
ಅತ್ಯಂತ ಹಳೆಯ ಸಿನಿಮಾ ಫ್ರಾಂಚೈಸ್ ಅಥವಾ ಸಿನಿಮಾ ಸರಣಿಗಳಲ್ಲಿ ಪ್ರಮುಖವಾದುದು ‘ಜೇಮ್ಸ್ ಬಾಂಡ್’ ಸರಣಿ. 1962 ರಲ್ಲಿ ಆರಂಭವಾದ ಜೇಮ್ಸ್ ಬಾಂಡ್ ಸಿನಿಮಾ ಸರಣಿ ಈಗಲೂ ನಿರ್ಮಾಣಗೊಂಡು ಬಿಡುಗಡೆ ಆಗುತ್ತಲೇ ಇದೆ. ಆರು ದಶಕಗಳ ಬಳಿಕವೂ ಸಹ ಸಿನಿಮಾ ಬೇಡಿಕೆ ಉಳಿಸಿಕೊಂಡಿರುವುದು ಮಾತ್ರವಲ್ಲ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಜೇಮ್ಸ್ ಬಾಂಡ್ನ ಪ್ರತಿ ಸಿನಿಮಾದ ಹಿಂದೆ ಅಪಾರ ಪ್ರತಿಭಾವಂತ ತಂತ್ರಜ್ಞರು ಕಲಾವಿದರು ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರನ್ನೂ ಬಹಳ ಜಾಗರೂಕತೆಯಿಂದ ಆಯ್ಕೆ ಮಾಡಲಾಗುತ್ತದೆ. ಅದರಲ್ಲೂ ನಾಯಕ ಜೇಮ್ಸ್ ಬಾಂಡ್ ಪಾತ್ರ ನಿರ್ವಹಿಸುವ ನಟನ ಆಯ್ಕೆಯ ಬಗ್ಗೆ ನಿರ್ಮಾಣ ಸಂಸ್ಥೆ ಬಹಳ ಜಾಗರೂಕತೆವಹಿಸುತ್ತದೆ. ಹಲವು ಮಾನದಂಡಗಳ ಆಧಾರದ ಮೇಲೆ ಜೇಮ್ಸ್ ಬಾಂಡ್ ಸಿನಿಮಾದ ನಾಯಕನ ಆಯ್ಕೆ ಆಗುತ್ತದೆ. ಇದೀಗ ಹೊಸ ಜೇಮ್ಸ್ ಬಾಂಡ್ ಅನ್ನು ನಿರ್ಮಾಣ ಸಂಸ್ಥೆ ಆಯ್ಕೆ ಮಾಡಿದೆ.
‘ಜೇಮ್ಸ್ ಬಾಂಡ್’ ಸಿನಿಮಾ ಸರಣಿಯ ಇತಿಹಾಸದ ಅತ್ಯುತ್ತಮ ಬಾಂಡ್ಗಳಲ್ಲಿ ಒಬ್ಬರೆನಿಸಿಕೊಂಡ ಡೇನಿಯಲ್ ಕ್ರೇಗ್ ಇನ್ನು ಮುಂದೆ ತಾವು ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಟನೆ ಮಾಡುವುದಿಲ್ಲ ಎಂದಿದ್ದಾರೆ. ಅವರ ನಿವೃತ್ತಿಯ ಬೆನ್ನಲ್ಲೆ ಹೊಸ ಜೇಮ್ಸ್ ಬಾಂಡ್ ಅನ್ನು ಹುಡುಕುವ ಕಾರ್ಯವನ್ನು ಎಂಜಿಎಂ ಸ್ಟುಡಿಯೋಸ್ ಆರಂಭಿಸಿತ್ತು. ಹಾಲಿವುಡ್ ಮಾತ್ರವೇ ಅಲ್ಲದೆ ಬೇರೆ ಕೆಲವು ಚಿತ್ರರಂಗಗಳ ನಟರನ್ನು ಸಹ ಆಡಿಷನ್ ಮಾಡಲಾಯ್ತು. ಇದೀಗ ಅಧಿಕೃತವಾಗಿ ಹೊಸ ಜೇಮ್ಸ್ ಬಾಂಡ್ ಅನ್ನು ಆಯ್ಕೆ ಮಾಡಲಾಗಿದೆ. ಹಾಲಿವುಡ್ನಲ್ಲಿ ಈಗಾಗಲೇ ಕೆಲವು ಜನಪ್ರಿಯ ಸಿನಿಮಾಗಳಲ್ಲಿ ನಟನೆ ಮಾಡಿರುವ ಖ್ಯಾತ ನಟ ರಾಬರ್ಟ್ ಪ್ಯಾಟಿಸನ್ ಅವರೇ ಇನ್ನು ಮುಂದೆ ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
