ಮೆದುಳು ನಮ್ಮ ದೇಹದ ಬಹುಮುಖ್ಯ ಅಂಗ. ಅದರ ಕಾರ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು, ನಾವು ನಮ್ಮ ಜೀವನಶೈಲಿ ಮತ್ತು ಆಹಾರಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ನಾವು ಬುದ್ದಿವಂತಿಕೆ ತೀಕ್ಷ್ಣವಾಗಿಸುವುದರ ಜೊತೆಗೆ ಮೆದುಳಿನ ಶಕ್ತಿಯನ್ನು ಹೆಚ್ಚಿಸುವ ದೈನಂದಿನ ಅಭ್ಯಾಸಗಳನ್ನು ಕಡೆಗಣಿಸುತ್ತೇವೆ. ಹಾಗಾಗಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಬುದ್ಧಿವಂತಿಕೆ ಮತ್ತು ಮೆದುಳಿನ ಶಕ್ತಿಯನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಅದನ್ನು ಹೆಚ್ಚಿಸಬಹುದು ಎಂದು ವೈಜ್ಞಾನಿಕ ಸಂಶೋಧನೆ ತೋರಿಸಿ ಕೋಟ್ಟಿದೆ.
ಮೆದುಳಿನ ಕಾರ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಓದುವ ಅಭ್ಯಾಸ ಒಳ್ಳೆಯದು. ಇದು ಮನಸ್ಸನ್ನು ಸುಧಾರಿಸುತ್ತದೆ ಜ್ಞಾನವನ್ನು ಮತ್ತು ಶಬ್ದಕೋಶವನ್ನು ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ನಿಯಮಿತವಾಗಿ ಓದುವುದರಿಂದ ವಯಸ್ಸಾದಂತೆ ಅರಿವಿನ ಸಾಮರ್ಥ್ಯ ಕಡಿಮೆಯಾಗುವುದಿಲ್ಲ. ವಿಭಿನ್ನ ಮತ್ತು ಸವಾಲುಗಳಿರುವ ಪುಸ್ತಕಗಳು ಮೆದುಳನ್ನು ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ಸಂಕೀರ್ಣ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದು ಕಾಲ್ಪನಿಕ ಕಥೆಗಳು, ಪತ್ರಿಕೆಗಳು ಅಥವಾ ನಿಯತಕಾಲಿಕೆಗಳನ್ನು ಓದುವುದರಿಂದ ಮೆದುಳು ಸಕ್ರಿಯವಾಗಿರುತ್ತದೆ.
ಕುತೂಹಲವು ಕಲಿಕೆ ಹಿಂದಿನ ಪ್ರೇರಕ ಶಕ್ತಿಯಾಗಿದೆ. ಕುತೂಹಲಭರಿತ ಮನಸ್ಸು ಯಾವಾಗಲೂ ಹೊಸ ಮಾಹಿತಿಯನ್ನು ಹುಡುಕುತ್ತಿರುತ್ತದೆ, ಪ್ರಶ್ನೆಗಳನ್ನು ಕೇಳುತ್ತದೆ ಮತ್ತು ವಿಭಿನ್ನ ದೃಷ್ಟಿಕೋನಗಳಿಂದ ಆಲೋಚನೆ ಮಾಡುತ್ತದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ಕುತೂಹಲವು ಮೆದುಳನ್ನು ಕಲಿಕೆಗೆ ಸಿದ್ಧಪಡಿಸುತ್ತದೆ, ಇದರಿಂದಾಗಿ ಹೊಸ ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತದೆ. ನೀವು ಒಂದು ವಿಷಯದ ಬಗ್ಗೆ ಕುತೂಹಲ ತೋರಿದರೆ, ನಿಮ್ಮ ಮೆದುಳು ಆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಈ ಸಂಶೋಧನೆ ತಿಳಿಸಿದೆ.
