ಮಧ್ಯಾಹ್ನ 1 ಗಂಟೆಯಾಯಿತೆಂದು ಹಸಿವಿಲ್ಲದಿದ್ದರೂ ಊಟ ಮಾಡುವವರು ಈ ಸತ್ಯಗಳನ್ನು ತಿಳಿದುಕೊಳ್ಳಬೇಕು!

ಆರೋಗ್ಯಕರ ಜೀವನಕ್ಕೆ ಸಮಯಕ್ಕೆ ಸರಿಯಾದ ಆಹಾರ ಮುಖ್ಯವಾದರೂ, ಗಡಿಯಾರದ ಸಮಯಕ್ಕಿಂತ ನಿಮ್ಮ ದೇಹದ ಹಸಿವಿನ ಸಂಕೇತಗಳಿಗೆ ಆದ್ಯತೆ ನೀಡುವುದು ಬಹಳ ಮುಖ್ಯವಾಗುತ್ತದೆ. ಹಸಿವಿಲ್ಲದಿದ್ದರೂ ತಿನ್ನುವುದೂ, ಹಸಿವಿದ್ದರೂ ಊಟ ಮಾಡದಿರುವುದು ಎರಡೂ ಕೂಡ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹಾಗಾದರೆ ದೇಹ ಹಸಿವಾಗದ ಯಾವ ರೀತಿಯ ಸಂಕೇತಗಳನ್ನು ನೀಡುತ್ತದೆ, ಹಸಿವಿಲ್ಲದಿದ್ದಾಗ ಊಟ ಬಿಡಬಹುದೇ ಮತ್ತು ಹಸಿವು ಕಡಿಮೆ ಇದ್ದಾಗ ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಧ್ಯಾಹ್ನ 1 ಗಂಟೆಯಾಯಿತೆಂದು ಹಸಿವಿಲ್ಲದಿದ್ದರೂ ಊಟ ಮಾಡುವವರು ಈ ಸತ್ಯಗಳನ್ನು ತಿಳಿದುಕೊಳ್ಳಬೇಕು!
Hunger Vs Clock
Image Credit source: Getty Images

Updated on: Jun 20, 2026 | 6:11 PM

ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಅನೇಕರು ನಿಗದಿತ ಸಮಯಕ್ಕೆ ಊಟ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಸಮಯವಾಯಿತು ಎಂದು ಹಸಿವಿಲ್ಲದಿದ್ದರೂ ಊಟ ಮಾಡುವುದು ಆರೋಗ್ಯಕರವೇ? ಇಂತಹ ಪ್ರಶ್ನೆ ನಿಮಗೂ ಕಾಡಿದ್ದರೆ ಅದಕ್ಕೆ ಉತ್ತರ ಈ ಸ್ಟೋರಿಯಲ್ಲಿದೆ. ಪೌಷ್ಟಿಕ ತಜ್ಞರ ಪ್ರಕಾರ, ಗಡಿಯಾರಕ್ಕಿಂತ ದೇಹ ನೀಡುವ ಹಸಿವಿನ ಸಂಕೇತಗಳಿಗೆ ಹೆಚ್ಚು ಮಹತ್ವ ನೀಡಬೇಕು. ಹೌದು, ಊಟ ಮಾಡಬೇಕು ಎಂದು ಮಾಡುವುದಕ್ಕೂ ಹಸಿವಾದಾಗ ಊಟ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಹಾಗಾದರೆ ದೇಹ ಹಸಿವಾಗದ ಯಾವ ರೀತಿಯ ಸಂಕೇತಗಳನ್ನು ನೀಡುತ್ತದೆ, ಹಸಿವಿಲ್ಲದಿದ್ದಾಗ ಊಟ ಬಿಡಬಹುದೇ ಮತ್ತು ಹಸಿವು (Hunger) ಕಡಿಮೆ ಇದ್ದಾಗ ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಹ ನೀಡುವ ಹಸಿವಿನ ಸಂಕೇತಗಳನ್ನು ಗಮನಿಸಿ

