ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಘಟ್ಟೆಯ ದುರ್ಗಾಂಬಾ ದೇವಿಯ ಸನ್ನಿಧಿಯಲ್ಲಿ ನಡೆದ ಜಾತ್ರೆಗೆ ಭಕ್ತರ ಸಾಗರವೇ ಹರಿದುಬಂದಿತ್ತು. ಫೆಬ್ರವರಿ 20ರಂದು ನಡೆದ ಜಾತ್ರೆಯ ಮುಂಜಾನೆ ಸೂರ್ಯ ಉದಯಿಸುವುದನ್ನೇ ಚಾತಕ ಪಕ್ಷಿಯಂತೆ ಭಕ್ತಗಣ ಕಾಯುತ್ತಿದ್ದರು. ರವಿ ಕಾಣಿಸಿದೊಡನೆ ಭಕ್ತರು ಉಘೇ ಉಘೇ ಅಂತಾ ರಥವನ್ನ ಎಳೆದರು. ದೂರದ ಊರುಗಳಿಂದ ಬಂದಿದ್ದ ಸಾವಿರಾರು ಎತ್ತುಗಳು ದೇವಿ ಸ್ಥಾನದಲ್ಲಿ ಸುತ್ತು ಹಾಕಿ ಭಕ್ತಿಯ ಅಲೆಯಲ್ಲಿ ತಲೆಯಾಡಿಸಿದವು.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ದೇವಿಯ ಜಾತ್ರೆ ನಡೆಯುತ್ತದೆಯೋ? ಇಲ್ಲವೋ? ಅಂತಾ ಲಕ್ಷಾಂತರ ಮಂದಿ ಆತಂಕಗೊಂಡಿದ್ದರು. ಆದರೆ ಇತ್ತಿಚೀಗಷ್ಟೇ ರಾಜ್ಯ ಸರ್ಕಾರ ಧಾರ್ಮಿಕ ಜಾತ್ರೆಗಳು ಸುಸೂತ್ರವಾಗಿ ನಡೆಸುವಂತೆ ಗ್ರೀನ್ ಸಿಗ್ನಲ್ ನೀಡಿತ್ತು. ಹೀಗಾಗಿ ಅಂತರಘಟ್ಟೆಯ ಅಮ್ಮ ಅಂತಾನೇ ಕರೆಸಿಕೊಳ್ಳುವ ದುರ್ಗಾಂಬಾ ದೇವಿಯ ಭಕ್ತರು ಸಂತಸಕ್ಕೆ ಪಾರವೇ ಇರಲಿಲ್ಲ. ಕಳೆದ 14 ರಿಂದ ಆರಂಭವಾದ ಅಂತರಘಟ್ಟೆ ಶ್ರೀ ದುರ್ಗಾಂಬಾ ಅಮ್ಮನವರ ಮಹಾ ರಥೋತ್ಸವ ಫೆಬ್ರವರಿ 20ರಂದು ಸಂಪನ್ನಗೊಂಡಿತು.
ಬಾಳೆಹಣ್ಣನ್ನು ತೇರಿನ ಕಳಸಕ್ಕೆ ಎಸೆದು ಹರಕೆ ಪೂರೈಸಿದ ಭಕ್ತರು
ಜಿಲ್ಲೆ ಸೇರಿದಂತೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಸಾವಿರಾರು ಜನರು ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಮೆರೆದರು. ಮುಂಜಾನೆ 6.45ರ ವೇಳೆಗೆ ರಥೋತ್ಸವ ಅದ್ದೂರಿಯಾಗಿ ದೇವಿಯ ಸನ್ನಿಧಿಯಲ್ಲಿ ಜರುಗಿತು. ಈ ವೇಳೆ ಭಕ್ತರು ಬಾಳೆಹಣ್ಣನ್ನು ತೇರಿನ ಕಳಸಕ್ಕೆ ಎಸೆದು ಹರಕೆ ಪೂರೈಸಿದರು. ಅಲ್ಲದೇ ಬೇವಿನ ಸೀರೆ ಸೇರಿದಂತೆ ಅನೇಕ ಹರಕೆಗಳನ್ನ ಭಕ್ತರು ದೇವಿಗೆ ಅರ್ಪಿಸಿ ಧನ್ಯರಾದರು. ಪ್ರತಿವರ್ಷದಂತೆ ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಜಾತ್ರೆಯನ್ನ ತಾಲೂಕು ಆಡಳಿತ ಅಚ್ಚುಕಟ್ಟಾಗಿ ನಿರ್ವಹಿಸಿತು.
