
ನೀವು ನೀಡಿದಂಥ ಸಮಯ, ತೋರಿದಂಥ ಕಾಳಜಿ ಇತರರಿಗೆ ಅದು ಮುಖ್ಯ ಎಂದೆನಿಸುತ್ತಿಲ್ಲ ಎಂಬ ಭಾವನೆ ಕಾಡಲಿದೆ. ಸಂಗಾತಿಯ ಆದಾಯದಲ್ಲಿ ಸ್ಥಿರತೆ ಇಲ್ಲದಂತಾಗಬಹುದು ಎಂಬ ಸೂಚನೆ ನಿಮಗೆ ಆತಂಕವನ್ನು ತರಲಿದೆ. ನಿಮ್ಮ ಧ್ವನಿಯಲ್ಲಿನ ಬದಲಾವಣೆ ಕಾರಣಕ್ಕೆ ನೀವಾಡುವ ಮಾತು- ಪದಗಳ ಬಳಕೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ. ಇವರಿಗೇನು ನಾನು ಸಮಜಾಯಿಷಿ ಕೊಡುವುದು ಎಂಬ ಧೋರಣೆ ಬೇಡ. ಅದರಲ್ಲೂ ನಿಮ್ಮ ಮನಸ್ಸಿಗೆ ಹತ್ತಿರವಾದ ಸ್ನೇಹಿತರನ್ನು ಬೇಸರ ಉಳಿಯದಂತೆ ನೋಡಿಕೊಳ್ಳಿ. ನಿಮ್ಮಲ್ಲಿ ಕೆಲವರು ಅಪರೂಪದ ಸ್ಥಳವೊಂದಕ್ಕೆ ತೆರಳಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಚಿತ್ರಕಲೆ- ಅಭಿನಯ ಇಂಥವುಗಳಿಗೆ ಸಂಬಂಧಪಟ್ಟಂತೆ ತರಬೇತಿ ತೆಗೆದುಕೊಳ್ಳಲು ಸಂಸ್ಥೆಯೊಂದಕ್ಕೆ ಸೇರ್ಪಡೆ ಆಗುವುದಕ್ಕೆ ಅವಕಾಶ ಸಿಗಲಿದೆ. ಕ್ಯಾಟರಿಂಗ್ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ.
ನೀವು ಇಷ್ಟು ಸಮಯ ಆಸಕ್ತಿಯಿಂದ ಮುನ್ನಡೆಸಿಕೊಂಡು ಬಂದ ಪ್ರಾಜೆಕ್ಟ್ ವೊಂದರಿಂದ ದೂರ ಉಳಿಯಬೇಕಾದ ಸನ್ನಿವೇಶ ಎದುರಾಗಲಿದೆ. ಅಥವಾ ನಿಮಗೆ ಬೇರೆ ಜವಾಬ್ದಾರಿ ವಹಿಸಿ, ಈಗ ನಿರ್ವಹಣೆ ಮಾಡುತ್ತಿರುವ ಪ್ರಾಜೆಕ್ಟ್ ನಲ್ಲಿ ತೊಡಗಿಕೊಳ್ಳಲು- ಸಮಯ ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿಮಗೆ ಎದುರಾಗಲಿದೆ. ಧಾರವಾಹಿಗಳಲ್ಲಿ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ನೀವು ಈ ಹಿಂದೆ ಕೆಲಸ ಮಾಡಿದ್ದಿರಿ, ಅದರ ಬಾಕಿ ಬರಬೇಕಿದ್ದಲ್ಲಿ ಸ್ನೇಹಿತರೊಬ್ಬರ ನೆರವಿನಿಂದ ವಸೂಲಿ ಮಾಡಲು ಸಾಧ್ಯವಿದೆ. ಅಥವಾ ಇಂಥ ದಿನ ನಿಮಗೆ ನೀಡಬೇಕಾದ ಬಾಕಿ ಮೊತ್ತವನ್ನು ವಾಪಸ್ ನೀಡುತ್ತೇನೆ ಎಂದು ಸಂಬಂಧಪಟ್ಟವರು ಮಾತನ್ನಾದರೂ ನೀಡಬಹುದು. ವ್ಯವಹಾರದ ಕಾರಣಕ್ಕೆ ಬ್ಯಾಂಕ್ ಅಥವಾ ಖಾಸಗಿ ಲೇವಾದೇವಿ ಮಾಡುವವರಿಂದ ಸಾಲ ಪಡೆದುಕೊಳ್ಳಬೇಕಾದ ಅನಿವಾರ್ಯ ನಿಮಗೆ ಎದುರಾಗಲಿದೆ.
