ವರ್ಷದಲ್ಲಿ ಒಮ್ಮೆಯಾದರೂ ಭೂಮಾತೆಗೆ ಪೂಜೆ ಮಾಡಿದರೆ ವರ್ಷವಿಡೀ ಧಾನ್ಯ ಸಮೃದ್ಧಿ…!

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 8:19 PM

ಮನುಷ್ಯರು ಜೀವಿಸಲು ಬೇಕಾದ ಆಹಾರವನ್ನು ಕೊಡುವವರು ಮೂವರೂ ಮಾತೆಯರೇ. ಒಂದು ಜನ್ಮದಾತೆ, ಎರಡು ಗೋಮಾತೆ ಗೋಮಾತೆ, ಮೂರು ಭೂಮಾತೆ. ಈ ಮೂವರ ಕೃಪೆಯಿಂದ ಮನುಷ್ಯ ಆರೋಗ್ಯವಾಗಿ ಇರುವುದು. ಇದಿಲ್ಲದೇ ಇದ್ದರೆ ಯಾವ ಮನುಷ್ಯನೂ ಇರಲಾರ.

ವರ್ಷದಲ್ಲಿ ಒಮ್ಮೆಯಾದರೂ ಭೂಮಾತೆಗೆ ಪೂಜೆ ಮಾಡಿದರೆ ವರ್ಷವಿಡೀ ಧಾನ್ಯ ಸಮೃದ್ಧಿ...!
Follow us on

ಆಶ್ವಯುಜ ಮಾಸ ಶುಕ್ಲ ಪಕ್ಷದ ಪೂರ್ಣಿಮೆಯ ದಿನ ಅಂದರೆ ೧೭ ಅಕ್ಟೋಬರ್ ಗುರುವಾದದಂದು ಭೂಮಿ ಪೂಜೆ. ಇದನ್ನು ಮಾಡುವ ಪದ್ಧತಿಯು ಬಹಳ ಹಿಂದಿನಿಂದ ಬಂದಿದೆ. ಇದು ಪ್ರಕೃತಿಯ ಪೂಜೆಯಾಗಿದೆ. ಪ್ರಕೃಯಿಯಿಂದ ಆಹಾರವನ್ನು ಪಡೆಯುವ ಮೊದಲು ಒಳ್ಳೆಯ ಒಲವನ್ನು ನೀಡದ್ದಕ್ಕೆ ಮತ್ತು ಮುಂದೆ ಉತ್ತಮ ಫಲವನ್ನು ಕೊಡಲು ಭೂದೇವಿಯನ್ನು ಪ್ರಾರ್ಥಿಸುವುದಾಗಿದೆ.

ಕೃಷಿಕರು ಮಳೆಗಾಲದ ಆರಂಭದಲ್ಲಿ ಭೂಮಿಗೆ ಆಹಾರಕ್ಕೆ ಬೇಕಾದ ಭತ್ತ, ರಾಗಿ, ಗೋದಿ, ಜೋಳ, ತೊಗರಿ, ಕಡ್ಲೆ ಹೀಗೆ ಅನೇಕ ಧಾನ್ಯಗಳನ್ನು ಬಿತ್ತನೆ‌ ಮಾಡುತ್ತಾರೆ. ಅದು ನವರಾತ್ರವು ಕಳೆದ ಅನಂತರದಿಂದ ಫಲವನ್ನು ಕೊಡಲು ಆರಂಭಿಸುತ್ತದೆ. ಆ ಫಲವು ಸಮೃದ್ಧವಾಗಿ ಸಿಗಲು, ಸಿಕ್ಕ ಬೆಳೆಯು ಆರೋಗ್ಯವನ್ನು ಚೆನ್ನಾಗಿರಿಸಲು ಭೂಮಿಪೂಜೆಯನ್ನು ಮಾಡುತ್ತಾರೆ.

ತಾವು ಬೆಳೆ ಬೆಳೆದ ಪ್ರದೇಶಕ್ಕೆ ಹೋಗಿ ಭೂಮಾತೆಗೆ ಸಣ್ಣ ಗುಡಿಯನ್ನು ಕಟ್ಟಿ, ಅಲಂಕಾರ ಮಾಡಿ, ವಿವಿಧ ಭಕ್ಷ್ಯಗಳಿಂದ ನೈವೇದ್ಯಮಾಡಿ ಅಲ್ಲಿಯೇ ಪ್ರಸಾದವನ್ನು ಉಣ್ಣುವ ಕ್ರಮವೂ ಇದೆ.

ಈ ದಿನದ ವಿಶೇಷವೇನು?

