ತಾಯ್ತನ ಪ್ರತೀ ಹೆಣ್ಣಿನ ಕನಸು. ಹೆಣ್ಣಿನ ಬದುಕಿನ ಮಾಂತ್ರಿಕ ಅನುಭವಗಳಲ್ಲಿ ಒಂದು. ಹೀಗಿರುವಾಗ ಹುಟ್ಟಿದ ಮಗುವಿನ ಮೊದಲ ಆಹಾರ ತಾಯಿಯ ಎದೆ ಹಾಲು. ಅಮೃತಕ್ಕೆ ಸಮಾನವಾದ ತಾಯಿಯ ಹಾಲು ಪ್ರತೀ ಮಗುವಿಗೆ ಸಿಗುವ ಶಕ್ತಿಯುತ ಆಹಾರ. ಮಗುವಿನ ಬೆಳವಣಿಗೆ, ರೋಗ ನಿರೋಧಕ ಶಕ್ತಿಯ ಸುಧಾರಣೆ, ಆರೋಗ್ಯ ಎಲ್ಲವೂ ತಾಯಿಯ ಎದೆ ಹಾಲಿನಿಂದಲೇ ದೊರೆಯುತ್ತದೆ. ಪ್ರತೀ ತಾಯಿಗೆ ಇದೊಂದು ವಿಶಿಷ್ಟ ಅನುಭವ. ಹುಟ್ಟಿದ ಮಗು ಒಂದು ಹಂತದವರೆಗೆ ಬೆಳವಣಿಗೆಯಾಗುವವರೆಗೆ ತಾಯಿ ಹಾಲೇ ಮುಖ್ಯವಾಗಿರುತ್ತದೆ. ಎದೆ ಹಾಲನ್ನು ನೀಡುವುದರಿಂದ ಕೇವಲ ಮಗುವಿನ ಆರೋಗ್ಯ ಮಾತ್ರವಲ್ಲ ತಾಯಿಯ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಸ್ತನ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಂದ ದೂರವಿಡುತ್ತದೆ. ಸ್ತನ ಪಾನ ಮಗು ಹಾಗೂ ತಾಯಿಯ ನಡುವೆ ವಿಶೇಷವಾದ ಬಾಂಧವ್ಯ ಬೆಳೆಯುವಂತೆ ಮಾಡುತ್ತದೆ. ಅಲ್ಲದೆ ತಾಯಿಯ ದೇಹದಲ್ಲಿನ ಅನಗತ್ಯವಾದ ಕೊಬ್ಬನ್ನು ಕರಗಿಸಿ ಗರ್ಭಾವಸ್ಥೆಯ ಪೂರ್ವದಲ್ಲಿ ಇದ್ದ ದೇಹದ ಸ್ಥಿತಿಯನ್ನು ಪಡೆಯಲು ಸಹಾಯಕವಾಗಿದೆ. ನೀವು ಮೊದಲ ಬಾರಿಗೆ ತಾಯಿಯಾಗುತ್ತಿದ್ದರೆ ಮಗುವಿಗೆ ಹಾಲುಣಿಸುವ ಮೊದಲು ಯಾವ ಕ್ರಮಗಳನ್ನು ಪಾಲಿಸಬೇಕು, ಯಾವ ತಪ್ಪುಗಳನ್ನು ಮಾಡಬಾರದು ಎನ್ನುವುದು ತಿಳಿದಿರಬೇಕು. ಈ ಕುರಿತು ಇಲ್ಲಿದೆ ನೋಡಿ ಮಾಹಿತಿ
ಸ್ತನ್ಯಪಾನದ ವೇಳೆ ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಮೊದಲ ಬಾರಿಗೆ ಹಾಲುಣಿಸುವಾಗ ತಾಳ್ಮೆಯಿಂದಿರಿ. ಆ ಸಮಯದಲ್ಲಿ ಎದುರಾದ ಸಮಸ್ಯೆಗಳಿಂದ ನಿರಾಸೆಗೊಳ್ಳಬೇಡಿ. ಹೆದರಿಕೆಯಿಂದ ಬೆವರುವುದು ಅಥವಾ ಮಗುವನ್ನು ಹೊರತಬ್ಬುವುದನ್ನು ಮಾಡಬೇಡಿ. ಪ್ರತೀಕ್ಷಣವನ್ನು ಆನಂದಿಸಿ.
ಹುಟ್ಟಿದ ಮಗುವಿನ ರೋಗನಿರೋಧಕ ಶಕ್ತಿಯು ಅಷ್ಟೇನು ಉತ್ತಮವಾಗಿರುವುದಿಲ್ಲ. ಹೀಗಾಗಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಸ್ತನಪಾನದ ಬಳಿಕ ಮತ್ತು ಮೊದಲು ಸ್ವಚ್ಛತೆಯೆಡೆಗೆ ಹೆಚ್ಚು ಗಮನಹರಿಸಿ.
