Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 15ರಿಂದ 21ರ ತನಕ ವಾರಭವಿಷ್ಯ

| Updated By: ವಿವೇಕ ಬಿರಾದಾರ

Updated on: Dec 15, 2024 | 12:13 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 15ರಿಂದ 21ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ವೃತ್ತಿ, ಆರ್ಥಿಕ, ಆರೋಗ್ಯ ಹಾಗೂ ಸಂಬಂಧಗಳ ಬಗ್ಗೆ ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಪ್ರತಿ ಜನ್ಮ ಸಂಖ್ಯೆ ಅನುಗುಣವಾಗಿ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 15ರಿಂದ 21ರ ತನಕ ವಾರಭವಿಷ್ಯ
ಸಂಖ್ಯಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 15ರಿಂದ 21ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮಗೆ ತೊಂದರೆಯೋ ಸಮಸ್ಯೆಯೋ ಬಂದರೆ ಇವರಂತೂ ಸಹಾಯ ಮಾಡಿಯೇ ಮಾಡುತ್ತಾರೆ ಎಂದೇನು ನೀವು ಅಂದುಕೊಂಡಿರುತ್ತೀರಿ, ಅದು ಸುಳ್ಳಾಗಲಿದೆ. ಮೇಲುನೋಟಕ್ಕೆ ಸಂಭಾವಿತರಂತೆ ಕಂಡವರು, ನಿಮ್ಮ ಕಷ್ಟ- ನಷ್ಟಕ್ಕೆ ನೆರವಾಗುತ್ತಾರೆ ಎಂದುಕೊಂಡವರು ಹಾಗೆ ಖಂಡಿತಾ ಇರುವುದಿಲ್ಲ. ಈ ಕಾರಣದಿಂದಾಗಿಯೇ ಎಲ್ಲರನ್ನೂ ಒಂದೇ ರೀತಿ ಅಂದುಕೊಳ್ಳುವುದು ತಪ್ಪು ಎಂದೆನಿಸಲಿದೆ. ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ನಿಮಗೆ ಯಾವುದೇ ನೆಗೆಟಿವ್ ಉದ್ದೇಶ ಇಲ್ಲದಿರಬಹುದು. ಆದರೆ ಸಾಂದರ್ಭಿಕವಾಗಿ ಅಥವಾ ಸನ್ನಿವೇಶದಿಂದ ಉತ್ತೇಜಿತರಾಗಿ ನೀವಾಡಿದ ಮಾತು ನಿಮಗೆ ಸಮಸ್ಯೆಯಾಗಿ ಸುತ್ತಿಕೊಳ್ಳಬಹುದು. ಇನ್ನು ಯಾರು ಸಾರ್ವಜನಿಕ ಬದುಕಿನಲ್ಲಿ ಇದ್ದಾರೋ ಅಂಥವರು ವಿವಾದಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಇನ್ ಟ್ಯೂಷನ್ ಈ ವಾರ ಬಹಳ ಜಾಗೃತವಾಗಿರುತ್ತದೆ. ಆದ್ದರಿಂದ ಯಾವ ವ್ಯಕ್ತಿ ಜತೆಗೆ ವ್ಯವಹರಿಸುತ್ತಿದ್ದೀರಿ ಎಂಬ ಬಗ್ಗೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ. ವಿವಾದ ಆಗಬಹುದು ಎಂದೆನಿಸುವ ಮಾತುಗಳನ್ನು ಯಾವುದೂ ಆಡುವುದಕ್ಕೇ ಹೋಗಬೇಡಿ. ಯಾವುದೇ ವ್ಯವಹಾರದಲ್ಲಿ ಪ್ಲಾನ್ ಬಿ ಎಂಬುದೊಂದನ್ನು ಇರಿಸಿಕೊಂಡಿದ್ದರೆ ಕ್ಷೇಮ. ಕೊನೆ ಕ್ಷಣದ ಬದಲಾವಣೆಗಳಿಂದ ನೀವು ಆತಂಕಕ್ಕೆ ಸಿಲುಕಿಕೊಳ್ಳುವುದು ತಪ್ಪುತ್ತದೆ. ಕೃಷಿಕರು ಹೊಸದಾಗಿ ತೋಟ- ಗದ್ದೆಯನ್ನು ಅಭಿವೃದ್ಧಿ ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ತಕ್ಷಣಕ್ಕೆ ನಿಮಗೆ ಬೇಕಾಗುವಂಥ ಹಣಕಾಸಿನ ವ್ಯವಸ್ಥೆ ಸಹ ಆಗಲಿದೆ. ಅಚಾನಕ್ ಆಗಿ ಸಿಕ್ಕಂಥ ಕಾಂಟ್ಯಾಕ್ಟ್ ನಿಂದ ಬಹಳ ದೊಡ್ಡ ಮಟ್ಟದ ಅನುಕೂಲ ಒದಗಿಬರಲಿದೆ. ಕೆಲವು ತೀರ್ಮಾನಗಳನ್ನು ಮಾಡುವುದಕ್ಕೆ ನಿಮ್ಮ ಮನಸ್ಸಲ್ಲಿ ಆತಂಕ ಕಾಡಬಹುದು. ಆದರೆ ಯಾವುದಕ್ಕೂ ಅಂಜದೆ ಮುಂದಕ್ಕೆ ಹೆಜ್ಜೆಯನ್ನು ಹಾಕಿ. ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಸರಿಯಾಗಿ ಹಾಕಿಟ್ಟುಕೊಳ್ಳಿ. ಶಕ್ತಿ ಮೀರಿ, ಸಾಲ ಮಾಡಿಕೊಳ್ಳಬೇಡಿ. ಆದರೆ ಈ ಯೋಜನೆಯಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ವೃತ್ತಿನಿರತರಿಗೆ ಸಂಗಾತಿಯ ಮೂಲಕ, ಕುಟುಂಬದಲ್ಲಿನ ಯುವ ಸದಸ್ಯರಿಗೆ ಉತ್ತಮವಾದ ಉದ್ಯೋಗ ದೊರೆಯುವ ಮೂಲಕವಾಗಿ ಒಟ್ಟಾರೆಯಾಗಿ ಕುಟುಂಬದ ಆದಾಯದಲ್ಲೇ ಹೆಚ್ಚಳ ಆಗಲಿದೆ. ವೃತ್ತಿ ಬದುಕಿನಲ್ಲೂ ಮಾಮೂಲಿಗಿಂತ ಹೆಚ್ಚಿನ ಹಣದ ಹರಿವು ಶುರುವಾಗುತ್ತದೆ. ಮಾತಿನಲ್ಲಿ ಬುದ್ಧಿವಂತಿಕೆ ಎದ್ದು ಕಾಣುತ್ತದೆ. ಕೆಲಸಗಳನ್ನು ಬಹಳ ಸಲೀಸಾಗಿ ಮಾಡಿಕೊಂಡು ಬರುವಂಥ ಚಾಕಚಕ್ಯತೆ ಬರುತ್ತದೆ. ಪ್ರಯಾಣದಲ್ಲಿ ಲಾಭಗಳಾಗಲಿವೆ. ಇನ್ನು ನಿಮ್ಮಲ್ಲಿ ಕೆಲಸವರು ಕುಟುಂಬದ ಸದಸ್ಯರ ಬಳಕೆಗಾಗಿ ಅಂತಲೇ ಹೊಸ ವಾಹನವನ್ನು ಬುಕ್ ಮಾಡುವಂಥ ಯೋಗ ಇದೆ. ವಿದ್ಯಾರ್ಥಿಗಳು ಬಹಳ ಸಮಯದಿಂದ ಎಂಬಂತೆ ಪ್ರಯತ್ನ ಮಾಡುತ್ತಿದ್ದ ವಿಲಾಸಿ ವಸ್ತುಗಳನ್ನು ತಂದೆ- ತಾಯಿಗಳು ಕೊಡಿಸುವಂಥ ಯೋಗ ಇದೆ. ನಿಮ್ಮ ಗೆಳೆಯ- ಗೆಳತಿಯರ ಮಧ್ಯೆ ಜನಪ್ರಿಯರಾಗುವಂಥ ಸಾಧನೆಯನ್ನು ಮಾಡುವ ಅವಕಾಶಗಳು ನಿಮಗೆ ದೊರೆಯಲಿವೆ. ಪಠ್ಯೇತರ ಚಟುವಟಿಕೆಗಳಲ್ಲಿ ಒಳ್ಳೆ ಹೆಸರು ಮಾಡಲಿದ್ದೀರಿ. ಮಹಿಳೆಯರಿಗೆ ಸಾಮಾಜಿಕ ಬದುಕಿನಲ್ಲಿ ಬಿಡುವಿಲ್ಲದಷ್ಟು ಕೆಲಸಗಳು ಆಗಲಿವೆ. ನಿಮ್ಮ ಮಧ್ಯಸ್ಥಿಕೆಯಲ್ಲಿ ವಿವಾಹ ಸಂಬಂಧಗಳು ಇತ್ಯರ್ಥ ಆಗಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ಹಿಂದಿನ ಘಟನೆ ಅಥವಾ ಸನ್ನಿವೇಶಗಳ ಆಧಾರದ ಮೇಲೆ ಯಾವುದೇ ಮುಖ್ಯವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಇನ್ನು ಬೇರೆಯವರ ಜತೆಗಿನ ಸ್ನೇಹವೇ ಇರಬಹುದು ಅಥವಾ ಹಣಕಾಸಿನ ವಿಚಾರವೇ ಇರಬಹುದು, ಒಟ್ಟಿನಲ್ಲಿ ಹೇಳಬೇಕೆಂದರೆ ಒಂದೇ ವಿಚಾರ ನಿಮಗೆ ವಿಪರೀತ ಹಿಂಸೆಯಾಗಿ ಕಾಡಲಿದೆ. ಇತರರ ವರ್ತನೆ ಬೇಸರಕ್ಕೆ ಕಾರಣ ಆಗಲಿದೆ. ಈ ಹಿಂದಿನ ನಿಮ್ಮ ನಿರ್ಧಾರ ಸಮಸ್ಯೆಗಳಾಗಿ ಸುತ್ತಿಕೊಳ್ಳಲಿವೆ. ಯಾವುದೋ ಅತಿಯಾದ ವಿಶ್ವಾಸದಿಂದಲೋ ಅಥವಾ ಆ ಕ್ಷಣಕ್ಕೆ ಆ ಸಮಸ್ಯೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬ ಲೆಕ್ಕಾಚಾರದಲ್ಲಿ, ಏನೂ ಆಗಲಿಕ್ಕಿಲ್ಲ ಎಂದು ನೀವು ಈ ಹಿಂದೆ ಹೇಳಿದ್ದ ಸುಳ್ಳಿನ ಫಲವನ್ನು ಈ ವಾರ ಅನುಭವಿಸಲಿದ್ದೀರಿ. ಮನೆಯವರ ಆರೋಗ್ಯಕ್ಕಾಗಿ ಹಣ ಖರ್ಚಾಗಲಿದೆ. ಆದರೆ ನಿಮ್ಮ ಮನೆ ದೇವರ ಆರಾಧನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಯಾವುದೇ ನಿರ್ಧಾರ ಮಾಡುವಾಗ, ಕೆಲಸಕ್ಕೆ ತೊಡಗುವಾಗ ಎಲ್ಲರೂ ಮೆಚ್ಚುವಂತೆ ನಡೆದುಕೊಳ್ಳುತ್ತೀನಿ ಅಂದುಕೊಳ್ಳದಿರಿ, ಇದರಿಂದ ಮಾನಸಿಕ ಒತ್ತಡ ಜಾಸ್ತಿ ಆಗುತ್ತದೆ. ಮನೆಯಲ್ಲಿ ನಿಮ್ಮನ್ನೇ ನೆಚ್ಚಿಕೊಂಡು ಕೆಲವು ನಿರ್ಧಾರಗಳನ್ನು ಮಾಡಿ, ಆ ನಂತರ ನಿಮ್ಮ ಬಳಿ ಕೇಳಲು ಬರಲಿದ್ದಾರೆ. ಶುಭ ಕಾರ್ಯಗಳಿಗಾಗಿ ಹಣವನ್ನು ಸಾಲ ಮಾಡಬೇಕಾಗುತ್ತದೆ. ಹೇಗಿದ್ದರೂ ಸಾಲ ಆಗುತ್ತದೆ, ಒಂದಿಷ್ಟು ಜಾಸ್ತಿಯೇ ತೆಗೆದುಕೊಂಡು, ಅದರಿಂದ ಕೆಲವು ಕಮಿಟ್ ಮೆಂಟ್ ಗಳನ್ನು ಪೂರ್ಣ ಮಾಡಿಕೊಳ್ಳೋಣ ಎಂದು ಆಲೋಚಿಸಿ, ಅಗತ್ಯಕ್ಕಿಂತ ಹೆಚ್ಚಿನ ಸಾಲವನ್ನು ಮಾಡುವುದು ಬೇಡ. ಇನ್ನು ಕೃಷಿಕರಾಗಿದ್ದಲ್ಲಿ ಈ ಎಚ್ಚರಿಕೆಯನ್ನು ಗಮನವಾಗಿ ಓದಿಕೊಳ್ಳಿ: ಮದ್ಯಪಾನ- ಧೂಮಪಾನದ ವ್ಯಸನ ಇದೆ ಅಂತಾದಲ್ಲಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಬಹುದು. ಈ ಹಿಂದೆ ಯಾರ ಜತೆ ಜಗಳ ಮಾಡಿಕೊಂಡಿದ್ದರೋ ಅಂಥವರ ಜತೆಗೆ ರಾಜೀ ಸಂಧಾನ ಮಾಡಿಕೊಳ್ಳಬೇಕಾಗುತ್ತದೆ. ಸಂಗಾತಿಯ ಒತ್ತಡಕ್ಕೆ ಮಣಿದು, ಹೀಗೆ ಮಾಡಲಿದ್ದೀರಿ. ಆದರೆ ಈ ಕಾರಣಕ್ಕೆ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ವೃತ್ತಿನಿರತರು ನೀವೇ ಆರಂಭಿಸಿದ ಆಟವೊಂದನ್ನು ಮುಗಿಸಬೇಕಾಗುತ್ತದೆ. ಇಲ್ಲದ ಆತ್ಮವಿಶ್ವಾಸವನ್ನು ಇತರರಲ್ಲಿ ತುಂಬಿ, ಇಷ್ಟು ಸಮಯ ಅವರಿಂದ ತೆಗೆದುಕೊಂಡ ಅನುಕೂಲವನ್ನು ನಿಲ್ಲಿಸಿಬಿಡಿ. ನೇರವಾಗಿ, ಪ್ರಾಮಾಣಿಕತೆಯಿಂದ ಮಾತನಾಡಲು ಪ್ರಯತ್ನಿಸಿ. ಉಳಿತಾಯದ ಹಣವನ್ನು ಬಳಸಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ವಿದ್ಯಾರ್ಥಿಗಳು ಗುರಿಯ ಕಡೆಗೆ ಸಾಗುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸುತ್ತೀರಿ. ಸ್ನೇಹಿತರು ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸಲಿದ್ದಾರೆ. ದೇವತಾ ಕಾರ್ಯಗಳಿಗಾಗಿ ಸಮಯ ಮೀಸಲಿಡಲಿದ್ದೀರಿ. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ಪುಷ್ಕಳವಾದ ಭೋಜನ ಸವಿಯುವ ಯೋಗ ಇದೆ. ಮಹಿಳೆಯರು ನಿಮ್ಮ ನಿರ್ದಾಕ್ಷಿಣ್ಯ ಮಾತುಗಳಿಂದ ಸಂಬಂಧಿಕರಲ್ಲಿ, ಕುಟುಂಬ ವರ್ಗದವರಲ್ಲಿ ಸಿಟ್ಟಿಗೆ ಕಾರಣರಾಗಲಿದ್ದೀರಿ. ಆದ್ದರಿಂದ ಸಣ್ಣ- ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿ, ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಸಾಂಸಾರಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಯಾವುದೇ ಅವಸರ – ಧಾವಂತ ಇಲ್ಲದೆ ನೆಮ್ಮದಿಯಿಂದ ಸಾಗುವುದಕ್ಕೆ ಆರಂಭವಾಗುತ್ತದೆ. ನಿಮ್ಮ ಮಾತಿಗೆ ಮನ್ನಣೆ ದೊರೆಯುವುದಕ್ಕೆ ಆರಂಭವಾಗುತ್ತದೆ. ಅಂದುಕೊಂಡಂತೆಯೇ ಕೆಲಸಗಳು ಮುಗಿಯುತ್ತವೆ ಎಂಬ ಸಂಭವನೀಯತೆ ಕಾಣುತ್ತದೆ. ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುವಂಥ ಬದಲಾವಣೆ ಆಗಲಿದೆ. ಇಷ್ಟು ಸಮಯ ಪದೇ ಪದೇ ಅಡೆ ತಡೆ ಆಗಿ, ನಿಲ್ಲುತ್ತಿದ್ದ ಕೆಲಸಗಳು ಸುಲಭವಾಗಿ ಆಗುವ ಸಾಧ್ಯತೆಗಳು ಕಾಣುತ್ತಿವೆ. ಮುಖ್ಯವಾಗಿ ನಿಮ್ಮ ಮಾತಿನ ಮೂಲಕ ಎದುರಿನಲ್ಲಿ ಇರುವವರಿಗೆ ಮನ ಒಲಿಸಲು ಸಫಲರಾಗುತ್ತೀರಿ. ನೀವು ಸಹ ನಿರೀಕ್ಷೆ ಮಾಡದ ರೀತಿಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಕಾಣುವಂಥ ಯೋಗ ಇದೆ. ಯಾರು ಸ್ವಂತ ಉದ್ಯೋಗ, ವ್ಯವಹಾರಗಳನ್ನು ಮಾಡುತ್ತಿದ್ದೀರೋ ಅಂಥವರಿಗೆ ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ಈ ವಾರ ಫಲ ದೊರೆಯಲಿದೆ. ಯಾರು ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ವಿದೇಶಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವಿರೋ ಅಂಥವರಿಗೆ ಅನುಕೂಲಕರ ವಾತಾವರಣ ಸೃಷ್ಟಿ ಆಗಲಿದೆ. ನಿಮ್ಮ ಕ್ರಿಯೇಟಿವ್ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶಗಳಿವೆ ಮತ್ತು ಈ ಹಿಂದಿಗಿಂತಲೂ ಈಗ ಆತ್ಮವಿಶ್ವಾಸ, ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ. ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ನಿಮ್ಮ ಪ್ರತಿಭೆ ಮತ್ತು ಕೌಶಲವನ್ನು ಪ್ರದರ್ಶಿಸುವುದಕ್ಕೆ ವೇದಿಕೆಗಳು ದೊರೆಯಲಿವೆ. ಇಷ್ಟು ಸಮಯ ಹವ್ಯಾಸವಾಗಿ ಇರುವಂಥದ್ದು ಈಗ ಆದಾಯ ತರುವಂಥದ್ದಾಗಿ ಬದಲಾಗುವ ಎಲ್ಲ ಸಾಧ್ಯತೆಗಳಿವೆ. ಕೃಷಿಕರಾಗಿದ್ದಲ್ಲಿ ಈ ವಾರ ಒಂದು ಬಗೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂಥ ಬೆಳವಣಿಗೆಗಳು ಆಗಲಿವೆ. ಆದ್ದರಿಂದ ಹಳೆಯ ವೈಫಲ್ಯಗಳನ್ನು ಮರೆತು, ಮುಂದಕ್ಕೆ ಹೆಜ್ಜೆ ಇಡುವ ಕಡೆಗೆ ಗಮನವನ್ನು ನೀಡಿ. ಇನ್ನು ದೇವರ ಆಶೀರ್ವಾದ ಸಹ ನಿಮ್ಮ ಮೇಲಿರುತ್ತದೆ. ಆದ್ದರಿಂದ ಕೈಗೆತ್ತಿಕೊಳ್ಳುವ ಯೋಜನೆಗಳು, ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಿದ್ದೀರಿ. ಮಕ್ಕಳ ಏಳ್ಗೆಯಿಂದ ಸಮಾಧಾನ ದೊರೆಯಲಿದೆ. ವಿವಾಹದ ಮಾತುಕತೆಗಳು ನಡೆಯುತ್ತಿದೆ ಎಂದಾದಲ್ಲಿ ಪ್ರೀತಿ- ಪ್ರೇಮ ಸಂಗತಿಗಳಲ್ಲಿ ಸಂತೋಷವಿದೆ. ಮನೆಯಲ್ಲಿ ಈ ವಿಚಾರ ಪ್ರಸ್ತಾವ ಮಾಡಿದಲ್ಲಿ ಅಂದುಕೊಂಡಂತೆ ಉತ್ತಮ ಬೆಳವಣಿಗೆಗಳು ಆಗಲಿವೆ. ವೃತ್ತಿ ನಿರತರಿಗೆ ಲಾಭ ತರುವಂಥ, ಆದಾಯ ಹೆಚ್ಚಳ ಮಾಡಿಕೊಳ್ಳುವಂಥ ದೂರ ಪ್ರಯಾಣದ ಯೋಗಗಳಿವೆ. ಬಹಳ ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಕೆಲಸಗಳನ್ನು ಮಾಡುವುದಕ್ಕೆ ಉತ್ತಮವಾದ ಸಮಯ ಇದು. ನಿಮ್ಮ ಮಾತಲ್ಲಿ ಇತರರಿಗೆ ನಂಬಿಕೆ ಮೂಡಲಿದೆ. ಹೂಡಿಕೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದೊರೆಯುವಂಥ ಸಾಧ್ಯತೆ ಹೆಚ್ಚಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರದಲ್ಲಿ ಮಾಡುವ ಸಾಧನೆಯಿಂದಾಗಿ ಕುಟುಂಬ, ಸ್ನೇಹಿತರು, ಸಂಬಂಧಿಗಳು ಹೀಗೆ ಹಲವರ ಮೆಚ್ಚುಗೆ ಗಳಿಸಲಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರಲಿವೆ. ಮಹಿಳೆಯರಿಗೆ ವಸ್ತ್ರಾಭರಣಗಳನ್ನು ಖರೀದಿಸುವಂಥ ಯೋಗ ಇದೆ. ತವರು ಮನೆಯಲ್ಲಿನ ಶುಭ ಕಾರ್ಯಗಳಲ್ಲಿ ಭಾಗೀ ಆಗಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸಂಕೋಚ ಹಾಗೂ ಮಾತಿಗೆ ಕಟ್ಟು ಬೀಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮಗೆ ಬೇಕೋ ಅಥವಾ ಬೇಡವೋ ಬಹಳ ಗೌರವದಿಂದ ನೀವು ಕಾಣುವ ವ್ಯಕ್ತಿಗಳ ಅಭಿಪ್ರಾಯಕ್ಕೆ ಮಣಿಯಲೇ ಬೇಕಾಗುತ್ತದೆ. ಇದೇ ಸಮಯಕ್ಕೆ ಬಜೆಟ್ ವಿಚಾರ ಪ್ರಾಮುಖ್ಯ ಪಡೆದುಕೊಳ್ಳಲಿದೆ. ಖರ್ಚು ಎಲ್ಲೆಲ್ಲಿ ಆಗುತ್ತಿದೆ, ಏಕೆ ಆಗುತ್ತಿದೆ ಎಂಬುದು ನಿಮಗೆ ಈ ವಾರ ಅಂದಾಜು ಮಾಡುವುದು