ಸೂಟು-ಬೂಟು ಧರಿಸುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ವಿಜಯ್; ಕಾರಣ ಬೇರೆಯೇ ಇದೆ

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಸಾಂಪ್ರದಾಯಿಕ ಉಡುಗೆ ಬದಲಿಗೆ ಕಪ್ಪು-ಬಿಳಿ ಸೂಟ್ ಧರಿಸಿ ಗಮನ ಸೆಳೆದಿದ್ದರು. ಈ ಉಡುಗೆ ಶೈಲಿ ಬಗ್ಗೆ ಭಾರಿ ಚರ್ಚೆಯಾದಾಗ, ವಿಜಯ್ 'ಸರಳತೆ ಮತ್ತು ಪಾರದರ್ಶಕತೆ' ಪ್ರತೀಕವಾಗಿ ಇದನ್ನು ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. 'ಬೀಸ್ಟ್' ಸಿನಿಮಾ ಪ್ರೇರಿತ ಈ ಸೂಟ್ ಅನ್ನು ಜಾಫಿರ್ ಮತ್ತು ಶಾದಾಬ್ ವಿನ್ಯಾಸಗೊಳಿಸಿದ್ದರು. ವಿಜಯ್ ವಿರೋಧ ಪಕ್ಷಗಳಿಗೂ ತಿರುಗೇಟು ನೀಡಿದ್ದಾರೆ.

ಸೂಟು-ಬೂಟು ಧರಿಸುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ವಿಜಯ್; ಕಾರಣ ಬೇರೆಯೇ ಇದೆ
ವಿಜಯ್

Updated on: Jun 02, 2026 | 8:28 AM

ನಟನೆಯಿಂದ ರಾಜಕೀಯಕ್ಕೆ ಬಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಇತ್ತೀಚೆಗೆ ತಾವು ಹಾಕುವ ಉಡುಗೆ ಮೂಲಕ ಸುದ್ದಿಯಲ್ಲಿದ್ದರು. ಸಾಮಾನ್ಯವಾಗಿ ತಮಿಳುನಾಡು ರಾಜಕಾರಣಿಗಳು ಧರಿಸುವ ಸಾಂಪ್ರದಾಯಿಕ ಬಿಳಿ ಶರ್ಟ್ ಮತ್ತು ಪಂಚೆ ಬದಲಿಗೆ, ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಕಪ್ಪು ಮತ್ತು ಬಿಳಿ ಬಣ್ಣದ ಕೋಟ್-ಸೂಟ್ ಧರಿಸಿ ಗಮನ ಸೆಳೆದಿದ್ದರು. ಆ ಬಳಿಕ ನಡೆದ ಎಲ್ಲಾ ಸರ್ಕಾರಿ ಸಭೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಅವರು ಇದೇ ಶೈಲಿಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಿಎಂ ವಿಜಯ್ ಅವರೇ ಈ ಚರ್ಚೆಗಳಿಗೆ ಖುದ್ದಾಗಿ ಉತ್ತರಿಸಿದ್ದಾರೆ.

