
ಹೊಸ ನಟ ಕಿರಣ್ ಆದಿತ್ಯ ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ (Kannada Film Industry) ಎಂಟ್ರಿ ನೀಡುತ್ತಿದ್ದಾರೆ. ಅವರು ನಟಿಸಿರುವ ‘ಲೈಫ್ ಟುಡೇ’ (Life Today) ಚಿತ್ರದ ಮೇಲೆ ಸಿನಿಪ್ರಿಯರಿಗೆ ನಿರೀಕ್ಷೆ ಮನೆಮಾಡಿದೆ. ಈ ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುವಂತಿದೆ. ಅದಕ್ಕೆ ತಕ್ಕಂತೆಯೇ ಟ್ರೇಲರ್ ಮೂಡಿಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸಿನಿಮಾ ಕಥೆ ಏನು ಎಂಬುದರ ಸುಳಿವನ್ನು ಟ್ರೇಲರ್ ಮೂಲಕ ನೀಡಲಾಗಿದೆ. ಟ್ರೇಲರ್ ಬಿಡುಗಡೆ ಬಳಿಕ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು.
‘ಲೈಫ್ ಟುಡೇ’ ಸಿನಿಮಾದಲ್ಲಿ ಕಿರಣ್ ಆದಿತ್ಯ ಅವರಿಗೆ ನಾಯಕಿಯಾಗಿ ಲೇಖಾ ಚಂದ್ರ ಅವರು ಅಭಿನಯಿಸಿದ್ದಾರೆ. ಕಾಂತ ಕನ್ನಲ್ಲಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮೇಘನಾ ಪ್ರದೀಪ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ಮಾಣದ ಸಿನಿಮಾ. ಶ್ರೀಧರ್ ವಿ. ಸಂಭ್ರಮ್ ಅವರು ‘ಲೈಫ್ ಟುಡೇ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದ ಹಾಡುಗಳು ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿವೆ. ಈಗ ಚಿತ್ರತಂಡವು ಅಧಿಕೃತ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ಕೌತುಕ ನಿರ್ಮಾಣ ಮಾಡಿದೆ. ಟ್ರೇಲರ್ ಜೊತೆಯಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಕೂಡ ಘೋಷಿಸಿದೆ. ಆಗಸ್ಟ್ 6ರಂದು ‘ಲೈಫ್ ಟುಡೇ’ ಚಿತ್ರವು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಲವ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಈ ಚಿತ್ರದಲ್ಲಿ ಮುಖ್ಯವಾಗಿರಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.
‘ದಿಯಾ’ ನಿರ್ಮಾಪಕ ಕೃಷ್ಣ ಚೈತನ್ಯ, ‘ವಾಮನ’ ನಿರ್ಮಾಪಕ ಚೇತನ್ ಗೌಡ ಅವರು ‘ಲೈಫ್ ಟುಡೇ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಿನಿಮಾ ಖಂಡಿತಾ ಗೆಲ್ಲಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಇದು ಈಗಿನ ತಲೆಮಾರಿನ ಜನರ ಕಥೆ ಇರುವ ಸಿನಿಮಾ ಎಂದು ನಾಯಕ ನಟ ಕಿರಣ್ ಆದಿತ್ಯ ಅವರು ಹೇಳಿದ್ದಾರೆ. ನಿರ್ದೇಶಕ ಕಾಂತ ಕನ್ನಲ್ಲಿ ಮಾತನಾಡಿ, ‘ಇದು ಇಂದಿನ ಹದಿಹರೆಯದ ಬದುಕುಗಳಿಗೆ ತೀರ ಹತ್ತಿರವಿರುವ ವಿಚಾರ. ಸಿನಿಮ್ಯಾಟಿಕ್ ಆಗಿ ಪ್ರೇಕ್ಷಕರ ಮನಮುಟ್ಟುವ ಪ್ರಯತ್ನ ಮಾಡಿದ್ದೇವೆ’ ಎಂದರು.
ಇದನ್ನೂ ಓದಿ: ಇದೇ ಕಾರಣಕ್ಕೆ ಕನ್ನಡ ಚಿತ್ರರಂಗ ಉದ್ದಾರ ಆಗಲ್ಲ: ‘ಕರಾವಳಿ’ ವಿವಾದಕ್ಕೆ ರಾಜ್ ಬಿ. ಶೆಟ್ಟಿ ಪ್ರತಿಕ್ರಿಯೆ
ನಟ ಕಾಕ್ರೋಚ್ ಸುಧಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಿರಿಯ ನಟ ತಬಲಾ ನಾಣಿ ಅವರು ಈ ಸಿನಿಮಾದಲ್ಲಿ ನಾಯಕಿಯ ತಂದೆಯ ಪಾತ್ರ ಮಾಡಿದ್ದಾರೆ. ಲೇಖಾ ಚಂದ್ರ ಅವರ ನಟನೆಯನ್ನು ಅವರು ಕೊಂಡಾಡಿದರು. ಸಿನಿಮಾದ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಇರಲಿದೆ ಎಂಬ ಸುಳಿವು ಸಿಕ್ಕಿದೆ. ಸದ್ಯಕ್ಕೆ ಟ್ರೇಲರ್ ಮೂಲಕ ಚಿತ್ರತಂಡದವರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.