ರಾಶಿ ಚಕ್ರದಲ್ಲಿ ಬರುವಂಥ ಹನ್ನೆರಡು ರಾಶಿಗಳನ್ನು ನಾನಾ ರೀತಿಯಲ್ಲಿ ವಿಂಗಡಿಸಲಾಗಿದೆ. ಉದಾಹರಣೆಗೆ, ಅಗ್ನಿ, ಪೃಥ್ವಿ, ವಾಯ, ಜಲ ತತ್ವದ ರಾಶಿಗಳು. ಅಂದರೆ, ಮೇಷ, ಸಿಂಹ, ಧನುಸ್ಸು- ಅಗ್ನಿ ತತ್ವ, ವೃಷಭ, ಕನ್ಯಾ, ಮಕರ- ಪೃಥ್ವಿ ತತ್ವ, ಮಿಥುನ, ತುಲಾ, ಕುಂಭ-ವಾಯು ತತ್ವ ಹಾಗೂ ಕರ್ಕಾಟಕ, ವೃಶ್ಚಿಕ, ಮೀನ- ಜಲತತ್ವದ ರಾಶಿಗಳು. ಅದೇ ರೀತಿ ಚರ, ಸ್ಥಿರ ಹಾಗೂ ದ್ವಿಸ್ವಭಾವ ರಾಶಿಗಳು ಅಂತಲೂ ವಿಭಾಗ ಮಾಡಿದ್ದಾರೆ. ಮೇಷ, ಕರ್ಕಾಟಕ, ತುಲಾ, ಮಕರ- ಚರ ರಾಶಿಗಳಾದರೆ, ವೃಷಭ ಸಿಂಹ, ವೃಶ್ಚಿಕ, ಕುಂಭ- ಸ್ಥಿರ ರಾಶಿಗಳು. ಈ ಲೇಖನದಲ್ಲಿ ಚರ ರಾಶಿಗಳಾದ ಮೇಷ, ಕರ್ಕಾಟಕ, ತುಲಾ ಹಾಗೂ ಮಕರ ರಾಶಿಗಳವರಿಗೆ ಸೂಕ್ತವಾಗುವಂಥ ವೃತ್ತಿ, ಉದ್ಯೋಗಗಳು ಯಾವುವು ಎಂಬುದರ ವಿವರಣೆ ಇಲ್ಲಿದೆ.
ಮೇಷ: ಮೇಷ ರಾಶಿಯ ಅಧಿಪತಿ ಕುಜ. ಅಗ್ನಿ ತತ್ವವಾದ ಇದು ಆರಂಭದಲ್ಲೇ ಹೇಳಿದಂತೆ ಚರ ರಾಶಿ. ಕುಜ ಅಂದರೆ ಸೈನ್ಯದ ಅಧಿನಾಯಕ ಮತ್ತು ಆಕ್ರಮಣಶೀಲತೆ ಹಾಗೂ ಪುರುಷ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದರಿಂದಾಗಿ ಈ ರಾಶಿಯವತನ್ನು ಆಕ್ರಮಣಕಾರಿ ಮತ್ತು ಧೈರ್ಯಶಾಲಿಯಾಗಿ ಮಾಡುತ್ತದೆ. ಆದರೆ ಇವರಿಗೆ ಡಿಪ್ಲೊಮ್ಯಾಟಿಕ್ ಆಗಿ ಮಾತನಾಡುವುದೋ ಅಥವಾ ಚಾತುರ್ಯಕ್ಕೋ ಕೊರತೆಯಿರುತ್ತದೆ. ಇವರಲ್ಲಿ ಹೆಚ್ಚು ಸ್ಪರ್ಧಾ ಮನೋಭಾವ ಇರುತ್ತದೆ. ಸಣ್ಣ ಪುಟ್ಟ ವಿಷಯಗಳಿಗೂ ತಲೆಕೆಡಿಸಿಕೊಳ್ಳುತ್ತಾರೆ. ಈ ರಾಶಿಯವರು ಮಹತ್ವಾಕಾಂಕ್ಷಿಗಳು ಮತ್ತು ಸಾಹಸಪ್ರಿಯರು. ಸದಾ ಸವಾಲುಗಳನ್ನು ಮತ್ತು ಬದಲಾವಣೆಯನ್ನು ಇಷ್ಟಪಡುತ್ತಾರೆ. ಈ ರಾಶಿಯವರು ರಕ್ಷಣೆ, ಶಸ್ತ್ರಾಸ್ತ್ರಗಳು, ಎಂಜಿನಿಯರಿಂಗ್, ಕ್ರೀಡೆ, ಸರ್ಕಾರಿ ಕೆಲಸ, ಕಬ್ಬಿಣ, ಇಟ್ಟಿಗೆ, ಗಣಿಗಾರಿಕೆ, ಶಸ್ತ್ರಚಿಕಿತ್ಸೆ ಮತ್ತು ಅಡುಗೆಗೆ ಸಂಬಂಧಿಸಿದವುಗಳಲ್ಲಿ ದ್ಕಂಡುಬರುತ್ತಾಳಾಗಿರುತ್ತದೆ. ಅದೇ ರೀತಿ ಕೃಷಿ, ದಂತವೈದ್ಯರು, ಪ್ರಾಜೆಕ್ಟ್ ನಿರ್ವಾಹಕರು, ಕಾರ್ಯನಿರ್ವಾಹಕರು, ವಿವಿಧ ವಸ್ತುಗಳ ತಯಾರಕರು, ಮಿಲಿಟರಿ ಮತ್ತು ಪ್ಯಾರಾ-ಮಿಲಿಟರಿ ಪಡೆಗಳು, ಪೊಲೀಸ್, ಬೆಂಕಿ ಮತ್ತು ಲೋಹಗಳನ್ನು ಬಳಸಿಕೊಳ್ಳುವ ವೃತ್ತಿಗಳಲ್ಲಿ ಕೆಲಸ ಮಾಡಬಹುದಾಗಿರುತ್ತದೆ.
ಕರ್ಕಾಟಕ: ಕರ್ಕಾಟಕ ರಾಶಿ ಅಧಿಪತಿ ಚಂದ್ರ. ಇನ್ನು ಜಲ ತತ್ವದ ರಾಶಿ. ಇವರು ಭಾವನಾ ಜೀವಿಗಳು. ತುಂಬ ಸೂಕ್ಷ್ಮ ಸ್ವಭಾವದವರು. ಬಹಳ ವೇಗವಾಗಿ ಅರ್ಥ ಮಾಡಿಕೊಳ್ಳುವ ಮತ್ತು ಬುದ್ಧಿಶಕ್ತಿ ಇರುವಂಥವರು, ಕರ್ಕ ರಾಶಿಯವರು ಬಹಳ ಕಲಾತ್ಮಕ ಚಿಂತಕರು, ಅರ್ಥಗರ್ಭಿತ ಮಾತುಗಳನ್ನು ಆಡುವವರು, ಸಹಾನುಭೂತಿ ಇರುವಂಥವರು, ಉತ್ತಮ ಕೇಳುಗರು, ಮಿತವ್ಯಯಿಗಳು, ಶ್ರಮಜೀವಿಗಳು, ಉತ್ತಮ ಸಲಹೆಗಾರರು, ಪ್ರೇರಕರು ಮತ್ತು ಹಿಂದಿನ ಜೀವನವನ್ನು ಇಷ್ಟಪಡುತ್ತಾರೆ. ಜತೆಗೆ ಬಹಳ ಒಳ್ಳೆ ಟೀಮ್ ಪ್ಲೇಯರ್. ಆದರೂ ಅವರು ಕೆಲಸ ಮಾಡುವ ಸ್ಥಳದ ವಾತಾವರಣ ಅಥವಾ ಮೇಲಧಿಕಾರಿಗಳು ಭಾವನಾತ್ಮಕವಾಗಿ ಸ್ಪಂದಿಸದೆ ಇದ್ದಲ್ಲಿ ಅಲ್ಲಿಗೆ ಹೊಂದಿಕೊಳ್ಳಲ್ಲ. ಪತ್ರಕರ್ತರು, ಬರಹಗಾರರು, ಮನೋವೈದ್ಯರು, ಕಲಾವಿದರು, ರಾಜಕಾರಣಿಗಳು, ವಕೀಲರು, ಆಭರಣ ವ್ಯಾಪಾರಿಗಳು, ಸಲಹೆಗಾರರು, ಇತಿಹಾಸಕಾರರು, ಆಡಳಿತಗಾರರು, ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರು, ವೈದ್ಯರು, ದಾದಿಯರಾಗಿ ಇವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಜತೆಗೆ ಉತ್ತಮ ಮನೆಗೆಲಸಗಾರರು, ಹೋಟೆಲ್ ಮಾಲೀಕರು, ರೆಸ್ಟೋರೆಂಟ್ ಮಾಲೀಕರು, ಅಡುಗೆ ವೃತ್ತಿಪರರು, ಅಡುಗೆಯವರು, ದ್ರವ ಪದಾರ್ಥಗಳೊಂದಿಗೆ ವ್ಯವಹರಿಸುವ ವೃತ್ತಿಪರರು, ರಫ್ತು ಮತ್ತು ಆಮದು ಸಾರಿಗೆ, ಕೃಷಿ, ಹಾಲು, ದಿನಸಿ, ತರಕಾರಿ ಮಾರಾಟಗಾರರು, ವೈದ್ಯಕೀಯ ಮಳಿಗೆಗಳು, ಮುತ್ತು ಮಾರಾಟಗಾರರು ಅಥವಾ ಯಾವುದೇ ನೀರಿನ ಸಂಬಂಧಿತ ಕೆಲಸಗಳನ್ನು ಇವರು ಮಾಡಬಹುದು.
ತುಲಾ: ತುಲಾ ರಾಶಿಯ ಅಧಿಪತಿ ಶುಕ್ರ. ಇದು ವಾಯು ತತ್ವದ ರಾಶಿ ಮತ್ತು ಚರ ಸ್ವಭಾವದ್ದು. ಇವರು ಆಕರ್ಷಣಾ ಶಕ್ತಿ ಹೊಂದಿರುತ್ತಾರೆ. ಒಳ್ಳೆ ಕಮ್ಯುನಿಕೇಟರ್ ಮತ್ತು ಇತರರನ್ನು ಮನವೊಲಿಸುವ ಕಲೆಯಲ್ಲಿ ನಿಸ್ಸೀಮರು, ತುಲಾ ರಾಶಿಯವರು ನಿಷ್ಪಕ್ಷಪಾತ ಸ್ವಭಾವದವರು, ಪ್ರಾಯೋಗಿಕ ಚಿಂತಕರು, ಉತ್ತಮ ಸಂವಹನಕಾರರು, ವಾಗ್ಮಿಗಳು, ತಂತ್ರಜ್ಞರು, ಪ್ಲಾನರ್ ಮತ್ತು ಸಮಾಲೋಚಕರು. ಇವುಗಳೆಲ್ಲವನ್ನೂ ಅಚ್ಚುಕಟ್ಟಾಗಿಯೂ ಮಾಡುತ್ತಾರೆ. ಈ ರಾಶಿಯವರಿಗೆ ಸರಿಹೊಂದುವ ಕ್ಷೇತ್ರಗಳು ಅಥವಾ ವೃತ್ತಿಗಳೆಂದರೆ, ನಟನೆ, ಹಾಡುಗಾರಿಕೆ, ನೃತ್ಯ, ಹಣಕಾಸು ಯೋಜನೆ, ಹಣಕಾಸು ಸಲಹೆಗಾರರು, ಹೋಟೆಲ್ ಉದ್ಯಮಿಗಳು, ಕಾನೂನು ಸಲಹೆಗಾರರು, ವ್ಯವಸ್ಥಾಪಕರು, ವೈದ್ಯರು, ಇತ್ಯಾದಿ. ಅವರು ಪ್ರೇಕ್ಷಕರ ಮನವೊಲಿಸುವಲ್ಲಿ ನಿಸ್ಸೀಮರು. ದೊಡ್ಡ ಕಾರ್ಯಗಳನ್ನು ಸಹ ಸಲುಭವಾಗಿ ಮಾಡುವಂಥವರು. ಇವರದು ಒಂದಿಷ್ಟು ನೆಗೆಟಿವ್ ಸಹ ಇದೆ. ಇವರ ಕೆಲಸವನ್ನು ಗುರುತಿಸಬೇಕು, ಆಗಾಗ ಮೆಚ್ಚುಗೆಯ ಮಾತುಗಳನ್ನು ಹೇಳಬೇಕು. ಈ ಪೈಕಿ ಯಾವುದು ಕಡಿಮೆಯಾದರೂ ಅಲ್ಲಿಂದ ಕೆಲಸ ಬದಲಾಯಿಸುವುದಕ್ಕೆ ಯೋಚಿಸುತ್ತಾರೆ. ಇವರ ಮನಸ್ಸು ಹೀಗೇ ಎಂದು ಅಂದಾಜು ಮಾಡುವುದು ಕಷ್ಟ,
ಮಕರ: ಮಕರ ರಾಶಿಯ ಅಧಿಪತಿ ಶನಿ. ಪೃಥ್ವಿ ತತ್ವದ ಇದು ಚರ ರಾಶಿ ಆಗಿದೆ. ಈ ರಾಶಿಯವರು ಸಂಘಟನೆ ಮತ್ತು ಯೋಜನೆಗಳು ರೂಪಿಸುವಲ್ಲಿ ಗಟ್ಟಿಗರು. ಇವರಲ್ಲಿ ಎಂಥ ಸನ್ನಿವೇಶವನ್ನೂ ಎದುರಿಸುವಂಥ ಸ್ವಭಾವ ಗಮನಿಸಬಹುದು. ದಿಢೀರ್ ಬದಲಾವಣೆಗಳು, ನಿರ್ಧಾರಗಳು, ದುಡುಕಿನ ತೀರ್ಮಾನಗಳನ್ನು ಇವರಲ್ಲಿ ನೋಡುವುದಕ್ಕೆ ಸಾಧ್ಯವಿಲ್ಲ. ತಮ್ಮ ಗುರಿಗಳನ್ನು ಸಾಧಿಸಲು ಕೆಲಸಕ್ಕೆ ಸಮರ್ಪಿಸಿಕೊಂಡು ಬಿಡುತ್ತಾರೆ. ದಣಿವರಿಯದ ಕಠಿಣ ಪರಿಶ್ರಮ ಇವರಲ್ಲಿ ಕಾಣಬಹುದು. ಪುನರಾವರ್ತಿತ ಅಥವಾ ನೀರಸವಾದ ಕೆಲಸ ಮಾಡುವುದರಲ್ಲಿ ಇವರಿಗೆ ಮನಸ್ಸಿರುವುದಿಲ್ಲ. ಇವರು ತಮ್ಮ ಹಿರಿಯರ ಮಾರ್ಗದರ್ಶನವನ್ನು ಕೇಳಲು ಮತ್ತು ಕ್ರಮಗಳನ್ನು ಅನುಸರಿಸುವುದಕ್ಕೆ ಪ್ರಾಮುಖ್ಯ ನೀಡುತ್ತಾರೆ. ಇವರು ಕೃಷಿ, ಕಾನೂನು, ಗಣಿಗಾರಿಕೆ, ಹೋಟೆಲ್‌ಗಳು, ಆತಿಥ್ಯ, ನಾಯಕರು, ರಾಜಕಾರಣಿಗಳು, ಕಲ್ಲು, ಮರಳು, ನಿರ್ಮಾಣ ವ್ಯವಹಾರಕ್ಕೆ ಸಂಬಂಧಿಸಿದ ವೃತ್ತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಪಾದರಕ್ಷೆಗಳು, ಚರ್ಮದ ವ್ಯಾಪಾರ, ಆಹಾರ ಉತ್ಪನ್ನಗಳು, ಗೊಬ್ಬರ, ರಸಗೊಬ್ಬರಗಳು ಮತ್ತು ಕೀಟನಾಶಕ ವ್ಯಾಪಾರ, ತೈಲ ವ್ಯಾಪಾರ, ಯಂತ್ರಾಂಶ, ಬಿಡಿಭಾಗಗಳು ಮತ್ತು ಹಳೆಯ ವಸ್ತುಗಳ ಕ್ರಯ- ವಿಕ್ರಯ, ಪೋರ್ಟರ್‌ಗಳು ಇಂಥ ವೃತ್ತಿಗಳಲ್ಲಿ ತೊಡಗಿಕೊಳ್ಳಬಹುದು.
Published On - 10:13 pm, Tue, 27 June 23