ನಿಮಗೆ ನೀವೇ ಏನೇನೋ ಊಹೆ ಮಾಡಿಕೊಂಡು, ಗಾಬರಿ ಆಗುತ್ತೀರಿ. ನೆನಪಿನಲ್ಲಿಡಿ, ವಾಸ್ತವ ಏನಿದೆಯೋ ಹಾಗೂ ಏನಾಗಿದೆಯೋ ಅದನ್ನು ಮಾತ್ರ ಆಲೋಚಿಸಿ. ಡ್ರೈ ಕ್ಲೀನಿಂಗ್ ಸಲುವಾಗಿ ಈ ದಿನ ಹೆಚ್ಚಿನ ವೆಚ್ಚ ಮಾಡುವಂತೆ ಆಗಲಿದೆ. ಮನೆಯಲ್ಲಿನ ಕರ್ಟನ್ ಗಳು, ಬಟ್ಟೆ- ಬರೆಗಳು ಹೀಗೆ ಅವುಗಳ ಸ್ವಚ್ಛತೆಗೆ ಹಣವನ್ನು ಖರ್ಚು ಮಾಡಲಿದ್ದೀರಿ. ಸಾಧ್ಯವಾದಷ್ಟೂ ಪಾಸಿಟಿವ್ ಆದ ಆಲೋಚನೆ- ಚಿಂತನೆ ಮಾಡುವುದಕ್ಕೆ ಆದ್ಯತೆ ಕೊಡಿ. ಇಬ್ಬರು ಮಾಡಬೇಕಾದ ಕೆಲಸ ಒಬ್ಬರೇ ಮುಗಿಸಿ ಕೊಡಬೇಕಾದ ಪರಿಸ್ಥಿತಿ ನಿಮ್ಮಲ್ಲಿ ಕೆಲವರಿಗೆ ಬರಲಿದೆ. ಆ ಕಾರಣಕ್ಕೆ ಸಿಟ್ಟು, ಒತ್ತಡ, ಬೇಸರ ಇವೆಲ್ಲ ಕಾಡಬಹುದು. ಆದರೆ ಇದನ್ನು ಕುಟುಂಬ ಸದಸ್ಯರ ಮೇಲೋ ಅಥವಾ ಸ್ನೇಹಿತರ ಮೇಲೋ ತೋರಿಸಿಕೊಳ್ಳಬೇಡಿ. ಹತ್ತಿ ಬೆಳೆಯುವ ಕೃಷಿಕರಿಗೆ ಆದಾಯ ಮೂಲಗಳು ಜಾಸ್ತಿ ಆಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಯಲ್ಲೂ ಸಹ ತೊಡಗಿಕೊಳ್ಳಬಹುದು.
ಇತರರನ್ನು ಮೆಚ್ಚಿಸುವುದಕ್ಕೆ ಬಹಳ ಸಮಯ ಹೋಗಲಿದೆ. ಉದ್ಯೋಗ ಮಾಡುವ ಸ್ಥಳದಲ್ಲಿಯೇ ಇರಬಹುದು ಅಥವಾ ವೃತ್ತಿಪರರಾಗಿದ್ದಲ್ಲಿ ಕ್ಲೈಂಟ್ ಗಳನ್ನು ಮೆಚ್ಚಿಸುವ ಪ್ರಯತ್ನ ಇರಬಹುದು. ಯಾವುದೇ ರೀತಿಯಲ್ಲೂ ಫಲವನ್ನು ನೀಡುವುದಿಲ್ಲ. ಸಿಗರೇಟ್ ಸೇದುವ ಚಟ ಇರುವವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ವಿಚಾರವನ್ನು ನಿರ್ಲಕ್ಷ್ಯ ಮಾಡದಂತೆ ಕೂಡಲೇ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಲು ಆದ್ಯತೆ ನೀಡಿ. ಸಂಬಂಧಿಗಳಿಗೆ ತಾತ್ಕಾಲಿಕ ಅವಧಿಗೆ ಎಂದು ನೀಡಿದ ಸಾಲವನ್ನು ವಾಪಸ್ ಪಡೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಆ ವ್ಯವಹಾರದ ಕಾರಣಕ್ಕೆ ಸಂಬಂಧಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಚ್ಚರಿಕೆಯನ್ನು ವಹಿಸಿ. ವಿವಿಧ ತಳಿಯ ನಾಯಿಗಳ ಸಾಕಣೆ ಹಾಗೂ ಅವುಗಳ ಮಾರಾಟದ ಮೂಲಕ ಆದಾಯವನ್ನು ಪಡೆಯುತ್ತಾ ಇರುವವರಿಗೆ ತಪ್ಪಾದ ಮಾಹಿತಿಯನ್ನು ನೀಡಿ, ಕೆಲವರು ದಾರಿ ತಪ್ಪಿಸುತ್ತಾರೆ.
