Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 13ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 13ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಇತರರ ಪಾಲಿಗೆ ನೀವು ಬೆರಗು ಮೂಡಿಸುವಂಥ ವ್ಯಕ್ತಿ ಆಗುತ್ತೀರಿ. ನೀವು ಹೇಳಿದಂತೆಯೇ ಆಯಿತು, ನಾವು ನಿಮ್ಮ ಮಾತು ಕೇಳಬೇಕಿತ್ತು ಎಂದು ನಿಮ್ಮಿಂದ ದೂರವಾದ ಸ್ನೇಹಿತರು ಅಥವಾ ನಿಮ್ಮ ಜತೆ ಕೆಲಸ ಮಾಡುತ್ತಿದ್ದವರು ಮತ್ತೆ ಬರಬಹುದು. ಈ ಸಲ ತುಂಬ ಕಠಿಣವಾಗಿ ವರ್ತಿಸಬೇಡಿ, ಹಂಗಿಸಬೇಡಿ. ಅಂದಹಾಗೆ ಇದರಲ್ಲಿ ನಿಮ್ಮ ಸಂಬಂಧಿಕರು, ಕುಟುಂಬದವರು ಸಹ ಇರಬಹುದು. ಇನ್ನು ಈ ದಿನ ರುಚಿಕಟ್ಟಾದ ಭೋಜನ ಸವಿಯುವ ಯೋಗ ನಿಮ್ಮ ಪಾಲಿಗಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಕೆಲಸದ ನಿಮಿತ್ತವಾಗಿ ಪ್ರಯಾಣಕ್ಕೆ ಸಿದ್ಧರಾಗುತ್ತಿರುವವರಿಗೆ ಬಿಡುವಿಲ್ಲದಂಥ ವೇಳಾಪಟ್ಟಿ ಇರುತ್ತದೆ. ಬದಲಾವಣೆಯೊಂದಕ್ಕೆ ನೀವು ಸಿದ್ಧರಾಗಲಿದ್ದೀರಿ. ಇಷ್ಟು ಸಮಯ ವಿಚಾರಿಸಿ, ಅಳೆದು- ತೂಗಿ ನೋಡಿಯಾಗಿದೆ ಅಂದ ಮೇಲೆ ಇನ್ನೇನು ಅಖಾಡಕ್ಕೆ ಇಳಿಯುವುದು ಮಾತ್ರ ಬಾಕಿ. ಈ ದಿನ ಅಲರ್ಜಿ ಆಗಬಹುದಾದ ಆಹಾರದಿಂದ ದೂರ ಇರಿ. ಬಾಯಿ ಚಪಲಕ್ಕೆ ಬಿದ್ದಿರೋ ಆರೋಗ್ಯ ಸಮಸ್ಯೆ ಆದೀತು
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನೇರವಂತಿಕೆ ಈ ದಿನ ನಿಮ್ಮನ್ನು ಕಾಪಾಡಲಿದೆ. ಒಂದು ನಿರುಪದ್ರವಿ ಸುಳ್ಳಿನಿಂದ ಏನೂ ಸಮಸ್ಯೆ ಆಗಲಿಕ್ಕಿಲ್ಲ ಎಂದೆಲ್ಲ ಯೋಚಿಸಿ ತಪ್ಪು ಹೆಜ್ಜೆ ಇಡಬೇಡಿ. ಜ್ಯೋತಿಷಿಗಳು, ಪುರೋಹಿತರು, ಮ್ಯಾಜಿಷಿಯನ್‌ಗಳಿಗೆ ಉತ್ತಮವಾದ ದಿನ ಇದು. ದೂರದ ಸ್ಥಳಗಳಿಂದ ನಿಮಗೆ ಆಹ್ವಾನ ಬರಲಿದೆ. ಸನ್ಮಾನ ಆಗುವ ಸಾಧ್ಯತೆ ಇದೆ. ನೀವಾಗಿಯೇ ಕೆಲವು ಜವಾಬ್ದಾರಿಗಳನ್ನು ಅತ್ಯುತ್ಸಾಹದಲ್ಲಿ ಮೈಮೇಲೆ ಎಳೆದುಕೊಳ್ಳಲಿದ್ದೀರಿ. ನಿಮ್ಮ ಸಾಮರ್ಥ್ಯವನ್ನು ನೋಡಿ, ನಿರ್ಧರಿಸಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಹೊಸದಾದ ಕಾರು, ಬೈಕ್ ಖರೀದಿ ಮಾಡಬೇಕು ಎಂದು ಇರುವವರು ಈ ದಿನ ಅಂತಿಮವಾಗಿ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಆದರೆ ಬಜೆಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಉದ್ಯೋಗ, ವೃತ್ತಿಯಿರಲಿ ಬಂದಿದ್ದೇನು- ಖರ್ಚಾಗಿದ್ದೆಷ್ಟು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಎಲ್ಲಿಂದಲೋ ಬಂದು ನಿಮ್ಮ ಕೈ ಹಿಡಿದು ಮೇಲೆ ಎತ್ತುತ್ತಾರೆ ಎಂಬ ಭ್ರಮೆ ಬೇಡ. ನಿಮ್ಮ ಅಧ್ಯಾತ್ಮ ಮನೋಭಾವ ಸ್ಫೂರ್ತಿ ಆಗಬೇಕೇ ವಿನಾ ಯಾವುದೇ ಕೆಲಸಕ್ಕೆ ವಿರಕ್ತಿ ಆಗದಿರಲಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಮುಂಚಿನ ರೀತಿಯಲ್ಲಿ ಹೇಳಿದ ತಕ್ಷಣ ಕೆಲಸಗಳು ಆಗುವುದಿಲ್ಲ. ಇದೇ ಕಾರಣಕ್ಕೆ ನಿಮ್ಮ ಪ್ರಾಶಸ್ತ್ಯ ಕಡಿಮೆ ಆಗುತ್ತಿದೆಯೇನೋ ಎಂಬಂತೆ ಅನಿಸುತ್ತದೆ. ಅದು ಮನೆ ಇರಲಿ ಅಥವಾ ಹೊರಗಿರಲಿ. ಹೀಗೆ ಅನಿಸಿದ ತಕ್ಷಣ ಎಲ್ಲರ ಗಮನ ಸೆಳೆಯುವ ಸಲುವಾಗಿ ವಿಪರೀತದ ಕೆಲಸಗಳೇನೋ ಮಾಡುವುದಕ್ಕೆ ತೊಡಗಬೇಡಿ. ಈ ಸಮಯ ಕಳೆಯಲು ಬಿಡಿ. ನೀವು ಅನುಸರಿಸುವ ಧರ್ಮದ ಅಥವಾ ಮನಸಿಗೆ ನೆಮ್ಮದಿ- ಚೈತನ್ಯ ನೀಡುವಂಥ ಆಡಿಯೋಗಳನ್ನು ಕೇಳಿಸಿಕೊಳ್ಳಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹಣ ಹೊಂದಿಸಿಕೊಳ್ಳುವುದು, ಬಟ್ಟೆ ಹೊಂದಿಸಿಕೊಳ್ಳುವುದು, ಯಾವುದಾದರೂ ಮುಖ್ಯ ವಿಚಾರವನ್ನು ಸಂಗ್ರಹಿಸುವುದು ಇಂಥವುಗಳಿಗೆ ದಿನದ ಹೆಚ್ಚಿನ ಸಮಯವು ಹೋಗಲಿದೆ. ಸ್ನೇಹಿತರು- ಸಂಬಂಧಿಕರು ತಮ್ಮ ಮನೆಯ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುವ ಸಾಧ್ಯತೆ ಇದೆ. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಮುಖ್ಯ ದಾಖಲೆ- ಪತ್ರಗಳಲ್ಲಿ ಸಣ್ಣ -ಪುಟ್ಟ ಲೋಪ, ದೋಷಗಳಾಗಿ, ಸಮಸ್ಯೆಗಳಂತೆ ಕಾಡುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಭೂಮಿ- ಆಸ್ತಿ ವಿಚಾರಕ್ಕೆ ಬಹಳ ಮುಖ್ಯವಾದ ಚರ್ಚೆ ನಡೆಸಲಿದ್ದೀರಿ. ಕುಟುಂಬಸ್ಥರು ನಿಮ್ಮಿಂದ ನಿರೀಕ್ಷೆ ಮಾಡುವುದು ಬಹಳ ಹೆಚ್ಚಾಗುತ್ತದೆ ಎಂಬ ಆತಂಕ ನಿಮ್ಮನ್ನು ಬಹಳ ಕಾಡಲಿದೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ನಿಮ್ಮ ಸಮಯದಲ್ಲಿ ದೊಡ್ಡ ಪ್ರಮಾಣ ವ್ಯರ್ಥವಾಗುವ ಸಾಧ್ಯತೆ ಇದೆ. ಹೊಸಬರು ಪರಿಚಯವಾಗಿ, ಹೂಡಿಕೆಯ ಪ್ರಸ್ತಾವವನ್ನು ಇಟ್ಟಲ್ಲಿ ಅದೆಷ್ಟೇ ಲಾಭದಾಯಕ, ಆಕರ್ಷಕ ಎಂದೆನಿಸಿದರೂ ತಕ್ಷಣ ಏನೂ ತೀರ್ಮಾನ ಕೈಗೊಳ್ಳಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಧಾನಕ್ಕೆ ಎಲ್ಲವೂ ಸರಿಹೋಗುತ್ತದೆ ಎಂಬ ಭಾವನೆ ಮೂಡಲಿದೆ. ಸಣ್ಣ- ಪುಟ್ಟ ಯೋಜನೆಗಳು ರೂಪಿಸುವುದಕ್ಕೆ ಅಗತ್ಯ ಸಂಪನ್ಮೂಲಗಳನ್ನು ಒಟ್ಟುಗೂಡಿಸುವುದಕ್ಕೆ ಶುರು ಮಾಡುತ್ತೀರಿ. ಊಟ- ತಿಂಡಿ ವಿಚಾರದಲ್ಲಿ ಪೊಗದಸ್ತಾದ ಆತಿಥ್ಯ ಸವಿಯುವಂಥ ಯೋಗ ಇದೆ. ದೂರದ ಊರಿನಿಂದ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ನಿಮ್ಮ ಕೈಯಿಂದ ಹಣ ಹಾಕಿ, ಇತರರಿಗೆ ಅನುಕೂಲ ಮಾಡಿಕೊಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಹಳೇ ಪ್ರೇಮ ಪ್ರಸಂಗಗಳು ನಿಮ್ಮನ್ನು ಈ ದಿನ ಕಾಡಲಿದೆ. ಯಾವುದೋ ಮಾತು, ಹಾಡು, ಪುಸ್ತಕದ ಸಾಲಿನ ಕಾರಣಕ್ಕೆ ಕಣ್ಣೀರಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಮಾಡುವುದು ಮುಖ್ಯವಾಗುತ್ತದೆ. ಮೊದಲ ಬಾರಿಗೆ ಯಾವುದಾದರೂ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಮನೆಯ ಇಂಟೀರಿಯರ್ ಡಿಸೈನರ್ ಗಳಿಗೆ ಹೊಸ ಅವಕಾಶಗಳು ದೊರೆಯಲಿವೆ.
ಲೇಖನ- ಎನ್.ಕೆ.ಸ್ವಾತಿ