ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ?

Indian in Hollywood: ಆಸ್ಕರ್​​​ನಲ್ಲಿ ಭಾರತೀಯ ಸಾಧನೆ ತುಸು ಕಡಿಮೆ ಎನ್ನಬಹುದು. ಆದರೆ ಭಾರತೀಯರೊಬ್ಬರು ಹಾಲಿವುಡ್​ನ ಸ್ಟಾರ್ ನಿರ್ದೇಶಕರಾಗಿ ಮಿಂಚುತ್ತಿರುವ ವಿಷಯ ನಿಮಗೆ ಗೊತ್ತೆ? ಈ ಸಿನಿಮಾ ನಿರ್ದೇಶಕನ ಹೆಸರು ನಿಮಗೆ ತಿಳಿಯದೇ ಇರಬಹುದು ಆದರೆ ನೀವು ಸಿನಿಮಾ ಪ್ರೇಮಿ ಆಗಿದ್ದರೆ ಖಂಡಿತ ಈ ವ್ಯಕ್ತಿ ನಿರ್ದೇಶನ ಮಾಡಿರುವ ಕೆಲ ಸಿನಿಮಾಗಳನ್ನಾದರೂ ನೋಡಿಯೇ ಇರುತ್ತೀರಿ.

ಹಾಲಿವುಡ್​​ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಈ ಮಲಯಾಳಿಯ ಬಗ್ಗೆ ನಿಮಗೆ ಗೊತ್ತೆ?
M Night Shyamalan

Updated on: May 24, 2026 | 8:53 PM

ಭಾರತೀಯರು (India) ಎಲ್ಲಿಲ್ಲ? ಎಲ್ಲೆಡೆ ಇದ್ದಾರೆ, ಎಲ್ಲ ಕ್ಷೇತ್ರಗಳಲ್ಲಿ, ಎಲ್ಲ ದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿಶೇಷವಾಗಿ ಐಟಿ, ಉದ್ಯಮದ ಕ್ಷೇತ್ರಗಳಲ್ಲಿ ಭಾರತೀಯರು ಹಲವು ದೇಶಗಳಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ಆದರೆ ಸಿನಿಮಾ ವಿಷಯವಾಗಿ ವಿಶೇಷವಾಗಿ ಆಸ್ಕರ್​​​ನಲ್ಲಿ ಭಾರತೀಯ ಸಾಧನೆ ತುಸು ಕಡಿಮೆ ಎನ್ನಬಹುದು. ಆದರೆ ಭಾರತೀಯರೊಬ್ಬರು ಹಾಲಿವುಡ್​ನ ಸ್ಟಾರ್ ನಿರ್ದೇಶಕರಾಗಿ ಮಿಂಚುತ್ತಿರುವ ವಿಷಯ ನಿಮಗೆ ಗೊತ್ತೆ? ಈ ಸಿನಿಮಾ ನಿರ್ದೇಶಕನ ಹೆಸರು ನಿಮಗೆ ತಿಳಿಯದೇ ಇರಬಹುದು ಆದರೆ ನೀವು ಸಿನಿಮಾ ಪ್ರೇಮಿ ಆಗಿದ್ದರೆ ಖಂಡಿತ ಈ ವ್ಯಕ್ತಿ ನಿರ್ದೇಶನ ಮಾಡಿರುವ ಕೆಲ ಸಿನಿಮಾಗಳನ್ನಾದರೂ ನೋಡಿಯೇ ಇರುತ್ತೀರಿ.

ಎಂ ನೈಟ್ ಶ್ಯಾಮಲನ್ ಎಂದರೆ ಹೆಚ್ಚು ಜನರಿಗೆ ಗೊತ್ತಾಗದೇ ಇರಬಹುದು ಆದರೆ ‘ದಿ ಸಿಕ್ಸ್ತ್ ಸೆನ್ಸ್’ ಸಿನಿಮಾ ಹೆಸರು ಕೇಳದೇ ಇರುವ ಸಿನಿಮಾ ಪ್ರೇಮಿಗಳು ಕಡಿಮೆ. ಅದ್ಭುತ ಸಸ್ಪೆನ್ಸ್ ಜೊತೆಗೆ ಜೀವನದ ಕುರಿತು ಮಹತ್ವದ ವಿಷಯಗಳನ್ನು ಹೇಳುವ ಆ ಸಿನಿಮಾ ಹಾಲಿವುಡ್​ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಆ ಸಿನಿಮಾ ನಿರ್ದೇಶಕನ ಹೆಸರು ಎಂ ನೈಟ್ ಶ್ಯಾಮಲ್, ಈ ವ್ಯಕ್ತಿಯ ಪೂರ್ತಿ ಹೆಸರು ಮನೋಜ್ ನೆಲ್ಲಿಯಟ್ಟು ಶ್ಯಾಮಲನ್. ಮೂಲತಃ ಮಲಯಾಳಿ ಆದ ಇವರು ಹಾಲಿವುಡ್​ನ ಸ್ಟಾರ್ ನಿರ್ದೇಶಕರುಗಳಲ್ಲಿ ಒಬ್ಬರು.

