
ದರ್ಶನ್ ನಟನೆಯ ‘ಗಜ’ ಹಾಗೂ ‘ಅಭಯ್’ ಸಿನಿಮಾ ನೋಡಿದವರಿಗೆ ಪ್ರದೀಪ್ ರಾವತ್ (Prdeep Rawat) ಪರಿಚಯ ಇದ್ದೇ ಇರುತ್ತದೆ. ಕನ್ನಡದಲ್ಲಿ ಕೆಲವೇ ಸಿನಿಮಾ ಮಾಡಿದ್ದರೂ ಅವರ ಮುಖ ಮರೆಯುವಂಥದ್ದಲ್ಲ. ವಿಲನ್ ಆಗಿ ಅವರು ಅಷ್ಟು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದ್ದರು. ಈಗ ಅವರು ನಿಧನ ಹೊಂದಿದ್ದಾರೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ 74 ವರ್ಷ ವಯಸ್ಸಾಗಿತ್ತು.
ದೂರದರ್ಶನದ ‘ಮಹಾಭಾರತ’ದಲ್ಲಿ ಅಶ್ವಥಾಮನಿಂದ ಪ್ರದೀಪ್ ರಾವತ್ ಪ್ರಯಾಣ ಆರಂಭ ಆಯಿತು. ಬಾಲಿವುಡ್‌ನ ‘ಗಜಿನಿ’ ಮತ್ತು ಟಾಲಿವುಡ್‌ನ ‘ಛತ್ರಪತಿ’, ಕನ್ನಡದ ‘ಗಜ’ ಅವರಿಗೆ ಬೇರೆಯದೇ ಖ್ಯಾತಿ ನೀಡಿತು. ಅವರ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.
ಜಬಲ್ಪುರದ ಯುಕೋ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಪ್ರದೀಪ್ ರಾವತ್ ಅವರಿಗೆ ‘ಮಹಾಭಾರತ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇದರಲ್ಲಿ ಅವರು ನಿರ್ವಹಿಸಿದ ‘ಅಶ್ವಥಾಮನ’ ಪಾತ್ರ ದೇಶಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಬಿಬಿಸಿಯಲ್ಲೂ ಪ್ರಸಾರವಾದ ಈ ಧಾರಾವಾಹಿಯ ಬಳಿಕ, ರಾಜ್ ಬಬ್ಬರ್, ಅನುಪಮ್ ಖೇರ್ ಹಾಗೂ ಅಲೋಕ್ ನಾಥ್ ಅವರಂತಹ ದೈತ್ಯ ಕಲಾವಿದರೊಂದಿಗೆ ಅನೇಕ ರಂಗಭೂಮಿ ನಾಟಕಗಳಲ್ಲಿ ಅವರು ವೇದಿಕೆ ಹಂಚಿಕೊಂಡರು.
1990ರಲ್ಲಿ ಸಲ್ಮಾನ್ ಖಾನ್ ಅವರ ‘ಬಾಘಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಇವರಿಗೆ, ನಂತರ ಹಿಂತಿರುಗಿ ನೋಡುವ ಅಗತ್ಯವೇ ಬರಲಿಲ್ಲ. ‘ಅಪರಾಧಿ’, ‘ಇನ್ಸಾನಿಯತ್’, ‘ಕೋಯಾಲಾ’, ‘ದೀವಾರ್’, ‘ಲಗಾನ್’ ಮತ್ತು ‘ಗಜಿನಿ’ಯಂತಹ ಹಿಟ್ ಚಿತ್ರಗಳಲ್ಲಿ ಇವರ ಅಭಿನಯ ಮೈಲಿಗಲ್ಲಾಗಿ ಉಳಿಯಿತು.
ಕನ್ನಡದಲ್ಲಿ ‘ಪರೋಡಿ’ ಹೆಸರಿನ ಸಿನಿಮಾದಲ್ಲಿ ಮೊದಲು ನಟಿಸಿದರು. ಉಪೇಂದ್ರ ಅವರು ಈ ಚಿತ್ರಕ್ಕೆ ಹೀರೋ. ಆ ಬಳಿಕ ಗಜ, ಅಭಯ್ ಮಾಡಿದರು. ಸುದೀಪ್ ನಟನೆಯ ‘ಬಚ್ಚನ್’ ಚಿತ್ರಕ್ಕೂ ಇವರೇ ವಿಲನ್. ‘ಎಲೆಕ್ಷನ್’, ‘ಶಿವಲಿಂಗ’, ‘ಲಕ್ಷ್ಮಣ’ ಸಿನಿಮಾ ಮಾಡಿದರು. 2022ರಲ್ಲಿ ಬಂದ ‘ಚಾಂಪಿಯನ್’ ಅವರ ಕೊನೆಯ ಸಿನಿಮಾ.
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ‘ಲಗಾನ್’ ಚಿತ್ರದಲ್ಲಿ ಇವರ ನಟನೆಯನ್ನು ಮೆಚ್ಚಿ, ತಮ್ಮ ‘ಸಾಯಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕರೆತಂದರು. ‘ಸಾಯಿ’ ಚಿತ್ರದ ಅತ್ಯುತ್ತಮ ಖಳನಾಯಕ ಪಾತ್ರಕ್ಕಾಗಿ ಇವರಿಗೆ ಫಿಲ್ಮ್‌ಫೇರ್ ಹಾಗೂ ನಂದಿ ಪ್ರಶಸ್ತಿಗಳು ಒಲಿದುಬಂದವು.
ಇದನ್ನೂ ಓದಿ: ಹಿರಿಯ ನಟ ಪ್ರದೀಪ್ ರಾವತ್ ನಿಧನ: ‘ಘಜಿನಿ’, ‘ಲಗಾನ್’ ಖ್ಯಾತಿಯ ಖಳನಟ ಇನ್ನಿಲ್ಲ
ಬಳಿಕ ರಾಜಮೌಳಿಯವರೇ ನಿರ್ದೇಶಿಸಿದ ‘ಛತ್ರಪತಿ’ ಚಿತ್ರದಲ್ಲಿ ಇವರು ನಟಿಸಿದ ವಿಲನ್ ಪಾತ್ರ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿತು. ‘ದೇಶಮುದುರು’, ‘ರಾಜಣ್ಣ’, ‘ಬಾದ್‌ಶಾ’, ‘ಸರೈನೋಡು’, ‘ನಾಯಕ್’ ಮತ್ತು ‘ರಗಡ’ ಮುಂತಾದ ಸಿನಿಮಾಗಳು ಇವರ ಟಾಲಿವುಡ್ ಕೆರಿಯರ್‌ನಲ್ಲಿ ಮರೆಯಲಾಗದ ಹಿಟ್ ಎನಿಸಿಕೊಂಡವು.
ಪ್ರಶ್ನೆ: ಪ್ರದೀಪ್ ರಾವತ್ ಹೇಗೆ ನಿಧನ ಹೊಂದಿದರು?
ಉತ್ತರ: ರಕ್ತದ ಕ್ಯಾನ್ಸರ್
ಪ್ರಶ್ನೆ: ಪ್ರದೀಪ್ ರಾವತ್ಗೆ ಎಷ್ಟು ವರ್ಷ ಆಗಿತ್ತು?
ಉತ್ತರ: 74 ವರ್ಷ
ಪ್ರಶ್ನೆ: ಪ್ರದೀಪ್ ರಾವತ್ ನಟಿಸಿದ ಕನ್ನಡದ ಸಿನಿಮಾಗಳು ಯಾವವು?
ಉತ್ತರ: ಗಜ, ಅಭಯ್, ಬಚ್ಚನ್ ಮೊದಲಾದವು