ಅಂತರಘಟ್ಟೆ ಅಮ್ಮನವರ ಜಾತ್ರೆಗೆ ಅಜ್ಜಂಪುರ, ತರೀಕೆರೆ, ಕಡೂರು ಸೇರಿದಂತೆ ಸುತ್ತಮುತ್ತ ಹಳ್ಳಿಗಳಿಂದ ಭಕ್ತರು ಸಾವಿರಾರು ಎತ್ತಿನ ಬಂಡಿಯಲ್ಲೇ ಬಂದು ರಥೋತ್ಸವದಲ್ಲಿ ಭಾಗಿಯಾಗೋದು ಈ ಜಾತ್ರೆಯ ವಿಶೇಷ. ಹೀಗೆ ಸಾಲು ಸಾಲು ಎತ್ತಿನಗಾಡಿಯಲ್ಲಿ ಬರುವ ಭಕ್ತರನ್ನ ನೋಡುವುದೇ ಒಂದು ರೀತಿ ಕಣ್ಣಿಗೆ ಹಬ್ಬ. ಹೀಗೆ ಜಾತ್ರೆಗೆ ಬರುವ ಎತ್ತಿನಗಾಡಿಗಳಲ್ಲಿ ಕೆಲವರು ರಥೋತ್ಸವ ಮಗಿದ ದಿನ ಊರಿಗೇ ತೆರಳಿದರೇ ಉಳಿದವರು ಎರಡು ದಿನ ಬಿಟ್ಟು ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಮುಗಿಸಿಕೊಂಡು ತಮ್ಮೂರಿನ ಕಡೆ ಹೆಜ್ಜೆ ಹಾಕುತ್ತಾರೆ.
ಇಡೀ ವರ್ಷದಲ್ಲಿ ನಡೆಯುವ ದೊಡ್ಡದಾದ ಈ ಜಾತ್ರೆಯಲ್ಲಿ ನೂರಾರು ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಬಲು ಜೋರಾಗೇ ನಡೆಯುತ್ತದೆ. ಬಾಳೆಹಣ್ಣು ಹರಕೆಯನ್ನ ದೇವಿಗೆ ಇಟ್ಟುಕೊಳ್ಳುವುದರಿಂದ ಈ ಜಾತ್ರೆಯಲ್ಲಿ ಬಾಳೆ ಹಣ್ಣುಗಳಿಗೂ ಫುಲ್ ಡಿಮ್ಯಾಂಡ್. ಒಟ್ಟು ಒಂದು ವಾರದ ಕಾಲ ನಡೆಯುವ ಈ ಜಾತ್ರೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಜನರು ದೇವಿಯ ಕೃಪೆಗೆ ಪಾತ್ರರಾದರು.
ಇದನ್ನೂ ಓದಿ: ಫೆ.12ರಿಂದ ಧಾರವಾಡ ಮುರುಘಾ ಮಠದ ಜಾತ್ರೆ
ಇದನ್ನೂ ಓದಿ: 6 ದಿನದ ಸುತ್ತೂರು ಜಾತ್ರೆ ಈ ಬಾರಿ ಎರಡೇ ದಿನಕ್ಕೆ ಸೀಮಿತ.. ಕೊರೊನಾ ಹಿನ್ನೆಲೆ ಸರಳ ಆಚರಣೆ!