ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಕೃತ್ತಿಕಾ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ದಶಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಐಂದ್ರ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಸಂಜೆ 05:16 ರಿಂದ 06:51ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:04ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:40 ರಿಂದ 05:16ರ ವರೆಗೆ,
ಮೇಷ: ಇಂದು ನಿಮ್ಮ ನೋವನ್ನು ಯಾರ ಜೊತೆಯೂ ಹಂಚಿಕೊಳ್ಳಲು ಹೋಗುವುದಿಲ್ಲ. ಕಷ್ಟವಾದರೂ ಕೆಲಸವನ್ನು ಮಾಡಬೇಕಾದೀತು. ಅಪರೂಪದ ಬಂಧುಗಳ ಭೇಟಿಯಾಗಲಿದೆ. ಉದ್ಯೋಗದಲ್ಲಿ ನೀವು ಸ್ವತಂತ್ರ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಎಲ್ಲರ ಮೇಲೂ ಅನುಮಾನದ ದೃಷ್ಟಿ ಇರಲಿದೆ. ಆಹಾರದ ಮೇಲೆ ಹಿಡಿತವಿರಲಿ. ವಾತಾವರಣದ ಬದಲಾವಣೆಯಿಂದ ಆರೋಗ್ಯದ ಮೇಲೆ ತೊಂದರೆಯಾದೀತು. ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆ ಇರಲಿದೆ. ಶಿಕ್ಷಕರಾಗಿದ್ದರೆ ನಿಮ್ಮಲ್ಲಿ ಗೊಂದಲಗಳು ಬೇಡ. ಸ್ಪಷ್ಟತೆ ಇರಲಿ. ಯಾರನ್ನೋ ಅಪಮಾನಿಸಲು ಹೋಗುವುದು ಬೇಡ.
ವೃಷಭ: ಇಂದು ನಿಮ್ಮ ಸ್ವಂತ ಆಲೋಚನೆಗಳಿಂದ ಮುಂದುವರಿಯಿರಿ. ಇನ್ನೊಬ್ಬರ ಮಾತಿಗೂ ಬೆಲೆ ಇರಲಿ. ವ್ಯಾಪಾರದಲ್ಲಿ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೆಚ್ಚಿನ ನಿರೀಕ್ಷೆಯಲ್ಲಿ ಇರುವುದು ಬೇಡ. ನಿಮ್ಮ ಅನುಕೂಲತೆಗೆ ತಕ್ಕಂತೆ ಇಂದಿನ ದಿನವನ್ನು ಇಟ್ಟುಕೊಳ್ಳಿ. ಒತ್ತಡಗಳು ಸ್ವಲ್ಪಮಟ್ಟಿಗೆ ಕಡಿಮೆ ಆದೀತು. ತಂದೆಯ ಮಾತನ್ನು ಹೆಚ್ಚು ಕೇಳುವಿರಿ. ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ ಗೊಂದಲವಾದೀತು. ಸ್ವಲ್ಪ ಬೇಸರವು ನಿಮಗೆ ಉಂಟಾಗಬಹುದು. ಸ್ನೇಹಿತರು ಉದ್ಯೋಗವನ್ನು ಬದಲಿಸಲು ಒತ್ತಾಯ ಮಾಡಬಹುದು.
ಮಿಥುನ: ಸಂಗಾತಿಯು ಸ್ಪಂದಿಸುತ್ತಿಲ್ಲ ಸರಿಯಾಗಿ ಎಂಬ ವಿಚಾರದಲ್ಲಿ ಬೇಸರವಿರಲಿದೆ. ಖರ್ಚುಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಅಪರಿಚಿತರು ನಿಮ್ಮ ಸ್ನೇಹದ ನೆಪದಲ್ಲಿ ಬರಬಹುದು. ಸಾಮಾಜಿಕ ಸೇವೆಯಲ್ಲಿ ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಸರಿಯಾಗಿ ನಿರ್ಧರಿಸಿಕೊಳ್ಳುವರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲ್ಲುವಿರಿ. ಆರೋಗ್ಯದ ವಿಚಾರದಲ್ಲಿ ಗಂಭೀರವಾಗಿ ಯೋಚಿಸಬೇಕಾದೀತು. ನಿಮ್ಮ ಕಲ್ಪನೆಗಳು ವಸ್ತುಸ್ಥಿತಿಗೆ ಹತ್ತಿರವಾಗಿರಲಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಕಟಕ: ಯಾರದೋ ಯೋಜನೆಯನ್ನು ನೀವು ಕದಿಯುವ ಪ್ರಯತ್ನ ಮಾಡಬಹುದು. ಎಲ್ಲವನ್ನೂ ಕಳೆದುಕೊಂಡೆ ಎಂಬ ನೋವು ನಿಮ್ಮನ್ನು ಅಕಾರ್ಯದಲ್ಲಿ ತೊಡಗುವಂತೆ ಮಾಡೀತು. ಹಳೆಯ ಹೂಡಿಕೆಯನ್ನು ಸೂಕ್ತವಾದ ಸಮಯಕ್ಕೆ ಹಿಂಪಡೆಯಿರಿ. ಬುದ್ಧಿವಂತಿಕೆಯನ್ನು ತೋರಿಸಲು ಹೋಗಿ ದಡ್ಡರಾದೀರಿ. ಆರ್ಥಿಕ ಅಸಮತೋಲನವನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ನಿಮ್ಮವರ ಸಂಪೂರ್ಣ ಬೆಂಬಲ ನಿಮಗೆ ಸಿಗಲಿಕ್ಕಿಲ್ಲ. ಅನಿರೀಕ್ಷಿತ ಸುದ್ದಿಗಳಿಂದ ನಂಬಿಕೆ ಬರದಿದ್ದರೂ ವಾಸ್ತವವಾಗಿ ಸತ್ಯವಾಗಿರುತ್ತದೆ.