ಮಗುವಿನ ಆರೋಗ್ಯ ಉತ್ತಮವಾಗಿರಬೇಕೆಂದರೆ ಪೌಷ್ಟಿಕ ಆಹಾರ ಅಗತ್ಯ. ಅದಕ್ಕೆ ತಾಯಿಯ ಆರೋಗ್ಯ ಕಾರಣವಾಗುತ್ತದೆ. ಆದ್ದರಿಂದ ಹೆಚ್ಚು ಪೋಷಕಾಂಶಗಳಿರುವ ಆಹಾರವನ್ನು ಸೇವಿಸಿ. ನೆನಪಿಡಿ ಆಹಾರ ಸೇವನೆ ಸಮತೋಲನದಲ್ಲಿರಲಿ.
ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ. ಸ್ತನಪಾನದ ದಿನಗಳಲ್ಲಿ ನಿಮಗೆ ಸುಸ್ತು ಕಾಡಬಹುದು. ಹೀಗಾಗಿ ಆದಷ್ಟು ವಿಶ್ರಾಂತಿ ಪಡೆಯಿರಿ. ಜತೆಗೆ ದೇಹವನ್ನು ಸಕ್ರಿಯವಾಗಿಟ್ಟುಕೊಳ್ಳುವಂತಹ ಕೆಲಸಗಳಲ್ಲಿ ತೊಡಗಿಕೊಳ್ಳಿ.
ಸ್ವಯಂ ವೈದ್ಯರಾಗಲು ಹೋಗಬೇಡಿ. ಇದು ನಿಮ್ಮ ಮೇಲೆ ಮಾತ್ರವಲ್ಲ, ಮಗವಿನ ಮೇಲೆಯೂ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಔಷಧಗಳನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಸ್ತನ್ಯಪಾನದ ವೇಳೆ ಈ ಕ್ರಮಗಳನ್ನು ಅಗತ್ಯವಾಗಿ ತಪ್ಪಿಸಿ
ನೀವು ಆಲ್ಕೋಹಾಲ್ ಅಥವಾ ಧೂಮಪಾನ ವ್ಯಸನಿಗಳಾಗಿದ್ದರೆ ಆ ರೀತಿಯ ಅಭ್ಯಾಸಕ್ಕೆ ಕಡಿವಾಣ ಹಾಕಿ. ನಿಮ್ಮ ಈ ಅಭ್ಯಾಸ ಮಗುವಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸ್ತನಪಾನದ ವೇಳೆ ಆಲ್ಕೋಹಾಲ್ ಅಥವಾ ಧೂಮಪಾನದ ಅಭ್ಯಾಸ ನಿಮ್ಮನ್ನು ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವಂತೆ ಮಾಡುತ್ತದೆ.
ಬೀದಿ ಬದಿ ಆಹಾರ ಮತ್ತು ಜಂಕ್ ಫುಡ್ಗಳ ಸೇವನೆ ಬೇಡ. ಇವುಗಳಲ್ಲಿರುವ ಎಣ್ಣೆಯ ಅಂಶ, ಅತಿಯಾದ ಸಕ್ಕರೆ ಪ್ರಮಾಣ ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮಗುವಿನ ಮೇಲೆಯೂ ನೇರವಾದ ಪರಿಣಾಮ ಬೀರುತ್ತದೆ. ಅದ್ದರಿಂದ ಎಣ್ಣೆಯುಕ್ತ ಮತ್ತು ಅತಿಯಾದ ಸಕ್ಕರೆ ಭರಿತ ಆಹಾರಗಳಿಗೆ ನೋ ಹೇಳಿ.
ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಅಂತಹ ಸಂದರ್ಭಗಳಲ್ಲಿ ಎದೆಹಾಲುಣಿಸುವುದನ್ನು ತಪ್ಪಿಸಿ. ಏಕೆಂದರೆ ಇದು ಮಗುವನ್ನು ಸೋಂಕಿನ ಅಪಾಯಕ್ಕೆ ತಳ್ಳುತ್ತದೆ.
ಸ್ತನಪಾನ ಮಾಡಿಸುವಾಗ ನಿಮಗೆ ತೀವ್ರ ನೋವಿನ ಅನುಭವವಾದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಇಲ್ಲವಾದರೆ ಅಪಾಯವಾಗಬಹುದು.
ಇದನ್ನೂ ಓದಿ:
Skin Care: ಚಳಿಗಾಲದಲ್ಲಿ ಹೊಳೆಯುವ ಚರ್ಮಕ್ಕಾಗಿ ಈ ಆಹಾರ ಸೇವಿಸಿ ನೋಡಿ!
Published On - 5:19 pm, Fri, 14 January 22