
ಚಿತ್ರರಂಗದ ಮಾದರಿ ದಂಪತಿ ಎನಿಸಿಕೊಂಡಿರುವ ತಮಿಳಿನ ಸ್ಟಾರ್ ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ವಿಭಿನ್ನ ಹಾಗೂ ರೋಮ್ಯಾಂಟಿಕ್ ಆಗಿ ಆಚರಿಸಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಈ ಜೋಡಿ ಮತ್ತೆ ಮದುವೆ ಪ್ರಮಾಣ ವಚನವನ್ನು ಸ್ವೀಕರಿಸುವ ಮೂಲಕ ತಮ್ಮ ಪ್ರೇಮ ಪಯಣದ ಸೀಕ್ವೆಲ್ ಅನಾವರಣಗೊಳಿಸಿದ್ದಾರೆ.
ವಿದೇಶದ ಚರ್ಚ್ ಒಂದರಲ್ಲಿ ನಡೆದ ಈ ಸುಂದರ ಸಮಾರಂಭದಲ್ಲಿ ಸೂರ್ಯ ಸೂಟ್ ಧರಿಸಿ ಮಿಂಚಿದರೆ, ಜ್ಯೋತಿಕಾ ಬಿಳಿ ಬಣ್ಣದ ವೆಡ್ಡಿಂಗ್ ಗೌನ್‌ನಲ್ಲಿ ಕಂಗೊಳಿಸಿದರು. ಈ ದಂಪತಿಯ ಮಕ್ಕಳಾದ ದಿಯಾ ಹಾಗೂ ದೇವ್ ತಮ್ಮ ತಂದೆ-ತಾಯಿಯ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿ, ಮದುವೆಯ ವಿಧಿವಿಧಾನಗಳಲ್ಲಿ ಜೊತೆಯಾಗಿ ನಿಂತಿದ್ದು ವಿಶೇಷವಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಜ್ಯೋತಿಕಾ, ‘ನಮ್ಮ 20 ವರ್ಷಗಳ ಪ್ರೀತಿ ಮತ್ತು ಜಗಳದ ಪಯಣದ ಸಂಭ್ರಮವಿದು. ಇದು ಯಾವುದೇ ಪರಿಪೂರ್ಣ ಮದುವೆಯ ಆಚರಣೆಯಲ್ಲ, ಬದಲಿಗೆ ನಮ್ಮ ನಡುವಿನ ಸಣ್ಣಪುಟ್ಟ ಕೊರತೆಗಳು, ಹೊಂದಾಣಿಕೆಗಳು, ಅರ್ಥಮಾಡಿಕೊಳ್ಳುವಿಕೆ, ತ್ಯಾಗ ಹಾಗೂ ಪರಸ್ಪರ ತೋರಿದ ನಿಸ್ವಾರ್ಥ ಪ್ರೀತಿಯ ಆಚರಣೆ. ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ನಾವು ಬೆಳೆದುಬಂದ ಹಾದಿಯ ಸಂಭ್ರಮವಿದು’ ಎಂದು ಅತ್ಯಂತ ಭಾವುಕವಾಗಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ರೋಮ್ಯಾಂಟಿಕ್ ವಿಡಿಯೋಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ನೆಟ್ಟಿಗರು ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ ಮೂರನೇ ಹಿಟ್ ಸಿನಿಮಾ ಕೊಡಲು ಸಜ್ಜಾದ ಸೂರ್ಯ
ಹಿಂದಿ ಸಿನಿಮಾ ಮಾಡುವ ಕಾರಣಕ್ಕೆ ಹಾಗೂ ಮಕ್ಕಳನ್ನು ನೋಡುವ ಉದ್ದೇಶದಿಂದ ಜ್ಯೋತಿಕಾ ಸದ್ಯ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ ಎನ್ನಲಾಗಿದೆ. ಇಷ್ಟು ವರ್ಷಗಳ ಕಾಲ ಜ್ಯೋತಿಕಾ ಹಲವು ತ್ಯಾಗ ಮಾಡಿದ್ದಾರೆ ಎಂಬುದು ಸೂರ್ಯ ಅವರ ಅಭಿಪ್ರಾಯ. ಈ ಕಾರಣಕ್ಕೆ ಅವರು ಕೂಡ ಜ್ಯೋತಿಕಾ ಜೊತೆ ಮುಂಬೈಗೆ ಶಿಫ್ಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.