ಸಹ ಕಷ್ಟ ಆಗಲಿದೆ. ಸಣ್ಣದಾಗಿ ಕೆಲಸ ಮಾಡಿಸೋಣ ಎಂದುಕೊಂಡಿದ್ದು ಸಹ ದೊಡ್ಡ ಮಟ್ಟದ ವೆಚ್ಚ ಆಗುವಂತೆ ಮಾಡುತ್ತದೆ. ಇನ್ನು ನಿಮ್ಮಲ್ಲಿ ಕೆಲವರು ಈಗಾಗಲೇ ಸ್ವಂತ ಮನೆಯನ್ನು ಕಟ್ಟಿಸಿಯಾಗಿದೆ, ಇಂಟಿರೀಯರ್ ಡೆಕೊರೇಷನ್ ಮಾಡಿಸಬೇಕು ಅಂತಿದ್ದೀನಿ ಎನ್ನುವವರು, ಮನೆಯ ನವೀಕರಣ, ದುರಸ್ತಿ ಮಾಡಬೇಕು ಎಂದಿರುವವರು, ಇನ್ನು ಸೌಂದರ್ಯ ವರ್ಧಕ ಚಿಕಿತ್ಸೆಗಳನ್ನು ಪಡೆಯಬೇಕು ಎಂದಿರುವವರು, ತೂಕ ಕಡಿಮೆ ಮಾಡಿಕೊಳ್ಳಬೇಕು, ಅದಕ್ಕೋಸ್ಕರ ಕೆಲವು ಚಿಕಿತ್ಸೆ ಪಡೆಯಬೇಕು ಎಂದಿರುವವರು ಒಂದಕ್ಕೆ ಹತ್ತು ಬಾರಿ ಆಲೋಚನೆಯನ್ನು ಮಾಡಿ. ಇದಕ್ಕಾಗಿ ಕೈ ಹಾಕಿದ ಮೇಲೆ ನಿಮ್ಮ ಅಂದಾಜು ಮೀರಿದ ಖರ್ಚು ಬರಲಿದೆ. ಅಥವಾ ಆರಂಭದಲ್ಲಿ ಒಂದು ಮೊತ್ತವನ್ನು ಹೇಳಿ, ಆ ನಂತರ ಬೇರೆ ಹೇಳುವಂಥ ಸಾಧ್ಯತೆಗಳಿವೆ. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರಂತೂ ಇಎಂಐ ಸಿಗುತ್ತದೆ ಎಂಬ ಕಾರಣಕ್ಕಾಗಿ ಅಗತ್ಯ ಮೀರಿದ ಖರ್ಚುಗಳನ್ನು ಮಾಡುವುದಕ್ಕೆ ಹೋಗಬೇಡಿ. ಕೃಷಿಕರು ಮಾರುಕಟ್ಟೆಗೆ ತೆರಳುವಾಗ ಅಥವಾ ಬ್ಯಾಂಕ್ ಅಥವಾ ಮತ್ತಿತರ ವ್ಯವಹಾರಗಳನ್ನು ಮಾಡುವಾಗ ಹಣಕಾಸು ಕಡೆಗೆ ಮಾಮೂಲಿಗಿಂತ ಹೆಚ್ಚಿನ ಲಕ್ಷ್ಯವನ್ನು ವಹಿಸಬೇಕಾಗುತ್ತದೆ. ಇತರರನ್ನು ನಂಬಿ, ಬೆಲೆ ಬಾಳುವ ವಸ್ತುಗಳನ್ನು ನೀಡಬೇಡಿ. ಸಾರ್ವಜನಿಕರ ಸಾರಿಗೆಯಲ್ಲಿ ಸಂಚಾರ ಮಾಡುತ್ತಿದ್ದೀರಿ ಎಂದಾದಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಿ. ಇನ್ನು ವೃತ್ತಿನಿರತರಿಗೆ ವೈಯಕ್ತಿಕ ಬದುಕು ಆದ್ಯತೆ ಪಡೆದುಕೊಳ್ಳುತ್ತದೆ. ತಂದೆ- ತಾಯಿ, ಸಂಗಾತಿ ಹಾಗೂ ಕುಟುಂಬದ ಇತರ ಸದಸ್ಯರ ಜತೆಗೆ ಹೆಚ್ಚಿನ ಸಮಯವನ್ನು ಕಳೆಯಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ಮತ್ತೊಂದು ಮುಖ್ಯ ವಿಚಾರ ಏನೆಂದರೆ, ಮಕ್ಕಳ ಶಿಕ್ಷಣದ ವಿಚಾರಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮ ವೃತ್ತಿಯ ಪ್ರತಿಸ್ಪರ್ಧಿಗಳು ಕೆಲವು ವದಂತಿಗಳನ್ನು ಹಬ್ಬಿಸುವ ಸಾಧ್ಯತೆ ಇದ್ದು, ಇದನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಕಡೆಯಿಂದ ಏನು ಮಾಡಬೇಕೋ ಅದನ್ನು ಕಡ್ಡಾಯವಾಗಿ ಮಾಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಇದರಲ್ಲಿ ಹೆಸರು, ಕೀರ್ತಿಯನ್ನು ಪಡೆಯುವ ಯೋಗ ಇದೆ. ಉದ್ಯೋಗಸ್ಥ ಮಹಿಳೆಯರಿಗೆ ನಿಮ್ಮ ಕೆಲಸದಲ್ಲಿ ಯಾರು ರೇಟಿಂಗ್ ನೀಡಬೇಕೋ ಅಥವಾ ಬಡ್ತಿ ಇತ್ಯಾದಿಗಳನ್ನು ನಿರ್ಧಾರ ಮಾಡಬೇಕೋ ಅಂಥವರ ಜತೆಗೆ ಮಾತುಕತೆ ಆಡುವಾಗ ಎಚ್ಚರಿಕೆ ವಹಿಸಿ. ಏಕೆಂದರೆ ನಿಮಗೆ ಈ ಬಾರಿ ಏನೇ ಕೊಟ್ಟರೂ ಕೊಡದಿದ್ದರೂ ನಷ್ಟವೇ. ಕೊಟ್ಟರೆ ಒಂದು ರೀತಿಯಲ್ಲಿ ಸಮಸ್ಯೆ, ಕೊಡದಿದ್ದರೆ ಇನ್ನೊಂದು ರೀತಿಯಲ್ಲಿ ಸಮಸ್ಯೆ ನಿಶ್ಚಿತ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಕೆಲವು ಗೊಂದಲಗಳು ಏರ್ಪಡುತ್ತವೆ. ಇತರರ ಭರವಸೆಯ ಮಾತುಗಳನ್ನೇ ನೆಚ್ಚಿಕೊಂಡು, ದೊಡ್ಡ ತೀರ್ಮಾನಗಳನ್ನು ಮಾಡುವುದಕ್ಕೆ ಹೋಗಬೇಡಿ. ಹಣಕಾಸು ಅಥವಾ ಬ್ಯಾಂಕ್ ಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮಗೆ ಯಶಸ್ಸು ಸುಲಭಕ್ಕೆ ಸಿಗುವುದಿಲ್ಲ. ಯಾವುದೇ ಪ್ರಯತ್ನದ ಕೆಲಸ ಆಗುವ ಮುನ್ನವೇ ಅದರ ಬಗ್ಗೆ ಹೇಳಿಕೊಂಡು ಬರಬೇಡಿ. ಏಕೆಂದರೆ ಆರಂಭದಲ್ಲಿ ಎಲ್ಲವೂ ಸಲೀಸಾಗಿ ಆಗುವಂತೆ ಕಾಣುವಂಥದ್ದು, ಆ ನಂತರದಲ್ಲಿ ಕೈ ಕೊಡಲಿದೆ. ಒಟ್ಟಿನಲ್ಲಿ ಈ ವಾರ ನೀವು ಕೈ ಹಾಕುವ ಕೆಲಸಗಳಲ್ಲಿ ನಾನಾ ವಿಘ್ನಗಳು ಎದುರಾಗುತ್ತವೆ. ಅದರಲ್ಲೂ ಸ್ತ್ರೀಯರ ಜತೆಗೆ ವ್ಯವಹಾರ- ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ ನಡೆಸುತ್ತಿದ್ದೀರಿ ಎಂದಾದಲ್ಲಿ ದಾಖಲಾತಿಗಳು ಸರಿಯಾಗಿವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇನ್ನು ನಿಮ್ಮ ಹಣಕಾಸಿನ ಅಗತ್ಯ ತೀವ್ರವಾಗಲಿದ್ದು, ಯಾರ ಜತೆಗೆ ವ್ಯವಹಾರ ಅಥವಾ ಕೆಲಸ ಮಾಡಬಾರದು ಎಂದುಕೊಂಡಿದ್ದಿರೋ ಅವರ ಜತೆಗೇ ಕೆಲಸ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಇದರಿಂದಾಗಿ ನಿಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಕೆಲವು ಆತುರದ ತೀರ್ಮಾನದಿಂದ ಹಣವನ್ನು ಕಳೆದುಕೊಳ್ಳಲಿದ್ದೀರಿ. ಈ ವಾರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೊಸ ವ್ಯವಹಾರಗಳನ್ನು ಶುರು ಮಾಡಿದ್ದಲ್ಲಿ ಆಗಬೇಕಾದ ಅಥವಾ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚಾಗುತ್ತದೆ. ಆದ್ದರಿಂದ ಲೆಕ್ಕಾಚಾರ ಹಾಗೂ ಬಜೆಟ್ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಕೃಷಿಕರು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸರ್ಕಾರದ ಮಟ್ಟದಲ್ಲಿ ನಿಮ್ಮ ಕೆಲಸಗಳು ಆಗಬೇಕಾಗಿದ್ದಲ್ಲಿ ಅದು ಮಾಡಿಕೊಳ್ಳುವಂಥ ಸಾಧ್ಯತೆಗಳಿವೆ. ನಿಮ್ಮ ಸಾಮರ್ಥ್ಯವನ್ನು ಗುರುತಿಸಿ, ಸ್ಥಾನ- ಮಾನಗಳು ಸಹ ದೊರೆಯುವಂಥ ಸಾಧ್ಯತೆಗಳಿವೆ. ಸಂಗಾತಿಯ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಹೆಚ್ಚಿನ ಅನುಕೂಲಗಳು ಒದಗಿಬರಲಿವೆ. ಕೃಷಿ ಜಮೀನಿನಲ್ಲಿ ಸೋಲಾರ್ ಬೇಲಿ ಹಾಕಿಸುವುದು ಸೇರಿದಂತೆ ಇತರ ಅಬಿವೃದ್ಧಿ ಕೆಲಸಗಳನ್ನು ಮಾಡಿಸುವುದಕ್ಕೆ ಮುಂದಾಗಲಿದ್ದೀರಿ. ಬಹಳ ಸಮಯದಿಂದ ನಿಮ್ಮನ್ನು ಕಾಡುತ್ತಿದ್ದ ಗೊಂದಲಗಳು ನಿವಾರಣೆ ಆಗಲಿದೆ. ವೃತ್ತಿನಿರತರಿಗೆ ತಾಂತ್ರಿಕ ವಿಚಾರಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅಥವಾ ವಿವಿಧ ಬಗೆಯಲ್ಲಿ ನಿಮ್ಮ ಸೇವೆಯನ್ನು ಅಪ್ ಗ್ರೇಡ್ ಮಾಡುವ ನಿಟ್ಟಿನಲ್ಲಿ ಹಣವನ್ನು ಹೂಡಿಕೆ ಮಾಡುವಂಥ ಯೋಗ ಇದೆ. ಹೊಸದಾಗಿ ಶಾಖೆಗಳನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಕಚೇರಿ ಅಥವಾ ಭೂಮಿಯನ್ನು ಭೋಗ್ಯಕ್ಕೆ ಹಾಕಿಕೊಳ್ಳುವುದಕ್ಕೆ ಆಲೋಚಿಸಲಿದ್ದೀರಿ. ಇಂಥ ಸನ್ನಿವೇಶದಲ್ಲಿ ಅದಕ್ಕೆ ಪಾರ್ಟನರ್ ಗಳು ಇದ್ದಲ್ಲಿ ಸೂಕ್ತ ಬೆಂಬಲ ಕೂಡ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾರೀ ಉತ್ತೇಜನ ದೊರೆಯಲಿದೆ. ಯುವತಿಯರು ಅಥವಾ ಉದ್ಯೋಗಸ್ಥ ಮಹಿಳೆಯರ ಮೇಲೆ ಕೆಲವು ಆರೋಪಗಳನ್ನು ಹೊರೆಸುವಂಥ ಸಾಧ್ಯತೆ ಇದೆ. ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಇತರರು ಹೇಳುವುದನ್ನು ಕೇಳಿಸಿಕೊಳ್ಳುವುದು ಹಾಗೂ ಸ್ಪಂದಿಸುವುದು ಬಹಳ ಮುಖ್ಯ. ಎಲ್ಲರೂ ಬುದ್ಧಿ ಹೇಳುತ್ತಿದ್ದಾರಲ್ಲ ಎಂದು ಮನಸಿಗೆ ವ್ಯಥೆಯಾಗುತ್ತದೆ. ಒಟ್ಟಿನಲ್ಲಿ ಈ ವಾರ ಬೇರೆಯವರಿಂದ ಸಲಹೆ- ಉಪದೇಶಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಇದರ ಜತೆ ಮರೆವಿನ ಸಮಸ್ಯೆ ನಿಮಗೆ ವಿಪರೀತ ಕಾಡಲಿದೆ. ಪುರುಷರೇ ಇರಲಿ, ಸ್ತ್ರೀಯರೇ ಇರಲಿ ಒಡವೆ- ವಸ್ತುಗಳ ಬಗ್ಗೆ ಹಾಗೂ ಅದನ್ನು ಹೇಗೆ ನಿರ್ವಹಿಸುತ್ತಿದ್ದೀರಿ ಎಂಬ ಬಗ್ಗೆ ಲಕ್ಷ್ಯ ನೀಡಿ. ಇತರರ ಕೈಗೆ ಕೊಟ್ಟರೂ ಹಾಗೆ ಯಾರಿಗೆ ಕೊಟ್ಟಿದ್ದೀರಿ ಎಂಬ ಬಗ್ಗೆ ಕೂಡ ನಿಮಗೆ ನೆನಪಿನಲ್ಲಿ ಇರುವುದು ಮುಖ್ಯವಾಗುತ್ತದೆ. ಅದೇ ರೀತಿ ವಸ್ತುಗಳ ನಷ್ಟ, ಮುಖ್ಯವಾದ ಕಾಗದ ಪತ್ರಗಳನ್ನು ಒಂದೆಡೆ ಇಟ್ಟು, ಇನ್ನೊಂದು ಕಡೆ ಹುಡುಕಿ ಆತಂಕಗೊಳ್ಳುವುದು, ಇನ್ನೇನು ಕೆಲಸ ಮುಗಿದು, ಹಣ ಬಂದು ಬಿಡುತ್ತದೆ ಅಂದುಕೊಂಡಿದ್ದು ಬಾರದೇ ಇರುವುದು ಈ ರೀತಿಯಲ್ಲಿ ನಾನಾ ಬಗೆಯಲ್ಲಿ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಯಾವ ಕೆಲಸವನ್ನು ಸುಲಭವಾಗಿ ಮುಗಿಸಬಲ್ಲಿರಿ ಎಂದು ನೀವು ಅಂದುಕೊಂಡಿರುತ್ತೀರೋ ಅದು ಹಾಗೆ ಆಗುವುದಿಲ್ಲ. ಇದರಿಂದಾಗಿ ಇಷ್ಟು ಸಮಯ ಇದ್ದ ನಿಮ್ಮ ಮೇಲಿನ ಆತ್ಮವಿಶ್ವಾಸ ಅದು ಕರಗುತ್ತಾ ಸಾಗುತ್ತದೆ. ನೀವು ಅಂದುಕೊಂಡಂತೆ ಬೆಳವಣಿಗೆಗಳು ನಡೆಯದೆ ನಿಮ್ಮ ನಿರ್ಧಾರಗನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯ ಎಂಬಂತಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವಂಥವರು ಜಮೀನಿನಲ್ಲಿ ಹಾಕಿರುವ ವಿದ್ಯುತ್ ಲೈನ್ ಸರಿಯಾಗಿ ಕೆಲಸ ಮಾಡುತ್ತಿದೆಯಾ ಎಂಬುದನ್ನು ಗಮನಿಸಿಕೊಳ್ಳಿ. ಒಂದು ವೇಳೆ ಗಾಳಿ- ಮಳೆಗೆ ಸಿಲುಕಿ ದುರ್ಬಲವಾಗಿರುವಂಥ ತಂತಿ, ವೈಯರ್ ಗಳು ಇದ್ದಲ್ಲಿ ಅವುಗಳನ್ನು ಬದಲಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಇಲ್ಲದಿದ್ದಲ್ಲಿ ಶಾರ್ಟ್ ಸರ್ಕೀಟ್ ಆಗಿ ಭಾರೀ ನಷ್ಟ ಆಗಬಹುದು, ಅಗ್ನಿ ಅವಘಡಗಳು ಸಂಭವಿಸಬಹುದು. ನಿಮಗೆ ಹಣಕಾಸಿನ ನೆರವು ನೀಡುವುದಾಗಿ ಹೇಳಿದವರು ಕೆಲಸ ಆರಂಭವಾಗಿ, ಮುಖ್ಯ ಘಟ್ಟದಲ್ಲಿ ಇರುವಾಗ ತಮ್ಮಿಂದ ಹಣ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಬಿಡುವ ಸಾಧ್ಯತೆಗಳು ಸಹ ಇವೆ. ಆದ್ದರಿಂದ ಯಾರನ್ನೂ ನೆಚ್ಚಿಕೊಂಡು ಕೆಲಸ ಆರಂಭಿಸಬೇಡಿ. ಹಾಗೊಂದು ವೇಳೆ ಶುರು ಮಾಡಿದರೂ ಆರಂಭದಲ್ಲೇ ಹಣವನ್ನು ಇಟ್ಟುಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ಇನ್ನು ವೃತ್ತಿನಿರತರಿಗೆ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ನಡೆಸುತ್ತಿದ್ದಲ್ಲಿ ಬಹಳ ಆಪ್ತರ ಜತೆಗೆ ಮನಸ್ತಾಪಗಳು ಆಗುತ್ತವೆ. ನೀವು ಈ ಹಿಂದೆ ಹೇಳಿದ್ದ ಮಾತುಗಳು ನಿಮಗೇ ಉರುಳಾಗುವಂಥ ಸಾಧ್ಯತೆಗಳಿವೆ. ಮುಖ್ಯವಾಗಿ ಭೂ ವ್ಯಾಜ್ಯಗಳು ಎದುರಾಗುತ್ತವೆ. ನಿಮಗೇನೋ ಕಷ್ಟ ಅಂತಲೋ ಅಥವಾ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಬೇಕೋ ಅಂತಲೋ ಭೂ ಮಾರಾಟಕ್ಕೆ ಪ್ರಯತ್ನಿಸಿದಲ್ಲಿ ಅದರಲ್ಲಿ ನಾನಾ ಎಡರು ತೊಡರುಗಳನ್ನು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಸಹಪಾಠಿಗಳಿಂದಲೇ ಅವಮಾನಗಳು ಎದುರಾಗಲಿವೆ. ಮಹಿಳೆಯರು ತಮ್ಮದೇ ಹೆಸರಿನಲ್ಲಿ ಉಳಿತಾಯ, ಹೂಡಿಕೆಗಳನ್ನು ಶುರು ಮಾಡುವುದಕ್ಕೆ ಆಲೋಚಿಸಲಿದ್ದಾರೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಬಾಕಿ ಉಳಿಸಿದ್ದನ್ನು ತೀರಿಸಿಕೊಳ್ಳುವುದಕ್ಕೆ ನಿಮ್ಮಲ್ಲಿ ಕೆಲವರಿಗೆ ಅವಕಾಶಗಳು ದೊರೆಯಲಿವೆ. ನಿಮ್ಮಷ್ಟಕ್ಕೆ ನೀವು ಇದ್ದವರು ಏಕಾಏಕಿ ಸುತ್ತಮುತ್ತಲೂ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಗಮನ ನೀಡಲಿದ್ದೀರಿ. ಇಷ್ಟೊಂದು ಸಮಸ್ಯೆಗಳು ಎಲ್ಲಿದ್ದವು, ಎಲ್ಲವೂ ಸರಿಯಾಗಿದೆ ಎಂದು ಇಷ್ಟು ಸಮಯ ನೀವು ಭ್ರಮೆಯಲ್ಲಿ ಇದ್ದಿರೇನೋ ಎಂದೆನಿಸುವುದಕ್ಕೆ ಶುರು ಆಗುತ್ತದೆ. ಈ ಮುಂಚೆಯೆಲ್ಲ ನಿಮ್ಮ ಮಾತಿಗೆ ಗೌರವ ನೀಡುತ್ತಿದ್ದವರು ಹಾಗೂ ತಕ್ಷಣವೇ ಅದನ್ನು ಮಾಡುತ್ತಿದ್ದವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಬಲವಾಗಿ ಅನಿಸುತ್ತದೆ. ಇದೇ ವೇಳೆ ಉದ್ಯೋಗ ಸ್ಥಳದಲ್ಲಿ ವಿರೋಧಿಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಅದಕ್ಕೆ ತಕ್ಕಂತೆ ನಿಮ್ಮದೇ ಅಜಾಗರೂಕತೆಯಿಂದ ಕೆಲವು ತಪ್ಪುಗಳು ಸಹ ಆಗಬಹುದು. ಈ ವಾರ ನೀವು ಕೆಲಸಕ್ಕೆ ತೆರಳುವ ಸ್ಥಳದಲ್ಲಿ ಪದೇ ಪದೇ ಅನುಮತಿ ಪಡೆದು, ಬೇಗ ಮನೆಗೆ ತೆರಳುವುದು ಅಥವಾ ತಡವಾಗಿ ಕೆಲಸಕ್ಕೆ ಹೋಗುವುದು ಮಾಡಬೇಡಿ. ಇದರಿಂದ ನಿಮ್ಮ ವರ್ಚಸ್ಸಿಗೆ ಸಮಸ್ಯೆ ಆಗಲಿದೆ. ಅದರ ಹೊರತಾಗಿಯೂ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದಿಢೀರನೇ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದಕ್ಕಾಗಿಯೇ ಸಾಲ ಮಾಡಬೇಕಾದ ಸನ್ನಿವೇಶ ಸಹ ಎದುರಾಗಬಹುದು. ಆದ್ದರಿಂದ ಈ ಸಮಯದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ದೈನಂದಿನ ದಿನಚರಿ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಹೊಸ ಉದ್ಯೋಗಾವಕಾಶಗಳು, ಬಡ್ತಿಗಳು ಅಥವಾ ಮಾಡುವ ಕೆಲಸದಲ್ಲಿ ಹಾಕುವ ಪ್ರಯತ್ನಗಳಿಗೆ ನಿರೀಕ್ಷಿತವಾದ ಫಲಿತಾಂಶ ದೊರೆಯುವುದು ಕಷ್ಟ. ಕೃಷಿಕರು ಹೊಸ ಕೌಶಲಗಳನ್ನು ಅಳವಡಿಸಿಕೊಳ್ಳುವ ಕಡೆಗೆ ನಿಗಾ ಕೊಡಬೇಕು. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಬಾಕಿ ಬರಬೇಕಾದ ಹಣ ಇದ್ದಲ್ಲಿ ಅದು ಬರುವಂಥ ಅವಕಾಶಗಳಿವೆ. ಆದರೆ ಅದಕ್ಕಾಗಿ ಬಲವಾದ ಪ್ರಯತ್ನ ಹಾಕಬೇಕು. ವೃತ್ತಿನಿರತರಿಗೆ ತಮ್ಮ ಜತೆಗೆ ಕೆಲಸ ಮಾಡುವವರ ಜತೆಗೆ ಘರ್ಷಣೆಗಳು ಏರ್ಪಡುವ ಸಾಧ್ಯತೆ ಇದೆ ಹೀಗಾಗದಂತೆ ಎಚ್ಚರಿಕೆಯನ್ನು ವಹಿಸುವುದು ಮುಖ್ಯ. ವ್ಯವಹಾರ ವಿಸ್ತರಣೆಗಾಗಿ ಪ್ರಯತ್ನ ಮಾಡುವುದಿದ್ದಲ್ಲಿ ಸಾಲ ಪಡೆಯುವುದು, ಸಾಲ ನೀಡುವುದು ಎರಡರಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಮುಖ್ಯ. ವಿದ್ಯಾರ್ಥಿಗಳು ಎಜುಕೇಶನ್ ಲೋನ್ ಗಾಗಿ ಬ್ಯಾಂಕ್ ಗಳಲ್ಲಿ ಪ್ರಯತ್ನ ಪಡುತ್ತಿದ್ದಲ್ಲಿ ಅದರಲ್ಲಿ ಯಶ ಕಾಣಲಿದ್ದೀರಿ. ಉನ್ನತ ಹುದ್ದೆಯಲ್ಲಿ ಇರುವಂಥವರು ನಿಮ್ಮ ನೆರವಿಗೆ ಬರಲಿದ್ದಾರೆ. ಮಹಿಳೆಯರು ರಾಜಕಾರಣದಲ್ಲಿ ಇರುವಂಥವರಾಗಿದ್ದರೆ ಸ್ಥಾನ- ಮಾನಗಳು ಹೆಚ್ಚಾಗಲಿವೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗಲಿದ್ದು, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೆಲವು ಜವಾಬ್ದಾರಿಗಳನ್ನು ನೀವೇ ವಹಿಸಿಕೊಳ್ಳುವಂತೆ ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು ದುಂಬಾಲು ಬೀಳಲಿದ್ದಾರೆ. ಯಾವುದು ಸ್ವಾಭಾವಿಕವಾಗಿ ಬಾರದು ಎಂದು ಅಂದುಕೊಂಡಿರುತ್ತೀರೋ ಅಂಥವು ದೊರೆಯಲಿವೆ. ಈ ಹಿಂದಿನ ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ. ಅವಕಾಶಗಳು ಯಾವ ಸ್ವರೂಪದಲ್ಲಿಯಾದರೂ ಹುಡುಕಿಕೊಂಡು ಬರಬಹುದು. ಆದ್ದರಿಂದ ಸಣ್ಣ- ಪುಟ್ಟ ಸಂಗತಿ ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ. ದೂರ ಪ್ರಯಾಣವನ್ನು ಮಾಡುವಂಥವರು ಸರಿಯಾದ ಸಿದ್ಧತೆಯನ್ನು ಮಾಡಿಕೊಳ್ಳಿ. ದೂರ ಭಾರ ತೆರಳುತ್ತಿದ್ದೀರಿ ಎಂದಾದಲ್ಲಿ ಅಲ್ಲಿಗೆ ಹೋದ ಮೇಲೆ ಸಂಬಂಧಪಟ್ಟ ವ್ಯಕ್ತಿಗಳು ಭೇಟಿಗೆ ಸಿಗುತ್ತಾರೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದಲ್ಲಿ ನಿಮ್ಮ ಪ್ತಯಾಣವೇ ವ್ಯರ್ಥವಾಗಿ ಬಿಡಬಹುದು. ಒಟ್ಟಾರೆಯಾಗಿ ನೋಡಿದಾಗ ಈ ವಾರದಲ್ಲಿ ನಿಮಗೆ ಹಲವು ಬಗೆಯಲ್ಲಿ ಲಾಭ ದೊರೆಯುವಂತಹ ಸಾಧ್ಯತೆಗಳನ್ನು ಸೂಚಿಸುತ್ತಿದೆ. ಇಷ್ಟು ಸಮಯ ನೀವು ಪಟ್ಟ ಶ್ರಮಕ್ಕೆ ಫಲಿತಾಂಶ ದೊರೆಯುವುದಕ್ಕೆ ಶುರು ಆಗುತ್ತದೆ. ನಿಮ್ಮದೇ ವೃತ್ತಿಯಲ್ಲಿ ಇರುವಂಥವರು ಪ್ರತಿಭೆಯನ್ನು ಮೆಚ್ಚಿಕೊಳ್ಳಲಿದ್ದಾರೆ. ತಾಂತ್ರಿಕ ಜ್ಞಾನವನ್ನು ಇತರರು ಬೆರಗಿನಿಂದ ನೋಡುವಂತಾಗುತ್ತದೆ. ಉದ್ಯೋಗದ ನಿಮಿತ್ತವಾಗಿ ಕೆಲ ಕಾಲ ದೂರ ಪ್ರದೇಶಗಳಿಗೆ ತೆರಳುವಂತೆ ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ. ಆರಂಭದಲ್ಲಿಯೇ ಹೇಳಿದಂತೆ ಸ್ಥಾನ ಲಾಭ, ಧನ ಲಾಭ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಇತ್ಯಾದಿ ಶುಭ ಫಲಗಳಿವೆ. ಕೃಷಿಕರಿಗೆ ಭೂಮಿ ಅಥವಾ ಜಾನುವಾರು ಖರೀದಿ ಮಾಡುವಂತೆ ಕೆಲವರು ಕೇಳಿಕೊಳ್ಳಬಹುದು. ಅನಿರೀಕ್ಷಿತವಾಗಿ ಹಣಕಾಸಿನ ಅನುಕೂಲ ಒದಗಿಬಂದು, ಖರೀದಿ ಮಾಡಿಯೂ ಬಿಡುವಂಥ ಯೋಗಗಳಿವೆ. ಡೇರಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಅವಕಾಶಗಳು ಸಹ ದೊರೆಯಲಿವೆ. ಇನ್ನು ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ಬ್ಯಾಂಕ್ ಅಥವಾ ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದಲ್ಲಿ ಸುಲಭವಾಗಿ ದೊರೆಯುವ ಸಾಧ್ಯತೆಗಳು ಸಹ ಇವೆ. ಒಂದು ಎಚ್ಚರಿಕೆ ಏನೆಂದರೆ ಆಹಾರ ಪಥ್ಯದ ವಿಚಾರದಲ್ಲಿ ಮಾಮೂಲಿಗಿಂತ ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯ, ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವೃತ್ತಿನಿರತರಿಗೆ ಸಂಗಾತಿಗೆ ಬರುವ ಅನುಕೂಲದ ಬಹುಪಾಲು ಪ್ರಯೋಜನ ನಿಮಗೇ ಆಗಲಿದೆ. ನಿಮ್ಮ ವೃತ್ತಿಗೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಸ್ಥಾನ- ಮಾನಗಳು ಈಗಾಗದಲೇ ಇದ್ದಲ್ಲಿ ಪದೋನ್ನತಿ ಆಗಬಹುದು. ಕಂಪನಿಗಳಲ್ಲಿ ಷೇರು, ಲಾಭದ ಪಾಲು ಇತ್ಯಾದಿ ದೊರೆಯುವಂತಾಗುತ್ತದೆ. ಈ ಹಿಂದೆ ನೀವು ಆರಂಭಿಸಿದ್ದ ವ್ಯವಹಾರ, ಮಾಡಿದ್ದ ಹೂಡಿಕೆ, ಪಟ್ಟ ಶ್ರಮ ಫಲ ನೀಡುವುದಕ್ಕೆ ಆರಂಭಿಸುತ್ತದೆ. ವಿದೇಶ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ವಿದ್ಯಾರ್ಥಿಗಳು ಗ್ಯಾಜೆಟ್ ಗಳನ್ನು ಖರೀದಿಸುವಂಥ ಯೋಗ ಇದೆ. ಮಹಿಳೆಯರಿಗೆ ಅನಿರೀಕ್ಷಿತವಾಗಿ ಆದಾಯದ ಮೂಲಗಳಲ್ಲಿ ಜಾಸ್ತಿ ಆಗಲಿದೆ. ಈ ಅವಧಿಯಲ್ಲಿ ಸಾಂಸಾರಿಕವಾಗಿಯೂ ನೆಮ್ಮದಿ, ಶಾಂತಿ ನೆಲೆಸಿರುತ್ತದೆ. ಈ ಕಾರಣಕ್ಕೆ ಇತರ ಕೆಲಸಗಳನ್ನು ಹೆಚ್ಚು ಆಸಕ್ತಿ, ಪರಿಣಾಮಕಾರಿಯಾಗಿ ಮಾಡಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಲ್ಲಿ ಸೈಟು ಖರೀದಿ- ಮನೆ ನಿರ್ಮಾಣಕ್ಕಾಗಿ ಸಾಲಕ್ಕೆ ಪ್ರಯತ್ನ ಪಡುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ದೊರೆಯಲಿದೆ. ಉದ್ಯೋಗ, ವ್ಯವಹಾರ, ಶುಭ ಕಾರ್ಯಗಳು ಅಥವಾ ಹೂಡಿಕೆ ವಿಚಾರಗಳು ಇದ್ದಲ್ಲಿ ನಿಮಗೆ ದೊಡ್ಡ ಮಟ್ಟದಲ್ಲಿ ಕುಟುಂಬದಿಂದ ಬೆಂಬಲ ದೊರೆಯಲಿದೆ. ಭಾವನಾತ್ಮಕವಾಗಿ ಈ ವಾರ ಬಹಳ ಮುಖ್ಯವಾಗಿರುತ್ತದೆ. ಯಾವುದೇ ವಿಚಾರದಲ್ಲಿ ಈ ಹಿಂದೆ ಇದ್ದಂತೆ ಪಟ್ಟು ಹಿಡಿದು ಕೂರುವ ಮನಸ್ಥಿತಿಯಲ್ಲಿ ನೀವು ಇರುವುದಿಲ್ಲ. ಆದ್ದರಿಂದ ಒಂದು ವೇಳೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಬಹಳ ಒಳ್ಳೆ ಸಮಯ. ಒಂದು ವೇಳೆ ಪ್ರೇಮಿಗಳಾಗಿದ್ದು, ಇದಕ್ಕಿಂತ ಮುಂಚೆ ಮನಸ್ತಾಪಗಳು, ಅಭಿಪ್ರಾಯ ಭೇದಗಳು ಮೂಡಿ ದೂರವಾಗಿದ್ದಲ್ಲಿ ಈ ವಾರ ಒಗ್ಗೂಡುವಂಥ, ಸಂತೋಷವಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಉದ್ಯೋಗಸ್ಥರಾಗಿದ್ದಲ್ಲಿ ತಾತ್ಕಾಲಿಕವಾಗಿಯಾದರೂ ಬೇರೆ ಸ್ಥಳಗಳಿಗೆ ತೆರಳಬೇಕಾದ ಸನ್ನಿವೇಶ ಎದುರಾಗಲಿದೆ. ಇನ್ನು ಯಾರು ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿದ್ದೀರೋ ಅಂಥವರಿಗೆ ಆದಾಯದಲ್ಲಿ ಸ್ಥಿರತೆ ಕಂಡುಬರಲಿದೆ. ಆದರೆ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವಂಥ ಯಾವುದೇ ಹೂಡಿಕೆಯನ್ನು ಮಾಡುವುದಕ್ಕೆ ಹೋಗಬೇಡಿ. ಕೃಷಿಕರಿಗೆ ಯಾವುದೇ ವಿಚಾರಗಳಲ್ಲಿ ಒಮ್ಮತ ಈ ತನಕ ಆಗಿಲ್ಲ ಎಂದಾದರೆ ಈಗ ಮೂಡಿಬರಲಿದೆ. ಜಮೀನು- ಮನೆಯಲ್ಲಿನ ಪಾಲು ವಿಚಾರಕ್ಕೆ ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕೆ ಅವಕಾಶ ಇದೆ. ಸೋದರ- ಸೋದರಿಯರ ಜತೆಗೆ ಇಷ್ಟು ಸಮಯ ಇದ್ದಂಥ ಮನಸ್ತಾಪಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಇನ್ನು ಮನೆಯಲ್ಲಿನ ಶುಭ ಕಾರ್ಯಗಳು ನಡೆಸುವಂಥ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ತಮ್ಮ ಮನೆಯ ನಿರ್ಮಾಣಕ್ಕೆ ಅಥವಾ ತೋಟ- ಗದ್ದೆಗಳ ಅಭಿವೃದ್ಧಿಗಾಗಿ ಹಣದ ಅಗತ್ಯ ಇದೆಯೆಂದು ಸೋದರ ಸಂಬಂಧಿಗಳು ನಿಮ್ಮಿಂದ ನೆರವು ಕೇಳಿಕೊಂಡು ಬರಲಿದ್ದಾರೆ. ಒಂದು ವೇಳೆ ವೃತ್ತಿನಿರತರಾಗಿದ್ದು, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೂಡಿ ಒಂದು ವ್ಯವಹಾರಕ್ಕೆ ಅಂತ ಕೈ ಹಾಕಿದಲ್ಲಿ ಅದರಲ್ಲಿ ಯಶಸ್ಸು ದೊರೆಯಲಿದೆ. ಇನ್ನು ವೃತ್ತಿಯಲ್ಲಿ ಇರುವಂಥ ಅವಿವಾಹಿತರಿಗೆ ಅದೇ ವೃತ್ತಿಯಲ್ಲಿ ಇರುವಂಥ ವಧು/ವರರ ಸೂಕ್ತವಾದ ವಿವಾಹ ಸಂಬಂಧಗಳು ದೊರೆಯುವಂಥ ಅವಕಾಶಗಳಿವೆ. ಹೊಸ ವಾಹನಗಳ ಖರೀದಿ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಒಂದು ವೇಳೆ ಈಗಾಗಲೇ ಅಡ್ವಾನ್ಸ್ ನೀಡಿಯಾಗಿದೆ, ಹಣಕಾಸಿನ ಹೊಂದಾಣಿಕೆಗೆ ಪ್ರಯತ್ನ ಮಾಡುತ್ತಿದ್ದೀರಿ ಎಂದಾದಲ್ಲಿ ಮೊತ್ತ ಹೊಂದಾಣಿಕೆ ಸಹ ಆಗಲಿದೆ. ಇದರಿಂದ ನಿಮ್ಮ ಮನಸ್ಸಿಗೆ ಸಮಾಧಾನ ದೊರೆಯಲಿದೆ. ವಿದ್ಯಾರ್ಥಿಗಳ ಜತೆಗೆ ಸ್ನೇಹಿತರ ಜತೆಗೆ ಉತ್ತಮ ಸಮಯವನ್ನು ಕಳೆಯುವಂಥ ಯೋಗ ಇದೆ. ಪ್ರವಾಸಕ್ಕೆ ತೆರಳಲಿದ್ದೀರಿ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಪೈಪ್ ನಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳಿ. ಚೂಪಾದ ವಸ್ತುಗಳು, ಬಿಸಿ ಪದಾರ್ಥಗಳು, ಬಿಸಿಯಾದ ಎಣ್ಣೆ ಇತ್ಯಾದಿಗಳನ್ನು ಬಳಸುವಾಗ ಜಾಗ್ರತೆ ವಹಿಸಿ.

ಲೇಖನ- ಎನ್‌.ಕೆ.ಸ್ವಾತಿ

Published On - 11:00 am, Sun, 15 December 24