
ಐಮ್ಯಾಕ್ಸ್, ವಿಶ್ವದ ಅತ್ಯುತ್ತಮ ಸಿನಿಮಾ ಸ್ಕ್ರೀನ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಧಿಕೃತ ಐಮ್ಯಾಕ್ಸ್ (IMAX) ಸ್ಕ್ರೀನ್ನಲ್ಲಿ ಸಿನಿಮಾ ನೋಡಿದರಷ್ಟೆ ನಿಜವಾದ ಸಿನಿಮಾ ಅನುಭವ ಪಡೆದಂತೆ ಎಂಬ ನಂಬಿಕೆ ಇದೆ. ಹಾಲಿವುಡ್ನ ಪರಮೋಚ್ಛ ನಿರ್ದೇಶಕರುಗಳು ನಿರ್ದಿಷ್ಟವಾಗಿ ಐಮ್ಯಾಕ್ಸ್ ಸ್ಕ್ರೀನ್ಗಳಿಗೆಂದೇ ಸಿನಿಮಾ ಮಾಡುತ್ತಾರೆ. ಇದೀಗ ರಾಜಮೌಳಿ ಸಹ ಐಮ್ಯಾಕ್ಸ್ ಸ್ಕ್ರೀನ್ನ ಅನುಪಾತದಲ್ಲಿಯೇ ‘ವಾರಣಾಸಿ’ (Varanasi) ಸಿನಿಮಾ ಮಾಡಿದ್ದಾರೆ. ಆದರೆ ಅದನ್ನು ಪ್ರದರ್ಶಿಸಲು ತೆಲುಗು ರಾಜ್ಯಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್ಗಳು ಇರಲಿಲ್ಲ. ಇದೀಗ ಮೊದಲ ಬಾರಿಗೆ ಹೈದರಾಬಾದ್ಗೆ ಐಮ್ಯಾಕ್ಸ್ ಸ್ಕ್ರೀನ್ ಬರುತ್ತಿದೆ.
ಐಮ್ಯಾಕ್ಸ್ ಕಾರ್ಪೊರೇಷನ್ ಭಾರತದಲ್ಲಿ ಮೂರು ಹೊಸ ‘ಐಮ್ಯಾಕ್ಸ್ ವಿತ್ ಲೇಸರ್’ (IMAX with Laser) ಚಿತ್ರಮಂದಿರಗಳನ್ನು ತೆರೆಯುವ ಯೋಜನೆಗಳನ್ನು ಘೋಷಿಸಿವೆ. ಇವುಗಳಲ್ಲಿ ಎರಡು ಹೈದರಾಬಾದ್‌ನಲ್ಲಿ ಸ್ಥಾಪನೆಗೊಳ್ಳಲಿವೆ. ಮಹೇಶ್ ಬಾಬು ಮತ್ತು ಏಷಿಯನ್ ಸುನಿಲ್ ನಾರಂಗ್ ಜಂಟಿ ಒಡೆತನದ ಎಎಂಬಿ ಸಿನೆಮಾಸ್ ಹೈದರಾಬಾದ್‌ನ ಮೊದಲ ಅಧಿಕೃತ ಐಮ್ಯಾಕ್ಸ್ ಸ್ಕ್ರೀನ್ ಅನ್ನು ಹೊಂದಲಿದೆ. ಎಎಂಬಿ ಕ್ಲಾಸಿಕ್ ಸುದರ್ಶನ್ನಲ್ಲಿ ಹೈದರಾಬಾದ್‌ನ ಮೊದಲ ಐಮ್ಯಾಕ್ಸ್ ಅಸೆಂಬಲ್ ಆಗಲಿದೆ.
ಕೆಲ ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಜಮೌಳಿ, ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್ಗಳ ಸಂಖ್ಯೆ ಹೆಚ್ಚಾಗಬೇಕು ಎಂದಿದ್ದರು. ಅದರ ಬೆನ್ನಲ್ಲೆ ಇದೀಗ ಹೈದರಾಬಾದ್ಗೆ ಐಮ್ಯಾಕ್ಸ್ ಬರುತ್ತಿದೆ. ‘ವಾರಣಾಸಿ’ ಸಿನಿಮಾದ ನಾಯಕ ಮಹೇಶ್ ಬಾಬು ಅವರ ಒತ್ತಾಸೆಯಿಂದ ಇದು ಸಾಧ್ಯವಾಗಿದೆ ಎನ್ನಲಾಗುತ್ತಿದೆ. 2026 ರ ಅಂತ್ಯದ ವೇಳೆಗೆ ಹೈದರಾಬಾದ್‌ನ ‘ಎಎಂಬಿ ಕ್ಲಾಸಿಕ್’ನಲ್ಲಿ ಐಮ್ಯಾಕ್ಸ್ ಸ್ಥಾಪನೆ ಆಗಲಿದೆ. ಉಳಿದ ಎರಡು ಸ್ಕ್ರೀನ್ಗಳನ್ನು 2028 ಕ್ಕೆ ಯೋಜಿಸಲಾಗಿದೆ.
ಇದನ್ನೂ ಓದಿ:‘ವಾರಣಾಸಿ’ ಶೂಟಿಂಗ್ಗೆ 150 ಟ್ಯಾಂಕರ್ ನೀರು ಕೇಳಿದ ರಾಜಮೌಳಿ; ಶಾಕ್ ಕೊಟ್ಟ ಅಧಿಕಾರಿಗಳು
ಐಮ್ಯಾಕ್ಸ್ ಸಿಇಒ ರಿಚ್ ಗಿಲ್ಫಾಂಡ್ ಕೂಡ ಭಾರತದಲ್ಲಿ ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ (ದೊಡ್ಡ ಪರದೆ) ಅನುಭವಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ‘2025 ನೇ ವರ್ಷವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ನಮಗೆ ಇದುವರೆಗಿನ ಅತ್ಯುತ್ತಮ ವರ್ಷವಾಗಿತ್ತು ಹಾಲಿವುಡ್ ಮತ್ತು ಭಾರತೀಯ ಚಲನಚಿತ್ರಗಳು ಅದ್ಭುತ ಪ್ರದರ್ಶನ ನೀಡಿವೆ. ಭಾರತದಲ್ಲಿ ಹೊಸ ಮತ್ತು ಅಸ್ತಿತ್ವದಲ್ಲಿರುವ ಪ್ರದರ್ಶನ ಪಾಲುದಾರರಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತಿದೆ’ ಎಂದು ಗಿಲ್ಫಾಂಡ್ ಹೇಳಿದ್ದಾರೆ.
2015 ರಲ್ಲಿ ಹೈದರಾಬಾದ್‌ನ ಏಕೈಕ ಐಮ್ಯಾಕ್ಸ್ ಥಿಯೇಟರ್ ಪ್ರಸಾದ್ಸ್ ಐಮ್ಯಾಕ್ಸ್ ಮುಚ್ಚಲ್ಪಟ್ಟಿತ್ತು, ಅದಾದ ಬಳಿಕ ಹೈದರಾಬಾದ್‌ನಲ್ಲಿ ಐಮ್ಯಾಕ್ಸ್ ಸ್ಕ್ರೀನ್ಗಳು ಇರಲೇ ಇಲ್ಲ. ಇದೀಗ 10 ವರ್ಷಗಳ ಬಳಿಕ ಹೊಸ ಮತ್ತು ಆಧುನಿಕ ತಂತ್ರಜ್ಞಾನದ ಐಮ್ಯಾಕ್ಸ್ ಸ್ಕ್ರೀನ್ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