World AIDS Day 2025: ಅಸುರಕ್ಷಿತ ದೈಹಿಕ ಸಂಪರ್ಕ ಒಂದೇ ಅಲ್ಲ, ಇವು ಕೂಡ ಏಡ್ಸ್‌ ರೋಗಕ್ಕೆ ಕಾರಣ

ಏಡ್ಸ್‌ ಎಂಬುದು ಹೆಚ್‌ಐವಿ ಎಂಬ ವೈರಸ್‌ನಿಂದ ಬರುವ ಸೋಂಕಾಗಿದ್ದು, ಆರಂಭಿಕ ಹಂತದಲ್ಲಿ ಇದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಈ ರೋಗ ಗಂಭೀರವಾಗಿ ಪರಿಣಮಿಸಬಹುದು. ಹಾಗಾಗಿ ಈ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.

World AIDS Day 2025: ಅಸುರಕ್ಷಿತ ದೈಹಿಕ ಸಂಪರ್ಕ ಒಂದೇ ಅಲ್ಲ, ಇವು ಕೂಡ ಏಡ್ಸ್‌ ರೋಗಕ್ಕೆ ಕಾರಣ
ವಿಶ್ವ ಏಡ್ಸ್‌ ದಿನ
Image Credit source: Freepik

Updated on: Dec 01, 2025 | 9:06 AM

ಹ್ಯೂಮನ್ ಇಮ್ಯೂನೊ ಡಿಫಿಷಿಯೆನ್ಸಿ ವೈರಸ್ (H.I.V) ನಿಂದ ಬರುವ ಏಡ್ಸ್‌  ಮಾರಣಾಂತಿಕ ಕಾಯಿಲೆಯಾಗಿದೆ. ಆರಂಭಿಕ ಹಂತದಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದರೆ, ಈ ಕಾಯಿಲೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ.  ಇಂದಿಗೂ ಈ ರೋಗದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ ಮತ್ತು ಈ ಕಾಯಿಲೆಯಿಂದ ಬಳಲುತ್ತಿರುವವರನ್ನು ಸಮಾಜದಲ್ಲಿ ಬಹಳ ಕೀಳರಿಮೆಯಿಂದ ನೋಡಲಾಗುತ್ತದೆ.  ಹಾಗಾಗಿ ಏಡ್ಸ್ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು, ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್  1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಏಡ್ಸ್ ದಿನದ ಇತಿಹಾಸವೇನು?

ವಿಶ್ವ ಏಡ್ಸ್ ದಿನವನ್ನು ಮೊದಲಿಗೆ 1988 ರಲ್ಲಿ ಆಚರಿಸಲಾಯಿತು. 1981 ರಲ್ಲಿ ಮೊದಲ ಬಾರಿಗೆ ಏಡ್ಸ್‌ ಪ್ರಕರಣವೊಂದು ವರದಿಯಾದ ಬಳಿಕ ನಂತರದ ವರ್ಷಗಳಲ್ಲಿ ಹಲವಾರು ಜನರು ಈ ಕಾಯಿಲೆಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡರು. ಹಾಗಾಗಿ ಈ ಗಂಭೀರ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಮತ್ತು ಸಮಾಜದಲ್ಲಿ ಈ ಕಾಯಿಲೆಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ತೊಡೆದುಹಾಕಬೇಕು ಎನ್ನುವ ಉದ್ದೇಶದಿಂದ 1987 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಥಾಮಸ್‌ ನೆಟ್ಟರ್‌ ಮತ್ತು ಜೇಮ್ಸ್‌ ಡಬ್ಲ್ಯೂ ಬನ್‌ ಈ ಇಬ್ಬರು ಏಡ್ಸ್‌ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪವನ್ನು ಮಾಡುತ್ತಾರೆ. ಅದರ ಮಾರನೇ ವರ್ಷವೇ ವಿಶ್ವ ಆರೋಗ್ಯ ಸಂಸ್ಥೆಯು ಈ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸಲು ಘೋಷಿಸಿತು.

ವಿಶ್ವ ಏಡ್ಸ್ ದಿನದ ಮಹತ್ವವೇನು?

  • ವಿಶ್ವ ಏಡ್ಸ್ ದಿನವು ಎಚ್‌ಐವಿ ಸೋಂಕು, ಅದರ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
  • ಇದಲ್ಲದೆ ಈ ದಿನವು ಏಡ್ಸ್‌ ರೋಗಕ್ಕೆ ತುತ್ತಾದವರು ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೆ ಸುರಕ್ಷಿತ ಜೀವನ ನಡೆಸುವಂತಾಗಬೇಕು ಮತ್ತು ಈ ಮಾರಕ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕಬೇಕು ಎನ್ನುವ ಉದ್ದೇಶವನ್ನು ಸಹ ಹೊಂದಿದೆ.

ಇದನ್ನೂ ಓದಿ: ಬ್ರಾ ಸರಿಯಾಗಿ ಧರಿಸದಿರುವುದು ಕೂಡ ಬ್ರೆಸ್ಟ್ ಕ್ಯಾನ್ಸರ್ ಗೆ ಕಾರಣವಾಗುತ್ತದೆಯೇ? ಇಲ್ಲಿದೆ ಡಾ. ಹೇಮಂತ್‌ ಸಲಹೆ

ಹೆಚ್‌.ಐ.ವಿ ಸೋಂಕು ಹೇಗೆ ಹರಡುತ್ತದೆ?

ಹೆಚ್.‌ಐ.ವಿ ಸೋಂಕು ಹರಡಲು, ಏಡ್ಸ್‌ ರೋಗಕ್ಕೆ ಅಸುರಕ್ಷಿತ ದೈಹಿಕ ಸಂಪರ್ಕ ಮಾತ್ರವೇ ಕಾರಣ ಎಂಬ ತಪ್ಪು ಕಲ್ಪನೆಯಿದೆ. ಆದರೆ ಇದು ಮಾತ್ರವಲ್ಲದೆ ಈ ಸೋಂಕು ಹರಡಲು ಇನ್ನೂ ಹಲವಾರು ಕಾರಣಗಳಿವೆ.

  • ಸೋಂಕು ತಗುಲಿರುವ ವ್ಯಕ್ತಿಯ ಜೊತೆಗೆ ಲೈಂಗಿಕ ಸಂಪರ್ಕ ಮಾಡುವುದರಿಂದಲೂ ಈ ಕಾಯಿಲೆ ಬರುತ್ತದೆ.
  • ಸೋಂಕು ತಗುಲಿದ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿ ದಾನವಾಗಿ ಪಡೆದರೆ, ಆ ರಕ್ತದ ಮೂಲಕ ವ್ಯಕ್ತಿಯ ದೇಹಕ್ಕೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
  • ಸೋಂಕಿತ ವ್ಯಕ್ತಿಗೆ ಬಳಸಿದ ಸಿರಿಂಜ್‌ಗಳು ಅಥವಾ ಇತರೆ ಇಂಜೆಕ್ಷನ್‌ ಉಪಕರಣಗಳನ್ನು ಇನ್ನೊಬ್ಬ ವ್ಯಕ್ತಿಗೆ ಬಳಸಿದರೂ ಸೋಂಕು ಹರಡುತ್ತದೆ.
  • ಹೆ.ಐ.ವಿ ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಹಾಲುಣಿಸುವ ಸಮಯದಲ್ಲಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
  • ಟ್ಯಾಟೂ ಹಾಕಿಸಿಕೊಳ್ಳುವುದರಿಂದಲೂ ಹೆಚ್.ಐ.ವಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಂದರೆ ಒಬ್ಬರಿಗೆ ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸಿದಾಗ ಇದರಿಂದಲೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