Ganesh Chaturthi: 20 ಅಡಿ ಎತ್ತರದ ವಾಟರ್‌ ಬಾಟಲ್‌ ಗಣಪತಿ ಪ್ರತಿಷ್ಠಾಪನೆ, ಬೆಲ್ಲದ ಗಣೇಶನಿಗೆ ಸಖತ್ ಡಿಮ್ಯಾಂಡ್

| Updated By: Rakesh Nayak Manchi

Updated on: Aug 31, 2022 | 8:53 AM

ಬಾಗಲಕೋಟೆ ಮತ್ತು ಮಂಡ್ಯದಲ್ಲಿ ಕ್ರಮವಾಗಿ ವಾಟರ್ ಬಾಟಲ್ ಗಣಪತಿ ಮತ್ತು ಬೆಲ್ಲದ ಗಣಪತಿಯನ್ನು ಸಿದ್ಧಪಡಿಸಲಾಗಿದೆ. 20 ಅಡಿ ಬಾಟಲ್ ಗಣಪತಿ ಹಾಗೂ ಬೆಲ್ಲದಲ್ಲಿ ತಯಾರಿಸಿದ ಗಣೇಶ ಸದ್ಯ ಜನರನ್ನು ತನ್ನತ್ತ ಸೆಳೆಯುತ್ತಿದ್ದಾನೆ.

Ganesh Chaturthi: 20 ಅಡಿ ಎತ್ತರದ ವಾಟರ್‌ ಬಾಟಲ್‌ ಗಣಪತಿ ಪ್ರತಿಷ್ಠಾಪನೆ, ಬೆಲ್ಲದ ಗಣೇಶನಿಗೆ ಸಖತ್ ಡಿಮ್ಯಾಂಡ್
20 ಅಡಿ ಎತ್ತರದ ವಾಟರ್ ಬಾಟಲ್ ಗಣಪತಿ ಮತ್ತು ಬೆಲ್ಲದಿಂದ ತಯಾರಿಸಿದ ಗೌರಿ ಗಣೇಶನ ವಿಗ್ರಹಗಳು
Follow us on

ರಾಜ್ಯಾದ್ಯಂತ ಗಣೇಶನ ಹಬ್ಬದ ಪ್ರಯುಕ್ತ ಅದ್ಧೂರಿ ಆಚರಣೆಗಳು ಆರಂಭಗೊಂಡಿದ್ದು, ಜನರ ಮನೆಮನಗಳಲ್ಲಿ ಸಂಭ್ರಮ ಸಡಗರದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಮಾರುಕಟ್ಟೆಗಳಲ್ಲಿ ಖರೀದಿಗಳು ಜೋರಾಗಿಯೇ ನಡೆಯುತ್ತಿದೆ. ಹಲವೆಡೆ ಪರಿಸರ ಸ್ನೇಹಿ ಗಣಪನನ್ನು ಕೂರಿಸಿ ಪೂಜೆ ಪುನಸ್ಕಾರ ಮಾಡಲಾಗುತ್ತಿದೆ. ಈ ಬಾರಿ ಬಾಗಲಕೋಟೆ ಮತ್ತು ಮಂಡ್ಯದಲ್ಲಿ ಕ್ರಮವಾಗಿ ವಾಟರ್ ಬಾಟಲ್ ಗಣಪತಿ ಮತ್ತು ಬೆಲ್ಲದ ಗಣಪತಿಯನ್ನು ಸಿದ್ಧಪಡಿಸುವ ಮೂಲಕ ಪರಿಸರ ಸ್ನೇಹಿ ಹಬ್ಬದ ಆಚರಣೆಯ ಸಂದೇಶವನ್ನು ರವಾನಿಸಲಾಗುತ್ತಿದೆ. 20 ಅಡಿ ಎತ್ತರದ ವಾಟರ್ ಬಾಟಲ್ ಗಣೇಶ ಸದ್ಯ ಜನರನ್ನು ಆಕರ್ಷಿಸುತ್ತಿದ್ದು, ಮಂಡ್ಯದಲ್ಲಿ ಬೆಲ್ಲದ ಗಣಪನಿಗೆ ಜನರಿಂದ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ.

ಬಾಗಲಕೋಟೆಯ ಇಳಕಲ್ ನಗರದಲ್ಲಿ ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ನಿರುಪಯುಕ್ತ ಬಾಟಲ್​ಗಳನ್ನು ಬಳಸಿಕೊಂಡು ಗಣಪತಿಯ ವಿಗ್ರಹವನ್ನು ನಿರ್ಮಾಣ ಮಾಡಿದ್ದಾರೆ. ಬೀದಿ ಬದಿಯಲ್ಲಿ, ಡಾಬಾ, ಹೊಟೆಲ್​ಗಳಿಗೆ ಭೇಟಿಕೊಟ್ಟ ವಿದ್ಯಾರ್ಥಿಗಳು ನಿರುಪಯುಕ್ತ ಬಾಟಲ್​ಗಳನ್ನು ಸಂಗ್ರಹಿಸಿ ಕಲರ್ ಫುಲ್ ಗಣಪತಿಯ ವಿಗ್ರಹವನ್ನು ತಯಾರಿಸಿದ್ದಾರೆ.

