ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮೇ 4ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಸಂಬಂಧಿಗಳು, ಕುಟುಂಬ ಸದಸ್ಯರು, ಸ್ನೇಹಿತರ ಸಲುವಾಗಿ ಹಣ ಖರ್ಚು ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಸ್ವಂತಕ್ಕೋಸ್ಕರ ತೆಗೆದುಕೊಂಡಿದ್ದ ವಸ್ತುಗಳನ್ನು ಇತರರಿಗೆ ನೀಡಲೇಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಈ ಹಿಂದೆ ನಿಮ್ಮನ್ನು ಕಾಡಿದ್ದ ಅನಾರೋಗ್ಯ ಸಮಸ್ಯೆಯೊಂದು ಮತ್ತೆ ತಲೆ ಎತ್ತುವ ಸಾಧ್ಯತೆಗಳಿವೆ. ಅಥವಾ ನೀವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಿರಿ, ಅದರ ಫಾಲೋ ಅಪ್ ಚೆಕ್ ಅಪ್ ಮಾಡಿಸಿಲ್ಲ ಎಂದಾದರೂ ಆ ಸಮಸ್ಯೆ ನಿಮ್ಮನ್ನು ಈ ದಿನ ಕಾಡಬಹುದು. ನೀವು ಸರಿಯಾದ ನಿರ್ಧಾರ ಅಥವಾ ತೀರ್ಮಾನ ಮಾಡಿದ ಹೊರತಾಗಿಯೂ ಕೆಲವರು ದಾರಿ ತಪ್ಪಿಸಬಹುದು. ಆದ್ದರಿಂದ ನಿಮಗೆ ಶೇಕಡಾ ನೂರರಷ್ಟು ಖಾತ್ರಿ ಇರುವ ಸಂಗತಿಗಳಲ್ಲಿ ಇತರರ ಅಭಿಪ್ರಾಯ ಅನುಸರಿಸದಿರುವುದು ಕ್ಷೇಮ. ಮಕ್ಕಳ ಶಿಕ್ಷಣದ ವಿಚಾರಕ್ಕೆ ತುರ್ತಾಗಿ ಗಮನ ನೀಡಬೇಕಾದ ಸನ್ನಿವೇಶ ಎದುರಾಗಲಿದೆ.
ಏನು ಮಾಡಿದರೆ ಸರಿ, ಯಾವುದು ಮಾಡಿದರೆ ತಪ್ಪು ಎಂದು ನಿರ್ಧರಿಸಲಾಗದ ಸ್ಥಿತಿಯಲ್ಲಿ ಇರುತ್ತೀರಿ. ಏಕೆಂದರೆ, ನಿಮಗೆ ಹೇಗಾದರೂ ಮಾಡಿ ಪೇಚಿಗೆ ಸಿಲುಕಿಸಬೇಕು ಎಂದುಕೊಂಡು ಕೆಲವರು ಕಾಯುತ್ತಿರುತ್ತಾರೆ. ಆ ರೀತಿಯವರು ಯಾರು ಮತ್ತು ಅವರ ಗುರಿ ಏನು ಎಂಬುದನ್ನು ನೀವು ಸಹ ಸುಲಭವಾಗಿ ಪತ್ತೆ ಹಚ್ಚಲಿದ್ದೀರಿ. ಆದರೆ ನಿಮ್ಮ ಪರಿಸ್ಥಿತಿಯನ್ನು ಸುಧಾರಿಸುವುದು ಸಾಧ್ಯವಿಲ್ಲ ಎಂಬುದು ಕಂಡುಬರುತ್ತದೆ. ಅತಿ ಮುಖ್ಯವಾದ ಕಾಗದಪತ್ರಗಳ ವ್ಯವಹಾರ ಇದ್ದಲ್ಲಿ, ಈ ದಿನ ತುರ್ತು ಎಂಬುದೇನೂ ಇಲ್ಲ ಅಂತಾದರೆ ಮುಂದಕ್ಕೆ ಹಾಕುವುದು ಒಳ್ಳೆಯದು. ಒಂದೆರಡು ದಿನ ಸಮಯ ನೀಡುವಂತೆ ಕೇಳಿ, ನಿಧಾನಕ್ಕೆ ಓದಿಕೊಂಡ ನಂತರವೇ ಅಭಿಪ್ರಾಯವನ್ನು ಹೇಳಿ ಅಥವಾ ಸಹಿಯನ್ನು ಮಾಡಿ. ಕಫದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅದು ತೀವ್ರವಾಗುವ ಸಾಧ್ಯತೆಗಳಿವೆ.