ಸಿಂಹ: ಸ್ವಂತ ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡುವಿರಿ. ಅಂದುಕೊಂಡ ಕೆಲಸವು ಪೂರ್ಣವಾಗುವುದು. ಅಪರಿಚಿತ ಕೆಲಸದಲ್ಲಿ ಮುನ್ನುಗ್ಗಲು ಭಯಪಡುವಿರಿ. ನಿಮ್ಮ ವರ್ತನೆಯು ಅಹಂಕಾರದಂತೆ ತೋರೀತು. ನಕಾರಾತ್ಮಕ ಹೇಳಿಕೆಗಳಿಗೆ ಸ್ಪಂದಿಸುವ ಅವಶ್ಯಕತೆ ಇರುವುದಿಲ್ಲ. ಎಲ್ಲವನ್ನೂ ಕಳೆದುಕೊಳ್ಳುತ್ತೇನೆ ಎಂಬ ಭೀತಿಯು ನಿಮ್ಮಲ್ಲಿ ಉಂಟಾಗಬಹುದು. ಮಾನಸಿಕ ನೋವನ್ನು ತಡೆದುಕೊಂಡು ಇಂದಿನ ದಿನವನ್ನು ಕಳೆಯುವಿರಿ. ಸಂಗಾತಿಯ ಮಾತುಗಳನ್ನು ಕೇಳುವ ತಾಳ್ಮೆ ಇರದು. ನಿಮಗೆ ಅಗೌರವ ತೋರಿಸಿಯಾರು. ಇಂತಹುದನ್ನು ನಿರ್ಲಕ್ಷಿಸುವುದು ಉತ್ತಮ.
ಕನ್ಯಾ: ಮನೆಯ ಕೆಲಸ ಕಾರ್ಯಗಳು ಪರ್ವತಾಕಾರದಲ್ಲಿ ತೋರುವುದು. ಆರಂಭದ ಗೊಂದಲೂ ಆದೀತು. ವಾಹನ ಖರೀದಿಗೆ ಪರ ಊರಿಗೆ ಹೋಗುವಿರಿ. ಹೊಸ ಉದ್ಯಮವನ್ನು ಆರಂಭಿಸುವ ಯೋಚನೆ ಇರಲಿದೆ. ನಿಮ್ಮ ಕುಟುಂಬದರ ಬೆಂಬಲ ನಿಮಗೆ ಕಡಿಮೆ ಇರಲಿದೆ. ಮನವೊಲಿಸುವ ಪ್ರಯತ್ನ ಮಾಡುವಿರಿ. ಸಾಲ ಮರುಪಾವತಿಯ ವಿಚಾರದಲ್ಲಿ ಆತಂಕವಿರಲಿದೆ. ಇಂದಿನ ನಿಮ್ಮ ಸ್ಥಿತಿಯನ್ನು ನೋಡಿ ಆಡಿಕೊಳ್ಳುವರು. ಆಪ್ತರ ಭೇಟಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಇಂದು ಹೆಚ್ಚು ನಗಲಿದ್ದೀರಿ. ಯಾವುದೇ ಗೌಪ್ಯವನ್ನು ನೀವು ಬಿಟ್ಟುಕೊಡಲಾರಿರಿ.
ತುಲಾ: ಕಷ್ಟವೇ ನಿಮಗೆ ಎತ್ತರಕ್ಕೇರುವ ಸಾಧನವಾಗಲಿದೆ. ಧೈರ್ಯಗೆಡುವ ಅಗತ್ಯವಿಲ್ಲ. ಸಾಮಾಜಿಕ ಜೀವನ ನಿಮಗೆ ಸಾಕೆನಿಸುವುದು. ಪ್ರೇಮವ್ಯವಹಾರದಲ್ಲಿ ಸಿಕ್ಕಿಕೊಂಡು ಒದ್ದಾಡುವಿರಿ. ನಿಮ್ಮ ತೀರ್ಮಾನಗಳು ಸಮಂಜಸವಾಗಿದ್ದರೂ ಅದನ್ನು ಒಪ್ಪುವ ಸ್ಥಿತಿ ಇರುವುದಿಲ್ಲ. ಮಕ್ಕಳ ವಿಚಾರದಲ್ಲಿ ನಿಮಗೆ ತಲೆನೋವಾದೀತು. ಬಂಧುಗಳ ಸಹಾಯವನ್ನು ಪಡೆದು ನೆಮ್ಮದಿಯಿಂದ ಇರಿ. ಸುಳ್ಳಾಡಿ ಸಿಕ್ಕಿಕೊಳ್ಳುವಿರಿ. ನಿಮ್ಮ ಮೇಲಿನ ವಿಶ್ವಾಸವು ಕಡಿಮೆ ಆದೀತು. ಏಕಾಂತವನ್ನು ನೀವು ಇಂದು ಹೆಚ್ಚು ಬಯಸುವಿರಿ.
ವೃಶ್ಚಿಕ: ನೀವು ಇಂದು ಪ್ರಾಮಾಣಿಕತೆಯ ಫಲವನ್ನು ಕಾಣಲಿದ್ದೀರಿ. ಸಂಗಾತಿಯಿಂದ ಶುಭಸಮಾಚಾರವು ಬರಲಿದೆ. ಪ್ರಯಾಣವೂ ನಿಮಗೆ ಹಿತವಾದ ಅನುಭವವನ್ನು ಕೊಡುವುದು. ನಿಮ್ಮ ಅಭಿಪ್ರಾಯಗಳನ್ನು ಜನರು ಬೆಂಬಲಿಸುವರು. ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಳ್ಳಲು ಹೆಚ್ಚಿನ ಆದಾಯದ ಕೆಲಸವನ್ನು ಅನ್ವೇಷಣೆ ಮಾಡುವಿರಿ. ಇದಕ್ಕೆ ಸಂಬಂಧಿಸಿದಂತೆ ನಿಮ್ಮವರ ಸಲಹೆಯನ್ನು ಪಡೆಯಿರಿ. ಮನೋರಂಜನೆಯನ್ನು ಇಷ್ಟಪಡುವಿರಿ. ಹಿತಶತ್ರುಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು. ಮಾನಸಿಕ ಸ್ವಾಸ್ಥ್ಯವು ಸ್ವಲ್ಪ ಕೆಡಬಹುದು. ನಿರೀಕ್ಷೆಗಳು ಹುಸಿಯಾಗಿ ಹತಾಶ ಭಾವವು ಬರಬಹುದು.
ಧನುಸ್ಸು: ನೀವು ಇಂದು ದಿನದ ಚಟುವಟಿಕೆಗಳನ್ನು ಬದಲಾಯಿಸುವ ಮನಸ್ಸು ಮಾಡುವಿರಿ. ವೃತ್ತಿಜೀವನವು ನಿಮ್ಮನ್ನು ಕೈಬೀಸಿ ಕರೆದರೂ ನಿಮ್ಮಲ್ಲಿ ನಿರಾಸಕ್ತಿ ಇರುವುದು. ಧಾರ್ಮಿಕಕ್ಷೇತ್ರಗಳಿಗೆ ಒಬ್ಬೊಂಟಿಯಾಗಿ ಹೋಗಲಿದ್ದೀರಿ. ಹೆಚ್ಚು ಶ್ರಮ, ಅಲ್ಪ ಫಲವನ್ನು ನೀವು ಪಡೆಯಲಿದ್ದೀರಿ. ನಿಮ್ಮ ನಿರ್ಧಾರಗಳನ್ನು ನೀವೇ ಮುರಿಯುವುದು ಹಾಸ್ಯಾಸ್ಪದವಾದೀತು. ರಾಜಕಾರಣಿಗಳು ಅತ್ಯಂತ ಸಂತೋಷದಿಂದ ಇರುವ ದಿನವಾಗಿದೆ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಎಲ್ಲವನ್ನೂ ನಿರ್ಲಕ್ಷ್ಯ ಮಾಡುವುದು ಬೇಡ.
