವರು, ತಾವು ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅನುಪಮ್ ಖೇರ್, ಕಳೆದ ಹತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ‘ಬಾಡಿಗೆ ಮನೆಯಲ್ಲಿ ಇರಲು ನಿರ್ಧರಿಸಿದ ದಿನದಿಂದ ನಾನು ನಿಜವಾದ ಸ್ವಾತಂತ್ರ್ಯ ಅನುಭವಿಸುತ್ತಿದ್ದೇನೆ. ನನಗೆ ಆಸ್ತಿ ಕೊಳ್ಳುವ ಅಥವಾ ನಿರ್ವಹಿಸುವ ಯಾವುದೇ ಒತ್ತಡವಿಲ್ಲ. ನನ್ನ ತಮ್ಮ ಮತ್ತು ನಾನು ಇಬ್ಬರೂ ಬಾಡಿಗೆ ಮನೆಯಲ್ಲಿ ಸಂತೋಷವಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

Loading...

ಗೂಗಲ್‌ನಲ್ಲಿ ತಮ್ಮ ಆಸ್ತಿ ಮೌಲ್ಯದ ಬಗ್ಗೆ ಇರುವ ಸುಳ್ಳು ಮಾಹಿತಿಯ ವಿರುದ್ಧ ಅನುಪಮ್ ಖೇರ್ ಅಸಮಾಧಾನ ಹೊರಹಾಕಿದ್ದಾರೆ. ‘ನನ್ನ ಆಸ್ತಿ 500 ಕೋಟಿ ಇದೆ ಎಂದು ಗೂಗಲ್ ತೋರಿಸುತ್ತದೆ. ಅದನ್ನು ನೋಡಿದರೆ ನನಗೆ ಕೇಸ್ ಹಾಕಬೇಕು ಎನಿಸುತ್ತದೆ. ನನ್ನ ಬಳಿ ಅದರ ಶೇ. 10ರಷ್ಟು ಕೂಡ ಹಣವಿಲ್ಲ. ನನ್ನ ಸ್ನೇಹಿತರು ಇದನ್ನು ಓದಿ ನನಗೆ ತಮಾಷೆ ಮಾಡುತ್ತಾರೆ’ ಎಂದಿದ್ದಾರೆ. ಆದರೆ ಅವರು ಸುಖವಾದ ಜೀವನ ನಡೆಸುತ್ತಿದ್ದಾರಂತೆ.

ಸ್ವಂತ ಮನೆ ಖರೀದಿಸದಿರಲು ಇರುವ ಕಾರಣವನ್ನೂ ಅನುಪಮ್ ಖೇರ್ ವಿವರಿಸಿದ್ದಾರೆ. ‘ಹಲವು ವರ್ಷಗಳ ಹಿಂದೆ ಮುಂಬೈನಲ್ಲಿದ್ದ ತಮ್ಮ ಮನೆಯನ್ನು ನಟಿ ಆಲಿಯಾ ಭಟ್ ಅವರಿಗೆ ಮಾರಾಟ ಮಾಡಿದೆ. ಪತ್ನಿ ಕಿರಣ್ ಖೇರ್ ಸಂಸದೆಯಾದ ನಂತರ ಚಂಡೀಗಢಕ್ಕೆ ಹೋದೆವು. ಆಗ ಬಾಡಿಗೆ ಮನೆಯೇ ಉತ್ತಮ ಎನಿಸಿತು. ಆದರೆ ತಾಯಿಯ ಆಸೆಯಂತೆ ಶಿಮ್ಲಾದಲ್ಲಿ ಅವರಿಗೆ 8 ಬೆಡ್‌ರೂಮ್‌ಗಳ ದೊಡ್ಡ ಮನೆಯನ್ನು ಖರೀದಿಸಿ ಕೊಟ್ಟಿದ್ದೇನೆ’ ಎಂದು ಅನುಪಮ್ ಏಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಜಟಾಯು ಪಾತ್ರದಲ್ಲಿ ಅನುಪಮ್ ಖೇರ್; ಪೋಸ್ಟರ್ ಬಿಡುಗಡೆ

ಆಸ್ತಿಗಿಂತ ನೆಮ್ಮದಿ ಮುಖ್ಯ ಎನ್ನುವುದು ಅನುಪಮ್ ಖೇರ್ ಅವರ ನಂಬಿಕೆಯಾಗಿದೆ. ‘ಮನುಷ್ಯ ಸತ್ತ ನಂತರ ಆಸ್ತಿಗಾಗಿ ಮನೆಯಲ್ಲಿ ಜಗಳಗಳಾಗುತ್ತವೆ. ವೃದ್ಧರನ್ನು ಮಕ್ಕಳು ಮನೆಯಿಂದ ಹೊರಹಾಕುವುದನ್ನು ನಾನು ನೋಡಿದ್ದೇನೆ. ಆಸ್ತಿಗಿಂತ ಹಣವಿದ್ದರೆ ಹಂಚಿಕೊಳ್ಳುವುದು ಸುಲಭ. ನಾನು ಎಷ್ಟು ಹಗುರವಾಗಿ ಇರುತ್ತೇನೋ, ಅಷ್ಟು ಎತ್ತರಕ್ಕೆ ಹಾರಬಲ್ಲೆ’ ಎಂದು ಅನುಪಮ್ ಖೇರ್ ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us