
ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE), ನಟ ರಣವೀರ್ ಸಿಂಗ್ (Ranveer Singh) ನಿಷೇಧ ಹೇರಿತ್ತು. ಆದರೆ ಇಂದು (ಜೂನ್ 03) ಆ ನಿಷೇಧವನ್ನು ಹಿಂಪಡೆದಿದೆ. ಫರ್ಹಾನ್ ಅಖ್ತರ್ ನಿರ್ಮಾಣದ ‘ಡಾನ್ 3’ ಚಿತ್ರದಿಂದ ಹೊರನಡೆದು ಒಪ್ಪಂದ ಮುರಿದ ರಣ್ವೀರ್ ವಿರುದ್ಧ ‘ಅಸಹಕಾರ’ವನ್ನು ಸಿನಿ ನೌಕರರ ಒಕ್ಕೂಟ ಘೋಷಿಸಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ಚಿತ್ರರಂಗದಲ್ಲಿ ಉಂಟಾಗಿದ್ದು, ಕೆಲವರು ರಣ್ವೀರ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿದ್ದರು. ನಿನ್ನೆಯಷ್ಟೆ ನಟ ರಣ್ವೀರ್ ಸಿಂಗ್ ಅವರು ತಮ್ಮ ವಿರುದ್ಧ ನಿಷೇಧ ಹೇರಿದ್ದ ಒಕ್ಕೂಟಕ್ಕೆ ಕಾನೂನಾತ್ಮಕವಾಗಿ ನೊಟೀಸ್ ಸಹ ನೀಡಿದ್ದರು. ಅದರ ಬೆನ್ನಲ್ಲೇ ಇದೀಗ ಒಕ್ಕೂಟವು ನಿಷೇಧವನ್ನು ಹಿಂಪಡೆದಿದೆ.
ಹಠಾತ್ತನೆ ನಿಷೇಧ ಹಿಂಪಡೆದ ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ಒಕ್ಕೂಟವು, ತಾವು ರಣ್ವೀರ್ ಅವರು ನೀಡಿರುವ ನೊಟೀಸ್ನ ಕಾರಣಕ್ಕ ನಿಷೇಧ ಹಿಂಪಡೆದಿಲ್ಲ ಬದಲಿಗೆ ಸಹವರ್ತಿ ಚಲನಚಿತ್ರ ಮಂಡಳಿಗಳಾದ ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA) ಮತ್ತು ಸಿನಿ ಅಂಡ್ ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (CINTAA) ಮನವಿಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಅದು ಹೇಳಿದೆ. ರಣ್ವೀರ್ ಸಿಂಗ್ ನೀಡಿರುವ ಕಾನೂನು ನೋಟಿಸ್‌ಗೆ ತಮ್ಮ ಕಾನೂನು ತಂಡವು ಉತ್ತರಿಸಲಿದೆ ಎಂದು ಒಕ್ಕೂಟ ಹೇಳಿದೆ.
ರಣ್ವೀರ್ ಸಿಂಗ್ ವಿರುದ್ಧ ನಾವು ಅಸಹಕಾರ (ಅನಧಿಕೃತ ನಿಷೇಧ) ಘೋಷಿಸಿದ ಬಳಿಕ ನಾವು ಇತರ ಚಲನಚಿತ್ರ ಮಂಡಳಿಗಳನ್ನು ಸಂಪರ್ಕಿಸಿ ಅವರ ಬೆಂಬಲವನ್ನು ಕೋರಿದ್ದೆವು. ನಮಗೆ ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಮತ್ತು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾದಿಂದ ಪ್ರತಿಕ್ರಿಯೆಗಳು ಬಂದಿವೆ. ಕೊನೆಯ ಕ್ಷಣದಲ್ಲಿ ರಣವೀರ್, ‘ಡಾನ್ 3’ ಚಿತ್ರದಿಂದ ಹಿಂದೆ ಸರಿದಿರುವುದು ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆಗೆ ನಷ್ಟ ಉಂಟುಮಾಡಿರುವುದನ್ನು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡಿಸಿದ್ದರೆ, ಚಲನಚಿತ್ರೋದ್ಯಮದ ಹಿತದೃಷ್ಟಿಯಿಂದ ಅಸಹಕಾರ ನಿರ್ದೇಶನವನ್ನು ಹಿಂಪಡೆಯುವಂತೆ ಇಂಪಾ (IMPPA) ವಿನಂತಿಸಿದೆ ಎಂದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ನ ಪಂಡಿತ್ ಹೇಳಿದ್ದಾರೆ.
ಇದನ್ನೂ ಓದಿ:ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್; ‘ನನಗೂ ಹೀಗೇ ಆಗಿತ್ತು’ ಎಂದ ನಟಿ
‘ನಾವು ಯಾವುದೇ ಒತ್ತಡಕ್ಕೆ ಮಣಿದಿಲ್ಲ. ನಾವು 70 ವರ್ಷ ಹಳೆಯ ಸಂಸ್ಥೆಯಾಗಿದ್ದು, ಇಂತಹ ಅಸಂಖ್ಯಾತ ಕಾನೂನು ನೋಟಿಸ್‌ಗಳನ್ನು ಸ್ವೀಕರಿಸಿದ್ದೇವೆ. ಎಲ್ಲಾ ಸೌಹಾರ್ದಯುತವಾಗಿ ಮತ್ತು ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ’ ಎಂದು FWICE ಅಧ್ಯಕ್ಷ ಬಿ.ಎನ್. ತಿವಾರಿ ತಿಳಿಸಿದ್ದಾರೆ. ‘ನಾವು ನಿರ್ದೇಶನವನ್ನು ಹೊರಡಿಸಿದ ನಂತರ ರಣವೀರ್ ಬರುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ ಅವರ ತಂಡ ಅವರಿಗೆ ತಪ್ಪು ದಾರಿ ತೋರಿಸಿದೆ’ ಎಂದು ಅವರು ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