‘ಡೂನ್’, ‘ದಿ ಒಡಿಸ್ಸಿ’, ‘ದಿ ಬ್ಯಾಟ್‌ಮ್ಯಾನ್’ ನಂತಹ ಪ್ರಮುಖ ಪ್ರಾಜೆಕ್ಟ್‌ಗಳೊಂದಿಗೆ ರಾಬರ್ಟ್ ಪ್ಯಾಟಿನ್ಸನ್ ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಯಶಸ್ಸನ್ನು ಕಾಣುತ್ತಿದ್ದಾರೆ. ಇದೀಗ ಅವರು ಐಕಾನಿಕ್ ಪಾತ್ರವಾದ ಜೇಮ್ಸ್ ಬಾಂಡ್ಗೆ ಆಯ್ಕೆ ಆಗುವ ಮೂಲಕ ವೃತ್ತಿ ಜೀವನದಲ್ಲಿ ಮತ್ತೊಂದು ಮೆಟ್ಟಿಲು ಹತ್ತಿದಂತಾಗಿದೆ. ಹೊಸ ಜೇಮ್ಸ್ ಬಾಂಡ್ ಆಗಿ ರಾಬರ್ಟ್ ಪ್ಯಾಟಿಸನ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದ್ದು, ರಾಬರ್ಟ್ ಅವರ ಜೇಮ್ಸ್ ಬಾಂಡ್ ಲುಕ್ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:ಖ್ಯಾತ ನಿರ್ದೇಶಕನ ಜೊತೆ ಭಿನ್ನಾಭಿಪ್ರಾಯ; ಸಿನಿಮಾದಿಂದ ಹೊರಬಂದ ಅನಿರುದ್ಧ್ ರವಿಚಂದರ್
ಮುಂಬರುವ ಜೇಮ್ಸ್ ಬಾಂಡ್ ಚಲನಚಿತ್ರವನ್ನು ‘ಡ್ಯೂನ್’ ಸಿನಿಮಾದ ನಿರ್ದೇಶಕ ಡೆನಿಸ್ ವಿಲ್ಲೆನ್ಯೂವ್ ನಿರ್ದೇಶಿಸಲಿದ್ದಾರೆ. ‘ಪೀಕಿ ಬ್ಲೈಂಡರ್ಸ್’ ಸಿನಿಮಾದ ಕತೆಗಾರ ಸ್ಟೀವನ್ ನೈಟ್ ಅವರು ಹೊಸ ಜೇಮ್ಸ್ ಬಾಂಡ್ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ. ರಾಬರ್ಟ್ ಪ್ಯಾಟಿನ್ಸನ್ ಅವರು ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟಿಸಲಿರುವ ಏಳನೇ ನಟ ಎನಿಸಿಕೊಂಡಿದ್ದಾರೆ. ಶಾನ್ ಕಾನರಿ, ಜಾರ್ಜ್ ಲ್ಯಾಜೆನ್‌ಬಿ, ರೋಜರ್ ಮೂರ್, ಟಿಮೋತಿ ಡಾಲ್ಟನ್, ಪಿಯರ್ಸ್ ಬ್ರಾಸ್ನನ್, ಡೇನಿಯಲ್ ಕ್ರೇಗ್ ಅವರುಗಳು ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟನೆ ಮಾಡಿದ್ದರು. ಈಗ ರಾಬರ್ಟ್ ಪ್ಯಾಟಿಸನ್ ಏಳನೇ ನಟ ಎನಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