ಒಂದು ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಸುಮಾರಾಗಿ ಇದ್ದರೂ ಈ ದಿನ ಅದನ್ನು ನೀವು ಸಾಧಿಸಿಕೊಂಡು ಬರುವಂಥ ಅವಕಾಶಗಳು ಹೆಚ್ಚಿವೆ. ಮಾತಿನ ಮೂಲಕ ಎದುರಿನಲ್ಲಿ ಇರುವವರನ್ನು ಮರುಳು ಮಾಡುವಷ್ಟು ಅಥವಾ ನಿಮ್ಮ ಧ್ವನಿಗೆ ಆಕರ್ಷಣೆಗೆ ಒಳಗಾಗುವಂತೆ ಮಾಡುವಂಥ ಪ್ರಭಾವ ನಿಮ್ಮಲ್ಲಿ ಇರುತ್ತದೆ. ಆದರೆ ಒಂದು ಸಮಸ್ಯೆ ಏನೆಂದರೆ, ಸ್ವತಃ ನಿಮಗೇ ಒಂದು ಬಗೆಯ ನಿರಾಸಕ್ತಿ ಕಾಡುತ್ತಾ ಇರುತ್ತದೆ. ಬೇರೆಯವರು ಪೂಸಿ ಹೊಡೆದು ಕೆಲಸ ಮಾಡಿಸಬೇಕಾದ ಸನ್ನಿವೇಶ ಸೃಷ್ಟಿ ಆಗುತ್ತದೆ. ಜವಾಬ್ದಾರಿಗಳ ಕಡೆಗೆ ಲಕ್ಷ್ಯವನ್ನು ನೀಡಿ. ಹೊಸ ಕೋರ್ಸ್ ಗಳಿಗೆ ಸೇರಬೇಕು ಎಂದೆನಿಸಿದಲ್ಲಿ ಈ ದಿನ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು, ಅದಕ್ಕೆ ಸೇರಿಕೊಳ್ಳುವುದು ಉತ್ತಮ. ನಿಮಗೆ ಸಂಬಂಧಪಡದ ವಿಚಾರವಾದಲ್ಲಿ ಅದರಲ್ಲಿ ಮೂಗು ತೂರಿಸಿಕೊಂಡು ಹೋಗಬೇಡಿ.