ಆರಂಭದಿಂದ ಕೊನೆ ಹಂತದ ತನಕ ಶ್ರಮ ಹಾಕಿ ಮಾಡಿದ ಕೆಲಸದ ಶ್ರೇಯಸ್ಸು ಬೇರೆಯವರಿಗೆ ದೊರೆಯುವಂತೆ ಆಗಲಿದೆ. ಯಾವುದೇ ಮುಖ್ಯ ಕೆಲಸ ಇದ್ದಲ್ಲಿ ಸಾಮಾನ್ಯಕ್ಕೆ ನೀವು ತೆರಳುವ ವೇಳೆಗಿಂತ ಮುಂಚಿತವಾಗಿ ಅಲ್ಲಿರುವಂತೆ ಯೋಜನೆ ರೂಪಿಸಿಕೊಳ್ಳಿ. ನೀವು ಮಾಡಿದ ಕೆಲಸ- ಕಾರ್ಯಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಹಿಂಜರಿಕೆ ಮಾಡಬೇಡಿ. ಈ ಹಿಂದೆ ನಡೆದಂಥ ಕೆಲವು ಬಿಡಿ ಘಟನೆಗಳನ್ನು ಒಟ್ಟು ಮಾಡಿಕೊಂಡು, ಸೋದರ ಸಂಬಂಧಿಗಳ ಜೊತೆಗೆ ಜಗಳ- ಕಲಹಕ್ಕೆ ಮುಂದಾಗುವ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಇದರಿಂದ ಮನಸ್ಸು ಇನ್ನಷ್ಟು ಕಹಿಯಾಗುತ್ತದೆ ವಿನಾ ಏನೂ ಫಲಿತಾಂಶ ಸಿಗುವುದಿಲ್ಲ ಎಂಬುದು ಗಮನದಲ್ಲಿ ಇರಲಿ. ವಾಸ್ತು ಹೇಳುವಂಥ ವೃತ್ತಿಯಲ್ಲಿ ಇರುವವರಿಗೆ ಆದಾಯದಲ್ಲಿ ಏರಿಕೆ ಆಗುವ ಯೋಗ ಇದೆ. ನಿಮ್ಮಲ್ಲಿ ಕೆಲವರು ಗ್ರಂಥ ರಚನೆ ಶುರು ಮಾಡುವ ಕುರಿತು ಚಿಂತನೆ ನಡೆಸುತ್ತೀರಿ, ಗ್ರಂಥದ ರಚನೆಯನ್ನೇ ಆರಂಭಿಸುವ ಸಾಧ್ಯತೆಯೂ ಇದೆ.
