
‘ಅಪ್ಪು ದೇವರ ಮಾಲೆ’ ಆಚರಣೆಯನ್ನು ಜಾರಿಗೆ ತರುವ ವಿಚಾರವನ್ನು ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳು ಇತ್ತೀಚೆಗೆ ಘೋಷಿಸಿದ್ದರು. ಅಯ್ಯಪ್ಪನ ಹೆಸರಲ್ಲಿ ಮಾಲೆ ಹಾಕಿಕೊಂಡಂತೆ ಪುನೀತ್ ರಾಜ್ಕುಮಾರ್ ಹೆಸರಲ್ಲಿ ಮಾಲೆ ಹಾಕಿಕೊಳ್ಳಲಾಗುತ್ತಿದೆ. ಮಾಲೆ ಹಾಕಿಕೊಂಡವರು ಹಲವು ಬಗೆಯ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ಮಾರ್ಚ್1ರಿಂದ ಆರಂಭ ಆಗುವ ಈ ಆಚರಣೆ ಪುನೀತ್ ರಾಜ್ಕುಮಾರ್ ಜನ್ಮದಿನ ಮಾರ್ಚ್ 17ಕ್ಕೆ ಕೊನೆಗೊಳ್ಳಲಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ. ಒಳ್ಳೆ ಹುಡುಗ ಪ್ರಥಮ್ ಕೂಡ ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ. ‘ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ’ ಎಂದು ಕೋರಿದ್ದಾರೆ.
ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ಅಕ್ಷರಶಃ ಆರಾಧಿಸುತ್ತಿದ್ದಾರೆ. ಅಪ್ಪು ನಿಧನ ಹೊಂದಿದ ನಂತರದಲ್ಲಿ ಅನೇಕರು ದೇವರ ಕೋಣೆಯಲ್ಲಿ ಅವರ ಫೋಟೋ ಇಟ್ಟು ಪೂಜೆ ಮಾಡಿದ ಉದಾಹರಣೆ ಇದೆ. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೊಸಪೇಟೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ಇದೆ. ಹೊಸಪೇಟೆಯ ಅಪ್ಪು ಅಭಿಮಾನಿಗಳ ಸಂಘದವರು ಈ ಮಾಲೆ ಧರಿಸುತ್ತಿದ್ದಾರೆ. ಮಾರ್ಚ್ 1ರಿಂದ ಅಭಿಮಾನಿಗಳು ಮಾಲೆ ಹಾಕಬಹುದು. ಮಾರ್ಚ್ 17ರ ತನಕ ವ್ರತ ಆಚರಿಸಬೇಕು. ಮಾರ್ಚ್ 18ರಂದು ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಬೇಕು. ಇದಕ್ಕೆ ಸಂಬಂಧಿಸಿದ ಕರಪತ್ರ ಒಂದು ವೈರಲ್ ಆಗಿತ್ತು. ಇದನ್ನು ಕೆಲವರು ವಿರೋಧಿಸಿದ್ದಾರೆ.
‘ದೇವರ ಮೇಲೆ ಭಕ್ತಿ ಇರಲಿ. ಕಲಾವಿದರ ಮೇಲೆ ಪ್ರೀತಿ, ಅಭಿಮಾನವಿರಲಿ. ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನು ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು. ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ. ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು. ದೇವರು-ದೇವರೇ, ಕಲಾವಿದರು-ಕಲಾವಿದರೇ’ ಎಂದು ಪ್ರಥಮ್ ಅವರು ಬರೆದುಕೊಂಡಿದ್ದಾರೆ.
ಇದನ್ನು ಅನೇಕರು ಬೆಂಬಲಿಸಿದ್ದಾರೆ. ಇನ್ನೂ ಕೆಲವರು ಅಪ್ಪು ನಮಗೆ ದೇವರೇ ಎಂದಿದ್ದಾರೆ. ‘ಹಸಿದಾಗ ಅನ್ನ ಹಾಕಿದಾವನೇ ದೇವರು. ಕಷ್ಟ ಅಂತ ಬಂದಾಗ ಸಹಾಯ ಮಾಡುವನೇ ದೇವರು. ಈ ಕೆಲಸ ಅಪ್ಪು ಅವರು ಮಾಡಿದ್ದಾರೆ. ಅದಕ್ಕೆ ಜನರು ದೇವರು ತರ ಪೂಜೆ ಮಾಡುತ್ತಾ ಇದ್ದಾರೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:17 am, Fri, 24 February 23