‘ಭಾರತದ ಎಡಿಸನ್’ ಜಿ.ಡಿ. ನಾಯ್ಡು ಬಯೋಪಿಕ್; ಟ್ರೇಲರ್​ನಲ್ಲಿ ಗಮನ ಸೆಳೆದ ಆರ್. ಮಾಧವನ್

ಆರ್. ಮಾಧವನ್ ನಟಿಸಿರುವ ‘ಜಿಡಿಎನ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. 3 ನಿಮಿಷಗಳ ಟ್ರೇಲರ್‌ನಲ್ಲಿ ಜಿ.ಡಿ. ನಾಯ್ಡು ಅವರ ಸಂಶೋಧನೆಗಳು, ಉದ್ಯಮದ ಯಶೋಗಾಥೆ ಮತ್ತು ಬ್ರಿಟಿಷರ ವಿರುದ್ಧ ಅವರು ನಡೆಸಿದ ಹೋರಾಟವನ್ನು ತೋರಿಸಲಾಗಿದೆ. ಈ ಸಿನಿಮಾ ಮೇಲೆ ಮಾಧವನ್ ಅವರ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.

‘ಭಾರತದ ಎಡಿಸನ್’ ಜಿ.ಡಿ. ನಾಯ್ಡು ಬಯೋಪಿಕ್; ಟ್ರೇಲರ್​ನಲ್ಲಿ ಗಮನ ಸೆಳೆದ ಆರ್. ಮಾಧವನ್
R Madhavan

Updated on: Jul 06, 2026 | 11:16 PM

ಮುಖ್ಯಾಂಶಗಳು

  • ಪ್ರಖ್ಯಾತ ಸಂಶೋಧಕ ಜಿ.ಡಿ. ನಾಯ್ಡು ಅವರ ಜೀವನಾಧಾರಿತ ‘ಜಿಡಿಎನ್’.
  • ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶನ ಮಾಡಿರುವ ಬಿಗ್ ಬಜೆಟ್ ಸಿನಿಮಾ.
  • ಜಿ.ಡಿ. ನಾಯ್ಡು ಬಯೋಪಿಕ್‌ನಲ್ಲಿ ಆರ್. ಮಾಧವನ್ ಅವರಿಗೆ ವಿಭಿನ್ನ ಗೆಟಪ್‌.

‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಚಿತ್ರದಲ್ಲಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಬಹುಮುಖ ಪ್ರತಿಭೆ ಆರ್. ಮಾಧವನ್ (R Madhavan) ಮತ್ತೊಂದು ಐತಿಹಾಸಿಕ ಬಯೋಪಿಕ್‌ನೊಂದಿಗೆ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಭಾರತದ ಪ್ರಸಿದ್ಧ ಎಂಜಿನಿಯರ್ ಹಾಗೂ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (GD Naidu) ಅವರ ಜೀವನ ಆಧಾರಿತ ‘ಜಿಡಿಎನ್’ (GDN) ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಮಾಧವನ್ ಅವರ ಮೇಕ್ ಓವರ್ ಸಿನಿರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮಾಧವನ್ ಕೂಡ ಚಿತ್ರಕಥೆ ಬರವಣಿಗೆಯಲ್ಲಿ ಕೈ ಜೋಡಿಸಿದ್ದಾರೆ. ‘ಭಾರತದ ಎಡಿಸನ್’ ಎಂದೇ ಖ್ಯಾತರಾಗಿದ್ದ ಜಿ.ಡಿ. ನಾಯ್ಡು ಅವರ ಯೌವನದ ದಿನಗಳಿಂದ ಹಿಡಿದು ವೃದ್ಧಾಪ್ಯದವರೆಗಿನ ವಿವಿಧ ಹಂತಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದ್ದು, ವೃದ್ಧನ ಗೆಟಪ್‌ನಲ್ಲಿ ಮಾಧವನ್ ಅವರನ್ನು ಗುರುತಿಸಲೂ ಸಾಧ್ಯವಾಗದಷ್ಟು ಬದಲಾಗಿದ್ದಾರೆ.

