ಭೂಲೋಕದ ಅಮೃತ ಎಂದೇ ಹೆಸರುವಾಸಿಯಾಗಿರುವ ಮಜ್ಜಿಗೆಯು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಹಿಡಿದು ಮೂಳೆಯ ಆರೋಗ್ಯವನ್ನು ಉತ್ತೇಜಿಸುವವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಈ ಆರೋಗ್ಯಕರ ಪಾನೀಯವನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಇದು ಯಾವ ಸಮಸ್ಯೆಗೆ ರಾಮಬಾಣವಾಗಿದೆ. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬ ಮಾತನ್ನು ನೀವು ಕೇಳಿರಬಹುದು. ಮಜ್ಜಿಗೆ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಬೆಳಿಗ್ಗೆ ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆ ತಂಪಾಗಿರುತ್ತದೆ. ಅಲ್ಲದೆ ಇದರಲ್ಲಿ ಪೌಷ್ಠಿಕಾಂಶದ ಗುಣಗಳು ಸಮೃದ್ಧವಾಗಿದ್ದು ಇದರಲ್ಲಿರುವ ಆರೋಗ್ಯಕರ ಗುಣಲಕ್ಷಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ದಿನನಿತ್ಯ ಮಜ್ಜಿಗೆ ಸೇವನೆಯು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತದೆ.
*ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಬೆಳಗಿನ ಉಪಾಹಾರವನ್ನು ಸೇವನೆ ಮಾಡುವ ಮೊದಲು ಒಂದು ಲೋಟ ಮಜ್ಜಿಗೆಯನ್ನು ಕುಡಿಯಬಹುದು. ಈ ರೀತಿ ಮಾಡುವುದರಿಂದ ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
*ಮಜ್ಜಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಏಕೆಂದರೆ ಇದರಲ್ಲಿ ಪ್ರೋಬಯಾಟಿಕ್ ಗಳು ಸಮೃದ್ಧವಾಗಿವೆ. ಇದು ದೇಹದಲ್ಲಿ ಕರುಳಿನ ಬೆಳವಣಿಗೆಯನ್ನು ಉತ್ತೇಜಿಸಿ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ.
*ಬೇಸಿಗೆಯಲ್ಲಿ ಅನೇಕರು ಆಮ್ಲೀಯತೆ ಅಥವಾ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾರೆ. ಅಂತವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
*ಮಜ್ಜಿಗೆಯ ನಿಯಮಿತ ಸೇವನೆಯು, ಮೂಳೆಗಳ ಆರೋಗ್ಯವನ್ನು ಹೆಚ್ಚಿಸುಸುತ್ತದೆ. ಏಕೆಂದರೆ ಇದರಲ್ಲಿ ಪೋಷಕಾಂಶಗಳು, ಕ್ಯಾಲ್ಸಿಯಂ, ವಿಟಮಿನ್ ಬಿ 12, ಸತು, ರೈಬೋಫ್ಲೇವಿನ್, ಪ್ರೋಟೀನ್ಗಳು ಸಮೃದ್ಧವಾಗಿದ್ದು ಮೂಳೆಗಳು ಬಲಗೊಳ್ಳುತ್ತವೆ. ಇನ್ನು ಆಯುರ್ವೇದದ ಪ್ರಕಾರ ಮಜ್ಜಿಗೆಯನ್ನು ಹಗಲಿನಲ್ಲಿ ಮಾತ್ರ ಸೇವಿಸಬೇಕು.
ಇದನ್ನೂ ಓದಿ:ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯಿರಿ, ಈ ರೋಗಗಳಿಂದ ದೂರವಿರಿ
*ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು.ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಆ ಸಮಯದಲ್ಲಿ ಮಜ್ಜಿಗೆ ಕುಡಿಯುವುದು ನೀರಿನ ಕೊರತೆಯನ್ನು ಸರಿದೂಗಿಸಬಹುದು. ಏಕೆಂದರೆ ಮಜ್ಜಿಗೆ ಕುಡಿಯುವುದರಿಂದ ದೇಹ ತಂಪಾಗಿ, ಹೈಡ್ರೇಟ್ ಆಗಿರುತ್ತದೆ. ಹೆಚ್ಚು ಹೆಚ್ಚು ನೀರು ಕುಡಿಯಲು ಇಷ್ಟಪಡದವರು ಮಜ್ಜಿಗೆ ಟ್ರೈ ಮಾಡಬಹುದು.
(ಸೂಚನೆ: ಮೇಲೆ ನೀಡಿರುವ ಸಲಹೆಗಳನ್ನು ಪ್ರಯತ್ನಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ.)
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: