
ಜ್ಯೋತಿಷ್ಯದ ವಿಚಾರದಲ್ಲಿ ಆಳ ಹೊಕ್ಕಂತೆಲ್ಲ ಅಚ್ಚರಿ, ಬೆರಗು ಹಾಗೂ ಅದೇ ಸಮಯಕ್ಕೆ ಗಾಬರಿ ಹುಟ್ಟಿಸುವಂಥ ಹೊಸ ಹೊಸ ಮಾಹಿತಿಗಳು ಎದುರುಗೊಳ್ಳುತ್ತಲೇ ಇರುತ್ತವೆ. ಈ ದಿನದ ವಿಷಯ ವಸ್ತು ಹಾಗಿದೆ. ಇದನ್ನು ದಯವಿಟ್ಟು ಮುನ್ನೆಚ್ಚರಿಕೆ ಅಂತ ತೆಗೆದುಕೊಳ್ಳಿ. ಜನ್ಮ ದಿನಾಚರಣೆ ಎಂಬುದು ಸಂತೋಷದ ಹಾಗೂ ಸಂಭ್ರಮದ ವಿಷಯ. ಆದರೆ ಹೀಗೆ ಜನ್ಮ ದಿನ ಆ ವರ್ಷದಲ್ಲಿ ಯಾವ ಮಾಸ, ಪಕ್ಷ, ವಾರ, ನಕ್ಷತ್ರ, ತಿಥಿ, ಯೋಗ, ಕರಣದಂದು ಬಂದಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಲೇಬೇಕು. ಇನ್ನು ಇದರ ಜೊತೆಗೆ ಶನಿ ಗ್ರಹದ ಸ್ಥಿತಿಯು ಜನ್ಮ ಜಾತಕದಲ್ಲಿ ಹೇಗಿದೆ, ಸದ್ಯಕ್ಕೆ ಗೋಚಾರದಲ್ಲಿ ಶನಿ ಗ್ರಹದ ಸಂಚಾರ ಎಲ್ಲಿ ನಡೆಯುತ್ತಿದೆ ಎಂಬ ಅಂಶವನ್ನು ಪರಿಶೀಲಿಸಿಕೊಳ್ಳಬೇಕು. ಯಾಕೆ ಇವಿಷ್ಟನ್ನು ಮಾಡಬೇಕು ಎಂಬುದರ ವಿವರಣೆಯೇ ಈ ಲೇಖನ.
ಪಂಚಾಂಗ ಅಂದರೆ ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣ. ಈ ಐದು ಸೇರಿದ “ಪಂಚ ಅಂಗ” ಪಂಚಾಂಗವಾಯಿತು. ಒಬ್ಬ ವ್ಯಕ್ತಿಯು ಹುಟ್ಟಿದ ದಿನದಂದು ಯಾವ ತಿಥಿ (ಪಾಡ್ಯ, ಬಿದಿಗೆ, ತದಿಗೆ ಹೀಗೆ), ವಾರ (ಸೋಮ, ಮಂಗಳ, ಬುಧ), ನಕ್ಷತ್ರ, ಯೋಗ ಹಾಗೂ ಕರಣ ಇತ್ತು ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಪ್ರತಿ ವರ್ಷ ಜನ್ಮ ದಿನಾಂಕದಂದು ಹುಟ್ಟಿದ ಹಬ್ಬ ಆಚರಣೆ ಮಾಡಿಕೊಳ್ಳುವ ವೇಳೆ ಆ ದಿನ ಯಾವುದು ಬಂದಿವೆ ನೋಡಿಕೊಳ್ಳಬೇಕು. ಒಬ್ಬ ವ್ಯಕ್ತಿಯ ಹುಟ್ಟಿದ್ದ ದಿನದಂದು (ಜನನ ಕಾಲದಲ್ಲಿ) ಬಂದಿದ್ದ ಈ ಪಂಚ ಅಂಗಗಳ ಪೈಕಿಯ ಮೂರು ಅಂಗ (ಅದೇ ತಿಥಿ, ವಾರ, ನಕ್ಷತ್ರ ಅಂದುಕೊಳ್ಳಿ) ಆ ವರ್ಷ ಅದೇ ದಿನ (ದಿನಾಂಕದಂದು) ಪುನರಾವರ್ತನೆ ಆದಲ್ಲಿ ಎಚ್ಚೆತ್ತುಕೊಳ್ಳಬೇಕು. ಇದನ್ನು ಸಂವತ್ಸರ ಹಾಗೂ ಮಾಸದ ಆಧಾರದಲ್ಲಿ ಪರಿಗಣಿಸುವುದು ಸೂಕ್ತ.
