
ಟಾಲಿವುಡ್ನ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ಅಲ್ಲು ಅರ್ಜುನ್ ಎಂದರೆ ಸಖತ್ ಇಷ್ಟ. ಕ್ರಿಕೆಟರ್ ಎಂ.ಎಸ್. ಧೋನಿ (MS Dhoni) ಅವರ ಪತ್ನಿ ಸಾಕ್ಷಿ ಕೂಡ ಅಲ್ಲು ಅರ್ಜುನ್ಗೆ ಫ್ಯಾನ್ ಆಗಿದ್ದಾರೆ. ಹಾಗಂತ ಅದು ಕೇವಲ ‘ಪುಷ್ಪ’ ಸಿನಿಮಾದಿಂದ ಮಾತ್ರವಲ್ಲ. ‘ಪುಷ್ಪ’ ಬರುವುದಕ್ಕೂ ಮುನ್ನವೇ ಅಲ್ಲು ಅರ್ಜುನ್ ಅವರ ಸಿನಿಮಾಗಳನ್ನು ನೋಡಿ ಸಾಕ್ಷಿ (Sakshi Dhoni) ಅವರು ಎಂಜಾಯ್ ಮಾಡಿದ್ದರು. ಈ ವಿಚಾರವನ್ನು ಅವರು ಈಗ ಹೇಳಿಕೊಂಡಿದ್ದಾರೆ. ಹೈದರಾಬಾದ್ನಲ್ಲಿ ‘ಎಲ್ಜಿಎಂ’ ಸಿನಿಮಾದ ಪ್ರಮೋಷನ್ ವೇಳೆ ಅವರು ಈ ವಿಷಯ ಹೇಳಿದ್ದು ಕೇಳಿ ಅಲ್ಲು ಅರ್ಜುನ್ ಫ್ಯಾನ್ಸ್ಗೆ ಖುಷಿ ಆಗಿದೆ.
ಈಗಾಗಲೇ ತಿಳಿದಿರುವಂತೆ ಎಂ.ಎಸ್. ಧೋನಿ ಅವರು ಈಗ ಸಿನಿಮಾ ನಿರ್ಮಾಣದಲ್ಲಿ ಸಕ್ರಿಯರಾಗಿದ್ದಾರೆ. ‘ಧೋನಿ ಎಂಟರ್ಟೇನ್ಮೆಂಟ್’ ಸಂಸ್ಥೆ ಮೂಲಕ ಅವರು ತಮಿಳು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಅವರ ಪತ್ನಿ ಸಾಕ್ಷಿ ಅವರು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅವರು ಹಣ ಹೂಡಿರುವ ‘ಎಲ್ಜಿಎಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಪ್ರಚಾರದ ಸಲುವಾಗಿ ಹೈದರಾಬಾದ್ನಲ್ಲಿ ಇವೆಂಟ್ ಮಾಡಲಾಗಿದೆ.
‘ನೀವು ಯಾವುದಾದರೂ ತೆಲುಗು ಸಿನಿಮಾಗಳನ್ನು ನೋಡಿದ್ದೀರಾ’ ಎಂದು ಸಾಕ್ಷಿ ಅವರಿಗೆ ಪ್ರಶ್ನೆ ಕೇಳಲಾಯಿತು. ಆಗ ಅವರು ಅಲ್ಲು ಅರ್ಜುನ್ ಬಗ್ಗೆ ಮಾತನಾಡಿದರು. ‘ಅಲ್ಲು ಅರ್ಜುನ್ ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಆ ಸಮಯದಲ್ಲಿ ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಇತ್ಯಾದಿ ಒಟಿಟಿ ಇರಲಿಲ್ಲ. ಅಲ್ಲು ಅರ್ಜುನ್ ನಟನೆಯ ತೆಲುಗು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ನಾನು ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿ’ ಎಂದು ಸಾಕ್ಷಿ ಧೋನಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: Allu Arjun: ‘ಪುಷ್ಪ 2’ ಪೋಸ್ಟರ್ ರೀತಿ ವೇಷ ಧರಿಸಿ ಬಂದ ಸಂಸದ; ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಹೆಚ್ಚಿತು ಕ್ರೇಜ್
ಧೋನಿ ಅವರಿಗೆ ತಮಿಳುನಾಡಿನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ಅವರು ತಮ್ಮ ಸಂಸ್ಥೆಯ ಮೊದಲ ಸಿನಿಮಾವನ್ನು ತಮಿಳಿನಲ್ಲಿ ನಿರ್ಮಿಸುತ್ತಿದ್ದಾರೆ. ‘ಎಲ್ಜಿಎಂ’ ಸಿನಿಮಾಗೆ ರಮೇಶ್ ತಮಿಳ್ಮಣಿ ನಿರ್ದೇಶನ ಮಾಡಿದ್ದಾರೆ. ಹರೀಶ್ ಕಲ್ಯಾಣ್, ಇವಾನಾ, ಯೋಗಿ ಬಾಬು, ಮಿರ್ಚಿ ವಿಜಯ್, ನದಿಯಾ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.