ನೀವು ಈ ದಿನ ಆಕ್ರಮಣಕಾರಿ ಧೋರಣೆಯಲ್ಲಿ ಇರುತ್ತೀರಿ. ಇತರರ ಸಣ್ಣ- ಪುಟ್ಟ ತಪ್ಪುಗಳು ಕಂಡರೂ ಮೈ ಮೇಲೆ ಎಗರಿ ಬೀಳುವಂಥ ಸಿಟ್ಟು ಕಾಡುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಅವಕಾಶವೊಂದು ಹುಡುಕಿಕೊಂಡು ಬರಲಿದೆ. ಆದರೆ ಹಣಕಾಸಿನ ವಿಚಾರವನ್ನು ಸರಿಯಾಗಿ ಮಾತನಾಡಿಕೊಳ್ಳುವುದು ಮುಖ್ಯ. ಕೆಲಸ ಆದ ಮೇಲೆ ಹೇಗಿದ್ದರೂ ಕೊಡುತ್ತಾರೆ ಎಂದು ನೀವಂದುಕೊಂಡಿರೋ ಅಥವಾ ನಿಮಗೆ ಒಳ್ಳೆ ಹಣವನ್ನೇ ಕೊಡಿಸುತ್ತೇನೆ ಎಂದು ಅವರು ಆಶ್ವಾಸನೆ ನೀಡಿದರು ಎಂದು ಕಾರಣಕ್ಕೆ ಸುಮ್ಮನಾದಿರೋ ಆ ನಂತರ ಬೇಸರ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ನಿಮ್ಮಲ್ಲಿ ಯಾರಾದರೂ ಬಾಡಿಗೆಗೆ ಮನೆಯನ್ನು ಹುಡುಕಾಡುತ್ತಿದ್ದಲ್ಲಿ ಮನಸ್ಸಿಗೆ ಒಪ್ಪುವಂತಹ, ಅನುಕೂಲಕರವಾದ ಮನೆ ದೊರೆಯುವ ಸಾಧ್ಯತೆ ಹೆಚ್ಚಿದೆ.
ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ. ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡಬೇಕು ಎಂದುಕೊಂಡರೂ ಬಹಳ ಉತ್ತಮವಾದ ವಾತಾವರಣ ಸೃಷ್ಟಿ ಆಗಲಿದೆ. ಅಥವಾ ಉಡುಗೊರೆ ಪಡೆದುಕೊಳ್ಳುವಂಥ ಹಾಗೂ ಪ್ರೀತಿ ಇನ್ನಷ್ಟು ಗಟ್ಟಿ ಆಗುವಂಥ ಸನ್ನಿವೇಶಗಳು ಎದುರಾಗಲಿದೆ. ಡೇರಿ- ಪಶು ಸಾಕಣೆ ಮಾಡುವಂಥವರಿಗೆ ವ್ಯವಹಾರದ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ಒಂದು ವೇಳೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದು ಸಿಗುವುದು ಈ ದಿನ ಖಾತ್ರಿ ಆಗಲಿದೆ. ಇನ್ನು ಆಗುವುದಿಲ್ಲ ಎಂದುಕೊಂಡು ಆಸೆಯೇ ಕೈ ಬಿಟ್ಟಿದ್ದ ಕೆಲವು ಕೆಲಸಗಳು ಅಚಾನಕ್ ಆಗಿ ಮುಗಿಯಲಿವೆ. ನಿಮ್ಮಲ್ಲಿ ಕೆಲವರು ಬ್ಯೂಟಿ ಪಾರ್ಲರ್, ಫ್ಯಾಷನ್ ದಿರಿಸಿಗಾಗಿ ಹೆಚ್ಚಿನ ಖರ್ಚನ್ನು ಮಾಡುವ ಯೋಗವಿದೆ.
