‘ಭಾವಾಂತರ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ನಟಿ ತನ್ವಿ ರಾವ್

ಕನ್ನಡ ಕಿರುತೆರೆಯ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟಿ ತನ್ವಿ ರಾವ್, ಈಗ 'ಭಾವಾಂತರ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಾರ್ತಿಕ್ ಶರ್ಮಾ ನಿರ್ದೇಶನದ ಈ ವಿಶಿಷ್ಟ ಸಿನಿಮಾದಲ್ಲಿ ಅವರು ಡಾಕ್ಯುಮೆಂಟರಿ ಫಿಲ್ಮ್ ಮೇಕರ್ 'ರಾಧಾ' ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

‘ಭಾವಾಂತರ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ನಟಿ ತನ್ವಿ ರಾವ್
ತನ್ವಿ ರಾವ್

Updated on: Oct 08, 2026 | 3:20 PM

ಮುಖ್ಯಾಂಶಗಳು

  • ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ
  • 'ಭಾವಾಂತರ' ಚಿತ್ರದ ಮೂಲಕ ನಾಯಕಿಯಾದ ತನ್ವಿ ರಾವ್
  • ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಬಂದ 'ಲಕ್ಷ್ಮೀ ಬಾರಮ್ಮ' ತಾರೆ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ಬಾರಮ್ಮ’ ಮೂಲಕ ಕಿರುತೆರೆ ವೀಕ್ಷಕರಿಗೆ ಇಷ್ಟ ಆದವರು ತನ್ವಿ ರಾವ್. ಈಗ ಅವರು ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಶಾಲಾ ದಿನಗಳಲ್ಲೇ ಬಾಲಿವುಡ್‌ನ ‘ಗುಲಾಬ್ ಗ್ಯಾಂಗ್’, ‘ಗುಲ್‌ಮೊಹರ್’ ಮತ್ತು ‘ಗನ್ಸ್ ಆಫ್ ಬನಾರಸ್’ ಚಿತ್ರಗಳಲ್ಲಿ ನಟಿಸಿದ್ದ ಇವರು, ತಮಿಳಿನ ‘ರಾಧೇಶ್ಯಾಮ’ ಧಾರಾವಾಹಿಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಪ್ರಶಂಸೆ ಗಳಿಸಿದ್ದರು. ಪ್ರಾದೇಶಿಕ ಚಿತ್ರರಂಗದಿಂದ ಬಾಲಿವುಡ್‌ಗೆ ಹೋಗುವ ಬದಲು ಬಾಲಿವುಡ್‌ನಿಂದ ಬಂದು ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗುತ್ತಿರುವುದು ವಿಶೇಷ.

ಪ್ರತಿಭಾವಂತ ನಟ ಹಾಗೂ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಚಿತ್ರದ ಹೆಸರು ‘ಭಾವಾಂತರ’. ಈ ಚಿತ್ರದ ಮೂಲಕ ತನ್ವಿ ರಾವ್ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ತನ್ವಿ, ‘ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನನ್ನ ನಟನೆ ನೋಡಿ ಕಾರ್ತಿಕ್ ಶರ್ಮಾ ಅವರು ಈ ಕಥೆ ಹೆಣೆದಿದ್ದರು. ಕಥೆ ಕೇಳಿದಾಗ ನನಗೆ ತುಂಬಾ ವಿಶಿಷ್ಟ ಹಾಗೂ ಆಳವಾದ ಅನುಭವ ನೀಡಿತು. ನನ್ನ ಮೊದಲ ಹೆಜ್ಜೆಯಲ್ಲೇ ಇಷ್ಟೊಂದು ಅದ್ಭುತ ಕಥೆ ಮತ್ತು ಮಹತ್ವಾಕಾಂಕ್ಷೆಯ ಪಾತ್ರ ಸಿಕ್ಕಿರುವುದು ಅಪಾರ ಖುಷಿ ತಂದಿದೆ’ ಎಂದಿದ್ದಾರೆ.

ಚಿತ್ರದಲ್ಲಿ ತನ್ವಿ ರಾವ್ ‘ರಾಧಾ’ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ವಿವರಿಸಿದ ಅವರು, ‘ರಾಧಾ ವೃತ್ತಿಯಲ್ಲಿ ಒಬ್ಬ ಅಪ್ಪಟ ಡಾಕ್ಯುಮೆಂಟರಿ ಫಿಲ್ಮ್ ಮೇಕರ್. ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿಡುವ ಸ್ವಭಾವದ ಆಕೆಯ ಬದುಕಿನಲ್ಲಿ ನಡೆಯುವ ಒಂದು ಅನಿರೀಕ್ಷಿತ ಘಟನೆ ಹಾಗೂ ಅದರ ಸುತ್ತಲಿನ ವಿದ್ಯಮಾನಗಳೇ ಭಾವಾಂತರ ಚಿತ್ರದ ಪ್ರಮುಖ ಕಥಾಹಂದರ’ ಎಂದು ಚಿತ್ರದ ಎಳೆ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ‘ಲಕ್ಷ್ಮೀ ಬಾರಮ್ಮ’ ಕೊನೆ ಆಗುವುದಕ್ಕೂ ಮೊದಲು ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ

ಚಿತ್ರೀಕರಣ ಆರಂಭಕ್ಕೂ ಮುನ್ನ ನಟನೆ ಮತ್ತು ಪಾತ್ರದ ಬಗ್ಗೆ ಸುದೀರ್ಘ ವರ್ಕ್‌ಶಾಪ್ ನಡೆಸಲಾಗಿತ್ತು. ನಿರ್ದೇಶಕ ಕಾರ್ತಿಕ್ ಶರ್ಮಾ ಕಲಾವಿದರಿಗೆ ಅಭಿನಯದ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಸಿನಿಮಾವನ್ನು ರಿಯಲ್ ಲೊಕೇಶನ್‌ಗಳಲ್ಲೇ ಶೂಟ್ ಮಾಡಲಾಗಿದೆ. ‘ಭಾವಾಂತರ’ ಸಿನಿಮಾ ಶೀಘ್ರದಲ್ಲೇ ದೊಡ್ಡ ಪರದೆಯಲ್ಲಿ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us