ನಮ್ಮ ದೇಹಕ್ಕೆ ಶಕ್ತಿ ಅಗತ್ಯವಾದಾಗ ಅದು ಹಸಿವಿನ ಮೂಲಕ ಸೂಚನೆ ನೀಡುತ್ತದೆ. ಹೊಟ್ಟೆ ತುಂಬಿರುವಾಗ ಅಥವಾ ಜೀರ್ಣಕ್ರಿಯೆ ನಡೆಯುತ್ತಿರುವಾಗ ಬಲವಂತವಾಗಿ ಆಹಾರ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ಇದರಿಂದ ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ಉಬ್ಬರ ಹಾಗೂ ತೂಕ ಹೆಚ್ಚಳದಂತಹ ಸಮಸ್ಯೆಗಳು ಉಂಟಾಗಬಹುದು.

ಹಸಿವಿಲ್ಲವೆಂದು ಊಟವನ್ನು ಸಂಪೂರ್ಣ ಬಿಡಬಹುದೇ?

ಹಸಿವಿಲ್ಲ ಎಂದು ಮಧ್ಯಾಹ್ನದ ಅಥವಾ ರಾತ್ರಿ ಊಟವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದೂ ಸರಿಯಲ್ಲ. ಹೆಚ್ಚು ಹೊತ್ತು ಹೊಟ್ಟೆ ಖಾಲಿ ಇದ್ದರೆ ನಂತರ ಅತಿಯಾದ ಹಸಿವು ಕಾಣಿಸಿಕೊಂಡು ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತ ಉಂಟುಮಾಡಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಆರೋಗ್ಯಕರ ಜೀವನ ನಿಮ್ಮದಾಗಲು ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಹಸಿವು ಕಡಿಮೆ ಇದ್ದಾಗ ಏನು ಮಾಡಬೇಕು?

  • ಪೂರ್ಣ ಊಟ ಮಾಡಲು ಮನಸ್ಸಿಲ್ಲದಿದ್ದರೆ ಹಗುರವಾದ ಆಹಾರಗಳನ್ನು ಆಯ್ಕೆ ಮಾಡಬಹುದು.
  • ತಾಜಾ ಹಣ್ಣು, ತರಕಾರಿ ಸಲಾಡ್ ಅಥವಾ ಓಟ್ಸ್ ಸೇವಿಸಬಹುದು.
  • ಮಜ್ಜಿಗೆ ಅಥವಾ ಎಳನೀರನ್ನು ಕುಡಿಯುವುದು ಉತ್ತಮ.
  • ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತವೆ ಮತ್ತು ಜೀರ್ಣಕ್ರಿಯೆಗೆ ಹೆಚ್ಚಿನ ಒತ್ತಡ ನೀಡುವುದಿಲ್ಲ

ಒಂದು ಅಥವಾ ಎರಡು ದಿನ ಹಸಿವು ಕಡಿಮೆಯಾಗುವುದು ಸಾಮಾನ್ಯ. ಆದರೆ ಪ್ರತಿದಿನವೂ ಹಸಿವಾಗದಿದ್ದರೆ ಅಥವಾ ಆಹಾರ ತಿನ್ನುವ ಆಸಕ್ತಿ ಇಲ್ಲದಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಜೀರ್ಣಾಂಗ ಸಮಸ್ಯೆಗಳು, ಯಕೃತ್ತಿನ ತೊಂದರೆಗಳು, ಹಾರ್ಮೋನ್ ಅಸಮತೋಲನ ಅಥವಾ ಮಾನಸಿಕ ಒತ್ತಡ ಇದಕ್ಕೆ ಕಾರಣವಾಗಿರಬಹುದು. ಇಂತಹ ಲಕ್ಷಣಗಳು ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us