ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಕ್ಲೋಸಿಂಗ್ ಕಲೆಕ್ಷನ್ ಎಷ್ಟು? ಇಲ್ಲಿದೆ ವಿವರ

'ಕೆಡಿ - ದಿ ಡೆವಿಲ್' ಚಿತ್ರದ ಅಂತಿಮ ಬಾಕ್ಸ್ ಆಫೀಸ್ ಗಳಿಕೆಯ ಅಧಿಕೃತ ವಿವರಗಳು ಬಹಿರಂಗಗೊಂಡಿವೆ. 100 ಕೋಟಿ ಬಜೆಟ್‌ನ ಈ ಸಿನಿಮಾ ವಿಶ್ವದಾದ್ಯಂತ 24.35 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಗಳಿಕೆ ಬಜೆಟ್‌ಗೆ ಹೋಲಿಸಿದರೆ ಸಾಧಾರಣವಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಕ್ತಾಯ ಹಂತಕ್ಕೆ ಬಂದಿದ್ದು, ಜೂನ್ 5 ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಕ್ಲೋಸಿಂಗ್ ಕಲೆಕ್ಷನ್ ಎಷ್ಟು? ಇಲ್ಲಿದೆ ವಿವರ
ಕೆಡಿ ಸಿನಿಮಾ

Updated on: Jun 01, 2026 | 11:39 AM

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾಗಿದ್ದ ‘ಕೆಡಿ – ದಿ ಡೆವಿಲ್’ ಚಿತ್ರದ (KD Movie) ಒಟ್ಟು ಬಾಕ್ಸ್ ಆಫೀಸ್ ಗಳಿಕೆಯ ಅಧಿಕೃತ ವಿವರಗಳು ಹೊರಬಿದ್ದಿವೆ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಗಳಿಕೆ ಮಾಡಿದೆ. ಈ ಸಿನಿಮಾ ಈಗ ಒಟಿಟಿಗೆ ಬರುತ್ತಿರುವುದರಿಂದ ಸಿನಿಮಾದ ಗಳಿಕೆ ಬಹುತೇಕ ಕೊನೆಗೊಂಡಂತೆ ಆಗಿದೆ. ಈ ಚಿತ್ರದ ಕ್ಲೋಸಿಂಗ್ ಗಳಿಕೆ ವಿವರ ಇಲ್ಲಿದೆ.

ವಿಶ್ವದಾದ್ಯಂತ ಒಟ್ಟು 13,358 ಶೋ ಪ್ರದರ್ಶನ ಕಂಡಿರುವ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ, ಚಿತ್ರದ ಬಜೆಟ್​​ಗೆ ಹೋಲಿಸಿದರೆ ಈ ಗಳಿಕೆ ಸಣ್ಣದು ಎನ್ನಬಹುದು. ಈ ಚಿತ್ರ ವಿಶ್ವದಾದ್ಯಂತ ಚಿತ್ರವು ಒಟ್ಟು 24.35 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ನೆಟ್ ಕಲೆಕ್ಷನ್ ಒಟ್ಟು 21.39 ಕೋಟಿ ಆಗಿದೆ. ಈ ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ.

ಸಿನಿಮಾ ಈಗ ತನ್ನ ಥಿಯೇಟರ್ ರನ್ ಅನ್ನು ಬಹುತೇಕ ಮುಗಿಸುವ ಹಂತಕ್ಕೆ ಬಂದಿದೆ. ಇತ್ತೀಚೆಗೆ ಅಂದರೆ ಮೇ 31ರ ಭಾನುವಾರದಂದು ಈ ಸಿನಿಮಾ ಕೇವಲ 7 ಲಕ್ಷ ರೂಪಾಯಿ ಗಳಿಸಿದೆ. ಚಿತ್ರಮಂದಿರಗಳಲ್ಲಿ ಇದು ಸಿನಿಮಾದ ಕೊನೆಯ ದಿನಗಳ ಗಳಿಕೆಯಾಗಿದ್ದರಿಂದ, ಇದನ್ನು ಚಿತ್ರದ ಕ್ಲೋಸಿಂಗ್ ಗಳಿಕೆ ಎಂದು ಪರಿಗಣಿಸಬಹುದು. ಜೂನ್ 5ರಂದು ಈ ಚಿತ್ರವು ಅಧಿಕೃತವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿದೆ.

‘ಕೆಡಿ – ದಿ ಡೆವಿಲ್’ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರೇಮ್ ನಿರ್ದೇಶಿಸಿದ್ದು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿ ಅಬ್ಬರಿಸಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಅವರ ‘ಕಾಳಿ’ ಎಂಬ ಪವರ್‌ಫುಲ್ ಮಾಸ್ ಲುಕ್ ಪ್ರೇಕ್ಷಕರ ಮನ ಗೆದ್ದಿದೆ. ಇವರೊಂದಿಗೆ ಬಾಲಿವುಡ್ ಸ್ಟಾರ್ ಸಂಜಯ್ ದತ್ ಖಳನಾಯಕನಾಗಿ ನಟಿಸಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೇಷ್ಮಾ ನಾಣಯ್ಯ ಹಾಗೂ ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ಪ್ರಸಾರ ಕಾಣಲಿದೆ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ; ಇಲ್ಲಿದೆ ಮಾಹಿತಿ

‘ಕೆಡಿ’ ಸಿನಿಮಾ ಶೀರ್ಷಿಕೆ ಪ್ರಕಟವಾದ ದಿನದಿಂದಲೇ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿತ್ತು. ಚಿತ್ರದ ‘ಸರ್ಸೆ ಸರ್ಸೆ’ ಕೆಟ್ಟ ಸಾಹಿತ್ಯದ ಕಾರಣಕ್ಕೆ ವಿವಾದ ಮಾಡಿಕೊಂಡಿತು. ಟ್ರೈಲರ್​ನಲ್ಲಿರುವ ವಿಪರೀತ ರಕ್ತಪಾತ ಹಾಗೂ ಹಿಂಸಾಚಾರದ ದೃಶ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us