ಇದನ್ನೂ ಓದಿ: ನೀರು ಕುಡಿಯುವಾಗ ಈ ತಪ್ಪು ಮಾಡಬೇಡಿ, ಕ್ಯಾನ್ಸರ್ ಬರಬಹುದು
ನಿಮಗೆ ಯಾವುದು ಕಷ್ಟ ಎನಿಸುತ್ತದೆಯೋ ಅಂತಹ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಮಾಡಲು ಪ್ರಯತ್ನಿಸಿ. ಉದಾಹರಣೆಗೆ ಸುಡೊಕು, ಒಗಟುಗಳನ್ನು ಬಿಡಿಸುವುದು, ಚೆಸ್ ಆಡುವುದು ಅಥವಾ ಹೊಸ ಭಾಷೆಯನ್ನು ಕಲಿಯುವುದು ಇಂತಹ ಇನ್ನಿತರ ಚಟುವಟಿಕೆಗಳು ನಿಮ್ಮ ಮೆದುಳಿಗೆ ಸವಾಲನ್ನು ಹಾಕುತ್ತದೆ. ಮಾನಸಿಕವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಲ್ಲಿ ಅಲ್ಝೈಮರ್ ಕಾಯಿಲೆ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ಕಂಡುಹಿಡಿದಿದೆ. ಆದ್ದರಿಂದ, ಕಷ್ಟಕರವಾದ ಕೆಲಸಗಳಿಂದ ದೂರ ಸರಿಯಬೇಡಿ.
ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ನಿದ್ರೆ ಅತ್ಯಗತ್ಯ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನವು ಕಲಿಕೆ ಮತ್ತು ಸ್ಮರಣೆಯಲ್ಲಿ ನಿದ್ರೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಕಂಡು ಹಿಡಿದಿದೆ. ಸಾಕಷ್ಟು ನಿದ್ರೆಯಿಲ್ಲದೆ, ನಿಮ್ಮ ಮೆದುಳು ನೀವು ಮಾಡಿದ ಕೆಲಸಗಳನ್ನು ನೆನಪಿಟ್ಟುಕೊಳ್ಳಲು ಹೆಣಗಾಡುತ್ತದೆ, ಇದು ನಿಮ್ಮ ಅರಿವಿನ ದುರ್ಬಲತೆಗೆ ಕಾರಣವಾಗುತ್ತದೆ. ಹಾಗಾಗಿ ವಯಸ್ಕರು ರಾತ್ರಿ ಸಮಯದಲ್ಲಿ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಬೇಕು. ನಿದ್ರೆ ಮಾಡಲು ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಸ್ಥಿರವಾದ ವೇಳಾಪಟ್ಟಿಯನ್ನು ಪಾಲನೆ ಮಾಡುವುದು ಒಳಿತು. ಮಲಗುವ ಮೊದಲು ಶಾಂತವಾಗಿ ನಿದ್ರೆ ಮಾಡಲು ಬೇಕಾದ ವಾತಾವರಣವನ್ನು ರಚಿಸಿಕೊಳ್ಳಿ. ಕೇವಲ ದಣಿವನ್ನು ನೀಗಿಸಿಕೊಳ್ಳಲು ನಿದ್ರೆ ಮಾಡುವುದಲ್ಲ. ನಿಮ್ಮ ಮೆದುಳಿಗೂ ವಿಶ್ರಾಂತಿ ಪಡೆಯಲು ಸ್ವಲ್ಪ ಸಮಯ ನೀಡಬೇಕಾಗುತ್ತದೆ.
ನಿಮ್ಮ ಒಟ್ಟಾರೆ ಜೀವನಶೈಲಿ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತ ದೈಹಿಕ ಚಟುವಟಿಕೆ, ಸಮತೋಲಿತ ಆಹಾರ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು, ಇತ್ಯಾದಿ ಅಂಶಗಳು ಆರೋಗ್ಯಕರ ಜೀವನಶೈಲಿಯ ಪ್ರಮುಖ ಅಂಶಗಳಾಗಿವೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ದೈಹಿಕ ವ್ಯಾಯಾಮವು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ವಾಕಿಂಗ್, ಈಜು ಅಥವಾ ಯೋಗದಂತಹ ಚಟುವಟಿಕೆಗಳು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದೆಲ್ಲದರ ಜೊತೆಗೆ ಆಹಾರದಲ್ಲಿ ಪೌಷ್ಠಿಕಾಂಶ ಸೇವನೆ ಮಾಡುವುದು ಅಷ್ಟೇ ಮುಖ್ಯವಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