ಮಕರ: ಇಂದು ನೀವು ಕುಟುಂಬದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಏರಿಸುವಿರಿ. ನಿಮ್ಮ ಸಾಧನೆಗೆ ಗೌರವ ಸಿಗಲಿದೆ. ವೃತ್ತಿಯನ್ನು ಬಹಳ ಗಂಭೀರವಾಗಿ ಪರಿಗಣಿಸುವಿರಿ. ಹೋರಾಡದ ಫಲವಾಗಿ ನೀವಿಂದು ನಿಮ್ಮ ಕನಸನ್ನು ನನಸಾಗಿಸಿಕೊಳ್ಳುವಿರಿ. ಸ್ಥಾನಮಾನದ ವಿಚಾರದಲ್ಲಿ ಗೊಂದಲವಾಗಬಹುದು. ನಿಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಾದೀತು. ಸಣ್ಣ ಆದಾಯವನ್ನೂ ಕಡೆಗಣಿಸುವುದು ಬೇಡ. ಉಳಿತಾಯದ ಕಡೆಗೆ ಗಮನವಿರಲಿ. ಆಪ್ತರ ಜೊತೆ ಖುಷಿಯನ್ನು ಹಂಚಿಕೊಳ್ಳುವಿರಿ. ಅತಿಯಾದ ಮಾತನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.
ಕುಂಭ: ಇಂದು ನಿಮ್ಮ ವ್ಯಕ್ತಿತ್ವದ ಸ್ಪಷ್ಟ ಚಿತ್ರಣವನ್ನು ನಿಮ್ಮವರಿಗೆ ತೋರಿಸುವಿರಿ. ನಿಮ್ಮ ಕೆಲಸ ಕಾರ್ಯಗಳು ಹಿಂದಿನ ದಿನಗಳಿಗಿಂತ ವೇಗವನ್ನು ಪಡುದುಕೊಳ್ಳುವುದು. ಪಾಕಕ್ಷೇತ್ರದಲ್ಲಿದ್ದರೆ ನಿಮಗೆ ಹಚರಚು ಲಾಭವಾಗಲಿದೆ. ಪ್ರತಿಷ್ಠಿಯೂ ಸಿಗಲಿದೆ. ಸಂಗಾತಿಯಿಂದ ನೀವು ಸಾಕಷ್ಟು ಅತಿ ಹೆಚ್ಚು ಅನುರಾಗವನ್ನು ಪಡಯುವಿರಿ. ನಿಮ್ಮವರ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ವಿದೇಶ ಪ್ರಯಾಣವನ್ನು ಮಾಡುವವರು ಹೆಚ್ಚು ಸಿದ್ಧತೆಯಲ್ಲಿ ತೊಡಗುವರು. ದಿನಾಂತ್ಯವು ಬಹಳ ಆನಂದದಲ್ಲಿ ಮುಕ್ತಾಯವಾಗುವುದು.
ಮೀನ: ನೀವು ಇಂದು ಆಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಆಯ್ಕೆಗಳ ವಿಚಾರದಲ್ಲಿ ಗೊಂದಲದಲ್ಲಿ ಇರಬೇಕಾಗಬಹುದು. ಶತ್ರುಗಳ ಪರಾಜಯವನ್ನು ಕಂಡು ಸಂತಸಪಡುವಿರಿ. ಕೆಲಸದಲ್ಲಿ ನೀವು ಬಹಳ ಸಂಕೀರ್ಣತೆಯನ್ನು ತಂದುಕೊಳ್ಳುವಿರಿ. ಇಂದಿನ ನಿಮ್ಮ ಕೆಲಸಗಳು ಬಹಳ ಹಿಂದೆ ಉಳಿಯುವುದು. ಗುರಿಯ ಸಾಧನೆಗೆ ಮಾರ್ಗವು ಸರಿಯಾಗಿರಲಿ. ಹೊಸ ಸ್ನೇಹಿತರ ಜೊತೆ ಹೆಚ್ಚು ಕಾಲ ಕಳೆಯುವಿರಿ. ಹಳೆಯ ಸ್ನೇಹಿತರು ದೂರಾದಾರು. ಇಂದು ಹೆಚ್ಚು ಹುಡುಗಾಟದ ಮಾನಸಿಕತೆ ಇರಲಿದೆ.
-ಲೋಹಿತಶರ್ಮಾ ಇಡುವಾಣಿ