ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ

Ram Gopal Varma: ರಾಮ್ ಗೋಪಾಲ್ ವರ್ಮಾ ಹಾದಿ ಹಿಡಿದು ಬಂದ ಹಲವರು ಇಂದು ಸ್ಟಾರ್ ನಿರ್ದೇಶಕರುಗಳಾಗಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ರಾಮ ಗೋಪಾಲ್ ವರ್ಮಾ ಸಿನಿಮಾಗಳಿಗಿಂತಲೂ ವಿವಾದಗಳಿಂದ, ಟ್ವೀಟ್​​ಗಳಿಂದ, ಸಂದರ್ಶನಗಳಿಂದ ಮಾತ್ರವೇ ಸದ್ದು, ಸುದ್ದಿ ಮಾಡುತ್ತಿದ್ದಾರೆ. ಆದರೆ ಇದೀಗ ವರ್ಮಾ, ಹೊಸ ಘೋಷಣೆ ಮಾಡಿದ್ದು, ತಾವು ತೆಲುಗು ಚಿತ್ರರಂಗವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.

ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ
Ram Gopal Varma

Updated on: Mar 26, 2026 | 3:41 PM

ರಾಮ್ ಗೋಪಾಲ್ ವರ್ಮಾ (Ram Gopal Varma) ಒಂದು ಕಾಲದ ಭಾರತದ ಸ್ಟಾರ್ ಸಿನಿಮಾ ನಿರ್ದೇಶಕ. ಸಿನಿಮಾ ನಿರ್ದೇಶನದಲ್ಲಿ ಹೊಸ ಮಾದರಿ ಹಾಕಿಕೊಟ್ಟ ನಿರ್ದೇಶಕ. ರಾಮ್ ಗೋಪಾಲ್ ವರ್ಮಾ ಹಾದಿ ಹಿಡಿದು ಬಂದ ಹಲವರು ಇಂದು ಸ್ಟಾರ್ ನಿರ್ದೇಶಕರುಗಳಾಗಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ರಾಮ ಗೋಪಾಲ್ ವರ್ಮಾ ಸಿನಿಮಾಗಳಿಗಿಂತಲೂ ವಿವಾದಗಳಿಂದ, ಟ್ವೀಟ್​​ಗಳಿಂದ, ಸಂದರ್ಶನಗಳಿಂದ ಮಾತ್ರವೇ ಸದ್ದು, ಸುದ್ದಿ ಮಾಡುತ್ತಿದ್ದಾರೆ. ಆದರೆ ಇದೀಗ ವರ್ಮಾ, ಹೊಸ ಘೋಷಣೆ ಮಾಡಿದ್ದು, ತಾವು ತೆಲುಗು ಚಿತ್ರರಂಗವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಗಲಾಟ ಪ್ಲಸ್ ಯೂಟ್ಯೂಬ್ ಚಾನೆಲ್ಲಿನ ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರವು ಬಿಡುಗಡೆಯಾದ ನಂತರ ತಮ್ಮ ಆಲೋಚನಾ ಕ್ರಮವೇ ಬದಲಾಗಿದೆ ಎಂದಿದ್ದಾರೆ. ಈ ಚಿತ್ರದ ಮೇಕಿಂಗ್ ಮತ್ತು ರಿಯಲಿಸ್ಟಿಕ್ ಶೈಲಿಯನ್ನು ಕಂಡು ಬೆರಗಾಗಿರುವ ಅವರು, ‘ಈ ಚಿತ್ರವು ಭಾರತೀಯ ಚಿತ್ರರಂಗದ ಹಳೆಯ ಸೂತ್ರಗಳನ್ನು ಧೂಳೀಪಟ ಮಾಡಿದೆ’ ಎಂದು ಬಣ್ಣಿಸಿದ್ದಾರೆ.

ಅತಿರಂಜಿತ ಆಕ್ಷನ್, ಅತಿಯಾದ ಹೀರೋಗಿರಿ ಇರುವ ಸಿನಿಮಾಗಳ ಕಾಲ ಮುಗಿದಿದೆ ಎಂದು ಆರ್​​ಜಿವಿ ಅಭಿಪ್ರಾಯ ಪಟ್ಟಿದ್ದು, ‘ನಾನು ಈ ಹಿಂದೆ ಮಾಡಿದ ‘ಗಾಡ್ ಫಾದರ್’ ಮಾದರಿಯ ಸಿನಿಮಾಗಳು ಈಗ ಈ ಹೊಸ ತಲೆಮಾರಿನ ಸಿನಿಮಾಗಳ ಮುಂದೆ ಮಂಕಾಗಿ ಕಾಣುತ್ತಿವೆ’ ಎಂದು ಅವರು ಒಪ್ಪಿಕೊಂಡಿದ್ದಾರೆ. “ನಾನು ಈ ಹಿಂದೆ ಮಾಡಿದ ಸಿನಿಮಾಗಳನ್ನೆಲ್ಲಾ ಮರೆತು, ಧುರಂಧರ್ ನಂತರದ ಕಾಲಘಟ್ಟಕ್ಕೆ ತಕ್ಕಂತೆ ಹೊಸದಾಗಿ ಹುಟ್ಟಿದ ನಿರ್ದೇಶಕನಂತೆ ಕೆಲಸ ಮಾಡಲು ಬಯಸುತ್ತೇನೆ” ಎಂದಿದ್ದಾರೆ. ಅವರ ಪ್ರಕಾರ, ಈಗಿನ ಪ್ರೇಕ್ಷಕರು ಬುದ್ಧಿವಂತರಾಗಿದ್ದು, ಅವರಿಗೆ ಹಳೆಯ ಮಾದರಿಯ ಸಿನಿಮಾಗಳು ಇಷ್ಟವಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ

ಅದೇ ಸಂದರ್ಶನದಲ್ಲಿ ಮುಂದೆ ಮಾತನಾಡುತ್ತಾ, ತಾವು ಇನ್ನು ಮುಂದೆ ತೆಲುಗು ಸಿನಿಮಾಗಳನ್ನು ಮಾಡುವುದಿಲ್ಲ ಎಂದಿರುವ ಆರ್​​ಜಿವಿ, ಇದೇ ಕಾರಣಕ್ಕೆ ಹೈದರಾಬಾದ್ ಬಿಟ್ಟು ಮುಂಬೈಗೆ ಬಂದಿರುವುದಾಗಿ ಹೇಳಿದ್ದಾರೆ. ಆರ್​​ಜಿವಿ ಅವರು ಪ್ರಸ್ತುತ ಸಿದ್ಧಪಡಿಸುತ್ತಿರುವ ‘ಸಿಂಡಿಕೇಟ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುವ ಉಮೇದಿನಲ್ಲಿದ್ದು, ಇದು ಜಾಗತಿಕ ಮಟ್ಟದ ಕಥಾಹಂದರ ಹೊಂದಿದ್ದು, ಅದನ್ನು ಹಿಂದಿ ಮತ್ತು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ರೂಪಿಸಲು ಅವರು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಅವರು ಹೈದರಾಬಾದ್​​ನಿಂದ ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದಾರಂತೆ.

ತಮ್ಮದೇ ಆದ ಹಳೆಯ ಹಿಟ್ ಚಿತ್ರಗಳು ಈಗಿನ ‘ಧುರಂಧರ್’ ಅಂತಹ ಸಿನಿಮಾಗಳ ಮುಂದೆ ಟಿವಿ ಸೀರಿಯಲ್‌ನಂತೆ ಕಾಣುತ್ತವೆ ಎಂದು ಅವರು ನೇರವಾಗಿ ಹೇಳಿದ್ದು, ತಮ್ಮ ಸಂಪೂರ್ಣ ಗಮನ ಈಗ ‘ಸಿಂಡಿಕೇಟ್’ ಸಿನಿಮಾ ಮಾಡುವುದರ ಮೇಲಿದೆ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us