ಅದರ ಜೊತೆಗೆ ಜನ್ಮ ರಾಶಿಯಿಂದ ಅಥವಾ ಲಗ್ನದಿಂದ ಅಥವಾ ಜನನ ಕಾಲದಲ್ಲಿ ಶನಿ ಗ್ರಹ ಎಲ್ಲಿ ಸ್ಥಿತವಾಗಿತ್ತೋ ಆ ಸ್ಥಾನದಿಂದ ಎಂಟನೇ ಮನೆಯಲ್ಲಿ ಗೋಚಾರದಲ್ಲಿ ಶನಿ ಗ್ರಹ ಇದ್ದಲ್ಲಿ ಅಪಾಯಕಾರಿ ಎಂದು ಪರಿಗಣಿಸಬೇಕು. ಈ ಗ್ರಹ ಸ್ಥಿತಿಯು ಆರೋಗ್ಯ- ಆಯುಷ್ಯದ ಮೇಲೆ ಮುಖ್ಯವಾಗಿ ಪರಿಣಾಮವನ್ನು ಬೀರುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಯ ಜನ್ಮ ದಿನದಂದು ಇದ್ದ ಆ “ಪಂಚಾಂಗ”ದ ಪೈಕಿ ಮೂರು ಪುನರಾವರ್ತನೆ ಆಗಿದ್ದಲ್ಲಿ ಮೃತ್ಯುಂಜಯ ಹೋಮ ಮಾಡಿಕೊಳ್ಳುವುದು ಕ್ಷೇಮ. ಅದಕ್ಕೂ ಮುನ್ನ ಒಮ್ಮೆ ಆ ವ್ಯಕ್ತಿಯ ನವಾಂಶ ಕುಂಡಲಿಯನ್ನು ಒಮ್ಮೆ ಜ್ಯೋತಿಷಿಗಳಲ್ಲಿ ತೋರಿಸಿಕೊಳ್ಳಬೇಕು.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಉದಾಹರಣೆಗೆ: ಈ ದಿನ ಸೆಪ್ಟೆಂಬರ್ 14ನೇ ತಾರೀಕು 2025ನೇ ಇಸವಿ. ಭಾದ್ರಪದ ಮಾಸ, ಕೃಷ್ಣ ಪಕ್ಷದ, ಭಾನುವಾರ, ಅಷ್ಟಮಿ, ರೋಹಿಣಿ ನಕ್ಷತ್ರ, ವಜ್ರಯೋಗದ ಮೇಲೆ ಸಿದ್ಧಿ ಯೋಗ ಹಾಗೂ ಬಾಲ ಕರಣ ಇದೆ. ಈ ದಿನದಂದು ಒಂದು ಮಗು ಹುಟ್ಟುತ್ತದೆ. ಮುಂದೆ ಅದರ ಜನ್ಮ ದಿನ ಅಂದಾಗ ಭಾದ್ರಪದ ಮಾಸ, ಕೃಷ್ಣ ಪಕ್ಷದ ಅಷ್ಟಮಿಯಂದು ಎಂದಾಗುತ್ತದೆ. ಮುಂಬರುವ ವರ್ಷಗಳಲ್ಲಿ ಒಮ್ಮೆ ಭಾದ್ರಪದ ಮಾಸ, ಕೃಷ್ಣ ಪಕ್ಷದ ಅಷ್ಟಮಿಯಂದು ಭಾನುವಾರವೂ ಬಂದು, ರೋಹಿಣಿ ನಕ್ಷತ್ರವೂ ಇದೆ ಎಂದಾಗ ಎಚ್ಚೆತ್ತುಕೊಂಡು, ಶನಿ ಗ್ರಹದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕು.
ಸದ್ಯಕ್ಕೆ ಶನಿಯು ಮೀನ ರಾಶಿಯಲ್ಲಿದೆ. ರೋಹಿಣಿ ನಕ್ಷತ್ರವು ವೃಷಭ ರಾಶಿಯಾಗುತ್ತದೆ, ಅದು ಚಂದ್ರ ರಾಶಿ ಎನಿಸಿಕೊಳ್ಳುತ್ತದೆ. ಜನ್ಮ ಕಾಲದಲ್ಲಿ ಯಾವ ಲಗ್ನ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಮೀನ ರಾಶಿಯಲ್ಲಿನ ಇರುವ ಶನಿಗೆ ಎಂಟನೇ ಸ್ಥಾನ ಅಂದರೆ ತುಲಾ ರಾಶಿಯಲ್ಲಿ ಶನಿ ಸಂಚಾರ ಕಾಲ, ಇನ್ನು ಜನ್ಮ ರಾಶಿ ವೃಷಭಕ್ಕೆ ಎಂಟನೇ ಮನೆ ಅಂದರೆ ಧನು ರಾಶಿಯಲ್ಲಿ ಶನಿ ಸಂಚಾರ ಕಾಲ. ಒಂದು ವೇಳೆ ಲಗ್ನ ಕನ್ಯಾ ಅಂತಾದಲ್ಲಿ ಮೇಷ ರಾಶಿಯಲ್ಲಿ ಶನಿ ಸಂಚಾರ ಕಾಲವೂ ಆಗಿ, ಜನ್ಮ ಸಮಯದಲ್ಲಿನ ಪಂಚಾಂಗದ ಪೈಕಿ ಮೂರು ಪುನರಾವರ್ತನೆ ಆದಲ್ಲಿ ಕೂಡಲೇ ಜ್ಯೋತಿಷಿಗಳನ್ನು ಸಂಪರ್ಕಿಸಿ, ಅಗತ್ಯವಾದ ಶಾಂತಿ ಪೂಜೆ ಪುನಸ್ಕಾರಗಳನ್ನು ಮಾಡಿಸಿಕೊಳ್ಳುವುದು ಕ್ಷೇಮ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