‘ತಂದೆ ನನ್ನ ಸಿನಿಮಾ ಪ್ರಚಾರ ಮಾಡಲ್ಲ’; ಕಾರಣ ಹೇಳಿದ ಜೇಸನ್ ಸಂಜಯ್

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ 'ಸಿಗ್ಮಾ' ಪ್ರಚಾರಕ್ಕೆ ವಿಜಯ್ ಆಗಮಿಸುತ್ತಿಲ್ಲ. ತಂದೆಯ ರಾಜಕೀಯ ಜವಾಬ್ದಾರಿ ಹಾಗೂ ಚಿತ್ರಕ್ಕೆ ಸ್ವತಂತ್ರ ಗುರುತು ಸಿಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೇಸನ್ ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.

‘ತಂದೆ ನನ್ನ ಸಿನಿಮಾ ಪ್ರಚಾರ ಮಾಡಲ್ಲ’; ಕಾರಣ ಹೇಳಿದ ಜೇಸನ್ ಸಂಜಯ್
ವಿಜಯ್-ಜೇಸನ್

Updated on: Sep 17, 2026 | 9:33 AM

ಮುಖ್ಯಾಂಶಗಳು

  • ತಂದೆಯ ಹೆಸರಿಗಿಂತ ಸ್ವಂತ ಗುರುತು ಮುಖ್ಯ
  • ಜೇಸನ್ ಸಂಜಯ್ ದಿಟ್ಟ ನಿರ್ಧಾರ
  • ಮಗನ ಸಿನಿಮಾ ಪ್ರಚಾರದಿಂದ ದೂರ 

ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ದಳಪತಿ  ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಜೇಸನ್ ನಿರ್ದೇಶನದ ಮೊದಲ ಸಿನಿಮಾ ‘ಸಿಗ್ಮಾ’ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಚಿತ್ರದ ಪ್ರಚಾರಕ್ಕೆ ವಿಜಯ್ ಆಗಮಿಸುತ್ತಿಲ್ಲ. ಜೇಸನ್ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಸ್ವಂತ ಶ್ರಮದಿಂದ ಗುರುತಿಸಿಕೊಳ್ಳುವ ಉದ್ದೇಶ ಅವರದ್ದಾಗಿದೆ.

ಜೇಸನ್ ಸಂಜಯ್ ಹೈದರಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ತಂದೆಯ ರಾಜಕೀಯ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ‘ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಸಾಕಷ್ಟು ಜವಾಬ್ದಾರಿಗಳಿವೆ. ಚಿತ್ರಕ್ಕೆ ತಂದೆಯ ಹೆಸರಿಗಿಂತ ಸ್ವಂತ ಗುರುತು ಸಿಗಬೇಕು ಎಂಬುದು ನನ್ನ ಆಸೆಯಾಗಿದೆ. ವಿಜಯ್ ಅವರು ನನ್ನ ಸಿನಿಮಾ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ’ ಎಂದು ಜೇಸನ್ ಹೇಳಿದ್ದಾರೆ.

ತಂದೆ ನಟನಾಗಿದ್ದರಿಂದ ಜೇಸನ್ ಅವರಿಗೆ ಚಿಕ್ಕಂದಿನಿಂದಲೇ ಶೂಟಿಂಗ್ ಸೆಟ್‌ಗಳಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಇದರಿಂದ ಅವರಿಗೆ ಸಿನಿಮಾ ಕ್ಷೇತ್ರದಲ್ಲೇ ಆಸಕ್ತಿ ಬೆಳೆಯಿತು. ಸ್ವಂತ ಶ್ರಮದಿಂದ ಬೆಳೆಯುವಂತೆ ವಿಜಯ್ ಮಗನಿಗೆ ಕಿವಿಮಾತು ಹೇಳಿದ್ದರು. ನಿರ್ದೇಶನ ಮುಗಿದ ನಂತರ ನಟನೆಯತ್ತ ಗಮನ ಹರಿಸುವ ఆಲೋಚನೆ ಜೇಸನ್ ಅವರಿಗಿದೆ. ಜೇಸನ್ ತಮ್ಮ ತಾಯಿಯನ್ನು ಜೀವನದ ಪ್ರಮುಖ ಬೆನ್ನೆಲುಬು ಎಂದು ಕರೆದಿದ್ದಾರೆ.

‘ಸಿಗ್ಮಾ’ ಒಂದು ಆಕ್ಷನ್ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಸಂದೀಪ್ ಕಿಷನ್ ನಾಯಕನಾಗಿ ನಟಿಸಿದ್ದಾರೆ. ಜೊತೆಗೆ ಫರಿಯಾ ಅಬ್ದುಲ್ಲಾ, ಸಂಪತ್ ರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್ ತಮನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಧನುಷ್; ರಾಜಕೀಯ ಪ್ರವೇಶದ ಸುಳಿವು ನೀಡಿದ ನಟ

ಈ ಸಿನಿಮಾ ಮೊದಲು ಜುಲೈ 31 ರಂದು ಬಿಡುಗಡೆಯಾಗಬೇಕಿತ್ತು. ಆದರೆ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನಾ ನಾಯಗನ್’ ಜೊತೆ ಘರ್ಷಣೆ ತಪ್ಪಿಸಲು ದಿನಾಂಕ ಮುಂದೂಡಲಾಗಿತ್ತು. ಈಗ ಅಕ್ಟೋಬರ್ 2 ರಂದು ‘ಸಿಗ್ಮಾ’ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳು ಈ ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us