ವಿವಿಧ ಕಡೆಗಳಿಂದ ಬಾಟಲ್​ಗಳನ್ನು ಸಂಗ್ರಹ ಮಾಡಿ ತಿಂಗಳಾನುಗಟ್ಟಲೆ ಸಂಗ್ರಹಿಸಿ ಶುಚಿಗೊಳಿಸಿ ಪೂಜೆಗೆ ಯೋಗ್ಯ ಮಾಡಿ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದ್ದು, ಗಣೇಶನ ನಾಲ್ಕು ಕೈಗಳಲ್ಲಿ ಬಟ್ಟೆಯಲ್ಲಿ ಹೊಲಿದ ಕೈಚಿಲಗಳನ್ನು ಇಡುವ ಮೂಲಕ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್​ಗಳನ್ನು ಬಳಕೆ ಮಾಡದಂತೆ ಸಂದೇಶವನ್ನು ರವಾನಿಸಲಾಗುತ್ತಿದೆ.

ಪ್ರಾಚಾರ್ಯ ರಾಜು ಗವಿಮಠ ಅವರ ಮಾರ್ಗದರ್ಶನದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿರಂತರವಾಗಿ 10 ದಿನಗಳ ಕಾಲ ಹಾಕಿದ ಶ್ರಮದಿಂದಾಗಿ 20 ಅಡಿಯ ಗಣೇಶನ ವಿಗ್ರಹ ನಿರ್ಮಾಣ ಮಾಡಲಾಗಿದ್ದು, ನಗರದ ಜೋಶಿಗಲ್ಲಿಯ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಆವರಣದಲ್ಲಿ ಇದನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನು ರವಾನಿಸಲು ಈ ಹಿಂದೆ ವಿಜಯ ಚಿತ್ರಕಲಾ ಮಹಾವಿದ್ಯಾಲಯದಿಂದ ಗ್ರಾನೈಟ್‌ ಗಣಪ, ಗ್ಯಾರೇಜ್‌ ಗಣಪ, ಬಳೆಚೂರು ಗಣಪ, ನ್ಯೂಸ್‌ ಪೇಪರ್‌ ಗಣಪ, ಸ್ವದೇಶಿ ಕಡ್ಡಿಪಟ್ಟಣ ಗಣಪ, ವಾಕ್ಸಿನ್‌, ಸಂತ್ರಸ್ಥರ ರಕ್ಷಣ ಗಣೇಶ, ಓಝೋನ್‌ ಗಣೇಶ ತಯಾರಿಸಲಾಗಿತ್ತು.

ಬೆಲ್ಲದ ಗಣಪನಿಗೆ ಫುಲ್ ಡಿಮ್ಯಾಂಡ್

ಬಾಗಲಕೋಟೆಯಲ್ಲಿ ಬಾಟಲ್ ಗಣಪ ಆಕರ್ಷಿಸುತ್ತಿದ್ದರೆ ಇತ್ತ ಮಂಡ್ಯದಲ್ಲಿ ವಿನೂತನವಾಗಿ ಬೆಲ್ಲದಲ್ಲಿ ತಯಾರಾದ ಗಣಪ ಜನರನ್ನು ತನ್ನತ್ತ ಆಕರ್ಷಿಸುತ್ತಿದ್ದಾನೆ. ಕೃಷಿ ಇಲಾಖೆ ಹಾಗೂ ವಿಕಸನ ಸಂಸ್ಥೆಯಡಿ ಬೆಲ್ಲದ ಅಚ್ಚಿಯ ಮೂಲಕ ಈ ಪರಿಸರ ಸ್ನೇಹಿ ಗೌರಿ ಗಣೇಶನ ವಿಗ್ರಹಗಳನ್ನು ನಿರ್ಮಾಣ ಮಾಡಲಾಗಿದ್ದು, ಮಂಡ್ಯದ 100 ಫೀಟ್ ರಸ್ತೆಯಲ್ಲಿ ಮಾರಾಟವಾಗುತ್ತಿದೆ. ಯಾವುದೇ ರಾಸಾಯನಿಕ ಮಿಶ್ರಣ ಇಲ್ಲದೆ ತಯಾರಿಸಿದ ಈ ವಿಗ್ರಹಗಳನ್ನು ವಿಸರ್ಜನೆ ಬಳಿಕವೂ ಜಲಚರಗಳಿಗೆ ಯಾವುದೇ ತೊಂದರೆಯಾಗದಂತೆ ಸಿದ್ಧಪಡಿಸಲಾಗಿದೆ. ಸದ್ಯ ಮೂರ್ತಿಗೆ 350 ರೂಪಾಯಿಗಳಿಂದ 2 ಸಾವಿರ ರೂ.ಗಳ ವರೆಗೂ ದರ ನಿಗದಿ ಮಾಡಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 am, Wed, 31 August 22