ಅಕ್ಟೋಬರ್ ಮಾಸ ಭವಿಷ್ಯ 2024: ಸಂಖ್ಯಾಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳು ನಿಮಗೆ ಹೇಗಿರಲಿದೆ..?

| Updated By: ರಮೇಶ್ ಬಿ. ಜವಳಗೇರಾ

Updated on: Oct 03, 2024 | 8:51 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

ಅಕ್ಟೋಬರ್ ಮಾಸ ಭವಿಷ್ಯ 2024: ಸಂಖ್ಯಾಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳು ನಿಮಗೆ ಹೇಗಿರಲಿದೆ..?
ಸಂಖ್ಯಾಶಾಸ್ತ್ರ
Follow us on

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸಮಚಿತ್ತದಿಂದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಈ ಹಿಂದಿನ ಅನುಭವ ಎಷ್ಟೇ ಇರಬಹುದು ಅಥವಾ ನೀವು ಆ ವಿಷಯದಲ್ಲಿ ಎಷ್ಟೇ ಪರಿಣತರಿದ್ದರೂ ಕೆಲಸ- ಕಾರ್ಯದಲ್ಲಿ ಗಂಭೀರವಾಗಿ ತೊಡಗಿಕೊಳ್ಳಲೇಬೇಕಾಗುತ್ತದೆ. ಗಡುವು ಮುಗಿಯುವ ಕೊನೆ ಕ್ಷಣದ ತನಕ ಯಾವುದನ್ನೂ ಕಾಯುತ್ತಾ ಕೂರಬೇಡಿ. ಅದೇ ರೀತಿ ಇದರಿಂದ ಏನಾದೀತು, ನನಗೆ ಹತ್ತಿರದವರು, ಆಪ್ತರು ಅವರಿಗೆ ನಾನು ಹೇಳಿಕೊಳ್ಳಬಹುದು ಎಂದುಕೊಂಡು ಯಾವುದನ್ನೂ ಮುಂದಕ್ಕೆ ಹಾಕುತ್ತಾ ಹೋಗಬೇಡಿ. ಏಕೆಂದರೆ ಬೇಕಿದ್ದು- ಬೇಡದಿದ್ದು ಎಲ್ಲ ವಿಚಾರಗಳು ಈ ತಿಂಗಳು ಅವುಗಳದೇ ಆದ ರೀತಿಯಲ್ಲಿ ಪ್ರಾಮುಖ್ಯ ಪಡೆದುಕೊಂಡು ಬಿಡುತ್ತವೆ. ಇನ್ನು ನೀವು ಬಹಳ ಮುಖ್ಯವಾದ ಕಾರ್ಯಕ್ರಮಕ್ಕೋ ಅಥವಾ ತುಂಬ ಸಮಯದಿಂದ ಹೋಗಬೇಕು ಎಂದುಕೊಂಡು ಅಂದುಕೊಂಡಿದ್ದ ಸ್ಥಳಕ್ಕೋ ಹಾಕಿದ್ದ ಪ್ರವಾಸವನ್ನು ಅನಿವಾರ್ಯವಾಗಿ ರದ್ದು ಮಾಡಬೇಕಾದ ಅಥವಾ ಮುಂದಕ್ಕೆ ಹಾಕಬೇಕಾದ ಸನ್ನಿವೇಶ ಎದುರಾಗಬಹುದು. ಬೆನ್ನು ನೋವು, ಮೈಗ್ರೇನ್, ಕಣ್ಣಿಗೆ ಸಂಬಂಧಿಸಿದ ತೊಂದರೆಗಳು, ವೆರಿಕೋಸ್ ವೇನ್ಸ್ ಇಂಥ ಆರೋಗ್ಯ ಸಮಸ್ಯೆಗಳು ಈಗಾಗಲೇ ಇದೆ ಎಂದಾದಲ್ಲಿ ನಿಮ್ಮನ್ನು ಹೈರಾಣ ಮಾಡಲಿವೆ. ಒಂದು ವೇಳೆ ಈಗಾಗಲೇ ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಅಂತಾದರೆ ಕೂಡಲೇ ಸೂಕ್ತ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡು, ಸರಿಯಾದ ಮಾರ್ಗದರ್ಶನ ಪಡೆಯುವುದು ಒಳ್ಳೆಯದು. ವಿವಾಹ ವಯಸ್ಕರಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೋದರ ಸಂಬಂಧಿಗಳಿಂದ ಕೆಲವು ರೆಫರೆನ್ಸ್ ಗಳು ಬರಬಹುದು. ನೀವು ಎಷ್ಟೇ ಬಿಜಿ ಆಗಿದ್ದರೂ ಈ ರೆಫರೆನ್ಸ್ ಗಳನ್ನು ಗಂಭೀರವಾಗಿ ಪರಿಗಣಿಸಿ. ಏಕೆಂದರೆ ಈ ತಿಂಗಳಲ್ಲಿ ಮದುವೆ ನಿಶ್ಚಯ ಆಗುವ ಅಥವಾ ವಧು/ವರ ಇವರೇ ಎಂದು ಖಾತ್ರಿ ಆಗುವ ಸಾಧ್ಯತೆಗಳು ಹೆಚ್ಚಿವೆ. ಈ ಹಿಂದಿನ ನಿಮ್ಮ ಕಹಿ ಅನುಭವಗಳನ್ನು ಮುಂದೆ ಮಾಡಿಕೊಂಡು, ಈಗಿನ ಅವಕಾಶವನ್ನು ನಿರ್ಲಕ್ಷ್ಯ ಮಾಡಿದಿರೋ ಭವಿಷ್ಯದಲ್ಲಿ ಬೇಸರ ಪಡುವಂತೆ ಆಗುತ್ತದೆ. ಈಗಿರುವ ಸ್ಥಳದಿಂದ ಬೇರೆ ಊರಿಗೆ, ಪ್ರದೇಶಕ್ಕೆ ಕೆಲವು ಸಮಯಕ್ಕಾದರೂ ತೆರಳಲೇಬೇಕು ಎಂಬಂಥ ಸನ್ನಿವೇಶವು ಉದ್ಯೋಗ ಸ್ಥಳದಲ್ಲಿ ಉದ್ಭವಿಸಬಹುದು. ಈ ಅವಕಾಶವು ನಿಮಗೆ ಆಕರ್ಷಕ ಎನಿಸದಿರಬಹುದು, ಮೇಲುನೋಟಕ್ಕೆ ಇದರಿಂದ ಹೆಚ್ಚಿನ ಹಣ ಖರ್ಚಾಗುತ್ತದೆ ಅಂತಲೂ ಅನಿಸಬಹುದು. ಆದರೆ ನಿಮ್ಮ ಉದ್ಯೋಗ ಜೀವನದಲ್ಲೇ ಅತಿ ಮುಖ್ಯವಾದ ತಿರುವಾಗಲಿದೆ. ಪುಸ್ತಕ ಪ್ರಕಾಶಕರು, ಮುದ್ರಕರು, ವಿತರಕರಿಗೆ ಈಗ ಇರುವಂಥ ವ್ಯವಸ್ಥೆಯಲ್ಲಿ ಆಗುತ್ತಿರುವ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಲೇಬೇಕು ಎಂದೆನಿಸುತ್ತದೆ. ಕೆಲವು ಯಂತ್ರಗಳನ್ನು, ಸ್ಥಳವನ್ನು ಮಾರಬಹುದು. ಕಟ್ಟಡ ಖಾಲಿ ಮಾಡಬಹುದು. ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ನಿರ್ಧರಿಸಬಹುದಾಗಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹಲವು ವಿಚಾರಗಳಲ್ಲಿ ನಿಮಗೆ ಸ್ಪಷ್ಟತೆ ದೊರೆಯಲಿದೆ. ಈ ಹಿಂದಿನ ಕಹಿ ಅನುಭವಗಳು, ಸೋಲುಗಳನ್ನು ಮರೆತು ಮುನ್ನುಗ್ಗಿ ಕೆಲಸ- ಕಾರ್ಯಗಳನ್ನು ಮಾಡಲಿದ್ದೀರಿ. ಸರ್ಕಾರಿ ಕಚೇರಿಗಳಲ್ಲಿ ಆಗಬೇಕಿರುವ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳುವುದಕ್ಕೆ ನಿಮ್ಮ ಆಪ್ತರು ಅಥವಾ ಸ್ನೇಹಿತರೇ ಸಹಾಯಕ್ಕೆ ಬರಲಿದ್ದಾರೆ. ಇದೇ ವೇಳೆ ನಿಮಗೆ ಆದಾಯ ತರುವಂಥ ಮಾರ್ಗಗಳನ್ನು ಹುಡುಕಿಕೊಳ್ಳಲಿದ್ದೀರಿ. ನಿಮ್ಮ ಉದ್ಯೋಗ, ವೃತ್ತಿ ಅಥವಾ ವ್ಯಾಪಾರ- ವ್ಯವಹಾರಗಳಲ್ಲಿ ಇಷ್ಟು ಸಮಯ ನಿಮಗೇನಾದರೂ ಅಳುಕು ಅಥವಾ ಅನುಮಾನಗಳು ಕಾಡುತ್ತಿದ್ದಲ್ಲಿ ಅದರಿಂದ ಹೊರಗೆ ಬರಲಿದ್ದೀರಿ. ಟ್ಯಾಕ್ಸ್ ರೀಫಂಡ್, ಜಿಎಸ್ ಟಿ ಫೈಲಿಂಗ್ ಈ ರೀತಿಯಾದ ಕೆಲಸಗಳನ್ನು ಸಾಮಾನ್ಯಕ್ಕಿಂತ ಹೆಚ್ಚಿನ ಶ್ರದ್ಧೆಯಿಂದ ಮಾಡಿರಿ. ನಿಮ್ಮ ಜತೆಗೆ ಕೆಲಸ ಮಾಡುವವರ ಜೊತೆಗೋ ಅಥವಾ ಕೈ ಕೆಳಗೆ ಕೆಲಸ ಮಾಡುವವರ ಜೊತೆಗೋ ಅಭಿಪ್ರಾಯ ಭೇದಗಳು ಅಥವಾ ನಿಮಗೇನಾದರೂ ಆಕ್ಷೇಪಗಳು ಇದ್ದಲ್ಲಿ ಅವು ನಿವಾರಣೆ ಆಗಲಿವೆ. ಮುಖ್ಯವಾಗಿ ನೀವು ಬಹಳ ಚಟುವಟಿಕೆಯಿಂದ ಇರಲಿದ್ದೀರಿ. ಆಗಬೇಕಾದ ಕೆಲಸಗಳನ್ನು ನೀವೇ ಮುಂದೆ ನಿಂತು ಪೂರ್ಣಗೊಳಿಸಲಿದ್ದೀರಿ. ಈ ತಿಂಗಳಲ್ಲಿ ನೀವೇ ವಹಿಸಿಕೊಂಡ ಕೆಲಸಗಳನ್ನು ಗಡುವಿನೊಳಗೆ ಮುಗಿಸುವುದು ಎಷ್ಟು ಅಗತ್ಯ ಎಂಬುದು ಬಲವಾಗಿ ಅರಿವಿಗೆ ಬರಲಿದೆ. ಚಿನ್ನದ ಮೇಲೆ ಹೂಡಿಕೆ ಅಥವಾ ಗಟ್ಟಿ ಚಿನ್ನವನ್ನೇ ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡುತ್ತೀರಿ. ಅದರಲ್ಲೂ ಕೆಲವರು ಮಕ್ಕಳ ಮದುವೆಯನ್ನೇ ಉದ್ದೇಶವಾಗಿ ಇಟ್ಟುಕೊಂಡು, ಒಡವೆಗಳನ್ನು ಮಾಡಿಸುವಂಥ ಯೋಗ ಇದೆ. ಮನೆ ನಿರ್ಮಾಣ ಮಾಡುತ್ತಿರುವವರು ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದೀರಿ. ಒಂದು ವೇಳೆ ನೀವಿರುವುದಕ್ಕೆ ಮಾತ್ರ ಮನೆ ಕಟ್ಟಿಕೊಳ್ಳಬೇಕು ಅಂದುಕೊಳ್ಳುತ್ತಿದ್ದಲ್ಲಿ ಬಾಡಿಗೆ ಬರುವಂತೆಯೂ ಮಾಡಿಕೊಳ್ಳೋಣ ಅಂದುಕೊಳ್ಳಬಹುದು. ಅಥವಾ ಬಾಡಿಗೆ ಬರುವಂತೆಯೂ ಮನೆ ನಿರ್ಮಾಣ ಮಾಡಿಕೊಳ್ಳುತ್ತಿರುವವರು ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬಹುದು. ಆದರೆ ಒಟ್ಟಾರೆ ಖರ್ಚಿನ ಪ್ರಮಾಣ ಮಾತ್ರ ಜಾಸ್ತಿ ಆಗಲಿದೆ. ಇದಕ್ಕಾಗಿ ನಿಮ್ಮಲ್ಲಿ ಕೆಲವರು ಒಡವೆಗಳನ್ನು ಮಾರಬೇಕು ಅಂತಲೋ ಅಥವಾ ಹೂಡಿಕೆ ಮಾಡಿರುವ ಮೊತ್ತವನ್ನು ತೆಗೆಯಬೇಕು ಅಂತಲೋ ನಿರ್ಧಾರ ಮಾಡಲಿದ್ದೀರಿ. ಉದ್ಯೋಗ ಬದಲಾವಣೆಗಾಗಿ ಇಂಟರ್ ವ್ಯೂಗಳಲ್ಲಿ ಭಾಗೀ ಆದವರಿಗೆ ಅಂದುಕೊಂಡಂತೆಯೇ ಆಗಲಿದ್ದು, ಆಯ್ಕೆ ಆಗಿರುವ ಬಗ್ಗೆ ಸಿಗುವ ಮಾಹಿತಿ ತಡವಾಗಬಹುದು. ಅರವತ್ತರ ಮೇಲೆ ವಯಸ್ಸಾದವರು ಆರೋಗ್ಯ ವಿಚಾರಕ್ಕೆ ಸರಿಯಾದ ಫಾಲೋ ಅಪ್ ಚೆಕ್ ಅಪ್ ಗಳನ್ನು ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ. ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉಳಿತಾಯದ ವಿಷಯ ಚಿಂತೆಗೆ ಕಾರಣ ಆಗಲಿದೆ. ನಿಮ್ಮ ಪ್ರಯತ್ನವನ್ನು ಇನ್ನಷ್ಟು ಹೆಚ್ಚಿಸಬೇಕು, ಖರ್ಚು- ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಅನಿಸಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಉಪನ್ಯಾಸಕರು, ಟ್ಯೂಷನ್ ಗಳನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತಿರುವವರು ಪ್ರಮುಖವಾದ ತೀರ್ಮಾನ ತೆಗೆದುಕೊಳ್ಳುವಂಥ ಸಾಧ್ಯತೆ ಇದೆ. ನನಗೆ ಮಾತ್ರ ಸೇರಿದ್ದು ಎಂದು ಇಷ್ಟು ಸಮಯ ನೀವು ಅಂದುಕೊಂಡಿದ್ದ ಆಸ್ತಿಯೋ ಅಥವಾ ಒಡವೆಯನ್ನೋ ಮತ್ತೊಬ್ಬರ ಜೊತೆಗೆ ಹಂಚಿಕೆ ಮಾಡಿಕೊಳ್ಳಬೇಕು ಎಂಬ ಸುದ್ದಿ ನೀವು ಕೇಳಿಸಿಕೊಳ್ಳಬಹುದು. ಅಥವಾ ಅಂತದ್ದೊಂದು ಸನ್ನಿವೇಶ ನಿರ್ಮಾಣ ಆಗಬಹುದು. ಕೆಲ ದಿನಗಳ ಕಾಲ ರಜಾ ತೆಗೆದುಕೊಂಡು, ಸ್ನೇಹಿತರು, ಸಂಬಂಧಿಗಳ ಮನೆಯ ಕಾರ್ಯಕ್ರಮಗಳಲ್ಲಿ ಭಾಗೀ ಆಗಲಿದ್ದೀರಿ. ನಿಮ್ಮಲ್ಲಿ ಯಾರು ಆಸ್ತಿ ವ್ಯವಹಾರಗಳು ಪೂರ್ಣಗೊಳ್ಳುವುದಕ್ಕೆ ನಿರೀಕ್ಷೆ ಮಾಡುತ್ತಿದ್ದೀರಿ ಅಂಥವರಿಗೆ ಅದು ಅಂದುಕೊಂಡಂತೆಯೇ ಮುಗಿಯಲಿದೆ. ಈಗಾಗಲೇ ಮಾಡಿರುವಂಥ ಉಳಿತಾಯ ಅಥವಾ ಹೂಡಿಕೆ ಇದ್ದಲ್ಲಿ ಅದನ್ನು ತೆಗೆದು, ಪ್ರತಿ ತಿಂಗಳು ನಿಶ್ಚಿತವಾದ ಆದಾಯ ಬರುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವ ಬಗ್ಗೆ ಯೋಜನೆಯನ್ನು ರೂಪಿಸಲಿದ್ದೀರಿ. ಸೈನ್ಯದಲ್ಲಿ ಇರುವವರಿಗೆ, ಪೊಲೀಸ್ ಉದ್ಯೋಗದಲ್ಲಿ ಇರುವವರಿಗೆ ಮನಸ್ಸಿಗೆ ಬೇಸರ ಆಗುವಂಥ ಕೆಲವು ಬೆಳವಣಿಗೆಗಳು ನಡೆಯಬಹುದು. ಇದರಿಂದ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವಂತೆ ಆಗಬಹುದು. ತಂದೆ- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಬೇರೆ ಕೆಲಸಗಳಿವೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಅವರ ಆರೋಗ್ಯದ ಬಗ್ಗೆ ಏನಾದರೂ ಗಮನ ನೀಡದೆ ಹೋದಲ್ಲಿ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಸೋದರ ಮಾವ ಅಥವಾ ಸೋದರತ್ತೆ ಜತೆಗೆ ಆಸ್ತಿ ವ್ಯಾಜ್ಯಗಳು ಅಥವಾ ಹಣಕಾಸಿನ ವಿಚಾರಕ್ಕೆ ಮನಸ್ತಾಪಗಳು ಇದ್ದಲ್ಲಿ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯತೆ ಇದೆ. ಯಾರು ಬೆಂಕಿಯ ಮುಂದೆ ನಿಂತು ಮಾಡುವಂಥ ಕೆಲಸಗಳಲ್ಲಿ ಇದ್ದೀರಿ ಅಂಥವರಿಗೆ ಈ ತಿಂಗಳು ಅಪಘಾತ ಆಗಬಹುದು. ಆದ್ದರಿಂದ ಸಾಮಾನ್ಯವಾಗಿ ತೆಗೆದುಕೊಳ್ಳುವಂಥ ಮುನ್ನೆಚ್ಚರಿಕೆಗಿಂತ ಹೆಚ್ಚು ಹುಷಾರಾಗಿರಿ. ಸೋಷಿಯಲ್ ಮೀಡಿಯಾದಲ್ಲಿಯೇ ಇತರರಿಗೆ ಕೆಲಸ ಮಾಡುತ್ತಿರುವವರಿಗೆ ಆದಾಯದಲ್ಲಿ ಇಳಿಕೆ ಕಾಣಿಸಬಹುದು. ಅಥವಾ ಅದನ್ನೇ ಉದ್ಯೋಗ ಮಾಡಿಕೊಂಡಿದ್ದೀರಿ ಅಂತಾದಲ್ಲಿ ಕೆಲಸದಿಂದ ತೆಗೆಯಬಹುದು. ಯಾವುದಕ್ಕೂ ಪ್ಲಾನ್ ಬಿ ಮಾಡಿಕೊಂಡಿರುವುದು ಒಳ್ಳೆಯದು. ಕ್ರೀಡಾಪಟುಗಳಿಗೆ ದೈಹಿಕ ಅಸ್ವಾಸ್ಥ್ಯ ಕಾಡಬಹುದು. ಹೀಗೆ ಆಗುವುದರಿಂದ ಪ್ರಮುಖವಾದ ಪಂದ್ಯಾವಳಿಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗದಿರಬಹುದು. ನಿಮ್ಮಲ್ಲಿ ಯಾರು ಮನೆಯಿಂದ ಹೊರಗೆ ಇದ್ದು, ಹೋಟೆಲ್ ಅಥವಾ ಮೆಸ್ ಗಳಲ್ಲಿನ ಊಟ- ತಿಂಡಿ ಮಾಡುತ್ತಿರುವಿರೋ ಅಂಥವರು ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಕೂಡಲೇ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಇಲ್ಲದಿದ್ದರೆ ದಿನಗಟ್ಟಲೆ ಆಸ್ಪತ್ರೆ ವಾಸದಲ್ಲಿ ಕಳೆಯಬೇಕಾದ ಸ್ಥಿತಿ ಉದ್ಭವಿಸಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸರ್ಕಾರಿ ಕೆಲಸದಲ್ಲಿ ಇರುವಂಥವರಿಗೆ ಹೆಚ್ಚುವರಿಯಾಗಿ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆಗಳಿವೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಅದರಲ್ಲೂ ಮಿಡ್ಲ್ ಮ್ಯಾನೇಜ್ ಮೆಂಟ್ ಹಂತದಲ್ಲಿ ಕೆಲಸ ಮಾಡುವವರಿಗೆ ಭಡ್ತಿಯ ನಿರೀಕ್ಷೆಯಲ್ಲಿಯೂ ಇದ್ದೀರಿ ಹಾಗೂ ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತಿದ್ದೀರಿ ಅಂತಾದಲ್ಲಿ ಅಂದುಕೊಂಡಂತೆ ಉತ್ತಮ ಬೆಳವಣಿಗೆಗೆಳು ಆಗಲಿವೆ. ಮನೆ ನಿರ್ಮಾಣದ ಕಾಂಟ್ರಾಕ್ಟ್ ಗಳನ್ನು ತೆಗೆದುಕೊಂಡು ಕೆಲಸ ಮಾಡುವಂಥವರಿಗೆ ಹೊಸದಾಗಿ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಲಿವೆ. ನೀವು ಸಹ ಹೊಸ ಹುಮ್ಮಸ್ಸಿನಿಂದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಇನ್ನು ಇದೇ ವೇಳೆ ಈಗಾಗಲೇ ಮಾಡಿದಂಥ ಸರ್ಕಾರದ ಗುತ್ತಿಗೆ ಕೆಲಸಗಳಲ್ಲಿನ ಆದಾಯ ಬರುವುದು ತಡವಾಗಿದೆ ಅಂತಾಗಿದ್ದಲ್ಲಿ ಅದನ್ನು ಕೂಡ ಈ ತಿಂಗಳಲ್ಲಿ ಪಡೆದುಕೊಳ್ಳುವಂಥ ಸಾಧ್ಯತೆ ಇದೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ನಿಮ್ಮ ಬಳಿ ಇರುವಂಥ ಸೈಟು ಅಥವಾ ಜಮೀನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ನೀವು ಮಾರಾಟಕ್ಕೆ ಇಟ್ಟ ತಕ್ಷಣವೇ ಅದರ ಖರೀದಿಗೆ ಗ್ರಾಹಕರು ದೊರೆಯಲಿದ್ದಾರೆ. ಅದರ ಜೊತೆಗೆ ನಿರೀಕ್ಷೆಯಂತೆಯೇ ಬೆಲೆ ಸಹ ದೊರೆಯಲಿದೆ. ಕುಟುಂಬ ಸದಸ್ಯರ ಬಳಕೆಗಾಗಿ ಅಂತ ಹೊಸ ಕಾರು ಅಥವಾ ದ್ವಿಚಕ್ರ ವಾಹನವನ್ನು ಖರೀದಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಚೀಟಿ ವ್ಯವಹಾರ ಅಥವಾ ಬಡ್ಡಿ- ಲೇವಾದೇವಿ ವ್ಯವಹಾರ ಮಾಡುತ್ತಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಲ್ಲಿ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಸಿನಿಮಾಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ಕೆಲಸಗಳನ್ನು ಮಾಡುವಂಥವರಿಗೆ ದೊಡ್ಡ ಅವಕಾಶವೊಂದು ಹುಡುಕಿಕೊಂಡು ಬರಬಹುದು. ನಿಮ್ಮ ಒಪ್ಪಿಗೆ ಸೂಚಿಸುವುದಕ್ಕೆ ಹೆಚ್ಚಿನ ಸಮಯವನ್ನು ನೀಡದಿರುವುದರಿಂದ ಒತ್ತಡ ಸೃಷ್ಟಿಯಾಗಬಹುದು. ಆದರೆ ನಿಮಗೆ ಈ ಪ್ರಾಜೆಕ್ಟ್ ನಿಂದ ಹಣದ ಜತೆಗೆ ಕೀರ್ತಿ, ಹೆಸರು ಹಾಗೂ ಜನಪ್ರಿಯತೆ ದೊರೆಯಲಿದೆ. ಕ್ರೆಡಿಟ್ ಕಾರ್ಡ್ ಬಿಲ್, ಸಾಲದ ಇಎಂಐಗಳನ್ನು ಪಾವತಿ ಮಾಡಬೇಕಾದ ದಿನಾಂಕದ ಒಳಗಾಗಿಯೇ ಕಟ್ಟಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಏಕೆಂದರೆ ನಿಮ್ಮ ಮರೆವಿನ ಕಾರಣಕ್ಕೆ ಸಮಸ್ಯೆಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ವಿದೇಶಗಳಲ್ಲಿ ವಾಸವಿರುವ ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಗಳೋ ತಮ್ಮ ಪರವಾಗಿ ಹೂಡಿಕೆ ಮಾಡುವುದಕ್ಕೆ ಸೂಕ್ತವಾದ ಜಮೀನು ಅಥವಾ ಸೈಟುಗಳನ್ನು ಹುಡುಕಿ ಕೊಡುವುದಕ್ಕೆ ಅಥವಾ ಉತ್ತಮವಾದ ರಿಟರ್ನ್ಸ್ ನೀಡಬಲ್ಲಂಥ ವ್ಯಾಪಾರವನ್ನು ಆರಂಭಿಸುವುದಕ್ಕೆ ನೀವು ಸಹಾಯ ಮಾಡಬೇಕೆಂದು ಕೇಳಿಕೊಳ್ಳುವ ಸಾಧ್ಯತೆ ಇದೆ. ಅವರಿಗೆ ಸಹಾಯ ಮಾಡುವುದರಿಂದ ಭವಿಷ್ಯದಲ್ಲಿ ನಿಮಗೂ ಕೆಲವು ಅನುಕೂಲಗಳು ಆಗುವ ಅವಕಾಶಗಳು ತೆರೆದುಕೊಳ್ಳುತ್ತವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಅದರ ಫಾಲೋ ಅಪ್ ಪರೀಕ್ಷೆ ಮಾಡದೆ ಹಾಗೇ ಬಿಟ್ಟಿದ್ದಲ್ಲಿ ಅಥವಾ ವೈದ್ಯರು ನೀಡಿದ್ದ ಸೂಚನೆಯಂತೆ ನಡೆದುಕೊಳ್ಳದೆ ನಿರ್ಲಕ್ಷ್ಯ ಮಾಡಿರುವವರಿಗೆ ಹಳೇ ಆರೋಗ್ಯ ಸಮಸ್ಯೆಗಳು ಮರುಕಳಿಸುವ ಸಾಧ್ಯತೆಗಳಿವೆ. ಅದಕ್ಕಾಗಿ ಕೈ ಮೀರಿ ಖರ್ಚಾಗಲಿದೆ. ಯಾವುದಾದರೂ ಕಾರ್ಯಕ್ರಮದಲ್ಲಿ ಅಥವಾ ಸಮಾರಂಭದಲ್ಲಿ ನೀವು ತುಂಬ ಸಹಜವಾಗಿ ಹೇಳಿದ ವಿಚಾರವೊಂದನ್ನು ಮುಂದೆ ಮಾಡಿಕೊಂಡು, ಕೆಲವರು ಗುಂಪು ಕಟ್ಟಿಕೊಂಡು ಬಂದು, ಬೆದರಿಕೆ ಒಡ್ಡಬಹುದು. ಇದೇ ಸಮಯದಲ್ಲಿ ತಮ್ಮ ಮಾತಿನಂತೆಯೇ ನಡೆದುಕೊಳ್ಳಬೇಕು ಎಂದು ಕೆಲವರು ನಿಮ್ಮ ಮೇಲೆ ಒತ್ತಡ ಹಾಕಲಿದ್ದಾರೆ, ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಈ ಸಮಸ್ಯೆ ವಿಪರೀತ ಹೆಚ್ಚಾಗಬಹುದು. ರಂಗಭೂಮಿ, ಸಿನಿಮಾ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದಲ್ಲ ಒಂದು ಬಗೆಯಲ್ಲಿ ವಿವಾದ ಮೈಮೇಲೆ ಬರುವಂತಹ ಸಾಧ್ಯತೆಗಳು ಕಂಡುಬರುತ್ತವೆ. ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಮತ್ತು ಯಾವುದೇ ಮಾಧ್ಯಮಗಳಿಗೆ ನೀವು ನೀಡುವ ಸಂದರ್ಶನದಲ್ಲಿ ಏನು ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಗಾ ಇರಿಸಿಕೊಳ್ಳಿ. ರಿಯಲ್ ಎಸ್ಟೇಟ್ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಕಮಿಷನ್ ಆಧಾರದಲ್ಲಿ ಕೆಲಸ ಮಾಡುವವರಿಗೆ ಇನ್ನೇನು ಕೈಗೆ ದೊಡ್ಡ ಮೊತ್ತದ ಹಣ ಸೇರಿಯೇ ಬಿಟ್ಟಿತು ಎಂದುಕೊಳ್ಳುವ ಹೊತ್ತಿಗೆ ಕೊನೆ ಕ್ಷಣದಲ್ಲಿ ಆ ಕೆಲಸವೇ ನಿಂತು ಹೋಗಬಹುದು ಅಥವಾ ಇತರರೆಲ್ಲರೂ ಸೇರಿ ನಿಮ್ಮ ಪಾಲಿಗೆ ಬರಬೇಕಾದ ಹಣವು ಬಾರದಿರುವಂತೆ ನೋಡಿಕೊಳ್ಳಬಹುದು. ಸಂಬಂಧಿಗಳು ಅಥವಾ ಸ್ನೇಹಿತರ ಮನೆಯಲ್ಲಿ ಆಯೋಜಿಸುವಂಥ ದೇವತಾ ಕಾರ್ಯಗಳಲ್ಲಿ ಭಾಗವಹಿಸುವ ಯೋಗ ಇದೆ. ವಿದೇಶದಲ್ಲಿನ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪರೀಕ್ಷೆಯೂ ಸೇರಿದಂತೆ ಯಾವುದಾದರೂ ಮುಖ್ಯ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಈ ತಿಂಗಳು ಹಯಗ್ರೀವ ಸ್ತೋತ್ರವನ್ನು ಪಠಣ ಅಥವಾ ಶ್ರವಣ ಮಾಡುವುದರಿಂದ ಅನುಕೂಲ ಒದಗಿ ಬರಲಿದೆ. ಕುಟುಂಬದಲ್ಲಿ ನಾನು ಹೇಳಿದ್ದೇ ಆಗಬೇಕು ಎಂಬ ಹಟವನ್ನು ಯಾವುದೇ ಕಾರಣಕ್ಕೂ ಮಾಡುವುದಕ್ಕೆ ಹೋಗಬೇಡಿ. ನಾಲಗೆ ಮೇಲೆ ಹತೋಟಿ ಇರುವುದು ಬಹಳ ಮುಖ್ಯವಾಗುತ್ತದೆ. ನಾಲಗೆ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದರ ಜೊತೆಗೆ ಮಸಾಲೆಯುಕ್ತ ಪದಾರ್ಥಗಳು ಕರಿದ ತಿನಿಸುಗಳು ಇಂಥದ್ದರ ಸೇವನೆಯಿಂದ ದೂರ ಇದ್ದಷ್ಟು ಉತ್ತಮ. ನಿಮಗೆ ಬಹಳ ಆಪ್ತರಾದ ಸ್ನೇಹಿತರು, ಸಂಬಂಧಿಗಳು ಆಡುವಂತಹ ಕೊಂಕಿನ ಮಾತುಗಳಿಂದ ಮನಸ್ಸಿಗೆ ಬೇಸರವಾಗಲಿದೆ. ಈ ಹಿಂದೆ ಹೂಡಿಕೆ ಮಾಡಿ ಬಹುತೇಕ ಆ ಹಣ ಬರುವುದಿಲ್ಲ ಎಂದುಕೊಂಡಿದ್ದು, ಸ್ನೇಹಿತರ ಸಹಾಯದಿಂದ ವಾಪಸ್ ಪಡೆದುಕೊಳ್ಳುವ ಮಾರ್ಗೋಪಾಯಗಳು ಗೋಚರ ಆಗಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಅತ್ತೆ ಅಥವಾ ನಾದಿನಿ ಜೊತೆಗೆ ಅಭಿಪ್ರಾಯ ಭೇದಗಳು, ಮನಸ್ತಾಪಗಳು ಇದ್ದಲ್ಲಿ ಅದು ನಿವಾರಣೆ ಮಾಡಿಕೊಳ್ಳುವುದಕ್ಕೆ ಬೇಕಾದ ವೇದಿಕೆ ದೊರೆಯಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಗೌರವ- ಸನ್ಮಾನಗಳು ದೊರೆಯುವ ಯೋಗವಿದೆ. ಇನ್ನು ಬಹಳ ಸಮಯದಿಂದ ಸಂತಾನಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ಈ ತಿಂಗಳು ಶುಭ ಸುದ್ದಿ ಕೇಳುವ ಯೋಗ ಇದೆ. ಒಂದು ವೇಳೆ ಐವಿಎಫ್ ಮೂಲಕವಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಇಲ್ಲಿಯ ತನಕ ಏನಾದರೂ ಆರೋಗ್ಯಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ಅನುಭವಿಸುತ್ತಿದ್ದಿರಿ ಅಂತಾದರೆ ಅವುಗಳು ನಿವಾರಣೆ ಆಗಲಿವೆ. ಪಿತ್ರಾರ್ಜಿತವಾಗಿ ಬರಬೇಕಾದ ಆಸ್ತಿಗಳು ಏನಾದರೂ ಕೋರ್ಟ್- ಕಚೇರಿ ಮೆಟ್ಟಿಲೇರಿದ್ದಲ್ಲಿ ಅದನ್ನು ಮಾತುಕತೆ ಮೂಲಕವಾಗಿ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಇನ್ನು ದೀರ್ಘ ಕಾಲದಿಂದ ಪ್ರೀತಿ- ಪ್ರೇಮದಲ್ಲಿದ್ದು, ಅದನ್ನು ಮದುವೆ ಹಂತಕ್ಕೆ ಒಯ್ಯುವ ಸಲುವಾಗಿ ಮನೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಬೇಕು ಎಂದುಕೊಳ್ಳುತ್ತಿದ್ದಲ್ಲಿ ಅದು ಈ ತಿಂಗಳು ಸಾಧ್ಯವಾಗಲಿದೆ. ಆದರೆ ಸಣ್ಣ ಮಟ್ಟದ ವಿರೋಧವನ್ನು