Madal Virupakshappa: ಲೋಕಾಯುಕ್ತ ಪೊಲೀಸರು ಬೆನ್ನುಹತ್ತಿದ್ದ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಕ್ಕ ಬೆನ್ನಲ್ಲೇ ಪ್ರತ್ಯಕ್ಷ

ವಿರೂಪಾಕ್ಷಪ್ಪ ಅವರು ಹುಟ್ಟೂರು, ಚನ್ನೇಶಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರನ್ನು ಬೆಂಬಲಿಗರು ತಮಟೆ ಬಾರಿಸಿ, ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮಾಡಿ ಕರೆದುಕೊಂಡು ಬಂದಿದ್ದಾರೆ.

ದಾವಣಗೆರೆ: ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ KSDL ಮಾಜಿ ಚೇರ್ಮನ್, ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪ (Madal Virupakshappa) ಕರ್ನಾಟಕ ಹೈಕೋರ್ಟ್​ನಿಂದ (Karnataka High Court) ಜಾಮೀನು ದೊರೆತ ಬೆನ್ನಲ್ಲೇ ಮಂಗಳವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸರು ತಮ್ಮನ್ನು ಬಂಧಿಸಲು ಮುಂದಾಗಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಅವರು ನಾಪತ್ತೆಯಾಗಿದ್ದರು. 2-3 ದಿನಗಳಾಗದರೂ ಅವರು ಎಲ್ಲಿದ್ದಾರೆ ಎಂಬ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ದಾವಣಗೆರೆಯ ತಮ್ಮ ನಿವಾಸದ ಬಳಿ ಕಾಣಿಸಿಕೊಂಡಿದ್ದಾರೆ. ಜಾಮೀನು ಆದೇಶ ತಲುಪಿದ 48 ಗಂಟೆಗಳ ಒಳಗಾಗಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಅವರಿಗೆ ಸೂಚಿಸಲಾಗಿದೆ.

ವಿರೂಪಾಕ್ಷಪ್ಪ ಅವರು ಹುಟ್ಟೂರು, ಚನ್ನೇಶಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರನ್ನು ಬೆಂಬಲಿಗರು ತಮಟೆ ಬಾರಿಸಿ, ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮಾಡಿ ಕರೆದುಕೊಂಡು ಬಂದಿದ್ದಾರೆ. ನಂತರ ವಿರೂಪಾಕ್ಷಪ್ಪ ಅವರು ಮಹದೇವಮ್ಮ ದೇವಿ ದರ್ಶನ ಪಡೆದರು. ಬಳಿಕ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬೆಂಬಲಿಗರು ಮಾಡಾಳ್ ವಿರೂಪಾಕ್ಷಪ್ಪ ಪರ ಘೋಷಣೆ ಕೂಗಿದರು.

ಕಳೆದ ಆರು ದಿನಳಿಂದ ಅಜ್ಞಾತ ಸ್ಥಳದಲ್ಲಿದ್ದ ಮಾಡಾಳ್ ವಿರೂಪಾಕ್ಷಪ್ಪ ಪರ ಹಿರಿಯ ವಕೀಲ ಕೆ.ಸುಮನ್ ವಾದ ಮಂಡಿಸಿದ್ದು, ಜಾಮೀನು ನೀಡುವಂತೆ ಕೋರಿದ್ದರು. ಅವರ ವಾದವನ್ನು ಆಲಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಮಧ್ಯಂತರ ಜಾಮೀನು ನೀಡಿದೆ. 5 ಲಕ್ಷ ರೂ. ಮೌಲ್ಯದ ಬಾಂಡ್​, ಇಬ್ಬರು ಶ್ಯೂರಿಟಿ ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ: Madal Virupakshappa: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು

ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿದ್ದು, ಕಳೆದ ವಾರ ಬೆಂಗಳೂರು ಜಲ ಮಂಡಳಿ ಮತ್ತು ಒಳಚರಂಡಿ (BWSSB) ಮುಖ್ಯ ಲೆಕ್ಕಾಧಿಕಾರಿಯಾಗಿರುವ ಮಾಡಾಳ್ ಪ್ರಶಾಂತ್‌ ಅವರ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು 40 ಲಕ್ಷ ರೂ.ಗೂ ಹೆಚ್ಚು ಮೊತ್ತದ ಲಂಚ ಪಡೆಯುತ್ತಿರುವುದು ಬಯಲಾಗಿತ್ತು. ನಂತರದಲ್ಲಿ ಶಾಸಕರ ಮನೆ ಮೇಲೂ ದಾಳಿ ನಡೆದಿದ್ದು, ಕೋಟ್ಯಂತರ ರೂ. ನಗದು, ಚಿನ್ನಾಭರಣ ದೊರೆತಿತ್ತು. ಈ ಮಧ್ಯೆ ಮಾಡಾಳ್ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Tue, 7 March 23

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us