‘ನಾವು ಕೋಟ್ ಹಾಕಬಾರದೇ?’: ವಿಜಯ್ ಪ್ರಶ್ನೆ

ತಿರುಚಿರಾಪಳ್ಳಿಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ ಪಕ್ಷದ ಬೃಹತ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, ತಮ್ಮ ಉಡುಪಿನ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ‘ನಾವು ಕೋಟ್ ಮತ್ತು ಸೂಟ್ ಧರಿಸಬಾರದೇ? ಅದು ಕೇವಲ ಅಧಿಕಾರದಲ್ಲಿರುವ ದೊಡ್ಡ ಜನರಿಗೆ ಮಾತ್ರ ಸೀಮಿತವೇ? ಅಂತಹದ್ದೇನೂ ಇಲ್ಲ. ನಾನು ಹತ್ತಾರು ಬಣ್ಣಗಳ ಉಡುಪು ಧರಿಸುತ್ತಿಲ್ಲ. ನಮ್ಮೆಲ್ಲರ ಹೃದಯದಂತೆ ಕೇವಲ ಕಪ್ಪು ಮತ್ತು ಬಿಳಿ ಬಣ್ಣದ ಉಡುಪನ್ನು ಮಾತ್ರ ಧರಿಸುತ್ತಿದ್ದೇನೆ. ಆಡಳಿತದಲ್ಲಿ ನಾನು ಅತ್ಯಂತ ಸರಳವಾಗಿ ಮತ್ತು ಪಾರದರ್ಶಕವಾಗಿ ಇರುತ್ತೇನೆ ಎಂಬುದನ್ನು ತೋರಿಸಲು ಈ ಬ್ಲ್ಯಾಕ್ ಆ್ಯಂಡ್ ವೈಟ್ ಸೂಟ್ ಧರಿಸುತ್ತಿದ್ದೇನೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಂದ ಭರಪೂರ ಚಪ್ಪಾಳೆ ಗಿಟ್ಟಿಸಿಕೊಂಡರು.

ವಿಜಯ್ ವೈರಲ್ ಸ್ಯೂಟ್ ಡಿಸೈನ್ ಮಾಡಿದ್ದು ಯಾರು?

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ವಿಜಯ್ ಧರಿಸಿದ್ದ ಈ ಕಪ್ಪು ಬಣ್ಣದ ಸ್ಯೂಟ್, ಅವರು ನಟಿಸಿದ್ದ ‘ಬೀಸ್ಟ್’ ಸಿನಿಮಾದ ರಾ ಏಜೆಂಟ್ ಲುಕ್‌ನಿಂದ ಪ್ರೇರಿತವಾಗಿದೆ ಎನ್ನಲಾಗಿದೆ. ಈ ಐಕಾನಿಕ್ ಉಡುಪನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳಾದ ‘ಜಾಫಿರ್ ಮತ್ತು ಶಾದಾಬ್’ ವಿನ್ಯಾಸಗೊಳಿಸಿದ್ದಾರೆ. .

ವಿರೋಧ ಪಕ್ಷಗಳಿಗೆ ದಳಪತಿ ತಿರುಗೇಟು

ಇದೇ ವೇದಿಕೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ವಿಜಯ್, ‘ನಾವು ಅಧಿಕಾರಕ್ಕೆ ಬಂದು ಇನ್ನು ಕೆಲವು ವಾರಗಳೂ ಆಗಿಲ್ಲ. ಆರು ತಿಂಗಳು ಸುಮ್ಮನಿರುತ್ತೇವೆ ಎಂದವರು ಆರು ದಿನವೂ ಕಾಯದೆ, ಅಧಿಕಾರ ವಹಿಸಿಕೊಂಡ ಅರ್ಧ ಗಂಟೆಯಲ್ಲೇ ದೂರು ನೀಡಲು ಆರಂಭಿಸಿದ್ದಾರೆ. ಇಷ್ಟು ವರ್ಷಗಳ ಕಾಲ ತಮಿಳುನಾಡನ್ನು ಆಳುತ್ತಾ ಜನರನ್ನು ವಂಚಿಸಿದ ಎರಡು ಪ್ರಮುಖ ಪಕ್ಷಗಳನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ನೀವು ವಿಜಯ್‌ನನ್ನು ಕೇವಲ ಮುಖ್ಯಮಂತ್ರಿಯಾಗಿ ಅಲ್ಲ, ನಿಮ್ಮ ಮನೆಯ ಅಣ್ಣನಾಗಿ, ತಮ್ಮನಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವ ಮುಖ್ಯ ಸೇವಕನಾಗಿ ಆಯ್ಕೆ ಮಾಡಿದ್ದೀರಿ. ನಿಮ್ಮ ಈ ಬೆಂಬಲಕ್ಕೆ ನಾನು ಸದಾ ಚಿರಋಣಿ’ ಎಂದು ಭಾವುಕರಾಗಿ ನುಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us