Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜೂನ್ 11ರಿಂದ 17ರ ತನಕ ವಾರಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 11, 2023 | 12:45 AM

ಜೂನ್ 11ರಿಂದ 17ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜೂನ್ 11ರಿಂದ 17ರ ತನಕ ವಾರಭವಿಷ್ಯ
ಪ್ರಾತಿನಿಧಿಕ ಚಿತ್ರ
Image Credit source: stock.adobe
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಜೂನ್ 11ರಿಂದ 17ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮಹತ್ತರ ಒಪ್ಪಂದ ಅಥವಾ ವಿಚಾರಗಳಲ್ಲಿ ನಿಮ್ಮ ಅಭಿಪ್ರಾಯ, ನಿರ್ಧಾರಗಳಿಗೆ ಪ್ರಾಮುಖ್ಯ ಇರುತ್ತದೆ. ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗೆ ಪ್ರಯತ್ನ ಪಡುತ್ತಿದ್ದರೆ ಸೂಕ್ತ ಸಂಬಂಧವೊಂದು ಹುಡುಕಿಕೊಂಡು ಬರುವಂಥ ಯೋಗ ಇದೆ. ಗುರಿಯಿಟ್ಟು ಹೊಡೆದರೆ ಬೀಳದೆ ಇರುವುದು ಯಾವುದೂ ಇಲ್ಲ. ನಿಮ್ಮ ಏಕಾಗ್ರತೆ ಬಹಳ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಶಿಸ್ತು, ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡಲಿದ್ದೀರಿ. ನಿಮ್ಮಿಂದ ಏನು ಮಾಡುವುದಕ್ಕೆ ಸಾಧ್ಯ ಹಾಗೂ ಏನನ್ನು ಮಾಡುವುದಕ್ಕೆ ಆಗುವುದಿಲ್ಲ ಎಂಬ ಬಗ್ಗೆ ಸ್ಪಷ್ಟವಾದ ಕಲ್ಪನೆ ನಿಮಗೆ ಇರಲಿದೆ. ಎಲ್ಲರ ಆಕ್ಷೇಪ, ಅನುಮಾನಗಳಿಗೆ ಸರಿಯಾದ ಉತ್ತರವನ್ನು ನಿಮ್ಮ ಕಾರ್ಯ ಚಟುವಟಿಕೆ ನೀಡಲಿದೆ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ- ಮಾರಾಟ ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಕೃಷಿಕರಾಗಿದ್ದಲ್ಲಿ ನಿಮ್ಮ ಮಾತಿನ ಪ್ರಭಾವ, ಗೌರವ ಎರಡೂ ಹೆಚ್ಚಾಗಲಿದೆ. ಹೊಸಬರ ಎದುರಿಗೆ ನಿಮ್ಮ ಆದಾಯದ ಬಗ್ಗೆಯಾಗಲೀ ಅಥವಾ ನಿಮ್ಮ ವ್ಯವಹಾರದ ಗುಟ್ಟನ್ನಾಗಲೀ ಹಂಚಿಕೊಳ್ಳಬೇಡಿ. ಸಾವಯವ ಕೃಷಿ ಮಾಡುವಂಥವರಿಗೆ ಗೌರವ, ಸನ್ಮಾನ ಹಾಗೂ ಆದಾಯ ಹೆಚ್ಚಳ ಆಗುವಂಥ ಯೋಗ ಇದೆ. ವೃತ್ತಿನಿರತರು ಅಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಯೋಗ ಇದೆ. ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಇತ್ಯಾದಿ ವೃತ್ತಿಯಲ್ಲಿ ಇರುವವರಿಗೆ ಬಹಳ ಗೊಂದಲ ಏರ್ಪಡಲಿದೆ. ರಕ್ತದೊತ್ತಡ ಸಮಸ್ಯೆ ಇರುವವರು ಕಡ್ಡಾಯವಾಗಿ ಔಷಧೋಪಚಾರದ ಕಡೆಗೆ ಗಮನ ನೀಡಿ. ವೈದ್ಯರ ಬದಲಾವಣೆ ಅಥವಾ ಆಹಾರಪಥ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಬೇಕು ಎಂದುಕೊಂಡಿದ್ದಲ್ಲಿ ಅಗತ್ಯ ನೆರವು, ಮಾರ್ಗದರ್ಶನ ದೊರೆಯಲಿದೆ. ಬಂಧುಗಳು, ಸ್ನೇಹಿತರ ಮನೆಗೆ ದೇವತಾರಾಧನೆಗೆ ಆಹ್ವಾನ ಬರಲಿದೆ. ಮಹಿಳೆಯರು ಸ್ವಂತವಾಗಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಲ್ಲಿ ಸಾಲ ಬಾಧೆ ಕಾಡಲಿದೆ. ಗೃಹ ಬಳಕೆ ವಸ್ತು ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಸ್ವಂತ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಿದ್ದೀರಿ. ಕೆಲಸ ಆಗುವ ತನಕ ಒಂದು ರೀತಿ ಇದ್ದು, ಆ ನಂತರ ಜನರು ಬದಲಾಗುತ್ತಿದ್ದಾರೆ ಎಂದು ಬಲವಾಗಿ ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ಒಂದೇ ಕಡೆ ಹಾಗೂ ಒಂದೇ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದ ನೀವು ಇದೀಗ ನಾಲ್ಕೂ ಕಡೆಯ ಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದಕ್ಕೆ ಆರಂಭಿಸುತ್ತೀರಿ. ಕೃಷಿಕರಿಗೆ ಅಂತ ಹೇಳುವುದಾದರೆ ಅಡಿಕೆ ಕೃಷಿಕರಿಗೆ ಮನೆಯಲ್ಲಿ ಸಂತೋಷವಾದ ವಾರ ಇದಾಗಿರಲಿದೆ. ಇನ್ನು ಕೃಷಿಯ ಜತೆಗೆ ಸ್ವಂತ ವ್ಯವಹಾರವನ್ನೂ ಮಾಡುವಂಥವರು ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುವಿರಿ. ಇದಕ್ಕಾಗಿ ಹೊಸದಾಗಿ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲು ತೀರ್ಮಾನ ಮಾಡಲಿದ್ದೀರಿ. ಕೃಷಿ ಸಂಘ- ಸಂಸ್ಥೆಗಳ ಪ್ರಮುಖರ ಸಭೆ, ಚರ್ಚೆ ಸಂದರ್ಭದಲ್ಲಿ ನೇರವಾದ ಮಾತುಗಳಿಂದ ಇತರರ ಗಮನ ಸೆಳೆಯುತ್ತೀರಿ. ಪ್ರಮುಖವಾಗಿ ಮಾಡಿ ಮುಗಿಸಬೇಕಾದ ಕೆಲಸವನ್ನು ಈ ವಾರ ಮಾಡಲಿಕ್ಕಾಗದೆ ಸ್ವಲ್ಪ ಮಟ್ಟಿಗೆ ದೇಹಾಲಸ್ಯ ಇರುತ್ತದೆ. ಅದಕ್ಕಾಗಿ ವಿಶ್ರಾಂತಿ ಪಡೆಯಲಿದ್ದೀರಿ. ವೃತ್ತಿಪರರಿಗೆ ಎಲ್ಲ ಮುಗಿದೇ ಹೋಯಿತು ಎಂದು ಕೈ ಚೆಲ್ಲಿದ್ದ ವಿಷಯಗಳು ಈಗ ಜೀವ ಪಡೆದುಕೊಳ್ಳುತ್ತವೆ. ಹೊಸ ಭರವಸೆಗಳು ಹುಟ್ಟುತ್ತವೆ. ಮಧ್ಯವರ್ತಿಗಳ ನೆರವಿನಿಂದ ಕೆಲವು ಒಪ್ಪಂದ, ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ. ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರಯತ್ನಗಳನ್ನು ತೀವ್ರಗೊಳಿಸುತ್ತೀರಿ. ಹಿತೈಷಿಗಳ ನೆರವಿನಿಂದ ಹೂಡಿಕೆಯನ್ನು ಹೆಚ್ಚು ಮಾಡುವುದರ ಬಗ್ಗೆ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳ ಮೇಲೆ ಅಪವಾದ ಬರುವ ಸಾಧ್ಯತೆ ಇದೆ, ಸಂಬಂಧಿಗಳ ಮನೆಯೋ ಸ್ನೇಹಿತರೋ ಮನೆಗೋ ಹೋಗುವಂತಿದ್ದರೆ ಎಚ್ಚರಿಕೆ ಬೇಕು. ಅಷ್ಟೇ ಅಲ್ಲ, ಮನೆಯಲ್ಲೂ ಅನುಮಾನ ಪಡಬಹುದು. ಮಹಿಳೆಯರಿಗೆ ಕಣ್ಣು ಕೆಂಪಾಗುವುದು, ನೀರು ಸೋರುವುದು ಸೇರಿದಂತೆ ಕಣ್ಣಿಗೆ ಸಂಬಂಧಿಸಿದ ಒಂದಲ್ಲ ಒಂದು ಸಮಸ್ಯೆಯನ್ನು ಕಾಣಿಸಿಕೊಳ್ಳಲಿದೆ. ದೂರದ ಸಂಬಂಧಿಕರು ಕಾರ್ಯ ನಿಮಿತ್ತ ನಿಮ್ಮನ್ನು ಭೇಟಿ ಆಗುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಣಕಾಸಿನ ಸಂಗತಿಯೋ ಅಥವಾ ಸಂಬಂಧಗಳ ವಿಚಾರವಾಗಿಯೋ ಒಟ್ಟಿನಲ್ಲಿ ಯಾವುದೋ ಹಳೆಯ ವಿಚಾರವೊಂದು ನಿಮ್ಮನ್ನು ಈ ವಾರ ವಿಪರೀತ ಕಾಡಲಿದೆ. ದಾಕ್ಷಿಣ್ಯಕ್ಕೆ ಸಿಲುಕಿ ಯಾರಿಗಾದರೂ ಜಾಮೀನು ನೀಡುವುದಾಗಿ ಮಾತು ನೀಡಬೇಡಿ. ಏಕೆಂದರೆ ಈ ಕಾರಣಕ್ಕೆ ನಿಮ್ಮ ಸ್ನೇಹಕ್ಕೆ ಅಥವಾ ಸಂಬಂಧಕ್ಕೆ ತಡೆಯಾಗಿ ಪರಿಣಮಿಸಬಹುದು. ಇನ್ನು ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಜ್ಯೋತಿಷಿಗಳು, ಪುರೋಹಿತರಿಗೆ ದೂರ ಪ್ರಯಾಣದ ಯೋಗ ಇದ್ದು, ದಿಢೀರನೆ ಹೊರಡಬೇಕಾಗಿ ಬರುವುದರಿಂದ ಕೆಲವು ಕೆಲಸ- ಕಾರ್ಯಗಳು ಅರ್ಧಕ್ಕೆ ನಿಲ್ಲಲಿವೆ. ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದಕ್ಕೆ ವಿಚಾರಣೆ ನಡೆಸಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ಹಿಡಿತ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೃಷಿಕರಿಗೆ ಒಂದು ವೇಳೆ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲ ಅಂತಾದಲ್ಲಿ ಆ ಬಗ್ಗೆ ಮಾತನಾಡಬೇಡಿ. ದೊಡ್ಡ ಮೊತ್ತದ ಹೂಡಿಕೆ ಭೂಮಿಯ ಮೇಲೆ ಅಥವಾ ಡೇರಿ ವ್ಯವಹಾರದ ಮೇಲೆ ಮಾಡುವುದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದಲ್ಲಿ ಅನುಭವಿಗಳಿಂದ ಮಾರ್ಗದರ್ಶನವನ್ನು ಪಡೆಯಿರಿ. ಇದಕ್ಕೆ ಯಾವುದೇ ಹಿಂಜರಿಕೆ ಬೇಡ. ವೃತ್ತಿರನಿರತರಾಗಿದ್ದಲ್ಲಿ ಆದಾಯ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಿದ್ದೀರಿ. ಅನಿರೀಕ್ಷಿತವಾಗಿ ಹೊಸ ಜನರ ಪರಿಚಯ ಆಗಲಿದೆ. ಇದು ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಅದು ಅರ್ಧಂಬರ್ಧ ಆಗಿ ನಿಂತಿದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ಇದೆ. ವಿದ್ಯಾರ್ಥಿಗಳು ಈ ವಾರ ಹಳೇ ಸ್ನೇಹಿತರು- ಗೆಳತಿಯರನ್ನು ಈ ದಿನ ಭೇಟಿ ಆಗುವ ಯೋಗ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಜ್ವರ, ಹೊಟ್ಟೆನೋವು ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮಹಿಳೆಯರು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಲುವಾಗಿ ಹಣವನ್ನು ಖರ್ಚು ಮಾಡುವಂಥ ಯೋಗ ಇದೆ. ದೇವತಾ ಕಾರ್ಯಗಳಿಗೆ ನಿಮಗೆ ಆಹ್ವಾನ ಬರಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಒಂದು ವೇಳೆ ಮದುವೆ ನಿಶ್ಚಿತಾರ್ಥ ಆಗಿದ್ದಲ್ಲಿ ಅಥವಾ ಪ್ರೀತಿಯಲ್ಲಿ ಇದ್ದಲ್ಲಿ ಸಂಬಂಧ ಗಟ್ಟಿ ಆಗಲಿದೆ. ಸ್ನೇಹಿತರ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೀರಿ. ಮರದ ಕೆತ್ತನೆ, ಮಾರಾಟ ಮಾಡುವಂಥವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುವ ಮಾರ್ಗ ಗೋಚರಿಸಲಿದೆ. ರಾಜಕಾರಣಿಗಳಿಗೆ ಪ್ರಭಾವ ವಿಸ್ತರಿಸಿಕೊಳ್ಳವಂಥ ವಾರ ಇದಾಗಿರಲಿದೆ. ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಬರಲಿದ್ದಾರೆ. ಇದರಿಂದ ಖರ್ಚಿನ ಪ್ರಮಾಣ ಹೆಚ್ಚಾಗಲಿದೆ. ಆತ್ಮೀಯರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಳ್ಳುವ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಿ. ಸಾಲವಾಗಿ ಹಣ ನೀಡಿ, ಅದು ಬಹು ಕಾಲದಿಂದ ಬಂದಿಲ್ಲ ಎಂದಾದಲ್ಲಿ ಈ ವಾರ ಪ್ರಯತ್ನಿಸಿ. ಆ ಪೈಕಿ ಸ್ವಲ್ಪ ಮೊತ್ತವಾದರೂ ಬರುವ ಸಾಧ್ಯತೆ ಇದೆ. ನಿದ್ದೆ ಬಾರದೆ ಸಮಸ್ಯೆ ಆಗುತ್ತಿರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ಕೃಷಿಕರಾಗಿದ್ದಲ್ಲಿ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂಥ ಸಾಧ್ಯತೆ ಇದೆ. ಇದರ ಜತೆಜತೆಗೆ ಮನಸ್ಸಿಗೆ ಒಂದು ಸಾಧನೆ ಮಾಡಿದಂಥ ಸಂತೋಷ ದೊರೆಯಲಿದೆ. ನಿಮ್ಮ ಕೈ ಅಳತೆಯಲ್ಲಿ ಸಾಧ್ಯವಾಗುವ ಬಹುತೇಕ ಕೆಲಸಗಳನ್ನು ಮಾಡುವುದಕ್ಕೆ ಅವಕಾಶ ದೊರೆಯಲಿದೆ. ಒಂದೆರಡು ದಿನದಲ್ಲಿ ಮುಗಿದುಹೋಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಮೇಲ್ನೋಟಕ್ಕೆ ಕಾಣುವಂಥ ಸನ್ನಿವೇಶವನ್ನು ನೆಚ್ಚಿಕೊಂಡು ಈ ವಾರ ಏನನ್ನೂ ಒಪ್ಪಿಕೊಳ್ಳಬೇಡಿ. ಸಂಕೋಚದಿಂದ ಒಂದು ವೇಳೆ ಒಪ್ಪಿಕೊಂಡಲ್ಲಿ ಹಣ- ಸಮಯ ವ್ಯರ್ಥ ಆಗಲಿದೆ. ವೃತ್ತಿನಿರತರಾಗಿರುವವರಿಗೆ ಬಹಳ ಮೂಡ್‌ ಸ್ವಿಂಗ್‌ಗಳಿರುತ್ತವೆ. ಒಂದು ವೇಳೆ ಈಗಾಗಲೇ ಮಾನಸಿಕ ಸಮಸ್ಯೆಗಳು ಇದ್ದಲ್ಲಿ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆಗಳಿರುತ್ತವೆ. ಯಾವುದಾದರೂ ನಿಯಮಿತವಾದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಅದನ್ನು ಯಾವ ಕಾರಣಕ್ಕೂ ಮರೆಯದಿರಿ. ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ಸುತ್ತ- ಮುತ್ತ ಆಗುತ್ತಿರುವ ಬೆಳವಣಿಗೆಗಳ ಮೇಲೆ ಕಣ್ಣು ತೆರೆದಿಟ್ಟಿರಿ. ಭವಿಷ್ಯದಲ್ಲಿ ನಡೆಯಲಿರುವ ಬೆಳವಣಿಗೆಗಳ ಬಗ್ಗೆ ಸೂಚನೆ ದೊರೆಯಲಿದೆ. ಹಾಸ್ಟೆಲ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಲ್ಲಿ ಆಹಾರ- ನೀರಿನ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರಬೇಕು. ಮಹಿಳೆಯರು ಸಂಗಾತಿ ಜತೆಗೆ ಮಾತನಾಡುವಾಗ ಗೌರವ ನೀಡಿ. ಆಡುವ ಮಾತಿನ ಜತೆಗೆ, ಬಳಸುವ ಶಬ್ದಗಳ ಆಯ್ಕೆಯಲ್ಲೂ ಎಚ್ಚರಿಕೆ ತುಂಬ ಮುಖ್ಯ. ಏಕೆಂದರೆ ಭಿನ್ನಾಭಿಪ್ರಾಯಗಳು, ಕೌಟುಂಬಿಕ ಕಲಹ ಬಾರದಂತೆ ಗಮನ ಹರಿಸಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮಲ್ಲಿ ಕೆಲವರಿಗೆ ಕೆಲಸ ಮಾಡುವ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಇದರ ಜತೆಗೆ ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಗೌರವಾದರಗಳು ದೊರೆಯಲಿವೆ. ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಭಿಪ್ರಾಯವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಈ ಎಲ್ಲದರ ಮಧ್ಯೆ ಜತೆಯಲ್ಲಿ ಇರುವವರು ಎಲ್ಲರನ್ನೂ ಸಮಾಧಾನ ಮಾಡುತ್ತೀನಿ ಎಂಬ ಲೆಕ್ಕಾಚಾರ ಹಾಕಿಕೊಳ್ಳುತ್ತಾ ನಿಮ್ಮೊಳಗೆ ಅಸಮಾಧಾನ ಉದ್ಭವಿಸಲಿದೆ. ಸೋಮವಾರದಂಉ ಷಣ್ಮುಖನ ಸ್ಮರಣೆ, ಧ್ಯಾನ ಅಥವಾ ಆರಾಧನೆಯನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ರಾಜಕಾರಣಿಗಳಿಗೆ ವಿಪರೀತ ಪ್ರಯಾಣ ಹಾಗೂ ಬಿಡುವಿಲ್ಲದಷ್ಟು ಕೆಲಸಗಳು ಆಗಲಿವೆ. ಕೃಷಿಕರಿಗೆ ಅನಿರೀಕ್ಷಿತ ಅತಿಥಿಗಳ ಆಗಮನ ಆಗುತ್ತದೆ. ಯಾವುದೋ ಕಾಲದಿಂದ ಪ್ರಯತ್ನ ಮಾಡುತ್ತಿದ್ದ ಸಾಲವು ದೊರೆಯುವ ಸೂಚನೆಗಳು ಸಿಗಲಿವೆ. ಸ್ನೇಹಿತರು- ಸ್ನೇಹಿತೆಯರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ. ನಿಮ್ಮ ಒಳ್ಳೆಯತನವನ್ನು ಇತರರು ದುರುಪಯೋಗ ಮಾಡಿಕೊಳ್ಳದಂತೆ ಎಚ್ಚರ ವಹಿಸಿ. ವೃತ್ತಿನಿರತರಾಗಿದ್ದಲ್ಲಿ ಮೆದುಳಿಗೆ ಸಂಬಂಧಿಸಿದ ಕೆಲವು ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಕೆಲವರಿಗೆ ಮರೆವು, ಮೈಗ್ರೇನ್, ವಿಪರೀತ ತಲೆ ಸಿಡಿತ ಇಂಥ ಸಮಸ್ಯೆಗಳು ಕಾಡಲಿವೆ. ಯಾವುದಾದರೂ ಕಾರ್ಯಕ್ರಮದಲ್ಲಿ ಓಡಾಟ ವಿಪರೀತವಾಗಿ, ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದಕ್ಕೆ ಸಾಧ್ಯವಾಗದ ಸನ್ನಿವೇಶ ಎದುರಾಗಲಿದೆ. ಹಣಕಾಸಿನ ವಿಚಾರಕ್ಕೆ ಮುಖ್ಯವಾದ ಮಾತುಕತೆ ನಡೆಸಬೇಕು ಎಂದಿದ್ದಲ್ಲಿ ಈ ವಾರದ ಮಟ್ಟಿಗೆ ಸಾಧ್ಯವಾದರೆ ಮುಂದಕ್ಕೆ ಹಾಕಿ. ವಿದ್ಯಾರ್ಥಿಗಳಿಗೆ ಗುರುಗಳ ಅನುಗ್ರಹ ದೊರೆಯಲಿದೆ. ಹೊಸದಾಗಿ ವಾಹನ ಖರೀದಿಗಾಗಿ ಹಣ ಹೊಂದಿಕೆಗಾಗಿ ಸ್ನೇಹಿತರು- ಸಂಬಂಧಿಗಳ ಬಳಿ ಪ್ರಯತ್ನ ಮಾಡಲಿದ್ದೀರಿ. ಮಹಿಳೆಯರು ನಿಮ್ಮ ಈ ತನಕದ ಉಳಿತಾಯ ಹಾಗೂ ತೆಗೆದುಕೊಳ್ಳಬಹುದಾದ ಸಾಲ ಮತ್ತು ವ್ಯಾಪಾರಕ್ಕೆ ಇರುವ ಅವಕಾಶಗಳನ್ನು ಚೆನ್ನಾಗಿ ಅಳೆದು, ಮುಂದಿನ ಯೋಜನೆ ರೂಪಿಸುತ್ತೀರಿ. ನಿಮ್ಮ ಸಮಯಪ್ರಜ್ಞೆಯಿಂದ ತುಂಬ ದೊಡ್ಡ ಸಹಾಯ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಯಾವುದೇ ವಿಚಾರದಲ್ಲಿ ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ಏಕೆಂದರೆ ನಿಮಗೆ ಎಷ್ಟೇ ಹತ್ತಿರದವರು ಹೇಳಿದರೂ ಯಾವುದೇ ಕಾರಣಕ್ಕೂ ಹೇಳಿಕೆ ಮಾತುಗಳನ್ನು ಕೇಳಬೇಡಿ. ನಿಮ್ಮ ಮೂಲಕ ಇತರರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನಿಮ್ಮ ಹೆಸರು, ವರ್ಚಸ್ಸು ದುರುಪಯೋಗ ಆಗದಂತೆ ಮೇಲಧಿಕಾರಿಗಳು ತಮ್ಮ ಮನಸ್ಸಿನಲ್ಲಿರುವ ವಿಚಾರ ನಿಮಗೆ ಹೇಳುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಮಾತಿನ ಮೇಲೆ ನಿಗಾ ಇರಬೇಕು. ಇಲ್ಲದಿದ್ದರೆ ಅನಗತ್ಯ ವಿವಾದ ಆಗಬಹುದು. ಕಾರಣವೇ ಇಲ್ಲದೆ ನಿಮ್ಮ ಮನಸ್ಸಿಗೆ ಕೆಲವು ಬಾರಿ ಬೇಸರ ಕಾಡಲಿದೆ. ದೊಡ್ಡ ಸಂಖ್ಯೆಯ ಜನರ ಮಧ್ಯೆ ಇರುವಾಗ ನಿಮಗೆ ಗೊತ್ತಿಲದ ವಿಚಾರದ ಬಗ್ಗೆ ಮಾತನಾಡದಿರಿ. ಕೃಷಿಕರಾಗಿದ್ದಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಸೋದರರು ಅಥವಾ ಸೋದರಿಯರ ಜತೆಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಇತರರ ವೈಯಕ್ತಿಕ ಜವಾಬ್ದಾರಿಗಳನ್ನು ವಹಿಸಿಕೊಳ್ಳದಿರುವುದು ಉತ್ತಮ. ಹಾಗೊಂದು ವೇಳೆ ವಹಿಸಿಕೊಂಡಲ್ಲಿ ಕೆಲಸ ಮಾಡಿಯೂ ಮಾತು ಕೇಳಿಸಿಕೊಳ್ಳುವಂತಾಗುತ್ತದೆ. ಅದೆಷ್ಟೇ ಸಣ್ಣ ಪ್ರಮಾಣದ, ಸಮಯದ ಪ್ರಯಾಣವಾದರೂ ನೀವು ಯಾರನ್ನು ಭೇಟಿ ಆಗುವುದಕ್ಕೆ ತೆರಳುತ್ತಿದ್ದೀರೋ ಅವರ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡು ಆ ನಂತರ ತೆರಳುವುದು ಉತ್ತಮ. ವೃತ್ತಿನಿರತರಾಗಿದ್ದಲ್ಲಿ ಈ ವಾರ ಕೆಲಸದ ಒತ್ತಡವೋ ಅಥವಾ ಏಕ ಕಾಲಕ್ಕೆ ಹಲವು ಜವಾಬ್ದಾರಿಗಳು ನಿರ್ವಹಿಸ ಬೇಕಾಗುವುದರಿಂದ ಕೆಲವು ಮುಖ್ಯವಾದ ಅಂಶಗಳನ್ನು ಮರೆತುಬಿಡುವ ಸಾಧ್ಯತೆ ಇದೆ. ಆದ್ದರಿಂದ ಆದ್ಯತೆಯ ಮೇಲೆ ಯಾವ ಕೆಲಸವನ್ನು ಮೊದಲಿಗೆ ಹಾಗೂ ಆ ನಂತರದಲ್ಲಿ ಮಾಡುವುದು ಯಾವುದು ಎಂಬ ಬಗ್ಗೆ ಪಟ್ಟಿಯೊಂದನ್ನು ಮಾಡಿಟ್ಟುಕೊಂಡು ಬಿಡಿ. ವಿದ್ಯಾರ್ಥಿಗಳಾಗಿದ್ದಲ್ಲಿ ಶೈಕ್ಷಣಿಕ ಕೋರ್ಸ್ ಗೆ ಸಂಬಂಧಿಸಿದ ಕೆಲವು ಕಾಗದ ಪತ್ರಗಳು ಅಥವಾ ಮಾರ್ಕ್ಸ್ ಕಾರ್ಡ್ ಗಳು ಕಳೆದುಹೋಗಿ, ಆತಂಕದ ಕ್ಷಣಗಳನ್ನು ಎದುರಿಸಲಿದ್ದೀರಿ. ಇತರರಿಗೆ ಯಾವುದಾದರೂ ಕೆಲಸ ಒಪ್ಪಿಸುವ ಮೊದಲಿಗೆ ಅವರಿಂದ ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಕೇಳಿ, ತಿಳಿದುಕೊಳ್ಳಿ. ಮಹಿಳೆಯರು ಕೈಯಲ್ಲಿ ಹಣವಿಲ್ಲದ ಪಕ್ಷದಲ್ಲಿ ಮುಂದೆ ಬರುವ ಆದಾಯವೋ ಅಥವಾ ಸಾಲವನ್ನು ನೆಚ್ಚಿಕೊಂಡು ಬೇರೆಯವರಿಗೆ ಮಾತು ನೀಡುವುದಕ್ಕೆ ಹೋಗದಿರಿ. ಒಂದು ವೇಳೆ ಮಾತು ಕೊಟ್ಟಲ್ಲಿ ಅವಮಾನ, ಒತ್ತಡಕ್ಕೆ ಒಳಗಾಗುತ್ತೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನನ್ನ ಕೆಲಸ ಶ್ರದ್ಧಾ- ಭಕ್ತಿಯಿಂದ ಮಾಡುತ್ತೇನೆ, ಅದನ್ನು ಹೇಳಿಕೊಂಡು ಬರುವ ಅಗತ್ಯವಿಲ್ಲ ಎಂದು ಆಲೋಚನೆ ಮಾಡುತ್ತಿದ್ದಲ್ಲಿ ಮೊದಲಿಗೆ ಬದಲಿಸಿಕೊಳ್ಳಿ. ನಿಮ್ಮ ಬಗ್ಗೆ ನೀವು ಮಾರ್ಕೆಟಿಂಗ್ ಮಾಡಿಕೊಳ್ಳಲೇಬೇಕು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ನೀವು ಇಲ್ಲಿಯ ತನಕ ಎಷ್ಟೇ ಚೆನ್ನಾಗಿ ಕೆಲಸ ಮಾಡುತ್ತಿರಬಹುದು, ನಿಮ್ಮ ಕಾಳಜಿ ಬಗ್ಗೆ ಎಲ್ಲರಿಗೂ ಗೊತ್ತು ಅಂತ ನೀವು ಅಂದುಕೊಂಡರೂ ಈಗ ಮಾತ್ರ ಅವರಿವರ ಪಾಲಿಗೆ ನೀವೇ ಗುರಿ ಆಗಲಿದ್ದೀರಿ. ಇದರಲ್ಲಿ ಒಂದು ಸಂತೋಷ ಏನೆಂದರೆ, ಹಳೆಯ ಹಣದ ಬಾಕಿ, ಅದರಲ್ಲೂ ಸರ್ಕಾರದ ಸ್ಕೀಮ್‌ಗಳು, ಸೋಷಿಯಲ್ ಸೆಕ್ಯೂರಿಟಿ ಯೋಜನೆಗಳಿಂದ ಬರಬೇಕಿದ್ದ ಹಣ ಇದ್ದಲ್ಲಿ ಆ ಬಗ್ಗೆ ಮಾಹಿತಿ ಸಿಗುತ್ತದೆ. ಕೃಷಿಕರಾಗಿದ್ದಲ್ಲಿ ಕೌಟುಂಬಿಕ ವಿಚಾರಗಳು ಈ ವಾರ ಪ್ರಾಶಸ್ತ್ಯ ಪಡೆದುಕೊಳ್ಳಲಿವೆ. ಮಕ್ಕಳ ಸಲುವಾಗಿಯೇ ಹೆಚ್ಚಿನ ಸಮಯ, ಹಣ ಮೀಸಲಿಡಲಿದ್ದೀರಿ. ನಿಮ್ಮ ತ್ಯಾಗ ಹಾಗೂ ಶ್ರಮಕ್ಕೆ ಫಲ ದೊರೆಯಲಿದೆ. ನೀವು ಮಾಡಬೇಕಾದ್ದೇನೆಂದರೆ, ಯಾವುದೇ ದೇವರನ್ನು ಆರಾಧನೆ ಮಾಡಿದರೂ ಪರವಾಗಿಲ್ಲ, ಅದಕ್ಕೆ ಮಂಗಳವಾರದ ದಿನ ಸಿಹಿ ನೈವೇದ್ಯ ಮಾಡಿ, ಮನೆಯ ಮಹಡಿಯೋ ಅಥವಾ ಎತ್ತರದ ಸ್ಥಳದಲ್ಲಿ ಇಟ್ಟುಬನ್ನಿ. ಸಿಹಿ ಅಂದರೆ, ಕನಿಷ್ಠ ಸಕ್ಕರೆ ಆದರೂ ಪರವಾಗಿಲ್ಲ. ವೃತ್ತಿನಿರತರಾಗಿದ್ದಲ್ಲಿ ಈ ವಾರ ಯಾವಾಗ ಮಾತನಾಡಬೇಕು, ಯಾವಾಗ ಸುಮ್ಮನಿರಬೇಕು ಎಂಬುದು ಬಹಳ ಮುಖ್ಯವಾಗುತ್ತದೆ. ನೀವು ಭಾವನಾತ್ಮಕವಾಗಿದ್ದ ಸಂದರ್ಭದಲ್ಲಿ ಕೊಟ್ಟ ಮಾತು ಮಗ್ಗುಲ ಮುಳ್ಳಾಗಿ ಚುಚ್ಚಲಿದೆ. ಇದು ಕನಿಷ್ಠ ಪಕ್ಷ ಈ ಅವಧಿಗೆ ನಿಮಗೆ ಅನಿಸದಿರಬಹುದು. ಆದರೆ ಈ ಬಗ್ಗೆ ಮುಂದೊಂದು ದಿನ ಭಾರೀ ಬೇಜಾರು ಮಾಡಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಈ ವಾರದ ಯಾವುದೇ ದಿನ ಶಾಲೆ- ಕಾಲೇಜುಗಳಿಗೆ ಚಕ್ಕರ್ ಹಾಕುವ ಆಲೋಚನೆ ಇದ್ದರೆ ಈ ಬಗ್ಗೆ ಮನೆಯಲ್ಲಿ ತಿಳಿಸಿಬಿಡಿ. ಇನ್ನು ಊಟ- ತಿಂಡಿ ವಿಚಾರದಲ್ಲಿ ವಿಪರೀತದ ಚಪಲ ಒಳ್ಳೆಯದಲ್ಲ. ಅಜೀರ್ಣದ ಸಮಸ್ಯೆಗಳು ಕಾಡಬಹುದು. ಮಹಿಳೆಯರು ನನ್ನ ಶ್ರಮಕ್ಕೆ ಬೆಲೆಯೇ ಸಿಕ್ಕುತ್ತಿಲ್ಲ, ಎಷ್ಟು ಪ್ರಯತ್ನ ಪಟ್ಟರೂ ಕೆಲಸ ತುದಿ ಮುಟ್ಟುತ್ತಿಲ್ಲ ಎಂದುಕೊಳ್ಳುತ್ತಿದ್ದಲ್ಲಿ ಈ ವಾರ ಒಂದಿಷ್ಟು ಸಮಾಧಾನ ದೊರೆಯುತ್ತದೆ. ಕೆಲಸ- ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನವದಂಪತಿಗೆ ಬಹಳ ಸವಾಲಿನಿಂದ ಕೂಡಿರುವಂಥ ಸಮಯ ಇದಾಗಿರಲಿದೆ. ಮೊದಲ ನೋಟಕ್ಕೆ ಸರಿ ಎನಿಸುವಂಥದ್ದನ್ನು ಒಪ್ಪಿಕೊಳ್ಳಿ. ಸೀದಾ ಸಾದಾ ಸಂಗತಿಗಳು ನಿಮ್ಮ ಪಾಲಿಗೆ ಅನುಕೂಲವಾಗಿ ಮಾರ್ಪಡಲಿವೆ. ಈ ಹಿಂದಿನ ಪ್ರಾಜೆಕ್ಟ್‌ಗಳು ಈಗ ನಿಮಗೆ ಹಣ ತಂದುಕೊಂಡುವ ಸಾಧ್ಯತೆಗಳಿವೆ. ಆದರೆ ಸಣ್ಣ- ಪುಟ್ಟ ವಿಚಾರಗಳನ್ನೂ ಮರೆಯದಿರಿ. ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಕಡೆಗೆ ಗಮನವನ್ನು ನೀಡುವುದು ಮುಖ್ಯವಾಗುತ್ತದೆ. ಮಡ್‌ಬಾತ್, ಸ್ಟೀಮ್‌ಬಾತ್ ಹೀಗೆ ದೇಹಕ್ಕೆ ಆರಾಮದಾಯಕ ಆಗುವಂಥದ್ದನ್ನು ಮಾಡಿಸಲು ಸಾಧ್ಯವಾದಲ್ಲಿ ಮಾಡಿಸಿಕೊಳ್ಳಿ, ಏಕೆಂದರೆ ಮುಂಬರುವ ದಿನಗಳಲ್ಲಿ ಬಹಳ ಬಿಜಿ ಆಗಿಬಿಡುತ್ತೀರಿ. ಕೃಷಿಕ ವೃತ್ತಿಯಲ್ಲಿ ಇದ್ದೀರಿ ಅಂತಾದರೆ ನಿಮ್ಮದಲ್ಲದ್ದು ಅಂತ ಗೊತ್ತಾದ ಮೇಲೆ ಅದಕ್ಕೆ ಆಸೆ ಪಡಬೇಡಿ. ಯಾರಿಗೂ ಗೊತ್ತಾಗಲ್ಲ, ನಾನು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಧೋರಣೆ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಯಾವುದೇ ಮುಖ್ಯ ಕೆಲಸಕ್ಕೆ ಹೊರಡುವ ಮುನ್ನ ಈ ದಿನ ದುರ್ಗಾ ದೇವಿಯ ಧ್ಯಾನ ಮಾಡಿ. ಡೇರಿ ವ್ಯವಹಾರ ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳಿವೆ. ವೃತ್ತಿನಿರತರಾದವರಿಗೆ ನೇರವಂತಿಕೆ ಕಾಪಾಡಲಿದೆ. ಒಂದು ನಿರುಪದ್ರವಿ ಸುಳ್ಳಿನಿಂದ ಏನೂ ಸಮಸ್ಯೆ ಆಗಲಿಕ್ಕಿಲ್ಲ ಎಂದೆಲ್ಲ ಯೋಚಿಸಿ ತಪ್ಪು ಹೆಜ್ಜೆ ಇಡಬೇಡಿ. ಇನ್ನೇನು ಎಲ್ಲ ಕೆಲಸ ಆಗಿಹೋಗಿದೆ, ಹಣ ಬರುವುದಷ್ಟೇ ಬಾಕಿ ಎಂದುಕೊಂಡಿದ್ದ ಕೆಲಸದಲ್ಲಿ ಸವಾಲು ಎದುರಾಗಲಿದೆ. ಭರವಸೆ ಇಟ್ಟುಕೊಂಡು ಶುರು ಮಾಡಿದ್ದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಮನರಂಜನೆ, ಹೋಟೆಲ್- ರೆಸ್ಟೋರೆಂಟ್ ಇಂಥವುಗಳಿಗೆ ಸ್ನೇಹಿತರು ಜತೆಗೆ ತೆರಳುವಂಥ ಯೋಗ ಇದೆ. ಹೊಸ ಮೊಬೈಲ್ ಫೋನ್, ಗ್ಯಾಜೆಟ್ ಖರೀದಿಸುವುದಕ್ಕೆ ಖರ್ಚು ಮಾಡಲಿದ್ದೀರಿ. ಮಹಿಳೆಯರು ವಿವಾಹಿತರಾಗಿದ್ದಲ್ಲಿ ಅದರ ಆಚೆಗಿನ ಸಂಬಂಧದ ಕಡೆಗೆ ಸೆಳೆತ ಮೂಡುವ ಸಾಧ್ಯತೆ ಇದೆ. ಇದರಿಂದ ಉಪದ್ರವ, ಅವಮಾನ ಎರಡೂ ಅನುಭವಿಸಬೇಕಾದೀತು, ಎಚ್ಚರ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇತರರ ಮಾತಿನಿಂದ ಪ್ರಭಾವಕ್ಕೆ ಒಳಗಾಗಿ ಬೆಟ್ಟಿಂಗ್ ಮೇಲೆ ಹೆಚ್ಚಿನ ಹಣ ಹಾಕುವಂಥ ಸಾಧ್ಯತೆ ಇದೆ. ಆದ್ದರಿಂದ ರೊಚ್ಚಿಗೆದ್ದು ಜೂಜಿಗಾಗಿ ಹಣ ಹಾಕದಿರಿ. ಇನ್ನು ಬಾಡಿಗೆ ಆದಾಯದ ಮೂಲಕ ಹಣ ಗಳಿಸುವವರಿಗೆ ಅದರಲ್ಲಿ ಇಳಿಕೆ ಕಾಣಿಸಲಿದೆ. ನಿಮ್ಮ ಮೂಲ ಸ್ವಭಾವದಿಂದ ಬದಲಾವಣೆ ಮಾಡಿಕೊಳ್ಳದಿರಿ. ಸಂಬಂಧಿಕರ ಕಡೆಯಿಂದ ನಿಮ್ಮ ಸಹಾಯವನ್ನು ಕೇಳಿಕೊಂಡು ಬರಬಹುದು. ಎಷ್ಟೇ ಆತುರದಲ್ಲಿ ಇದ್ದರೂ ಈ ವಾ ಯಾವ ಕಾರಣಕ್ಕೂ ವೇಗದ ಚಾಲನೆಯನ್ನು ಮಾಡದಿರಿ. ಕೃಷಿಕರಾಗಿದ್ದಲ್ಲಿ ಏಕಾಂಗಿತನ ನಿಮ್ಮನ್ನು ಕಾಡಬಹುದು. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಇನ್ನು ಮನೆಯಿಂದ ದೂರದಲ್ಲಿ ಇದ್ದು, ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಸಾಲವನ್ನಾದರೂ ಪಡೆದು ಕುಟುಂಬದ ಸದಸ್ಯರ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಮಧುಮೇಹ- ರಕ್ತದೊತ್ತಡ ಈಗಾಗಲೇ ಇದ್ದಲ್ಲಿ ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳಿಂದ ದೂರವಿರಿ. ವೃತ್ತಿಪರರಾಗಿದ್ದಲ್ಲಿ ಬಿಡುವಿಲ್ಲದಷ್ಟು ಕೆಲಸಗಳು ನಿಮ್ಮ ಮೈ ಮೇಲೆ ಬರಲಿವೆ. ನೀವು ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದಿದ್ದ ವಸ್ತುಗಳನ್ನು ಕೊಳ್ಳುವಂಥ ಸಾಧ್ಯತೆಗಳಿವೆ. ಪ್ರಭಾವಿಗಳ ಪರಿಚಯ ಆಗಲಿದೆ. ಈ ಹಿಂದೆ ನೀವು ಕಷ್ಟಪಟ್ಟು ಬೆಳೆಸಿಕೊಂಡಿದ್ದ ಸಾಮರ್ಥ್ಯ, ಪರಿಚಯ ಈಗ ನಿಮಗೆ ಉಪಯೋಗಕ್ಕೆ ಆಗಲಿದೆ. ವಿದ್ಯಾರ್ಥಿಗಳಾಗಿದ್ದಲ್ಲಿ ಉಳಿತಾಯ ಮಾಡಿದ್ದ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಿಂತೆಗೆಯಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಮಹಿಳೆಯರು ಪೊಲೀಸ್ ಠಾಣೆ ಕೆಲಸಗಳು, ಕೋರ್ಟ್- ಕಚೇರಿ ವ್ಯವಹಾರಗಳಿಗೆ ವಿಪರೀತ ಅಲೆದಾಡುವಂಥ ಯೋಗವಿದೆ.