‘ಜಿಡಿಎನ್’ ಚಿತ್ರದ ಟ್ರೇಲರ್:

G.D.N Official Trailer | R. Madhavan | Sathyaraj | Jayaram | Priyamani | Dushara | Govind Vasantha

ಜಿ.ಡಿ. ನಾಯ್ಡು ಜೀವನದ ಕಥೆ:

ಸುಮಾರು 3 ನಿಮಿಷಗಳ ಈ ಟ್ರೇಲರ್ ಜಿ.ಡಿ. ನಾಯ್ಡು ಅವರ ಕೊನೆಯ ದಿನಗಳ ವದಂತಿಗಳೊಂದಿಗೆ (ಅವರಿಗೆ ಹುಚ್ಚು ಹಿಡಿದಿದೆ ಮತ್ತು ಸ್ವಂತ ಕಟ್ಟಡಕ್ಕೆ ತಾವೇ ಬಾಂಬ್ ಇಟ್ಟಿದ್ದಾರೆ ಎಂಬ ಗಾಳಿಸುದ್ದಿ) ಆರಂಭವಾಗುತ್ತದೆ. ತಳಮಟ್ಟದ ಸಂಶೋಧಕನಾಗಿದ್ದ ಒಬ್ಬ ವ್ಯಕ್ತಿ, ಭಾರತದ ಪ್ರಮುಖ ಉದ್ಯಮಿಯಾಗಿ ಬೆಳೆದು, ಯುವಿಎಂಎಸ್ (UMS) ಸಾರಿಗೆ ಜಾಲವನ್ನು ನಿರ್ಮಿಸಿ, ದೇಶದ ಮೊದಲ ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಿದ ರೋಚಕ ಪಯಣವನ್ನು ಟ್ರೇಲರ್‌ನಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ.

ಬ್ರಿಟಿಷರ ದ್ವೇಷ; ಸ್ವದೇಶಿಗರ ನಿರ್ಲಕ್ಷ್ಯ:

ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಜಿ.ಡಿ. ನಾಯ್ಡು ನಡೆಸಿದ ಹೋರಾಟ ಮತ್ತು ಅಧಿಕಾರದಲ್ಲಿದ್ದವರಿಂದ ಅವರು ಎದುರಿಸಿದ ತೊಂದರೆಗಳನ್ನು ಚಿತ್ರದ ಪ್ರಮುಖ ಕಥಾವಸ್ತುವನ್ನಾಗಿ ಮಾಡಲಾಗಿದೆ. ಟ್ರೇಲರ್‌ನಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬ ‘ಯಾರೀ ಫಕೀರ?’ ಎಂದು ಕೇಳುವ ದೃಶ್ಯವಿದ್ದು, ಅದರ ಬೆನ್ನಲ್ಲೇ ‘ಬ್ರಿಟಿಷರು ಇವರನ್ನು ನೋಡಿ ಹೆದರಿದ್ದರು, ಆದರೆ ಸ್ವದೇಶಿಗರು ಇವರನ್ನು ಮರೆತರು’ ಎಂಬ ಪವರ್‌ಫುಲ್ ಟ್ಯಾಗ್‌ಲೈನ್ ಮೂಡಿಬರುತ್ತದೆ.

‘ದೇಶದ್ರೋಹ’ದ ಗಂಭೀರ ಆರೋಪ:

ಇದಲ್ಲದೆ, ಜಿ.ಡಿ. ನಾಯ್ಡು ಅವರ ಉದ್ಯಮದ ಮೇಲೆ ನಡೆದ ಪೊಲೀಸ್ ದಾಳಿಗಳು, ತೆರಿಗೆ ವಂಚನೆಯ ಸುಳ್ಳು ಆರೋಪಗಳು ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಅವರ ಮೇಲೆ ಹೊರಿಸಲಾದ ‘ದೇಶದ್ರೋಹ’ದ ಗಂಭೀರ ಆರೋಪಗಳ ಸುತ್ತ ಸಿನಿಮಾ ಸಾಗಲಿದೆ ಎಂಬುದನ್ನು ಟ್ರೇಲರ್ ಮೂಲಕ ತೋರಿಸಲಾಗಿದೆ.

ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ‘ಧುರಂಧರ್’ ನಟ ಆರ್. ಮಾಧವನ್: ವಿಡಿಯೋ ನೋಡಿ..

ಈ ಬಿಗ್ ಬಜೆಟ್ ಬಯೋಪಿಕ್​ನಲ್ಲಿ ಸತ್ಯರಾಜ್, ಜಯರಾಮ್, ಪ್ರಿಯಾಮಣಿ, ವಿನಯ್ ರಾಯ್, ಅದಿತಿ ಬಾಲನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಿಂದ್ ವಸಂತ ಅವರ ಹಿನ್ನೆಲೆ ಸಂಗೀತವಿದ್ದು, ಅರವಿಂದ್ ಕಮಲನಾಥನ್ ಛಾಯಾಗ್ರಹಣ ಮಾಡಿದ್ದಾರೆ. ‘ವರ್ಗೀಸ್ ಮೂಲನ್ ಪಿಕ್ಚರ್ಸ್’ ಮತ್ತು ಮಾಧವನ್ ಅವರ ‘ಟ್ರೈಕಲರ್ ಫಿಲ್ಮ್ಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us