ನಿಮ್ಮ ಮಾತಿಗೆ ನಾನಾ ಅರ್ಥ ಕಲ್ಪಿಸಿ, ನೀವು ಬಹಳ ಗೌರವಿಸುವ ಹಾಗೂ ಇಷ್ಟಪಡುವಂಥ ವ್ಯಕ್ತಿಗಳ ಎದುರಿಗೆ ಅವಮಾನ ಆಗುವಂಥ ಸನ್ನಿವೇಶ ಎದುರಾಗಲಿದೆ. ಆದ್ದರಿಂದ ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಮಾತನಾಡಿ. ಜನರು ಗುಂಪಾಗಿ ಇರುವಂಥ ಕಡೆಗಳಲ್ಲಂತೂ ಇನ್ನೂ ಹೆಚ್ಚು ಜಾಗ್ರತೆಯನ್ನು ವಹಿಸಬೇಕು. ಈ ಹಿಂದೆ ನೀವು ಯಾವಾಗಲೋ ಸಾಲಕ್ಕೆ ಜಾಮೀನಾಗಿ ನಿಂತಿದ್ದಲ್ಲಿ ಅದಕ್ಕೆ ಸಂಬಂಧ ಪಟ್ಟಂತೆ ಕೆಲವು ಸಮಸ್ಯೆಗಳು ಉದ್ಭವಿಸಿ, ನಿಮಗೆ ನೋಟಿಸ್ ಬರುವ ಸಾಧ್ಯತೆಗಳಿವೆ. ಇತರರ ಬಗ್ಗೆ ನೀವು ತೋರಿಸಿದ ದಯೆ- ದಾಕ್ಷಿಣ್ಯವೇ ಈಗ ತಲೆ ನೋವಾಗಿ ಪರಿಣಮಿಸಲಿದೆ. ನಿಮ್ಮ ಹೆಸರನ್ನು ಬಳಸಿಕೊಂಡು, ಕೆಲವು ಕೆಲಸಗಳನ್ನು ಮಾಡಿಸಿಕೊಳ್ಳಲಾಗಿದೆ ಅಥವಾ ಹಣ ಸಂಗ್ರಹಿಸಲಾಗಿದೆ ಎಂಬ ವಿಚಾರಗಳು ಗಮನಕ್ಕೆ ಬರಲಿದೆ. ಒಟ್ಟಾರೆ ನಿಮ್ಮ ನೆಮ್ಮದಿ ಹಾಳಾಗುವ ಸಾಧ್ಯತೆಗಳಿವೆ.
ನಿಮಗೆ ಬರಬೇಕಾದ ಹಣಕ್ಕೆ ಪ್ರಯತ್ನ ಪಡುವುದಿದ್ದಲ್ಲಿ ಈ ದಿನ ಒಂದಿಷ್ಟು ಗಟ್ಟಿಯಾಗಿ ಪ್ರಯತ್ನಿಸಿ. ಅದು ಸಾಲವೇ ಇರಬಹುದು ಅಥವಾ ನೀವು ಈಗಾಗಲೇ ಕೆಲಸ ಮಾಡಿಯಾಗಿದೆ, ಅದರ ಹಣ ನಿಮಗೆ ಬರಬೇಕಿದೆ ಎಂದಾದಲ್ಲಿ ಗಟ್ಟಿಯಾಗಿ ಪ್ರಯತ್ನವನ್ನು ಮಾಡಿ. ನೀವಾಯಿತು, ನಿಮ್ಮ ಪಾಡಾಯಿತು ಎಂದು ಇದ್ದರೂ ಸಾಮಾಜಿಕವಾಗಿ ಪ್ರಾಮುಖ್ಯ ಹೆಚ್ಚಾಗಲಿದೆ. ಈ ಹಿಂದೆ ನೀವು ಊಹಿಸಿದಂತೆ ಅಥವಾ ಎಚ್ಚರಿಕೆ ನೀಡಿದಂತೆಯೇ ಕೆಲವು ಬೆಳವಣಿಗೆಗಳು ಆಗುವುದರಿಂದ ಇತರರು ನಿಮ್ಮ ಬಗ್ಗೆ ಅಚ್ಚರಿ ವ್ಯಕ್ತಪಡಿಸಲಿದ್ದಾರೆ. ಜ್ಯೋತಿಷಿಗಳು, ಧಾರ್ಮಿಕ ಪ್ರವಚನಕಾರರು, ಪೌರೋಹಿತ್ಯವನ್ನು ವೃತ್ತಿಯಾಗಿ ಸ್ವೀಕರಿಸಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವಂಥ ಯೋಗ ಇದೆ. ನಿಧಾನವಾಗಿ ಆರಂಭ ಕಂಡಂಥ ಕೆಲಸಗಳು ಕೊನೆ ಕೊನೆಗೆ ಬಹಳ ವೇಗವಾಗಿ ಮುಗಿಯಲಿವೆ.