1970ರಲ್ಲಿ ಭಾರತದ ಪುದುಚೇರಿಯಲ್ಲಿ ಜನಿಸಿದ ಮನೋಜ್ ಶ್ಯಾಮಲನ್, ನಂತರ ತಮ್ಮ ಕುಟುಂಬದೊಂದಿಗೆ ಅಮೆರಿಕಕ್ಕೆ ತೆರಳಿದರು. ಅವರ ತಂದೆ-ತಾಯಿ ಇಬ್ಬರೂ ವೈದ್ಯರು. ಮೂಲತಃ ಕೇರಳದ ಮಲಯಾಳಿ ಕುಟುಂಬಕ್ಕೆ ಸೇರಿದ ಮನೋಜ್, ಅಮೆರಿಕದಲ್ಲಿ ಬೆಳೆದರೂ, ತಮ್ಮ ಹೆಸರಿನಲ್ಲೇ ಭಾರತೀಯ ಗುರುತನ್ನು ಉಳಿಸಿಕೊಂಡಿದ್ದು ಅವರ ವಿಶೇಷತೆ. ಹಾಲಿವುಡ್‌ನಲ್ಲಿ ಅನೇಕರು ತಮ್ಮ ಮೂಲ ಹೆಸರನ್ನು ಬದಲಾಯಿಸುವಾಗ, ಅವರು ‘ಶ್ಯಾಮಲನ್’ ಎಂಬ ಭಾರತೀಯ ಹೆಸರಿನೊಂದಿಗೆ ಜಾಗತಿಕ ಖ್ಯಾತಿ ಗಳಿಸಿದರು.

ಇದನ್ನೂ ಓದಿ:ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗ ಬಳಿಕ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ ಜಾಹ್ನವಿ

ಮನುಜ್ ಶ್ಯಾಮಲನ್ ಹಾಲಿವುಡ್‌ನಲ್ಲಿ ವಿಭಿನ್ನ ಕಥೆ ಹೇಳುವ ಶೈಲಿಯಿಂದ ಪ್ರಸಿದ್ಧರಾದರು. ರಹಸ್ಯ, ಮನೋವೈಜ್ಞಾನಿಕ ಥ್ರಿಲ್ಲರ್ ಮತ್ತು ಕೊನೆಯಲ್ಲಿ ಅಚ್ಚರಿಯ ತಿರುವು ನೀಡುವ ಚಿತ್ರಗಳು ಅವರ ವಿಶೇಷ ಗುರುತು. ಅವರ ನಿರ್ದೇಶನದ ‘ದಿ ಸಿಕ್ಸ್ತ್ ಸೆನ್ಸ್’ (The Sixth Sense) ಸಿನಿಮಾ ವಿಶ್ವಾದ್ಯಂತ ದೊಡ್ಡ ಯಶಸ್ಸು ಕಂಡಿತು. ಈ ಚಿತ್ರ ಅವರಿಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು ಹಾಗೂ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆಯುವ ಮಟ್ಟಕ್ಕೆ ಏರಿಸಿತು. ನಂತರ ಅವರು ನಿರ್ದೇಶಿಸಿದ ‘ಸೈನ್ಸ್’ (Signs), ‘ಅನ್​​ಬ್ರೇಕೆಬಲ್’, ‘ಸ್ಪಿಲಿಟ್’ ಮತ್ತು ‘ಗ್ಲಾಸ್’ ಚಿತ್ರಗಳು ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯವಾದವು. ವಿಶೇಷವಾಗಿ ಕಡಿಮೆ ಬಜೆಟ್‌ನಲ್ಲಿ ಚಿತ್ರ ನಿರ್ಮಿಸಿ, ಜಾಗತಿಕ ಮಟ್ಟದಲ್ಲಿ ದೊಡ್ಡ ಆದಾಯ ಗಳಿಸುವ ನಿರ್ದೇಶಕರಲ್ಲಿ ಅವರು ಒಬ್ಬರು.

ಭಾರತೀಯರು ಸಾಮಾನ್ಯವಾಗಿ ಹಾಲಿವುಡ್‌ನಲ್ಲಿ ನಟರಾಗಿ ಕಾಣಿಸಿಕೊಂಡಿದ್ದು ಮಾತ್ರ, ಒಂದು ಭಾರತೀಯ ಮೂಲದ ವ್ಯಕ್ತಿ ಸ್ವತಃ ದೊಡ್ಡ ಸ್ಟುಡಿಯೋ ಮಟ್ಟದ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕರಾಗಿ ಬೆಳೆದಿರುವುದು ಅಪರೂಪದ ಸಾಧನೆ. ಶ್ಯಾಮಲನ್ ಆ ಅಡೆತಡೆಯನ್ನು ಮುರಿದವರು. ದಕ್ಷಿಣ ಭಾರತೀಯ ಹಿನ್ನೆಲೆಯ ವ್ಯಕ್ತಿಯಾಗಿ ಹಾಲಿವುಡ್‌ನಂತಹ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿರುವುದು ಅನೇಕ ಯುವ ಭಾರತೀಯರಿಗೆ ಪ್ರೇರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us