ಎದುರಿಸಬೇಕಾದೀತು. ಆದರೆ ತೀರಾ ಆಗುವುದೇ ಇಲ್ಲ ಎಂಬಂಥ ಸನ್ನಿವೇಶವೇನೂ ಸೃಷ್ಟಿ ಆಗುವುದಿಲ್ಲ. ಚಾರ್ಟರ್ಡ್ ಅಕೌಂಟೆಂಟ್, ವಕೀಲರು, ವೈದ್ಯರಾಗಿ ವೃತ್ತಿ ನಿರ್ವಹಿಸುತ್ತಿರುವವರು ಇಲ್ಲಿಯ ತನಕ ಇನ್ನೊಬ್ಬರ ಬಳಿ ಕೆಲಸ ಮಾಡುತ್ತಿದ್ದೀರಿ ಅಂತಾದಲ್ಲಿ ಸ್ವಂತ ಕಚೇರಿ, ಕ್ಲಿನಿಕ್ ಅಥವಾ ಆಸ್ಪತ್ರೆಯನ್ನು ಆರಂಭಿಸುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ನಿಮ್ಮ ಈ ತೀರ್ಮಾನಕ್ಕೆ ತಂದೆಯವರಿಂದ ಅಥವಾ ಪಿತೃ ಸಮಾನರಾದವರಿಂದ ಬಹಳ ಒಳ್ಳೆಯ ಬೆಂಬಲ ದೊರೆಯಲಿದೆ. ಮುಗಿಯುವುದಕ್ಕೆ ಇನ್ನೂ ಸಮಯ ಬೇಕಾಗಬಹುದು ಅಥವಾ ಆಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿ ಇದ್ದ ವ್ಯವಹಾರವೊಂದು ನೀವು ನಿರೀಕ್ಷೆಯ ಮಾಡದ ರೀತಿಯಲ್ಲಿ ಪೂರ್ಣಗೊಳ್ಳಲಿದೆ. ಪ್ರಭಾವಿಗಳ ಸಂಪರ್ಕಕ್ಕೆ ನೀವು ಬರಲಿದ್ದು, ಇದರಿಂದಾಗಿ ನಿಮ್ಮ ಹಲವು ಕೆಲಸಗಳು ಸಹ ಪೂರ್ಣಗೊಳ್ಳಲು ಸಹಾಯ ಆಗಲಿದೆ. ಮುಖ್ಯವಾದ ಕೆಲಸದ ನಿಮಿತ್ತವಾಗಿ ಮನೆಯಿಂದ ಹೊರಡುವಾಗ ದುರ್ಗಾ ದೇವಿಯ ಆರಾಧನೆಯನ್ನು ಮಾಡಿಕೊಂಡು, ಹೊರಡಿ. ಅಥವಾ ದುರ್ಗಾ ದೇವಿ ಸೂಕ್ತವನ್ನು ಕೇಳಿಸಿಕೊಳ್ಳಿ. ಇದರಿಂದ ಅನೂಕೂಲಗಳು ಆಗಲಿವೆ. ಆದರೆ ಯಾವುದೇ ಕೆಲಸ ಪೂರ್ತಿ ಆಗುವ ಮೊದಲು ಅದನ್ನು ಹೇಳಿಕೊಂಡು ಬರಬೇಡಿ. ಅದರ ಸೆಲಬ್ರೇಷನ್ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಶಿಕ್ಷಣದ ಸಲುವಾಗಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ (ಎಸ್ ಐಪಿ), ಆರ್.ಡಿ. ಇಂಥ ಉಳಿತಾಯ, ಹೂಡಿಕೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ದೇವತಾ ವಿಗ್ರಹಗಳು ಉಡುಗೊರೆಯಾಗಿ ಅಥವಾ ಆಶೀರ್ವಾದ ಪೂರ್ವಕವಾಗಿ ದೊರೆಯುವ ಯೋಗವಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ಹಿಂದೆ ನಿಮಗೆ ಇದ್ದ ಸಿಟ್ಟು, ಬೇಸರ ಎಲ್ಲವನ್ನೂ ಹೊರಗೆ ಹಾಕುವಂತೆ ಆಗುತ್ತದೆ. ಆದ್ದರಿಂದ ಮಾನಸಿಕ ನಿಯಂತ್ರಣ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ನಿಮ್ಮ ಕರ್ಮ ಸ್ಥಾನಕ್ಕೆ ಸಂಬಂಧಿಸಿದಂತೆ ಈ ಎಚ್ಚರ ಹೇಳಬೇಕಿದೆ. ಅಂದರೆ ಉದ್ಯೋಗ ಸ್ಥಳದಲ್ಲಿ ಬಡ್ತಿ, ವೇತನ ಹೆಚ್ಚಳಕ್ಕಾಗಿ ಮೇಲಧಿಕಾರಿಗಳ ಜತೆಗೆ ಅಥವಾ ಎಚ್ ಆರ್ ಅಧಿಕಾರಿಗಳ ಜತೆಗೆ ಜೋರು ಧ್ವನಿಯಲ್ಲಿ ಮಾತುಕತೆ ಆಗುವ ಸಾಧ್ಯತೆ ಇದೆ. ನಿಮ್ಮ ಪರವಾಗಿ ಏನು ಹೇಳಬೇಕು ಅಂದುಕೊಂಡಿದ್ದೀರೋ ಅದನ್ನು ಸಮಾಧಾನದ ಧ್ವನಿಯಲ್ಲಿ ಹೇಳುವುದಕ್ಕೆ ಪ್ರಯತ್ನಿಸಿ. ನಿಮಗೆ ಅನಿಸಿದ್ದನ್ನು ಒಂದು ಪಟ್ಟಿ ಮಾಡಿಕೊಂಡು, ಅದರ ಪ್ರಕಾರವೇ ಸಂಬಂಧಪಟ್ಟವರಿಗೆ ದಾಟಿಸುವುದಕ್ಕೆ ಪ್ರಯತ್ನಿಸಿ. ಸೈಕ್ಲಿಂಗ್, ಕ್ರಿಕೆಟ್ ಸೇರಿದಂತೆ ಮತ್ಯಾವುದಾದರೂ ಕ್ರೀಡೆಯನ್ನೋ ಅಥವಾ ಹವ್ಯಾಸವನ್ನೋ ಮಾಡಿಕೊಂಡಂಥವರಿಗೆ ಸಣ್ಣ ಪುಟ್ಟದಾದರೂ ದೈಹಿಕ ಸಮಸ್ಯೆಗಳು ಎದುರಾಗಬಹುದು. ಅತಿ ಉತ್ಸಾಹದಲ್ಲಿಯೋ ಅಥವಾ ಸ್ನೇಹಿತರು ಮಾತುಗಳಿಂದ ಉತ್ತೇಜಿತರಾಗಿ ಸಾಮಾನ್ಯ ಸಂದರ್ಭಕ್ಕಿಂತ ಹೆಚ್ಚಿನದು ಏನನ್ನೋ ಮಾಡುವುದಕ್ಕೆ ಹೋಗಬೇಡಿ. ಮೊಳಕೈ ಅಥವಾ ಭುಜದ ಮೂಳೆ ನೋವಿನಿಂದ ಬಹಳ ಸಂಕಟ ಪಡುವಂತೆ ಆಗಬಹುದು. ನಿರ್ಧಾರಗಳನ್ನು ವಿಪರೀತ ಮುಂದಕ್ಕೆ ಹಾಕುವುದಕ್ಕೆ ಹೋಗಬೇಡಿ. ಅದರಲ್ಲೂ ವಿಲ್ಲಾ ಸೈಟ್, ಲಕ್ಷುರಿ ಅಪಾರ್ಟ್ ಮೆಂಟ್ ಗಳನ್ನು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಕೆಲವು ಬೇಕೆಂತಲೇ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬರಲಿದೆ. ಒಂದೊಂದು ಸಲ ಒಂದೊಂದು ಬೆಲೆಯನ್ನು ಹೇಳುತ್ತಾ ಅನುಮಾನಕ್ಕೆ ಎಡೆ ಮಾಡಿಕೊಡುವಂತೆ ಅವರ ವರ್ತನೆ ಇರಲಿದೆ. ಆದ್ದರಿಂದ ನಿಮಗೆ ಬಹಳ ಇಷ್ಟವಾಗಿದೆ ಎಂಬುದನ್ನು ತೋರಿಸಿಕೊಳ್ಳುವುದಕ್ಕೆ ಹೋಗಬೇಡಿ. ಒಂದು ವೇಳೆ ಈಗಾಗಲೇ ಅದನ್ನು ಹೇಳಿಯಾಗಿದೆ ಅಂತಾದಲ್ಲಿ ದುಂಬಾಲು ಬಿದ್ದು, ಖರೀದಿ ಮಾಡುವುದಕ್ಕೆ ಹೋಗಬೇಡಿ. ಹೋಟೆಲ್ ವ್ಯವಹಾರ ನಡೆಸುತ್ತಿರುವವರಿಗೆ ಸಣ್ಣ- ಪುಟ್ಟದಾದರೂ ಕಾನೂನು ತೊಡಕುಗಳು ಎದುರಾಗಬಹುದು. ಅಥವಾ ಹೋಟೆಲ್ ನಲ್ಲಿನ ಪ್ರಮುಖ ಉದ್ಯೋಗಿ ತಾನು ಕೆಲಸ ಬಿಡುವುದಾಗಿ ಹೇಳಬಹುದು. ಹೀಗೆ ಏನಾದರೂ ಸರಿ, ಆತಂಕವಂತೂ ಪಡುವಂತಾಗುತ್ತದೆ. ಸರ್ಕಾರದಿಂದ ಪಡೆಯಬೇಕಾದ ಪರವಾನಗಿ ಇತ್ಯಾದಿಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮನೆಯಲ್ಲಿ ಇರುವ ಹಳೇ ಪದಾರ್ಥಗಳನ್ನು ಏನಾದರೂ ಮಾರಾಟ ಮಾಡುತ್ತೀರಿ ಅಂತಾದರೆ ಒಮ್ಮೆ ಕುಟುಂಬ ಸದಸ್ಯರ ಜತೆಗೆ ಚರ್ಚೆ ಮಾಡಿದ ನಂತರ ಮುಂದುವರಿಯಿರಿ. ಇಲ್ಲದಿದ್ದರೆ ಇದೇ ವಿಚಾರಕ್ಕೆ ಮನೆಯಲ್ಲಿ ನೆಮ್ಮದಿ ಕಳೆದುಕೊಳ್ಳುವಂತಾಗುತ್ತದೆ. ಇತರರ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ವಿಪರೀತ ಮೂಗು ತೂರಿಸಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ದೇವಾಲಯದ ಪಾರುಪತ್ತೆದಾರರಿಗೆ ಬಹಳ ಮುಖ್ಯವಾದ ಅವಧಿ ಇದಾಗಿರುತ್ತದೆ. ಈ ಹಿಂದೆ ಪಟ್ಟ ಶ್ರಮದ ಫಲಿತಾಂಶವು ಈಗ ದೊರೆಯಲಿದೆ. ನಿಮ್ಮಲ್ಲಿ ಯಾರಿಗೆ ವಿಲಾಸಿ ಕಾರು ಖರೀದಿ ಮಾಡಬೇಕು ಎಂದು ಪ್ರಯತ್ನ ಇರುತ್ತದೋ ಅಂಥವರಿಗೆ ಖರೀದಿ ಮಾಡುವ ಯೋಗ ಇದೆ. ಒಂದು ವೇಳೆ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅಡೆತಡೆ ಆಗುತ್ತಿದೆ ಎಂದಾದಲ್ಲಿ ಅದು ನಿವಾರಣೆ ಆಗಲಿದೆ. ಇತರರು ಹೊಟ್ಟೆ ಕಿಚ್ಚು ಪಡುವಷ್ಟರ ಮಟ್ಟಿಗಿನ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ಅದು ಉದ್ಯೋಗವೇ ಇರಬಹುದು, ಮದುವೆಯೇ ಇರಬಹುದು ಅಥವಾ ಸೈಟು- ಜಮೀನು ಖರೀದಿ ವಿಚಾರವಾದರೂ ಸರಿಯೇ ನಿಮಗೆ ಸಿಕ್ಕಂಥದ್ದರ ಬಗ್ಗೆ ಇತರರು “ಅಯ್ಯೋ ನಮಗೆ ಇಂಥ ಚಾನ್ಸ್ ಸಿಗಲಿಲ್ಲವೇ?” ಎಂದು ಕರುಬಲಿದ್ದಾರೆ. ಈ ಕಾರಣಕ್ಕೆ ನಿಮಗೆ ದೃಷ್ಟಿ ದೋಷ ತಗುಲಬಹುದು. ಕಪ್ಪು ಬಟ್ಟೆ ಧರಿಸಬೇಡಿ. ಜತೆಗೆ ನಿಮಗೆ ಹೆಮ್ಮೆ, ಖುಷಿ ಅಂತೆನಿಸಿದರೂ ಕೆಲವು ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಹೋಗಬೇಡಿ. ಇದನ್ನು ಮೀರಿಯೂ ನೀವೇನಾದರೂ ಹೇಳಿಕೊಂಡು ಬಂದರೆ ಅದರ ನಕಾರಾತ್ಮಕ ಫಲಿತಾಂಶವನ್ನು ಕಾಣಬೇಕಾಗುತ್ತದೆ. ಇತ್ತೀಚೆಗಷ್ಟೇ ಕಟ್ಟಿಸಿದ ಮನೆಯಾಗಿದ್ದಲ್ಲಿ ಅದಕ್ಕೆ ಬೇಕಾದ ಇಂಟಿರೀಯರ್ ಡೆಕೋರೇಷನ್, ವಾರ್ಡ್ ರೋಬ್, ಅಡುಗೆ ಮನೆಯ ಕ್ಯಾಬಿನೆಟ್ ಇಂಥವುಗಳನ್ನು ಮಾಡಿಸಿಕೊಳ್ಳಲಿದ್ದೀರಿ. ಇದಕ್ಕಾಗಿ ಸಾಲ ಮಾಡಿಕೊಳ್ಳಲೇಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಹಾಕಿಕೊಂಡಿದ್ದ ಬಜೆಟ್ ಒಂದು- ಒಂದೂವರೆ ಪಟ್ಟು ಹೆಚ್ಚಾಗಬಹುದು. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು ಸ್ನೇಹಿತರು, ಸಹೋದ್ಯೋಗಿಗಳನ್ನು ಒಟ್ಟು ಮಾಡಿಕೊಂಡು, ತಾವೇ ಒಂದು ಸಂಸ್ಥೆಯನ್ನು ಆರಂಭಿಸುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಇನ್ನು ಹಾಗೆ ನೀವು ಒಟ್ಟುಗೂಡಿಸುವಂಥವರಲ್ಲೇ ಕೆಲವರು ಈ ಯೋಜನೆಗೆ ಹೂಡಿಕೆದಾರರನ್ನು ಕರೆತರುವುದಾಗಿ ಹೇಳಬಹುದು. ಇಂಟರ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಸುವಂಥವರು ಅವುಗಳ ಮೂಲಕ ಹಣ ಕಳಿಸುವುದೋ ಅಥವಾ ಪಡೆಯುವುದೋ ಮಾಡುವಾಗ ಕೆಲವು ಮುಂಜಾಗ್ರತೆಯನ್ನು ತೆಗೆದುಕೊಳ್ಳುವುದು