ನಿಮ್ಮ ಅಹಂಕಾರಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಯಾವ ವಿಚಾರ, ವಿಷಯ, ಕೆಲಸದಲ್ಲಿ ನಿಮಗೆ ಅಪರಿಮಿತವಾದ ವಿಶ್ವಾಸ ಇರುತ್ತದೋ ಅವುಗಳನ್ನು ನೀವು ಒಪ್ಪವಾಗಿ ಮಾಡಬಲ್ಲಿರಿ ಅಂತ ಅಂದುಕೊಂಡಿರುತ್ತೀರೋ ಅಂಥವುಗಳನ್ನು ನಿಮ್ಮಿಂದ ಮಾಡುವುದಕ್ಕೆ ಆಗಲ್ಲ ಎಂದು ಕೆಲವರು ಸಾಬೀತು ಮಾಡುವ ಸಾಧ್ಯತೆಗಳಿವೆ. ಮಾನಸಿಕವಾಗಿ ಬಹಳ ಗಟ್ಟಿಯಾಗಿ ಇರಬೇಕಾದದ್ದು ಈ ದಿನದ ಅಗತ್ಯ ಎಂಬುದನ್ನು ತಿಳಿದುಕೊಳ್ಳಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ, ಅದರಲ್ಲೂ ವಿದೇಶಗಳಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದರೆ ಅನುಭವಿಗಳು, ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಕಟ್ಟಡ ನಿರ್ಮಾಣದ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ ಅವಕಾಶ ತಪ್ಪಬಹುದು, ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ.
ಬಹಳ ಸಮಯದಿಂದ ನಿಮ್ಮ ಕೈಗೆ ಸಿಗದೆ ಓಡಾಡಿಕೊಂಡಿರುವಂಥವರು, ನಿಮ್ಮದೇ ವಸ್ತುವನ್ನು ವಾಪಸ್ ಕೊಡದೆ ತಪ್ಪಿಸಿಕೊಳ್ಳುತ್ತಿರುವಂಥವರು ಈ ದಿನ ನಿಮ್ಮ ಕೈಗೆ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ನಿಮ್ಮ ವಸ್ರು ವಾಪಸ್ ಪಡೆಯುವ ಎಲ್ಲ ಸಾಧ್ಯತೆಗಳು ಇವೆ. ನಿಮಗೆ ನಿಚ್ಚಳವಾಗಿ ತಿಳಿಯುತ್ತಿರುವ ವಿಚಾರದಲ್ಲಿ ನಿರ್ಧಾರ ಮಾಡುವುದಕ್ಕೆ ಹಿಂಜರಿಯಬೇಡಿ. ಮನಸ್ಸಿನಲ್ಲಿನ ವಿಷಯವನ್ನು ಹೇಳಿದರೆ ಎದುರಿನಲ್ಲಿರುವ ವ್ಯಕ್ತಿಗಳಿಗೆ ಏನು ಅನಿಸುತ್ತದೆಯೋ ಎಂದು ಅಳುಕು- ಹಿಂಜರಿಕೆ ಮಾಡಬೇಡಿ. ಕೆಲಸಗಳನ್ನು ಆದ್ಯತೆ ಮೇಲೆ ಮಾಡುವುದಕ್ಕೆ ಪ್ರಯತ್ನಿಸಿ. ಯಾವುದು ಮೊದಲು ಹಾಗೂ ಯಾವುದು ನಂತರ ಎಂಬ ಬಗ್ಗೆ ಸ್ಪಷ್ಟತೆ ಇರುವುದು ತುಂಬ ಮುಖ್ಯವಾಗುತ್ತದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಇರುತ್ತದೆ. ಆದರೆ ದಿನದ ಕೊನೆ ಹೊತ್ತಿಗೆ ಶುಭ ವಾರ್ತೆ ಕೇಳಿ ಬರಲಿದೆ.
ಲೇಖನ- ಎನ್.ಕೆ.ಸ್ವಾತಿ