
ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಅದ್ಧೂರಿಯಾಗಿ ಮಾಡುತ್ತಿದೆ. ಮುಂಬೈ, ಭೋಪಾಲ್, ಬೆಂಗಳೂರಿನ ಬಳಿಕ ಇಂದು ದೆಹಲಿಯಲ್ಲಿ ರಾಮ್ ಚರಣ್ ಮತ್ತು ತಂಡ ‘ಪೆದ್ದಿ’ ಸಿನಿಮಾದ ಪ್ರಚಾರ ಮಾಡಿದೆ. ಈ ವೇಳೆ ರಾಮ್ ಚರಣ್ ಕೆಲ ಆಸಕ್ತಿಕರ ವಿಚಾರಗಳನ್ನು ಸಿನಿಮಾದ ಬಗ್ಗೆ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪೆದ್ದಿ’ ಸಿನಿಮಾದ ಬಗ್ಗೆ ವಿಚಾರಿಸಿದ ವಿಷಯವನ್ನು ರಾಮ್ ಚರಣ್ ಹೇಳಿದ್ದಾರೆ.
ಈ ಸಿನಿಮಾ ನೆಲದ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿರುವ ಕತೆಯನ್ನು ಹೊಂದಿದೆ. ನಮ್ಮ ಸಿನಿಮಾ ಸಹ ಹಳ್ಳಿಯ ಪ್ರತಿಭಾನ್ವಿತ ಯುವಕನ ಬಗ್ಗೆ ಆ ಮೂಲಕ ಹಳ್ಳಿಗಳಲ್ಲಿ ಅಡಗಿರುವ ಪ್ರತಿಭೆಗಳ ಬಗೆಗೆ ಆಗಿದೆ’ ಎಂದ ರಾಮ್ ಚರಣ್, ಭಾರತದ ಒಲಿಂಪಿಕ್ ಬಿಲ್ಲುಗಾರರ ತಂಡದ ಎಲ್ಲ ಸದಸ್ಯರು ಕಾಡು ಸಮುದಾಯವೊಂದಕ್ಕೆ ಸೇರಿದವರು. ಭಾರತದ ನಿಜವಾದ ಟ್ಯಾಲೆಂಟ್ ಹಳ್ಳಿಗಳಲ್ಲಿದೆ. ನಮ್ಮ ಸಿನಿಮಾ ಸಹ ಅದೇ ವಿಷಯದ ಮೇಲೆ ಆಧರಿತವಾಗಿದೆ’ ಎಂದಿದ್ದಾರೆ.
ಮೋದಿಯ ಭೇಟಿಯ ಬಗ್ಗೆಯೂ ಮಾತನಾಡಿದ ರಾಮ್ ಚರಣ್, ‘ನಾನು ಕಳೆದ ಬಾರಿ ದೆಹಲಿಗೆ ಬಂದಾಗ ಪ್ರಧಾನಿ ಮೋದಿ ಅವರನ್ನು ಭೇಟಿಯಾದೆ. ಆ ಸಂದರ್ಭದಲ್ಲಿ ಅವರು ‘ಪೆದ್ದಿ’ ಸಿನಿಮಾದ ಬಗ್ಗೆ ಕೇಳಿದರು. ಆಗ ನಾನು ಅವರ ‘ವಿಕಸಿತ ಭಾರತ’ ಹಳ್ಳಿಗಳಿಗೆ ಶಕ್ತಿ ನೀಡುವ ಕತೆಯನ್ನು ಹೊಂದಿದೆ ಎಂದೆ. ಕತೆಯ ಬಗ್ಗೆ ವಿವರಣೆಯನ್ನು ನೀಡಿದೆ’ ಎಂದರು.
ಇದನ್ನೂ ಓದಿ:ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ
‘ಆಗ ಮೋದಿ ಅವರು ಪಶ್ಚಿಮ ಬಂಗಾಳದ ವಿಷಯವನ್ನು ಹೇಳಿದರು. ನಾನು (ಮೋದಿ) ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಬೇಕಾದರೆ ಒಂದು ಬಾರಿ ಕೆಲ ಯುವಕರನ್ನು ಗಮನಿಸಿದೆ. ಎಲ್ಲರೂ ಮೇಲೆ ಜರ್ಸಿ ಧರಿಸಿದ್ದರು, ಕೆಳಗೆ ಲಂಗೋಟಿ ಧರಿಸಿದ್ದರು. ಅವರೆಲ್ಲರೂ ಫುಟ್ಬಾಲ್ ಆಟಗಾರರಾಗಿದ್ದರು. ಆ ಎಲ್ಲರೂ ಬಹುತೇಕ ಒಂದೇ ಊರಿನವರಾಗಿದ್ದರು. ಪಶ್ಚಿಮ ಬಂಗಾಳದ ಒಂದು ಹಳ್ಳಿಯ ವ್ಯಕ್ತಿ ಮೊಹಮ್ಮದ್ ಒಂದು ಸಣ್ಣ ಹಳ್ಳಿಯಿಂದ ಬಂದು ಫುಟ್ಬಾಲ್ನಲ್ಲಿ ಸಾಧನೆ ಮಾಡಿದರು. ಈಗ ಅವರನ್ನು ಸ್ಪೂರ್ತಿಯಾಗಿರಿಸಿಕೊಂಡು ಹಳ್ಳಿಗಳಿಂದ ಸಾಕಷ್ಟು ಯುವಕರು ಫುಟ್ಬಾಲ್ ಆಡುತ್ತಿದ್ದಾರೆ. ಈಗ ಬಂಗಾಳದ ಫುಟ್ಬಾಲ್ ಸ್ಟೇಡಿಯಮ್ಗೆ ಅವರದ್ದೇ ಹೆಸರಿಡಲಾಗಿದೆ ಎಂದರು’ ಎಂದು ರಾಮ್ ಚರಣ್ ವಿವರಿಸಿದರು.
‘ನಮ್ಮ ಸಿನಿಮಾ ‘ಪೆದ್ದಿ’ ಅಂಥಹಾ ಹಳ್ಳಿಯ ಪ್ರತಿಭಾವಂತ ಯುವಕರ ಬಗ್ಗೆ, ಹಳ್ಳಿಯಲ್ಲಿದ್ದು, ರಾಷ್ಟ್ರಮಟ್ಟದಲ್ಲಿ ಸಾಧಿಸಲು ಹೊರಡುವ ಸಾಧಕರ ಕತೆಯನ್ನು ಒಳಗೊಂಡಿದೆ’ ಎಂದ ರಾಮ್ ಚರಣ್. ಸಿನಿಮಾನಲ್ಲಿ ತಮಗೆ ಕುಸ್ತಿ ಪಟುವಿನ ಫಿಸೀಕ್ ಮಾಡುವುದು ಬಹಳ ಕಷ್ಟದ ಕೆಲಸವಾಗಿತ್ತು ಎಂದಿದ್ದಾರೆ.
‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ನಾಯಕಿ. ಶಿವರಾಜ್ ಕುಮಾರ್ ಸಹ ಇದ್ದಾರೆ. ಬೊಮನ್ ಇರಾನಿ, ದಿವ್ಯೇಂದು, ಜಗಪತಿ ಬಾಬು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