ಆಶ್ವಯುಜ ಮಾಸವು ಆಗುವುದು ಹುಣ್ಣಿಮೆಯ ದಿನ ಅಶ್ವಿನೀ ನಕ್ಷತ್ರವು ಬಂದಾಗ. ಈ ಅಶ್ವಿನೀ ನಕ್ಷತ್ರದ ದೇವತೆ ಅಶ್ವಿನೀ ಕುಮಾರರು. ಇವರು ದೇವವೈದ್ಯರು. ಇವರ ಅನುಗ್ರಹವು ಇಡೀ ಪ್ರಪಂಚದ ಮೇಲೆ ಹಾಗೂ ವಿಶೇಷವಾಗಿ ಆಹಾರವಾಗಿ ಬಳಸುವ ವಸ್ತುಗಳ ಮೇಲೆ ಇದ್ದರೆ ಆಹಾರಧಾನ್ಯಗಳು ಹಾಗೂ ಆರೋಗ್ಯವೂ ಸಮೃದ್ಧವಾಗುತ್ತದೆ. ಆದ ಕಾರಣ ಈ ದಿನದಂದು ಭೂಮಿಗೆ ಪೂಜೆ ಸಲ್ಲಿಸುವುದು. ಅದರ ಮೂಲಕ ದೇವತೆಗಳ ಪ್ರೀತಿಯಾಗುವುದು.

ಶರತ್ಕಾಲದ ಹುಣ್ಣಿಮೆ ವಿಶೇಷ ಹುಣ್ಣಿಮೆ ಕೂಡ. ದೇವತೆಗಳ ಕಾಂತಿಯನ್ನು ಹೇಳುವಾಗ ಶರತ್ಕಾಲದ ಚಂದ್ರನಂತೆ ಎಂಬ ಮಾತನ್ನು ಆಡುತ್ತಾರೆ. ಅದಕ್ಕೆ ಮೂಲ ಕಾರಣ ಮಳೆಗಾಲದಲ್ಲಿ ಅಂದರೆ ವರ್ಷ ಋತುವಿನಲ್ಲಿ ಚಂದ್ರನ ದರ್ಶನವಾಗದು. ಪೂರ್ತಿ ಕತ್ತಲೆಯ ವಾತಾವರಣ ಇರುತ್ತದೆ. ಶರತ್ಕಾಲದಲ್ಲಿ ಮಳೆಗಾಲವು ಹೋಗಿ ಪೂರ್ಣ ಚಂದ್ರನು ಕಾಣಿಸುವುದು. ಆಗ ಕಾಣುವ ಚಂದ್ರನು ಅತಿಶಯವಾದ ಕಾಂತಿಯಿಂದ ಶೋಭಿಸುವನು ಮತ್ತು ಚಂದ್ರನು ಓಷಧಿ ಸಸ್ಯಗಳಿಗೆ ಒಡೆಯನಾದ ಕಾರಣ ಈ ದಿನ ಆತನ ಬೆಳದಿಂಗಳು ದಿವ್ಯವಾದ ಶಕ್ತಿಯಿಂದಲೂ ಕೂಡಿದ್ದರಿಂದ ಎಲ್ಲ ಸಸ್ಯರಾಶಿಗಳ ಮೇಲೆ ವನಸ್ಪತಿಗಳ ಮೇಲೆ ಚಂದ್ರನ ಕೃಪಾದೃಷ್ಟಿ ಇರುವುದು.

ಇನ್ನೂ ವಿಶೇಷವೆಂದರೆ ಈ ದಿನ ಭೂಮಿಯನ್ನು ಯಾವ ವಸ್ತುವಿನಿಂದಲೂ ಅಗೆಯುವುದಿಲ್ಲ. ಬದಲಿಗೆ ಹಿಂದಿನ ದಿನವೇ ಸಣ್ಣದಾಗಿ ಹೊಂಡವನ್ನು ಮಾಡಿ ಅಲ್ಲಿ ಮರವಾಗುವ ಒಂದು ಸಸಿಯನ್ನು ನೆಡುತ್ತಾರೆ.

ಇದೆಲ್ಲವೂ ಹಿರಿಯ ಸಾಧ‌ನೆ, ಶೋಧನೆಗಳೇ ಆಗಿವೆ. ಅದನ್ನು ಅರಿತು ನಡೆದಾಗ ಆಗುವ ಆನಂದ, ಮಾಡಿದಾಗ ಸಿಗುವ ಫಲವು ಅನ್ಯಾದೃಶವಾದುದಾಗಿದೆ.

– ಲೋಹಿತ ಹೆಬ್ಬಾರ್ – 8762924271