
ಬಿಗ್ಬಾಸ್ ಮನೆಯಲ್ಲಿ ಈ ವಾರ ಆಸಕ್ತಿಕರ ಟಾಸ್ಕುಗಳಿದ್ದವು. ವಾರದ ಆರಂಭದಲ್ಲಿಯೇ ಮೂವರು ಯುವರಾಣಿಯರನ್ನು ಆಯ್ಕೆ ಮಾಡಲಾಗಿತ್ತು. ಆಸಿಯಾ, ಸೌಂದರ್ಯಾ ಮತ್ತು ಗಾನವಿ, ಮೂವರು ಯುವರಾಣಿಯರು ಮಹಾರಾಣಿ ಆಗಲು ಸ್ಪರ್ಧೆ ಮಾಡಬೇಕಿತ್ತು. ನಡುವೆ ಹಲವು ಬೇರೆ ಬೇರೆ ರೀತಿಯ ಟಾಸ್ಕುಗಳನ್ನು ಬಿಗ್ಬಾಸ್ ನೀಡಿದರು. ಆರಂಭದಿಂದಲೇ ಮನೆಯ ಸದಸ್ಯರ ಸಾಕಷ್ಟು ವಿರೋಧ ಇದ್ದರೂ ಸಹ ಅಂತಿಮವಾಗಿ ಗಾನವಿ ವಿಜೇತರಾಗಿದ್ದು ಗಾನವಿ ಈಗ ಬಿಗ್ಬಾಸ್ ಮನೆಯ ಮಹಾರಾಣಿ ಆಗಿದ್ದಾರೆ.
ಸೌಂದರ್ಯಾರನ್ನು ಆಸಿಯಾ ನಾಮಿನೇಟ್ ಮಾಡುವ ಮೂಲಕ ಅವರನ್ನು ಮಹಾರಾಣಿ ರೇಸಿನಿಂದ ಹೊರಗೆ ಹಾಕಿದರು. ಉಳಿದಿದ್ದು ಆಸಿಯಾ ಮತ್ತು ಗಾನವಿ. ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು, ಗಾನವಿಯ ಮಹಾರಾಣಿ ಅನ್ನಾಗಿಸಲು ಗಗನ್ ಮತ್ತು ಆಸಿಯಾ ಪರವಾಗಿ ಪ್ರಶಾಂತ್ ಟಾಸ್ಕ್ ಆಡಿದರು. ಮರಗಳ ದಿಮ್ಮೆಗಳನ್ನು ಹುಡುಕಿ ತಂದು ಅದನ್ನು ಜೋಡಿಸುವ ಟಾಸ್ಕ್ನಲ್ಲಿ ಗಗನ್, ಪ್ರಶಾಂತ್ಗೆ ಸಿಗಬೇಕಿದ್ದ ಮರದ ತುಂಡನ್ನು ಬಚ್ಚಿಟ್ಟರು. ಈ ಕಾರಣದಿಂದಾಗಿ ಆಸಿಯಾ ಟಾಸ್ಕ್ನಲ್ಲಿ ಸೋತು, ಗಾನವಿ ವಿಜೇತರಾಗಿ ಮಹಾರಾಣಿ ಆದರು. ಆಸಿಯಾ ಹಲವು ಬಾರಿ ಫೈನಲ್ ವರೆಗೆ ಬಂದು ಸೋತರು. ಈಗ ಮತ್ತೊಮ್ಮೆ ಅವರಿಗೆ ಸೋಲು ಎದುರಾಯ್ತು.
ಮಹಾರಾಣಿ ಆದ ಗಾನವಿಯನ್ನು ಮನೆ ಸದಸ್ಯರು ಹೂವನ್ನು ಚೆಲ್ಲುತ್ತಾ ಮೆರವಣಿಗೆ ಮಾಡಿ ಅವರನ್ನು ಮಹಾರಾಣಿಯ ಸಿಂಹಾಸನದ ಮೇಲೆ ಕೂರಿಸಿದರು. ಮಹಾರಾಣಿ ಪರವಾಗಿ ಆಡಿದ ಗಗನ್, ಮಹಾರಾಣಿಗೆ ಪಟ್ಟಾಭಿಷೇಕ ಮಾಡಿದರು. ಬಳಿಕ ಬಿಗ್ಬಾಸ್, ಗಾನವಿಯನ್ನು ಮನೆಯ ಕ್ಯಾಪ್ಟನ್ ಆಗಿ ಘೋಷಿಸಿದರು. ಮಹಾರಾಣಿ ಪರವಾಗಿ ಆಡಿದ ಗಗನ್ ಅನ್ನೂ ಸಹ ಕ್ಯಾಪ್ಟನ್ ಮಾಡಿದರು. ಆ ಮೂಲಕ ಈ ವಾರ ಬಿಗ್ಬಾಸ್ ಮನೆಗೆ ಇಬ್ಬರು ಕ್ಯಾಪ್ಟನ್ಗಳಾದರು. ಇಬ್ಬರೂ ಒಟ್ಟಿಗೆ ಸೇರಿ ಮನೆಯನ್ನು ನಡೆಸಬೇಕಿದೆ.
ಇದನ್ನೂ ಓದಿ:ಇದೇ ಮೊದಲು: ಬಿಗ್ಬಾಸ್ ಮನೆಯಲ್ಲಿ ನಡೆಯಿತು ಮದುವೆ ನಿಶ್ಚಿತಾರ್ಥ
ಅಸಲಿಗೆ ವಾರದ ಆರಂಭದಲ್ಲಿ ಗಾನವಿ ಮಹಾರಾಣಿ ಆಗಬಾರದೆಂದು ಮನೆಯ ಹಲವಾರು ಮಂದಿ ಮತ ಚಲಾಯಿಸಿದ್ದರು. ಆದರೆ ಅಂತಿಮವಾಗಿ ಗಾನವಿಯೇ ಮನೆಯ ಮಹಾರಾಣಿ ಹಾಗೂ ಕ್ಯಾಪ್ಟನ್ ಆಗಿದ್ದಾರೆ. ಗಾನವಿ ಈ ವಾರ ಮನೆಯನ್ನು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