ವಿವಿಧ ಸ್ಪರ್ಧೆಗಳಲ್ಲಿ ಭಾಗೀ ಆಗಿ, ಅದರಲ್ಲಿ ಜಯ ಗಳಿಸುವಂಥ ದಿನ ಇದಾಗಿರುತ್ತದೆ. ನಿಮ್ಮ ಅಂದಾಜಿನಂತೆಯೇ ಕೆಲಸ ಮಾಡುವ ಸ್ಥಳದಲ್ಲಿ ಬದಲಾವಣೆ- ಬೆಳವಣಿಗೆಗಳು ಆಗಲಿವೆ. ಮೇಲ್ನೋಟಕ್ಕೆ ಬಹಳ ಕಠಿಣ ಎನಿಸಿದ್ದ ಕೆಲವು ಅವಕಾಶಗಳು ನಿಮಗೆ ಸಾಧಕವಾಗಿ ಪರಿಣಮಿಸಲಿವೆ. ಪ್ರತಿಷ್ಠಿತ ಸಂಸ್ಥೆಗಳು ಯೋಜನೆಗಳು ಅಥವಾ ಅಧ್ಯಯನ ವರದಿಗಳಿಗಾಗಿ ನೀಡುವ ಹಣಕಾಸಿನ ಅನುದಾನ, ಅಂದರೆ ಫೆಲೋಷಿಪ್ ಗಳು ನಿಮ್ಮಲ್ಲಿ ಕೆಲವರಿಗೆ ದೊರೆಯಬಹುದು. ಅಥವಾ ಆ ಬಗ್ಗೆ ನಿಮ್ಮ ಆಪ್ತರು ಸುಳಿವು ನೀಡಲಿದ್ದಾರೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ರೆಫರೆನ್ಸ್ ಮೂಲಕವಾಗಿ ಸೂಕ್ತ ಸಂಬಂಧ ದೊರೆಯುವ ಯೋಗ ಇದೆ. ಕೋರ್ಟ್- ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಾ ಇದ್ದಲ್ಲಿ ಅವುಗಳನ್ನು ಮಾತು-ಕತೆ ಮೂಲಕವಾಗಿ ಬಗೆಹರಿಸಿಕೊಳ್ಳುವುದಕ್ಕೆ ಬೇಕಾದಂಥ ವೇದಿಕೆ ನಿಮಗೆ ದೊರೆಯಲಿದೆ.
ಪಾರ್ಟನರ್ ಷಿಪ್ ನಲ್ಲಿ ಮಾಡಿದಂಥ ವ್ಯವಹಾರಗಳು ಒಳ್ಳೆ ಲಾಭವನ್ನು ಹಾಗೂ ದೀರ್ಘಾವಧಿಗೂ ಆದಾಯ ತರುವಂಥ ಮಾರ್ಗವನ್ನು ಸಹ ತೆರೆದಿಡಲಿದೆ. ನಿಮಗೆ ದೊರೆಯುವಂಥ ಆಫರ್ ಗಳನ್ನು ಮುಕ್ತ ಮನಸ್ಸಿನಿಂದ ನೋಡುವುದು ಬಹಳ ಮುಖ್ಯವಾಗುತ್ತದೆ. ಈ ಹಿಂದಿನ ಅನುಭವಗಳ ಆಧಾರದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಏಕೆಂದರೆ ಈ ದಿನ ನಿಮಗೆ ಮ್ಯಾಜಿಕ್ ಅನಿಸುವ ರೀತಿಯಲ್ಲಿ ಕೆಲವು ಘಟನೆಗಳು ನಡೆಯುತ್ತವೆ. ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವ, ಮದುವೆ ಮಾಡಿಕೊಳ್ಳುವ ಇರಾದೆಯನ್ನು ತಿಳಿಸುವ ತೀರ್ಮಾನವನ್ನು ಮಾಡಲಿದ್ದೀರಿ. ಧಾರ್ಮಿಕವಾಗಿ ಪ್ರಾಶಸ್ತ್ಯ ಇರುವಂಥ ಕೆಲವು ಸ್ಥಳಗಳಿಗೆ ಹೋಗಿಬರುವಂಥ ಯೋಗ ನಿಮ್ಮ ಪಾಲಿಗೆ ಇದೆ. ಪ್ರಭಾವಿ ಹುದ್ದೆಯಲ್ಲಿ ಇರುವವರು ಈ ಹಿಂದೆ ನಿಮಗೆ ನೆರವಾಗಿದ್ದವರಿಗೆ ದೊಡ್ಡ ಮಟ್ಟದ ಸಹಾಯ ಮಾಡಿಕೊಡಲಿದ್ದೀರಿ.
ಏನು ಬೇಕೋ ಅದನ್ನು ಬಾಯಿ ಬಿಟ್ಟು ಕೇಳಿ ಪಡೆದುಕೊಳ್ಳುವ ಮನಸ್ಥಿತಿಯಲ್ಲಿ ಇರುತ್ತೀರಿ. ನಿಮ್ಮನ್ನು ತುಂಬ ಮುಖ್ಯ ಕೆಲಸದ ಮೇಲೆ ದೂರದ ಊರು ಅಥವಾ ವಿದೇಶಕ್ಕೆ ಕಳುಹಿಸುವ ಸಾಧ್ಯತೆ ಇದೆ. ಮೇಲಧಿಕಾರಿಗಳು ಈ ಬಗ್ಗೆ ನಿಮಗೆ ಸುಳಿವು ಬಿಟ್ಟುಕೊಡಬಹುದು. ಆದಾಯ ತೆರಿಗೆ ರೀಫಂಡ್ ಗೆ ಅಪ್ಲೈ ಮಾಡಿ, ಅದಕ್ಕಾಗಿ ಕಾಯುತ್ತಾ ಇರುವವರ ಪೈಕಿ ಕೆಲವರಿಗೆ ಆ ಬಗ್ಗೆ ಮಾಹಿತಿ ದೊರೆಯುವ ಯೋಗ ಇದೆ. ಸರ್ಕಾರದ ಕೆಲಸಗಳು ಯಾವುದಾದರೂ ಆಗಬೇಕಿದ್ದು, ಕೊನೆ ಹಂತದಲ್ಲಿ ಇದೆ ಎಂಬಂಥದ್ದು ನಾನಾ ಕಾರಣಗಳಿಗೆ ಅಲ್ಲಿಯೇ ನಿಂತುಬಿಡುವ ಸಾಧ್ಯತೆ ಇದೆ. ಹೊಸ ನಿಯಮಗಳು ಅಂತಲೋ ಅಥವಾ ನೀವು ಹಾಕಿದಂಥ ಅರ್ಜಿಯಲ್ಲಿ ಸಮಸ್ಯೆ ಇದೆ ಎಂಬ ಸಬೂಬು ನೀಡಿಯೋ ಹಾಗೇ ತಡೆಯಾಗಿ ಉಳಿದುಬಿಡಬಹುದು. ಒಂದು ವೇಳೆ ಹೀಗೆ ಆದಲ್ಲಿ ನಯವಾಗಿ ಕಾರ್ಯ ಮುಗಿಸಿಕೊಳ್ಳುವ ಕಡೆಗೆ ಗಮನವನ್ನು ನೀಡುವುದು ಮುಖ್ಯ.
ಇತರರಿಗೆ ಯಾವುದೇ ರೀತಿಯಲ್ಲೂ ರಿಯಾಯಿತಿ ತೋರಿಸುವುದಕ್ಕೋ ವಿನಾಯಿತಿ ನೀಡುವುದಕ್ಕೋ ನೀವು ಸಿದ್ಧರಿರುವುದಿಲ್ಲ. ಮೊದಲ ಬಾರಿಗೆ ಎಂಬಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಲಾಭದ ರುಚಿ ನೋಡುವ ಯೋಗ ಇದೆ. ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಾ ಹಾಗೂ ಅದೇ ಆದಾಯದ ಮೂಲ ಸಹ ಆಗಿರುವವರು ಹೊಸದಾಗಿ ಹೂಡಿಕೆ ಮಾಡಲಿದ್ದೀರಿ. ಉದಾಹರಣೆಗೆ ಲ್ಯಾಪ್ ಟಾಪ್, ಕೆಲವು ಸಾಫ್ಟ್ ವೇರ್ ಗಳು ಮತ್ತಿತರ ಪರಿಕರಗಳ ಖರೀದಿಗಾಗಿ ಹಣವನ್ನು ಮೀಸಲಿಡಲಿದ್ದೀರಿ. ಸಂಗಾತಿಯ ಆರೋಗ್ಯ ಪರಿಸ್ಥಿತಿ ನಿಮ್ಮಲ್ಲಿ ಕೆಲವರನ್ನು ಚಿಂತೆಗೆ ಗುರಿ ಮಾಡಲಿದೆ. ನಿಮ್ಮದೇ ನಿರ್ಲಕ್ಷ್ಯದಿಂದ ಇಂಥದ್ದೊಂದು ಸ್ಥಿತಿಗೆ ತಲುಪಿತು ಎಂಬ ಅಪರಾಧಿ ಪ್ರಜ್ಞೆಯೊಂದು ವಿಪರೀತ ಕಾಡಲಿದೆ. ಭಾರದ ವಸ್ತುಗಳನ್ನು ಎತ್ತುವಾಗ ಜಾಗ್ರತೆ ವಹಿಸಿ. ಏಕೆಂದರೆ, ಸಣ್ಣ ಪ್ರಮಾಣದ ಅಜಾಗರೂಕತೆಯಿಂದ ದೊಡ್ಡ ಮಟ್ಟದ ತೊಂದರೆಗಳು ಅನುಭವಿಸುವಂತೆ ಆಗುತ್ತದೆ.
ಲೇಖನ- ಎನ್.ಕೆ.ಸ್ವಾತಿ