Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 24ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 24ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 24ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Nov 24, 2025 | 12:15 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಪರಿಸರ ರಕ್ಷಣೆ ಹೋರಾಟದಲ್ಲಿ ತೊಡಗಿಕೊಂಡವರಿಗೆ ತಮ್ಮ ಪ್ರಯತ್ನದಲ್ಲಿ ಆಗುತ್ತಿರುವ ಹಿನ್ನಡೆಗೆ ಕಾರಣ ಏನು ಎಂಬ ಬಗ್ಗೆ ಕೆಲವರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಅದರಲ್ಲೂ ವಕೀಲರು ಕೆಲವರನ್ನು ಭೇಟಿ ಆಗಲಿದ್ದೀರಿ. ಹದಿನಾರರಿಂದ ಇಪ್ಪತ್ನಾಲ್ಕು ವರ್ಷದೊಳಗಿನವರಿಗೆ ಹೊಸ ವಾತಾವರಣದಲ್ಲಿ ಹೊಂದಿಕೊಳ್ಳಲೇಬೇಕು ಎಂಬ ಪರಿಸ್ಥಿತಿ ಸೃಷ್ಟಿ ಆಗಲಿದೆ. ಅದು ಉದ್ಯೋಗವೇ ಇರಬಹುದು ಅಥವಾ ವ್ಯಾಸಂಗದ ಕಾರಣಕ್ಕೆ ಹಾಸ್ಟೆಲ್ ನಲ್ಲಿ- ಪಿಜಿಯಲ್ಲಿ ಇರಬೇಕು ಎಂಬ ಅನಿವಾರ್ಯ ಎದುರಾಗಲಿದೆ. ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ಪಡೆಯುವಂಥ ಯೋಗ ಈ ದಿನ ನಿಮ್ಮ ಪಾಲಿಗಿದೆ. ನಿಮ್ಮ ಸ್ನೇಹಿತರಿಗೆ ಇರುವಂಥ ಹಣಕಾಸಿನ ತುರ್ತು ಅಗತ್ಯಕ್ಕಾಗಿ ಅವರ ಪರವಾಗಿ ಜಾಮೀನಾಗಿ ನಿಂತು, ದುಡ್ಡಿನ ವ್ಯವಸ್ಥೆ ಮಾಡಿಕೊಡಲಿದ್ದೀರಿ. ಪ್ರೀತಿಯಲ್ಲಿ ಇರುವವರ ಮಧ್ಯೆ ಒಂದು ವೇಳೆ ಮನಸ್ತಾಪ- ಮಾತು ಬಿಟ್ಟಿರುವುದು ಇಂಥದ್ದು ಆಗಿದ್ದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ಸಿಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮಗೆ ಆಗಬೇಕಾದ್ದಕ್ಕಿಂತ ಹೆಚ್ಚಾಗಿ ಬೇರೆಯವರ ಕೆಲಸ- ಕಾರ್ಯಗಳನ್ನು ಮಾಡಿಕೊಡುವುದಕ್ಕೇ ಹೆಚ್ಚಿನ ಸಮಯ ಹೋಗಲಿದೆ. ಕೃಷಿ ಉಪಕರಣಗಳು- ಯಂತ್ರಗಳ ಮಾರಾಟ ಮಾಡುತ್ತಾ ಇರುವವರಿಗೆ ಹೊಸ ಟಾರ್ಗೆಟ್ ಅನ್ನು ನಿಮ್ಮ ಮೇಲಧಿಕಾರಿಗಳು ನೀಡಲಿದ್ದು, ಅದನ್ನು ತಲುಪುವುದಕ್ಕೆ ನಾನಾ ಪಡಿಪಾಟಲು ಪಡಬೇಕಾಗುತ್ತದೆ. ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಾ ಇರುವವರಿಗೆ ಈಗ ಬರುತ್ತಿರುವ ಆದಾಯ ಸಮಾಧಾನ ಎನಿಸುತ್ತಿಲ್ಲ ಎಂಬ ಕಾರಣದಿಂದ ಸಾಲ ಮಾಡಿಯಾದರೂ ಸ್ವಂತದ್ದೊಂದು ವ್ಯವಹಾರ ಆರಂಭಿಸಬೇಕು ಎಂದೆನಿಸಲಿದೆ. ಈಗಾಗಲೇ ಮಾನಸಿಕ ಖಿನ್ನತೆಯಿಂದ ಬಳಲುತ್ತಾ ಇರುವವರು ಸೂಕ್ತ ಔಷಧೋಪಚಾರ ತೆಗೆದುಕೊಳ್ಳುವುದಕ್ಕೆ ಕೆಲವರ ಸಹಾಯ ಕೇಳಿಕೊಳ್ಳಲಿದ್ದೀರಿ. ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಜತೆಯಲ್ಲಿ ಉದ್ಯೋಗ ಮಾಡುವವರು ರಜಾ ಹಾಕುವುದರಿಂದ ಒತ್ತಡ ಹೆಚ್ಚಾಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಇನ್ನು ದಯಾ- ದಾಕ್ಷಿಣ್ಯ ನೋಡುತ್ತಾ ಕೂರುವುದಕ್ಕೆ ಆಗುವುದಿಲ್ಲ ಎಂಬ ಆಲೋಚನೆ ನಿಮಗೆ ಮೂಡಲಿದೆ. ಅದು ನಿಮಗೆ ಹಣ ಬಾಕಿ ವಸೂಲಿ ಆಗಬೇಕು ಎಂಬ ವಿಚಾರದಲ್ಲಿ ಇರಬಹುದು, ಉದ್ಯೋಗದಲ್ಲಿ ನೀವು ಬೆಂಬಲಿಸುತ್ತಾ ಬಂದಿದ್ದ ವ್ಯಕ್ತಿಗಳು ಬೇಕೆಂತಲೇ ನಿಮ್ಮ ಸಹಾಯದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಇರಬಹುದು. ಒಟ್ಟಿನಲ್ಲಿ ಇತರರ ದೌರ್ಬಲ್ಯಕ್ಕೆ ಅಯ್ಯೋ- ಪಾಪ ಎನ್ನಬಾರದು ಎಂಬ ನಿಲವಿಗೆ ಬರುವಂತೆ ಆಗಲಿದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಜಾಬ್ ಕನ್ಸಲ್ಟೆನ್ಸಿಗಳಿಂದ ಅನುಕೂಲ ಆಗಲಿದೆ. ನಿಮ್ಮಲ್ಲಿ ಯಾರು ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ- ವ್ಯಾಪಾರ ಮಾಡುತ್ತಿದ್ದೀರಿ ಅಂಥವರು ಸದ್ಯಕ್ಕೆ ಇರುವ ಒಪ್ಪಂದದ ಷರತ್ತುಗಳಲ್ಲಿ ಕೆಲವು ಮಾರ್ಪಾಟು ಮಾಡುವ ಬಗ್ಗೆ ಪಾಲುದಾರರಿಗೆ ಹೇಳಲಿದ್ದೀರಿ. ಕುಟುಂಬ ಸದಸ್ಯರೊಬ್ಬರ ಅನಾರೋಗ್ಯ ಸಮಸ್ಯೆ ಆತಂಕಕ್ಕೆ ಕಾರಣವಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಧಾನ್ಯ- ಬೇಳೆಕಾಳುಗಳ ವರ್ತಕರಿಗೆ ಸಾಗಾಟದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಜತೆಗೆ ಪೂರೈಕೆಗೆ ಒಪ್ಪಂದ ಮಾಡಿಕೊಂಡವರು ತಮ್ಮ ಅಸಹಾಯಕತೆ ತೋಡಿಕೊಂಡು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಲಿದ್ದಾರೆ. ಸ್ಕಾಲರ್ ಷಿಪ್ ಗಾಗಿ ಪ್ರಯತ್ನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರ ಸಿಗಲಿದೆ. ನಿಮ್ಮಲ್ಲಿ ಕೆಲವರಿಗೆ ಅಧ್ಯಯನ ಪ್ರವಾಸಕ್ಕೆ ಪ್ರಾಯೋಜಕತ್ವ ಸಹ ಸಿಗಲಿದೆ. ಆಸ್ತಮಾದ ಸಮಸ್ಯೆಯಿಂದ ಬಳಲುತ್ತಾ ಇರುವವರು ಈ ದಿನ ಅಗತ್ಯ ಬಿದ್ದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವ ಕಡೆಗೆ ಗಮನವನ್ನು ನೀಡಿ. ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಅಡ್ವಾನ್ಸ್ ನೀಡಿದ್ದೀರಿ, ಅಲ್ಲಿಂದ ಮುಂದಕ್ಕೆ ಏನೂ ಆಗುತ್ತಿಲ್ಲ ಎಂದಾದಲ್ಲಿ ಈ ದಿನ ಸಂಬಂಧಪಟ್ಟವರ ಜೊತೆಗೆ ಮಾತನಾಡಿ. ಹಣಕಾಸಿನ ವಿಚಾರವೇ ಈ ವ್ಯವಹಾರಕ್ಕೆ ತಡೆಯಾಗಿ ನಿಂತಿದೆ ಎಂದಾದಲ್ಲಿ ಮಾತುಕತೆ ಮುಂದುವರಿಸಲು ಸೂಕ್ತ ವೇದಿಕೆ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಜೊತೆ ತಮಗೆ ಮಾಹಿತಿ ಬೇಕು ಎಂದು ಮಾತನಾಡುವುದಕ್ಕೆ ಬರುವವರು ಅಥವಾ ತಮಗೆ ಸಹಾಯ ಆಗಬೇಕು ಎಂದು ಕೇಳುವುದಕ್ಕೆ ಬರುವವರು ಸಹ ನಿಮ್ಮ ಮೇಲೆ ತಮಗೆ ಹಕ್ಕು ಇದೆಯೇನೋ ಎಂಬಂತೆ ಧೋರಣೆ ತೋರಿಸಲಿದ್ದು, ಇದರಿಂದ ಬಹಳ ಸಿಟ್ಟು ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಹಲ್ಲಿನ ವಸಡು, ಕಿವಿಗೆ ಸಂಬಂಧಿಸಿದಂತೆ ತೀವ್ರ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಈಗಾಗಲೇ ಶೇಕಡಾ ಎಪ್ಪತ್ತೈದರಷ್ಟು ಪೂರ್ಣ ಆಗಿರುವ ಕೆಲಸ- ಕಾರ್ಯಗಳನ್ನು ಮೊದಲಿಂದ ಶುರು ಮಾಡುವಂತೆ ಆಗಲಿದೆ. ಈಗಾಗಲೇ ಸೈಟು ಇದ್ದು, ಅಲ್ಲಿ ಮನೆ ಕಟ್ಟುವ ವಿಚಾರಕ್ಕೆ ನಿರ್ಧಾರ ಮಾಡಲು ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ಳುತ್ತಾ ಇದ್ದೀರಿ, ಅನಗತ್ಯವಾದ ಆಲೋಚನೆಗಳನ್ನು ಮಾಡುತ್ತಿದ್ದೀರಿ ಎಂಬ ಆಕ್ಷೇಪಗಳನ್ನು ನಿಮ್ಮ ಆಪ್ತರು ಮಾಡಲಿದ್ದಾರೆ. ನಿಮ್ಮಲ್ಲಿ ಕೆಲವರು ಬಹಳ ಇಷ್ಟಪಡುವ ವ್ಯಕ್ತಿಗೆ ಪ್ರೇಮ ನಿವೇದನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ದೇಹ ಸೌಂದರ್ಯ ವೃದ್ಧಿಗಾಗಿ ಹೆಚ್ಚಿನ ಖರ್ಚನ್ನು ಈ ದಿನ ಮಾಡಲಿದ್ದೀರಿ. ನಿಮ್ಮಲ್ಲಿ ಯಾರು ವೃತ್ತಿಪರರು ಇದ್ದೀರಿ, ಅಂಥವರು ಕೆಲಸಗಳಿಗೆ ಸಹಾಯ ಆಗುವಂಥ ಗ್ಯಾಜೆಟ್- ಲ್ಯಾಪ್ ಟಾಪ್ ಇಂಥವು ಖರೀದಿ ಮಾಡುವುದಕ್ಕೆ ಮುಂದಾಗಲಿದ್ದೀರಿ. ಧಾರ್ಮಿಕ ಪ್ರಾಮುಖ್ಯ ಇರುವಂಥ ವ್ಯಕ್ತಿಗಳನ್ನು ಭೇಟಿ ಆಗುವ ಯೋಗ ನಿಮ್ಮಲ್ಲಿ ಕೆಲವರಿಗೆ ಈ ದಿನ ಇದ್ದು, ಅವರು ನಿಮಗೆ ನಿತ್ಯ ಪೂಜೆಗೆ ದೇವತಾ ವಿಗ್ರಹ ಅಥವಾ ಗ್ರಂಥವೊಂದನ್ನು ಆಶೀರ್ವಾದ ಪೂರ್ವಕವಾಗಿ ನೀಡಲಿದ್ದಾರೆ. ಯೂಟ್ಯೂಬರ್ ಗಳಿಗೆ ಕೆಲವು ತಾಂತ್ರಿಕ ಅಡಚಣೆಗಳು ಎದುರಾಗಿ ಬಹಳ ಸಮಯ ಅದನ್ನು ಸರಿ ಮಾಡುವುದಕ್ಕೆ ಅಂತಲೇ ಹೋಗುತ್ತದೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಅಂದುಕೊಂಡ ಮೊತ್ತದಲ್ಲಿ ಉತ್ತಮ ಸ್ಥಿತಿಯಲ್ಲಿ ಇರುವ ವಾಹನವೇ ದೊರೆಯುವ ಸಾಧ್ಯತೆ ಇದೆ. ದಂಪತಿ ಮಧ್ಯೆ ವಿರಸ ಇದ್ದಲ್ಲಿ ಅದು ನಿವಾರಣೆ ಮಾಡಿಕೊಳ್ಳುವ ವೇದಿಕೆ ದೊರೆಯಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನೀವು ಇರುವ ಸ್ಥಳದಿಂದ ದೂರದ ಪ್ರದೇಶಗಳಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಅಥವಾ ಇನ್ನು ಮುಂದೆ ಆರಂಭಿಸಬೇಕು ಎಂದಿರುವವರು ಅದಕ್ಕಾಗಿ ಹೊಸ ಹೂಡಿಕೆ ಮಾಡಲಿದ್ದೀರಿ. ಲಗೇಜ್ ಆಟೋ, ಸಾಗಾಟಕ್ಕೆ ಅನುಕೂಲ ಆಗುವಂಥ ಕಾರು ಖರೀದಿಸುವ ಅವಕಾಶ ಸಹ ಇದೆ. ಸರ್ಕಾರದ ಯೋಜನೆಯಡಿ ಹಣಕಾಸಿನ ಅನುದಾನಕ್ಕೆ ಅರ್ಜಿ ಹಾಕಿಕೊಂಡವರಿಗೆ ಆ ಬಗ್ಗೆ ಅಪ್ ಡೇಟ್ ಸಿಗಲಿದೆ. ನವ ವಿವಾಹಿತರಿಗೆ ಬಹಳ ಒಳ್ಳೆ ದಿನ ಇದಾಗಿರಲಿದೆ. ಹತ್ತಿರದ ಪ್ರದೇಶಕ್ಕೆ ಬೈಕ್ ನಲ್ಲೋ- ಕಾರಿನಲ್ಲೋ ಪ್ರವಾಸಕ್ಕೆ ತೆರಳುವ ಯೋಗ ಇದೆ. ಗಾಯನದ ಜೊತೆಯಾಗಿ ಬಳಸುವ ವಾದನಗಳ ರಿಪೇರಿ ಮಾಡುವವರಿಗೆ ಆದಾಯದಲ್ಲಿ ಭಾರೀ ಏರಿಕೆ ಆಗುವ ಯೋಗ ಇದೆ. ನಿಮ್ಮ ಬಳಿ ತಾವಾಗಿಯೇ ಬರುವಂಥ ಪ್ರತಿಷ್ಠಿತ ಸಂಸ್ಥೆಯವರು ದೀರ್ಘಾವಧಿಗೆ ಸೇವೆ ಒದಗಿಸಬೇಕು ಎಂದು ಮನವಿ ಮಾಡಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಕೋಳಿ- ಕುರಿ ಸಾಗಣೆ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಹೊಸ ತಳಿಯ ಬಗ್ಗೆ ನೀವು ಮಾಹಿತಿ ಕಲೆ ಹಾಕಿಲಿದ್ದು, ಪ್ರಾಯೋಗಿಕವಾಗಿ ಅವುಗಳ ಸಾಕಣೆಗೆ ಬೇಕಾದ ಸಿದ್ಧತೆ ಸಹ ಮಾಡಿಕೊಳ್ಳಲಿದ್ದೀರಿ. ಮನೆ ನಿರ್ಮಾಣಕ್ಕೆ ಕಾಂಟ್ರಾಕ್ಟ್ ತೆಗೆದುಕೊಳ್ಳುವವರಿಗೆ ರೆಫರೆನ್ಸ್ ಮೂಲಕ ಕ್ಲೈಂಟ್ ದೊರೆಯಲಿದ್ದಾರೆ. ದೂರದ ದೇಶದಲ್ಲಿ ಸದ್ಯಕ್ಕೆ ವಾಸ ಇರುವ ಗೆಳೆಯರೊಬ್ಬರು ತಮ್ಮ ದಾಖಲೆ ಪತ್ರಗಳಿಗೆ ಸಂಬಂಧಿಸಿದಂತೆ ನೀವು ಇರುವ ಸ್ಥಳದಲ್ಲಿ ಕೆಲಸ ಮಾಡಿಕೊಡುವಂತೆ ಮನವಿ ಮಾಡಲಿದ್ದಾರೆ. ಹೊಸ ವ್ಯಾಪಾರ- ವ್ಯವಹಾರ ಆರಂಭಿಸಲು ಬಂಡವಾಳಕ್ಕಾಗಿ ಸ್ನೇಹಿತರು- ಸಂಬಂಧಿಗಳ ಬಳಿ ಹಣಕಾಸಿನ ನೆರವು ಕೇಳಿದ್ದಲ್ಲಿ ಅದು ಸಿಗುವ ಬಗ್ಗೆ ನಿಮಗೆ ಖಾತ್ರಿ ಸಿಗಲಿದೆ. ಮನೆ ಸಮಾರಂಭಗಳಿಗೆ ಹೊಸ ಬಟ್ಟೆ, ಶೂ ಇತ್ಯಾದಿಗಳನ್ನು ಖರೀದಿ ಮಾಡುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದ್ದು, ಈ ದಿನ ಅದಕ್ಕಾಗಿ ಹಣ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಯಾವ ವ್ಯವಹಾರ, ಕೆಲಸ- ಕಾರ್ಯಗಳು ಇಂಥ ಸಮಯಕ್ಕೆ ಪೂರ್ಣ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿರುತ್ತೀರೋ ಅದಕ್ಕೆ ತಕ್ಕಂತೆ ಮಾಡಿ ಮುಗಿಸಲಿದ್ದೀರಿ. ಈಗಾಗಲೇ ಇಂಟರ್ ವ್ಯೂ ನೀಡಿಯಾಗಿದೆ ಎಂದಾದಲ್ಲಿ ಈ ದಿನ ಅದರ ಆಫರ್ ನಿಮಗೆ ದೊರೆಯಬಹುದು ಅಥವಾ ಮುಂದಿನ ಹಂತದ ಇಂಟರ್ ವ್ಯೂ ದಿನಾಂಕವನ್ನು ತಿಳಿಸುವ ಸಾಧ್ಯತೆ ಸಹ ಇದೆ. ಅಡುಗೆ ಕಾಂಟ್ರಾಕ್ಟ್ ಅಥವಾ ಈವೆಂಟ್ ಮ್ಯಾನೇಜ್ ಮೆಂಟ್ ವೃತ್ತಿಯನ್ನು ಮಾಡಿಕೊಂಡವರಿಗೆ ಇದರ ಜೊತೆಗೆ ಹೊಸ ಸೇವೆಗಳನ್ನು ಆರಂಭಿಸುವ ಆಲೋಚನೆ ಮೂಡಲಿದೆ. ನಿಮಗೆ ಎಷ್ಟೇ ಆಪ್ತರಾದರೂ ಅವರು ಆಯ್ಕೆ ಮಾಡಿಕೊಂಡ ವಸ್ತುಗಳ ಬಗ್ಗೆ ಕಾಮೆಂಟ್ ಮಾಡುವುದಕ್ಕೆ ಹೋಗಬೇಡಿ. ಏಕೆಂದರೆ ತಮಾಷೆಗೆ ಅಂತ ನೀವು ಆಡಿ ಮಾತೇ ಆದರೂ ದೊಡ್ಡ ಮಟ್ಟದ ವಾಗ್ವಾದಕ್ಕೆ ಕಾರಣ ಆಗಬಿಡಬಹುದು. ಆದ್ದರಿಂದ ಎಚ್ಚರಿಕೆಯನ್ನು ವಹಿಸಿ.

ಲೇಖನ- ಎನ್‌.ಕೆ.ಸ್ವಾತಿ