ಜನಪ್ರಿಯ ಯೂಟ್ಯೂಬರ್ ಹರ್ಷ ಸಾಯಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

|

Updated on: Sep 25, 2024 | 6:13 PM

Harsha Sai: ತೆಲುಗಿನ ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ಆಕೆಯ ಪರಿಚಯದ ಯುವತಿಯೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಜೊತೆಗೆ ಎರಡು ಕೋಟಿ ರೂಪಾಯಿ ಹಣ ವಂಚಿಸಿದ್ದಾರೆ ಎಂದು ಸಹ ಯುವತಿ ಆರೋಪಿಸಿದ್ದಾರೆ.

ಜನಪ್ರಿಯ ಯೂಟ್ಯೂಬರ್ ಹರ್ಷ ಸಾಯಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
Follow us on

ತೆಲುಗಿನ ಜನಪ್ರಿಯ ಯೂಟ್ಯೂಬರ್ ಹರ್ಷಾ ಸಾಯಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಲಾಗಿದೆ. ನಟಿಯೊಬ್ಬಾಕೆ ಹರ್ಷ ವಿರುದ್ಧ ದೂರು ನೀಡಿದ್ದಾರೆ. ಹರ್ಷ ಸಾಯಿ, ಯೂಟ್ಯೂಬ್ ವಿಡಿಯೋಗಳಲ್ಲಿ ಬಡವರಿಗೆ ಹಣಕಾಸು ಸಹಾಯ ಮಾಡುವ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಬಡವರನ್ನು ಗುರುತಿಸಿ ಅವರಿಗೆ ಆಶ್ಚರ್ಯ ಆಗುವ ರೀತಿಯಲ್ಲಿ ಹಣ ಸಹಾಯ ಮಾಡುವುದು, ಅವರ ಗುಡಿಸಲನ್ನು ಮನೆಯಾಗಿ ಪರಿವರ್ತನೆ ಮಾಡುವುದು ಹೀಗೆ ಮಾಡುತ್ತ ಅವುಗಳ ವಿಡಿಯೋಗಳನ್ನು ಚಿತ್ರೀಕರಿಸಿ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಈ ಯೂಟ್ಯೂಬರ್​ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವೇ ಇದೆ.

ಹರ್ಷ ಸಾಯಿ ಒಂದು ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದರು, ಅದೇ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದ ನಟಿಯೇ ಈಗ ಹರ್ಷ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಮೋಸದ ಆರೋಪ ಹೊರಿಸಿದ್ದಾರೆ. ಯುವತಿ ನೀಡಿರುವ ದೂರಿನಂತೆ, ಹರ್ಷ ಸಾಯಿ ಹಾಗೂ ಯುವತಿ ಪಾರ್ಟಿಯೊಂದರಲ್ಲಿ ಮೀಟ್ ಆಗಿದ್ದರಂತೆ. ಆ ನಂತರ ಇಬ್ಬರ ನಡುವೆ ಪರಿಚಯ ಬೆಳೆದಿದೆ. ಬಳಿಕ ಇಬ್ಬರೂ ಯೂಟ್ಯೂಬ್​ಗಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಬಳಿಕ ಹರ್ಷಾ ಸಾಯಿ ಯುವತಿ ಸೇರಿ ಸಿನಿಮಾ ನಿರ್ಮಾಣ ಮಾಡಿದರಂತೆ. ಆ ಸಮಯದಲ್ಲಿ ಹರ್ಷ ಸಾಯಿ ತಮ್ಮಿಂದ ಎರಡು ಕೋಟಿ ಹಣ ಪಡೆದಿದ್ದಾರೆ ಎಂದು ಸಹ ಯುವತಿ ಆರೋಪ ಮಾಡಿದ್ದಾರೆ.

ಹರ್ಷ ಸಾಯಿ, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದಿರುವ ಯುವತಿ, ತನ್ನ ಬೆತ್ತಲೆ ಫೋಟೊ, ವಿಡಿಯೋಗಳನ್ನು ತೆಗೆದುಕೊಂಡು ನನ್ನನ್ನು ಬ್ಲಾಕ್ ಮೇಲ್ ಸಹ ಮಾಡುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ನರ್ಸಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದ್ದು, ಹರ್ಷಾ ಸಾಯಿ ಬಂಧನ ಇನ್ನೂ ಆಗಿಲ್ಲ.

ಇದನ್ನೂ ಓದಿ:ತಂದೆ-ಮಗಳ ಬಗ್ಗೆ ಅಸಭ್ಯ ಜೋಕ್: ಯೂಟ್ಯೂಬರ್ ವಿರುದ್ಧ ತೀವ್ರ ಆಕ್ರೋಶ

ಈ ನಡುವೆ ಹರ್ಷಾ ಸಾಯಿ ಪರ ವಕೀಲರು ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಯುವತಿ, ಉದ್ದೇಶಪೂರ್ವಕವಾಗಿ ಹರ್ಷ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಯುವತಿಯು ಹರ್ಷ ಬಳಿ ಹಣ ಕೇಳಿದ್ದರು ಆದರೆ ಹಣ ಕೊಡದೇ ಇರುವ ಕಾರಣಕ್ಕೆ ಆರೋಪ ಮಾಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಸಾಕ್ಷ್ಯಗಳು ತಮ್ಮ ಬಳಿ ಇರುವುದಾಗಿ ಹೇಳಿದ್ದಾರೆ.

ಹರ್ಷ ಸಾಯಿ, ತಮ್ಮ ಸಮಾಜ ಸೇವಾ ವಿಡಿಯೋಗಳಿಂದ ಬಹಳ ಜನಪ್ರಿಯರು. ಬಡವರಿಗೆ ಸಹಾಯ ಮಾಡುತ್ತ ಅದನ್ನು ವಿಡಿಯೋ ಮಾಡಿ ಯೂಟ್ಯೂಬ್​ನಲ್ಲಿ ಹಂಚಿಕೊಳ್ಳುತ್ತಿದ್ದರು. ಖ್ಯಾತ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ರೀತಿಯಲ್ಲಿಯೇ ದೊಡ್ಡ ಸೆಟ್​ಗಳನ್ನು ನಿರ್ಮಿಸಿ ಜನರನ್ನು ಕರೆಸಿ ಗೇಮ್ಸ್ ಆಡಿಸಿ ಅವರಿಗೆ ಹಣ ನೀಡುವುದು, ಇಡೀ ಊರಿಗೆಲ್ಲ ಪೆಟ್ರೋಲ್ ಉಚಿತವಾಗಿ ಕೊಡುವುದು ಹೀಗೆ ವಿವಿಧ ರೀತಿಯ ಸ್ಟಂಟ್​ಗಳನ್ನು ಮಾಡಿ ಅದರ ವಿಡಿಯೋ ಹಂಚಿಕೊಳ್ಳುತ್ತಿದ್ದರು. ಹರ್ಷ ಸಾಯಿಗೆ ಲಕ್ಷಾಂತರ ಸಬ್​ಸ್ಕ್ರೈಬರ್​ಗಳು ಇದ್ದಾರೆ. ತಮ್ಮ ವಿಡಿಯೋಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡಿ ಸಹ ಬಿಡುಗಡೆ ಮಾಡುತ್ತಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