ಮುಖ್ಯ. ಏಕೆಂದರೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವಂತಹ ಸಾಧ್ಯತೆಗಳಿವೆ. ಇನ್ನು ಮಕ್ಕಳ ಶೈಕ್ಷಣಿಕ ಪ್ರಗತಿ ಸಂತಸ, ಹೆಮ್ಮೆ ನೀಡಲಿದೆ. ಕೆಲಸ ಮಾಡುವ ವಿಚಾರದಲ್ಲಿ ಇಷ್ಟು ಸಮಯ ಏಕಾಗ್ರತೆ ಕೊರತೆ ಕಾಡುತ್ತಿತ್ತು ಎಂದು ಆಲೋಚಿಸುತ್ತಿದ್ದಲ್ಲಿ ಈ ತಿಂಗಳು ಅದು ನಿವಾರಣೆ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಸಮುದಾಯ ಕೇಂದ್ರಿತ ಸಂಘ- ಸಂಸ್ಥೆಗಳಿಂದ ಸನ್ಮಾನ, ಗೌರವಗಳು ದೊರೆಯಲಿವೆ.ಈಗ ಇರುವುದರ ಜತೆಗೆ ಪ್ರಭಾರಿಯಾಗಿ ಕೆಲವು ಹುದ್ದೆಗಳನ್ನು ವಹಿಸಿಕೊಳ್ಳಬೇಕಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಮೇಲಿನ ಒತ್ತಡ ಯಾವುದೇ ಪ್ರಮಾಣದಲ್ಲಿ ಇದ್ದರೂ ಯಾವ ವ್ಯಕ್ತಿಯ ಬಳಿ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಸ್ಪಷ್ಟ ಚಿತ್ರಣ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಹಲ್ಲಿನ ವೈದ್ಯರು ಕಣ್ಣಿಗೆ ಕೈ ಹಾಕಬಾರದು ಅನ್ನುವ ಮಾತಿದೆ. ಆದರೆ ನಿಮಗೆ ಕೆಲವು ಅಂಥ ವ್ಯಕ್ತಿಗಳು ಸಿಗಲಿದ್ದಾರೆ. ತಮಗೆ ಗೊತ್ತಿರುವಂಥದ್ದು ಅಥವಾ ಬರುವಂಥದ್ದನ್ನು ಬಿಟ್ಟು, ಉಳಿದೆಲ್ಲವನ್ನೂ ತಾನೇ ಮಾಡಿಕೊಡುವುದಾಗಿ ಭರವಸೆ ನೀಡುವ ಮಾತುಗಳನ್ನು ಆಡಲಿದ್ದಾರೆ. ಆದರೆ ಅವರಿಗೆ ತಮ್ಮ ಆದಾಯ ಹೆಚ್ಚಾಗಬೇಕು ಎಂಬುದಷ್ಟೇ ಗಮನದಲ್ಲಿ ಇರುತ್ತದೆ. ಅಷ್ಟನ್ನೇ ಮನಸ್ಸಲ್ಲಿ ಇಟ್ಟುಕೊಂಡು, ಕೆಲವರು ನಿಮಗೆ ಸಹಾಯ ಮಾಡುವವರಂತೆ ಹತ್ತಿರ ಆಗಲಿದ್ದಾರೆ. ಯಾರ ಅರ್ಹತೆ, ಯೋಗ್ಯತೆ ಏನು ಎಂಬುದನ್ನು ಅಳೆಯುವುದರಲ್ಲಿ ಸೋತಿರೋ ದೊಡ್ಡ ಮೊತ್ತದ ಹಣ, ಸಮಯ, ಗೌರವ, ಮರ್ಯಾದೆ ಎಲ್ಲವನ್ನೂ ಒಂದೇಟಿಗೆ ಕಳೆದುಕೊಳ್ಳುವಂತಾಗುತ್ತದೆ. ನಿಮ್ಮ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳುವಂಥ ಅವಕಾಶಗಳು ದೊರೆಯಲಿವೆ. ಸರ್ಕಾರಿ ಕೆಲಸಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಿ ಅಂತಾದಲ್ಲಿ ಹಿರಿಯರು, ಅನುಭವಿಗಳ ಮಾರ್ಗದರ್ಶನ ದೊರೆಯಲಿದೆ. ಅಷ್ಟೇ ಅಲ್ಲ, ಲಿಖಿತ ಪರೀಕ್ಷೆ, ಸಂದರ್ಶನಗಳಿಗೆ ಹೇಗೆ ಸಿದ್ಧತೆ ನಡೆಸಬೇಕು ಹಾಗೂ ಯಶಸ್ಸು ಪಡೆಯುವುದು ಹೇಗೆ ಎಂಬ ಬಗ್ಗೆ ತುಂಬ ಚೆನ್ನಾಗಿ ವಿವರಿಸಲಿದ್ದೀರಿ. ಸೆಕೆಂಡ್ ಹ್ಯಾಂಡ್ ಕಾರು ಅಥವಾ ಇತರೆ ಯಾವುದಾದರೂ ವಾಹನ ಖರೀದಿ ಮಾಡುವಂತೆ, ಕೆಲವು ಸ್ನೇಹಿತರು ಒಂದು ಆಫರ್ ಜತೆಗೆ ನಿಮ್ಮ ಬಳಿಗೆ ಬರಲಿದ್ದಾರೆ. ಕಡಿಮೆಗೆ ಸಿಗುತ್ತಿದೆ ಅಂತಲೋ ಅಥವಾ ವಾಹನ ಬಹಳ ಚೆನ್ನಾಗಿದೆ ಅಂತಲೋ ನೀವೂ ಸಾಲ ಮಾಡಿಯಾದರೂ ಖರೀದಿ ಮಾಡಿಬಿಡೋಣ ಅಂದುಕೊಂಡು ಬಿಡಬಹುದು. ಆದರೆ ನಿಮಗೆ ನೆನಪಿನಲ್ಲಿ ಇರಬೇಕಾದ ಸಂಗತಿ ಏನೆಂದರೆ, ಅಗತ್ಯ ಇಲ್ಲ ಅಂದಾದರೆ ಯಾಕೆ ಕೊಳ್ಳಬೇಕು. ಸದ್ಯಕ್ಕೆ ನಿಮಗೆ ಇರುವಂತಹ ಹಣಕಾಸಿನ ಜವಾಬ್ದಾರಿಗಳನ್ನು ಮುಗಿಸುವ ಕಡೆಗೆ ಗಮನವನ್ನು ನೀಡಿ. ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ತಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು ಎಂದು ಅನಿಸುವುದಕ್ಕೆ ಶುರುವಾಗುತ್ತದೆ. ಅಥವಾ ತಾತ್ಕಾಲಿಕವಾಗಿಯಾದರೂ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದೆನಿಸಲಿದೆ. ಹೆಚ್ಚು ಹೂಡಿಕೆ ನಿರೀಕ್ಚೆ ಮಾಡುವಂಥ ವ್ಯವಹಾರಗಳನ್ನು ಆರಂಭಿಸುವ ಮುನ್ನ ನಿಮ್ಮ ಬಳಿ ಇರುವ ಸಂಪನ್ಮೂಲ ಎಷ್ಟು ಹಾಗೂ ಇನ್ನೂ ಎಷ್ಟು ಬೇಕಾಗುತ್ತದೆ ಎಂಬ ಬಗ್ಗೆ ಸರಿಯಾದ ಲೆಕ್ಕಾಚಾರ ಹಾಕಿಕೊಳ್ಳಿ.

ಲೇಖನ- ಎನ್.ಕೆ. ಸ್ವಾತಿ

Published On - 8:50 pm, Thu, 3 October 24